17 ಶಾಸಕರ ರಾಜೀನಾಮೆ ಹಿಂದೆ ನನ್ನ ಪಾತ್ರವೂ ಇದೆ: ಎಸ್‌. ಎಂ. ಕೃಷ್ಣ

17 ಶಾಸಕರ ರಾಜೀನಾಮೆ ಹಿಂದೆ ನನ್ನ ಪಾತ್ರವೂ ಇದೆ| ಮೈತ್ರಿಯಲ್ಲಿ ಅಭಿವೃದ್ಧಿ ನಾಸ್ತಿ, ನಿಂದನೆ ಜಾಸ್ತಿ| ಬಿಜೆಪಿ ಪರ ಪ್ರಚಾರಕ್ಕೆ ಧುಮುಕಿದ ಎಸ್‌.ಎಂ.ಕೃಷ್ಣ ಹೇಳಿಕೆ

Karnataka Politics My Role Is There Behind The Resignation Of 17 MLAs Says Former Minister SM Krishna

ಚಿಕ್ಕಬಳ್ಳಾಪುರ[ನ.27]: ರಾಜ್ಯದಲ್ಲಿ ಉದ್ಭವವಾಗಿದ್ದ ಅನಿಷ್ಟಪರಿಸ್ಥಿತಿಯನ್ನು ದೂರ ಮಾಡಲು 17 ಬುದ್ಧಿವಂತ ಶಾಸಕರು ರಾಜೀನಾಮೆ ಸಲ್ಲಿಸಿದ್ದು, ಇವರ ರಾಜೀನಾಮೆ ಕೊಡಿಸುವುದರಲ್ಲಿ ನಾನೂ ಕಾರಣನಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ತಿಳಿಸಿದ್ದಾರೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಆಗಮಿಸಿದ ಬಳಿಕ ರಾಜಕೀಯ ವಲಯದಿಂದ ಅಂತರ ಕಾಪಾಡಿಕೊಂಡಿದ್ದರೆಂದು ನಂಬಲಾಗಿದ್ದ ಹಿರಿಯ ಮುತ್ಸದ್ದಿ ಈಗ ಈ ಹೇಳಿಕೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚೇನಹಳ್ಳಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೋಡ್‌ ಶೋದಲ್ಲಿ ಮಾತನಾಡಿದ ಅವರು, ಈ ಹಿಂದಿನ ಮೈತ್ರಿ ಸರ್ಕಾರದ ಕಾರ್ಯವೈಖರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ರಾಜ್ಯದ ರಕ್ಷಣೆಗಾಗಿ ಸುಧಾಕರ್‌ ರಾಜೀನಾಮೆ ಕೊಡಿಸಿದ್ದರಲ್ಲಿ ನಾನೂ ಕಾರಣನಾಗಿದ್ದು, 15 ತಿಂಗಳು ರಾಜ್ಯದಲ್ಲಿ ಅನಿಷ್ಟಪರಿಸ್ಥಿತಿ ಉದ್ಭವವಾಗಿತ್ತು. ಪರಸ್ಪರ ದೂಷಣೆ ಮಾಡಿಕೊಂಡ ಎರಡು ಪಕ್ಷಗಳು ಸೇರಿ ಮಂತ್ರಿಮಂಡಲ ರಚಿಸಿದವು. ಇದರಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜೊತೆಗೆ ಸೂಪರ್‌ ಸಿಎಂ ನೇತೃತ್ವದಲ್ಲಿ ಮಂತ್ರಿ ಮಂಡಲ ಆಗಿದ್ದು ವಿಶೇಷ ಎಂದು ಲೇವಡಿ ಮಾಡಿದರು.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಇಲ್ಲ, ದಿನ ಬೆಳಗಾದರೆ ಮಂತ್ರಿಮಂಡಲ ಉಳಿಸಿಕೊಳ್ಳಲು ಕಸರತ್ತು ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ರಾಜ್ಯವನ್ನು ಆಡಳಿತ ಮಾಡಲು ಸರ್ಕಾರ ಅಥವಾ ಮುಖ್ಯಮಂತ್ರಿ ಗಮನ ಹರಿಸಲಿಲ್ಲ. ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಲಿಲ್ಲ, ಬದಲಿಗೆ ಘೋಷಣೆ, ಪರಸ್ಪರ ನಿಂದನೆ ಮಾತ್ರ ಕಾಣಿಸಿತು ಎಂದು ಹೇಳಿದರು.

ಇಂತಹ ಸ್ಥಿತಿಯಿಂದ ರಾಜ್ಯವನ್ನು ಮುಕ್ತ ಮಾಡಲು ಸುಧಾಕರ್‌ ಸೇರಿದಂತೆ 17 ಮಂದಿ ಬುದ್ಧಿವಂತ ಶಾಸಕರು ತ್ಯಾಗ ಮಾಡಿದರು. ಅವರಿಗೆ ಅಖಂಡ ಅಭಿನಂದನೆ ಸಲ್ಲಿಸಬೇಕು, ಅವರಿಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುತ್ತಿರಲಿಲ್ಲ. ಜವಾಬ್ದಾರಿಯುತ ಆಡಳಿತ ನೀಡಬೇಕಾದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೈ ಬಲಪಡಿಸಬೇಕು. ಇದು ಮತದಾರರ ಮೇಲಿರುವ ಹೊಣೆ ಎಂದು ಮನವಿ ಮಾಡಿದರು.

ಎಸ್‌ಎಂಕೆ ಮೊದಲ ಬಾರಿ ಉಪಚುನಾವಣೆ ಪ್ರಚಾರಕ್ಕೆ

ರಾಜ್ಯದ ಮುಖ್ಯಮಂತ್ರಿ, ಕೇಂದ್ರ ಸಚಿವ, ಮಹಾರಾಷ್ಟ್ರ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿರುವ ರಾಜ್ಯದ ಹಿರಿಯ ಮುತ್ಸದ್ದಿ ಎಸ್‌.ಎಂ.ಕೃಷ್ಣ ಉಪಚುನಾವಣೆ ಸಂದರ್ಭ ಇದೇ ಮೊದಲ ಬಾರಿಗೆ ಬಿಜೆಪಿ ಪ್ರಚಾರ ಸಭೆಯಲ್ಲಿ ಕಾಣಿಸಿಕೊಂಡರು. ಮಂಗಳವಾರದಂದು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸುಧಾಕರ್‌ ಪರ ರೋಡ್‌ ಶೋ ನಡೆಸಿದರು. ಬುಧವಾರವೂ ಅವರು ಹುಣಸೂರಿನಲ್ಲಿ ವಿಶ್ವನಾಥ್‌ ಪರ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.

ನವೆಂಬರ್ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Latest Videos
Follow Us:
Download App:
  • android
  • ios