Asianet Suvarna News Asianet Suvarna News

ಸವದಿ ವಿರುದ್ಧ ಬಿಜೆಪಿಯಲ್ಲೇ ತಂತ್ರ?, ಕುತೂಹಲ ಮೂಡಿಸಿದ ಆಂತರಿಕ ರಾಜಕೀಯದಾಟ!

ಸವದಿ ವಿರುದ್ಧ ಬಿಜೆಪಿಯಲ್ಲೇ ತಂತ್ರ?| ಕಣದಿಂದ ಅನಿಲ್‌ ನಿವೃತ್ತಿ ಬೇಡವೆಂದು ಒತ್ತಾಯಿಸಿದ್ದ 10ಕ್ಕೂ ಹೆಚ್ಚು ಶಾಸಕರು| 7 ಮತ ಅಸಿಂಧುವಾದ ಬೆನ್ನಲ್ಲೇ ಕುತೂಹಲ ಮೂಡಿಸಿದ ಆಂತರಿಕ ರಾಜಕೀಯದಾಟ

Karnataka Politics Internal Political Game Begins In BJP Against Laxman Savadi
Author
Bangalore, First Published Feb 19, 2020, 7:41 AM IST

ಬೆಂಗಳೂರು[ಫೆ.19]: ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆದ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನಿಲ್‌ಕುಮಾರ್‌ ಅವರು ಕಣದಿಂದ ಹಿಂದೆ ಸರಿಯುವುದು ಬೇಡ ಎಂದು ಆಡಳಿತಾರೂಢ ಬಿಜೆಪಿಯ ಸುಮಾರು ಹತ್ತಕ್ಕೂ ಹೆಚ್ಚು ಶಾಸಕರು ಅವರಿಗೆ ಮನವಿ ಮಾಡಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.

ಮತದಾನದ ವೇಳೆ ಏಳು ಮಂದಿ ಶಾಸಕರ ಮತಗಳು ಅಸಿಂಧುವಾಗಿರುವ ಬೆನ್ನಲ್ಲೇ ಇಂಥದೊಂದು ಸುದ್ದಿ ಬಿಜೆಪಿ ಪಾಳೆಯದಿಂದಲೇ ದಟ್ಟವಾಗಿ ಕೇಳಿಬಂದಿದ್ದು, ಪಕ್ಷದ ನಾಯಕರಿಗೆ ಆತಂಕ ಉಂಟು ಮಾಡಿದೆ.

ಅಂದರೆ, ಉಪಮುಖ್ಯಮಂತ್ರಿಯಾಗಿ ಕಣಕ್ಕಿಳಿದಿದ್ದ ಲಕ್ಷ್ಮಣ ಸವದಿ ಅವರನ್ನು ಸೋಲಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಪಕ್ಷದ ವರಿಷ್ಠರನ್ನು ಮುಜುಗರಕ್ಕೀಡು ಮಾಡುವ ತಂತ್ರ ನಡೆದಿದ್ದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಜೊತೆಗೆ ತಿರಸ್ಕೃತವಾಗಿರುವ ಮತಗಳನ್ನು ಚಲಾಯಿಸಿದ ಶಾಸಕರು ಯಾರು ಎಂಬುದನ್ನು ಪತ್ತೆ ಹಚ್ಚಲು ಬಿಜೆಪಿ ಮುಂದಾಗಿದೆÜ.

ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತದ ಬಗ್ಗೆ ಬೇಸರ ಹೊಂದಿರುವ ಶಾಸಕರು ಅನಿಲ್‌ಕುಮಾರ್‌ ಅವರನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಂಪರ್ಕಿಸಿ ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯುವುದು ಬೇಡ. ನೀವು ಗೆಲ್ಲುವುದು ನಿಶ್ಚಿತ ಎಂಬ ಮಾತನ್ನು ಹೇಳಿದ್ದರು ಎಂದು ತಿಳಿದು ಬಂದಿದೆ.

ಅನಿಲ್‌ಕುಮಾರ್‌ ಅವರು ಕಣದಲ್ಲಿ ಮುಂದುವರೆಯಬೇಕು ಎಂಬ ಇಚ್ಛೆ ಹೊಂದಿದ್ದರೂ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ ಬೆಂಬಲ ನೀಡುವುದಿಲ್ಲ ಎಂಬ ನಿರ್ಧಾರ ಕೈಗೊಂಡ ಮೇಲೆ ಹಿಂದೆ ಸರಿಯಲು ನಿರ್ಧರಿಸಿದರು. ಹೇಗಿದ್ದರೂ ಜೆಡಿಎಸ್‌ ಪೂರ್ಣ ಬೆಂಬಲ ನೀಡಿತ್ತು. ಕಾಂಗ್ರೆಸ್‌ ಕೂಡ ಬೆಂಬಲಿಸಿ ಬಿಜೆಪಿಯ ಅತೃಪ್ತ ಶಾಸಕರು ಮತ ಹಾಕಿದ್ದಲ್ಲಿ ಅನಿಲ್‌ಕುಮಾರ್‌ ಅವರ ಗೆಲುವು ನಿಶ್ಚಿತವಾಗುತ್ತಿತ್ತು. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಸೋಲು ಅನುಭವಿಸಬೇಕಾಗುತ್ತಿತ್ತು.

ಆದರೆ, ಕಾಂಗ್ರೆಸ್‌ ಪಕ್ಷ ಅನಿಲ್‌ಕುಮಾರ್‌ ಅವರಿಗೆ ಬೆಂಬಲ ನೀಡಲು ಹಿಂದೆ ಸರಿದಿದ್ದರಿಂದ ಕಣದಿಂದ ಹಿಂದೆ ಸರಿಯುವ ಸುಳಿವು ದೊರೆಯುತ್ತಿದ್ದಂತೆಯೇ ಹಲವು ಬಿಜೆಪಿ ಶಾಸಕರು ಹಿಂದೆ ಸರಿಯಬೇಡಿ ಎಂಬ ಸಂದೇಶ ರವಾನಿಸಿದರು. ಕಾಂಗ್ರೆಸ್‌ ಬೆಂಬಲ ನೀಡದಿದ್ದರಿಂದ ಸೋಲುವ ಬದಲು ಕಣದಿಂದ ಹಿಂದೆ ಸರಿಯುವುದೇ ಸೂಕ್ತ ಎಂಬ ನಿಲವಿಗೆ ಬಂದರು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

Follow Us:
Download App:
  • android
  • ios