* ಸಿದ್ದು 15 ಲಕ್ಷ ಮನೆ ಕೊಟ್ಟಿದ್ದೇವೆ ಅಂತಾರೆ, ಕೇವಲ ಕಾಗದದ ಮೇಲೆ ಘೋಷಣೆ ಮಾಡುವುದು ಸಾಧನೆಯೇ?:* ಅನ್ನಭಾಗ್ಯಕ್ಕೆ 3 ರು. ಕೊಟ್ಟು ತಮ್ಮ ಫೋಟೋ ಹಾಕಿಸಿಕೊಳ್ತಾರೆ* ಸಿಎಂ ವಾಗ್ದಾಳಿ, ಹಾನಗಲ್‌ನಲ್ಲಿ ಪ್ರಚಾರ

ಹಾನಗಲ್‌(ಅ.23): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Former CM Siddaramaiah) ಅವರ ಸರ್ಕಾರಾವಧಿಯ ಭಾಗ್ಯಗಳೆಲ್ಲ ಜನರ ಮನೆ ಬಾಗಿಲು ಮುಟ್ಟೇ ಇಲ್ಲ. ಅದಕ್ಕೇ ಜನ 2018ರಲ್ಲಿ ಅವರನ್ನು ಮನೆಗೆ ಕಳುಹಿಸಿದರು. 15 ಲಕ್ಷ ಮನೆ ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಎಲ್ಲಿವೆ ಆ ಮೂರು 15 ಲಕ್ಷ ಮನೆಗಳು? ಕಾಗದದಲ್ಲಿ ಮನೆ ಮಂಜೂರು ಮಾಡಿದರೆ ಸಾಕೇ, ಅನುದಾನ ಬಿಡುಗಡೆ ಮಾಡಬೇಕಲ್ಲವೇ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಕಿಡಿಕಾರಿದರು.

ಹಾನಗಲ್‌ನಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ನಡೆಸಿದ ಅವರು ಕಾಂಗ್ರೆಸ್‌(Congress) ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ 15 ಲಕ್ಷ ಮನೆ(EWS Houses) ಕೊಟ್ಟಿದ್ದೀನಿ ಅಂತಾರೆ. ಚುನಾವಣೆ ಘೋಷಣೆಗೆ ಇನ್ನೇನು ಮೂರು ತಿಂಗಳಿದೆ ಎನ್ನುವಾಗ ಮನೆ ಮಂಜೂರು ಮಾಡಿ 15 ಲಕ್ಷ ಮನೆ ಕೊಟ್ಟಿದ್ದಾಗಿ ಹೇಳುತ್ತಿದ್ದಾರೆ. ಅದೇನು ದೊಡ್ಡ ಸಾಧನೆಯೆ? ಮನೆ ಮಂಜೂರು ಮಾಡಿ ಅದನ್ನು ತಮ್ಮ ಅಧಿಕಾರಾವಧಿಯಲ್ಲೇ ಪೂರ್ಣಗೊಳಿಸಿದ್ದರೆ ಅದು ಸಾಧನೆ. ನಾನು ಅಧಿಕಾರಕ್ಕೆ ಬಂದ ಬಳಿಕ ಗ್ರಾಮೀಣದಲ್ಲಿ ನಾಲ್ಕು ಲಕ್ಷ ಮನೆ, ಶಹರ ಪ್ರದೇಶದಲ್ಲಿ ಒಂದು ಲಕ್ಷ ಮನೆಗಳನ್ನು ಮಂಜೂರು ಮಾಡಿಸಿದ್ದೇನೆ. ಈಗ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಮನೆಗಳನ್ನು ಘೋಷಣೆ ಮಾಡುವುದು ಬೇರೆ, ಅನುದಾನ ನೀಡಿ, ಕಾಮಗಾರಿ ಪೂರ್ಣಗೊಳಿಸುವುದು ಬೇರೆ. ಸಿದ್ದರಾಮಯ್ಯ ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಅವರು ಪದೇ ಪದೆ ರಾಜಕೀಯ ನಿವೃತ್ತಿ ಬಗ್ಗೆ ಹೇಳುತ್ತಿದ್ದಾರೆ. ಅವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ ಎಂದು ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.

3 ರು. ಕೊಟ್ಟು ಚೀಲದಲ್ಲಿ ಫೋಟೋ:

ಅನ್ನಭಾಗ್ಯದ(Annabhagya) ಅಕ್ಕಿಗೆ ಕೇಂದ್ರ ಸರ್ಕಾರ 29 ರುಪಾಯಿ ಕೊಟ್ಟರೆ ರಾಜ್ಯ ಸರ್ಕಾರ ಕೊಟ್ಟಿದ್ದು 3 ರುಪಾಯಿ. ಆದರೆ, ಮೂರು ರುಪಾಯಿ ಕೊಟ್ಟು ಅಕ್ಕಿ ಚೀಲದ ಮೇಲೆ ತಮ್ಮ ಫೋಟೋ ಹಾಕಿಕೊಂಡರು.

ಸಿದ್ದರಾಮಯ್ಯ ಅವರಿಗೆ ಭಾಷಣ ಮಾಡೋದೇ ಕೆಲಸ. ಸಿದ್ದರಾಮಯ್ಯ ಅವರ ಆಟ ಈ ಬಾರಿ ನಡೆಯಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಹಾನಗಲ್‌ಗೆ ಒಂದೇ ಒಂದು ಯೋಜನೆ ಕೊಟ್ಟಿದ್ದಾರಾ? ಸಿದ್ದರಾಮಯ್ಯ ನಮ್ಮನ್ನು ಈ ವಿಚಾರವಾಗಿ ಚರ್ಚೆಗೆ ಕರೆಯುತ್ತಾರೆ, ನಾವು ಮಾತನಾಡಲ್ಲ, ನಮ್ಮ ಕೆಲಸಗಳು ಮಾತನಾಡುತ್ತವೆ. ಸಿದ್ದರಾಮಯ್ಯ ಬಂದರೆ ಡಿಸೆಂಬರ್‌ನಲ್ಲಿ ಬಾಳಂಬೀಡ ಏತ ನೀರಾವರಿ ಯೋಜನೆಯನ್ನು ಅವರ ಕೈಯಿಯಿಂದಲೇ ಚಾಲನೆ ಕೊಡಿಸುತ್ತೇವೆ ಎಂದರು.

ಕಾಂಗ್ರೆಸ್‌ನವರಿಗೆ ಹಣ, ಅಧಿಕಾರ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಹಣ ಚೆಲ್ಲಿ ಅಧಿಕಾರಕ್ಕೆ ಬರೋದು, ಅಧಿಕಾರಕ್ಕೆ ಬಂದು ಹಣ ಮಾಡೋದು ಅವರ ತಲೆಯಲ್ಲಿದೆ. ಕಾಂಗ್ರೆಸ್‌ ಸುಳ್ಳಿನ ಕಂತೆ ಹೇಳಿದರೆ ಜನ ನಂಬಲ್ಲ. ಕಾಂಗ್ರೆಸ್‌ ಸರ್ಕಾರ ರೈತರ ಪರವಾಗಿರಲಿಲ್ಲ, ರೈತರನ್ನು ಉದ್ಧಾರ ಮಾಡುವ ಮನಸ್ಥಿತಿ ಅವರಿಗಿಲ್ಲ. ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುವುದೇ ಕಾಂಗ್ರೆಸ್‌ ನಾಯಕರ ಕೆಲಸ. ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದರೆ ಸಂಘಟನೆಯಿಂದ ಎಂದು ಹೇಳುತ್ತಿದ್ದರು. ಈಗ ಬಿಜೆಪಿ ಜಯಗಳಿಸಿದರೆ ಅದು ಹಣಬಲದಿಂದ ಎಂದು ಡಿ.ಕೆ.ಶಿವಕುಮಾರ್‌ ಆರೋಪಿಸುತ್ತಾರೆ ಎಂದರು.