Asianet Suvarna News Asianet Suvarna News

ಪ್ರಬಲ ಖಾತೆಗೆ ಭಾರಿ ಪೈಪೋಟಿ: ಸಿಎಂ ಬಳಿ ಇರುವ ಖಾತೆ ಮೇಲೆ ಇಬ್ಬರ ಕಣ್ಣು!

ಪ್ರಬಲ ಖಾತೆಗೆ ಭಾರಿ ಪೈಪೋಟಿ| ಎಂ ಬಳಿಯ ‘ಇಂಧನ’ಕ್ಕೆ ನಿರಾಣಿ, ಕತ್ತಿ ಕಣ್ಣು| ಬೊಮ್ಮಾಯಿ ‘ಗೃಹ’ದ ಬಗ್ಗೆ ಲಿಂಬಾವಳಿ ಆಸಕ್ತಿ| ವಸತಿ ಖಾತೆಗಾಗಿ ಎಂಟಿಬಿ ನಾಗರಾಜ್‌ ಕೋರಿಕೆ| ಇದೆಲ್ಲ ನೀಡಲು ಖಾತೆ ಮರುಹಂಚಿಕೆ ಅವಶ್ಯ

Karnataka Politics Nirani Bommai and Other Ministers Are Demanding For Powerful Portfolio pod
Author
Bangalore, First Published Jan 20, 2021, 7:38 AM IST

ಬೆಂಗಳೂರು(ಜ.20): ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಕಳೆದ ವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಪ್ತ ಸಚಿವರ ಪೈಕಿ ಬಹುತೇಕರು ಪ್ರಮುಖ ಖಾತೆಗಳಿಗೆ ಭಾರಿ ಪೈಪೋಟಿ ನಡೆಸುತ್ತಿದ್ದಾರೆ. ಇದರ ಪರಿಣಾಮ ಖಾತೆಗಳ ಪುನರ್‌ ಹಂಚಿಕೆ ನಡೆಯುವ ಸಂಭವವಿದೆ ಎನ್ನಲಾಗಿದೆ.

ನೂತನ ಸಚಿವರಾದ ಉಮೇಶ್‌ ಕತ್ತಿ, ಅರವಿಂದ ಲಿಂಬಾವಳಿ, ಮುರುಗೇಶ್‌ ನಿರಾಣಿ, ಎಂ.ಟಿ.ಬಿ.ನಾಗರಾಜ್‌ ಅವರು ಪ್ರಮುಖ ಖಾತೆಗಳ ಆಕಾಂಕ್ಷಿಯಾಗಿದ್ದಾರೆ. ಉಮೇಶ್‌ ಕತ್ತಿ ಮತ್ತು ಮುರುಗೇಶ್‌ ನಿರಾಣಿ ಮುಖ್ಯಮಂತ್ರಿ ಬಳಿ ಇರುವ ಇಂಧನ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ. ಲಿಂಬಾವಳಿ ಅವರು ಬಸವರಾಜ ಬೊಮ್ಮಾಯಿ ಅವರ ಬಳಿಯಿರುವ ಗೃಹ ಖಾತೆ ಅಥವಾ ಪ್ರಮುಖ ಖಾತೆಯ ನಿರೀಕ್ಷೆಯಲ್ಲಿದ್ದಾರೆ. ಎಂ.ಟಿ.ಬಿ.ನಾಗರಾಜ್‌ ಅವರು ಹಿಂದಿನ ವಸತಿ ಖಾತೆಯ ಆಕಾಂಕ್ಷಿಯಾಗಿದ್ದಾರೆ.

ಆದರೆ, ಮುಖ್ಯಮಂತ್ರಿಗಳು ಈವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಬುಧವಾರ ಹಿರಿಯ ಸಚಿವರೊಂದಿಗೆ ಮಾತುಕತೆ ನಡೆಸಿದ ಬಳಿಕ ಖಾತೆ ಹಂಚಿಕೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಸಿ.ಪಿ.ಯೋಗೇಶ್ವರ್‌ ಅವರು ಸಹ ಪ್ರಮುಖ ಖಾತೆಯ ಆಕಾಂಕ್ಷಿ ಪಟ್ಟಿಯಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸಿ.ಪಿ.ಯೋಗೇಶ್ವರ್‌ ರಾಜಕೀಯವಾಗಿ ಬದ್ಧ ವೈರಿಯಾಗಿದ್ದಾರೆ. ಸಿ.ಪಿ.ಯೋಗೇಶ್ವರ್‌ ಮೂಲಕ ಕುಮಾರಸ್ವಾಮಿ ಅವರಿಗೆ ರಾಜಕೀಯವಾಗಿ ತಿರುಗೇಟು ನೀಡಲು ಪ್ರಮುಖ ಖಾತೆ ನೀಡುವುದು ಸೂಕ್ತ ಎಂಬ ಸಲಹೆಯನ್ನು ಪಕ್ಷದ ಹಿರಿಯ ನಾಯಕರು ನೀಡಿದ್ದಾರೆ.

ಹೀಗಾಗಿ, ಪ್ರಮುಖ ಖಾತೆ ಹೊಂದಿರುವ ಸಚಿವರಾದ ಆರ್‌.ಅಶೋಕ್‌, ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ ಸೇರಿದಂತೆ ಇತರರ ಖಾತೆಯಲ್ಲಿಯೂ ಅದಲು-ಬದಲಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿವೆಯಾದರೂ ಸ್ಪಷ್ಟತೆಯಿಲ್ಲ. ಆರ್‌.ಅಶೋಕ್‌ ಅವರು ಬೆಂಗಳೂರು ಅಭಿವೃದ್ಧಿ ಖಾತೆಯ ಮೇಲೆ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ. ಡಾ.ಕೆ.ಸುಧಾಕರ್‌ ಬಳಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಇದ್ದು, ಒಂದು ಖಾತೆಯನ್ನು ಹೊಸಬರಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು, ಎಚ್‌.ನಾಗೇಶ್‌ ರಾಜೀನಾಮೆಯಿಂದ ತೆರವಾಗಿರುವ ಅಬಕಾರಿ ಖಾತೆ ತಮಗೆ ಸಿಗುವ ವಿಶ್ವಾಸವನ್ನು ನೂತನ ಸಚಿವ ಶಂಕರ್‌ ಹೊಂದಿದ್ದಾರೆ. ಪಕ್ಷದ ನಿಷ್ಠಾವಂತರೆನಿಸಿದ ಎಸ್‌. ಅಂಗಾರ ಅವರು ಮಾತ್ರ ಈವರೆಗೂ ಇಂತಹದ್ದೇ ಖಾತೆ ಬೇಕು ಎಂದು ಕೇಳಿಲ್ಲ. ಆರು ಬಾರಿ ಶಾಸಕರಾದರೂ ಸಚಿವ ಸ್ಥಾನಕ್ಕಾಗಿ ಒಮ್ಮೆಯೂ ಮುನಿಸಿಕೊಂಡಿಲ್ಲ. ಬಹಿರಂಗವಾಗಿ ಎಲ್ಲಿಯೂ ಅಸಮಾಧಾನ ಹೊರಹಾಕಿಲ್ಲ. ಈಗ ಖಾತೆಯನ್ನೂ ಕೇಳಿಲ್ಲ ಎನ್ನಲಾಗಿದೆ.

ಒಂದು ವೇಳೆ ಮುಖ್ಯಮಂತ್ರಿಗಳು ಖಾತೆ ಹಂಚಿಕೆಯಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೆ ಇಂಧನ ಮತ್ತು ಅಬಕಾರಿಗೆ ಹೆಚ್ಚಿನ ಬೇಡಿಕೆ ಇದೆ. ಇನ್ನುಳಿದ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆಯಂತಹ ಇತರೆ ಖಾತೆಗಳು ಖಾಲಿ ಇವೆ. ಆದರೆ, ಈ ಖಾತೆಗಳಿಗೆ ಹೆಚ್ಚಿನ ಬೇಡಿಕೆ ಇಲ್ಲ. ಹೀಗಾಗಿ ಯಾರಿಗೆ ಯಾವ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂಬುದು ನಿಗೂಢವಾಗಿದ್ದು, ಒಂದೆರಡು ದಿನದಲ್ಲಿ ಖಾತೆ ಹಂಚಿಕೆ ಬಗ್ಗೆ ಸ್ಪಷ್ಟತೆ ಸಿಗಲಿದೆ.

ಬೊಮ್ಮಾಯಿ ಗೃಹ ಖಾತೆ ಬಿಡ್ತಾರಾ?

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತಮಗೆ ನೀಡಿರುವ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆದರೆ, ಗೃಹ ಖಾತೆಯು ಸಚಿವರನ್ನು ನೇರವಾಗಿ ಜನರ ಬಳಿ ಕೊಂಡೊಯ್ಯುವುದಿಲ್ಲ. ಹೀಗಾಗಿ ಹೊಸ ಯೋಜನೆಗಳನ್ನು ಜಾರಿಗೊಳಿಸಿ ಜನರ ಬಳಿ ಕೊಂಡೊಯ್ಯುವಂತಹ ಖಾತೆ ನೀಡಿದರೆ ಗೃಹ ಖಾತೆ ಬಿಟ್ಟುಕೊಡಲು ಸಿದ್ಧರಿದ್ದಾರೆ ಎಂದು ಹೇಳಲಾಗಿದೆ. ಒಂದು ವೇಳೆ ಇದೇ ಖಾತೆಯಲ್ಲಿ ಮುಂದುವರಿಸಿದರೂ ಬೊಮ್ಮಾಯಿ ಅವರಿಗೆ ಯಾವುದೇ ಸಮಸ್ಯೆಯೂ ಇಲ್ಲ ಎನ್ನಲಾಗಿದೆ.

ಹೊಸ ಸಚಿವರಿಗೆ ಖಾತೆ ಹಂಚಿಕೆ ನಾಳೆ: ಸಿಎಂ

ಇತ್ತೀಚೆಗೆ ಪ್ರಮಾಣವಚನ ಸ್ವೀಕರಿಸಿರುವ ನೂತನ ಸಚಿವರಿಗೆ ಗುರುವಾರ ಖಾತೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುಧವಾರ ಎಲ್ಲ ಸಚಿವರೊಂದಿಗೆ ಸಮಾಲೋಚನೆ ನಡೆಸುತ್ತೇನೆ. ಹಿರಿಯ ಸಚಿವರೊಂದಿಗೆ ಚರ್ಚಿಸಿ ಸಚಿವರ ಖಾತೆ ಬದಲಾವಣೆ ಮಾಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಜೊತೆಗೆ ಗುರುವಾರ ಖಾತೆಗಳನ್ನು ಹಂಚಿಕೆ ಮಾಡಿ ಪಟ್ಟಿಪ್ರಕಟಿಸಲಾಗುವುದು ಎಂದು ಹೇಳಿದರು.

Follow Us:
Download App:
  • android
  • ios