ಚಿಕ್ಕಬಳ್ಳಾಪುರ[ನ.27]: ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸದೆ ಸ್ವಾರ್ಥಕ್ಕಾಗಿ ಮಾತ್ರ ಆಡಳಿತ ನಿರ್ವಹಿಸುತ್ತಿದ್ದ ಕೆಟ್ಟಸರ್ಕಾರವನ್ನು ಉರುಳಿಸಿದ ರೂವಾರಿ ನಾನೇ ಎಂದು ಘೋಷಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ತಿರುಗೇಟು ನೀಡಿದ್ದಾರೆ. ಅಲ್ಲದೇ 2 ಲಕ್ಷ ಕೋಟಿ ರು. ಮೊತ್ತದ ರಾಜ್ಯ ಬಜೆಟ್‌ ನೀಡಿರುವ ಕುಮಾರಸ್ವಾಮಿಗೆ ಎಷ್ಟುಕಮೀಷನ್‌ ಬರುತ್ತೆ ಎಂದು ನಾನು ಕೇಳಲೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಸಮ್ಮಿಶ್ರ ಸರ್ಕಾರ ಉರುಳಿಸಲು ಡಾ.ಸುಧಾಕರ್‌ ಅವರೇ ಕಾರಣ ಎಂದು ಆರೋಪಿಸಿದ್ದ ಕುಮಾರಸ್ವಾಮಿ ಅವರು, ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸುತ್ತಿರುವುದು ಜನರಿಗಾಗಿ ಅಲ್ಲ, ಕಮೀಷನ್‌ಗಾಗಿ ಎಂದು ಟೀಕೆ ಮಾಡಿದ್ದರು. ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಲ್ಲಿ ಮಂಗಳವಾರ ಚುನಾವಣಾ ಭಾಷಣ ವೇಳೆ ಕುಮಾರಸ್ವಾಮಿಯವರ ಈ ಆರೋಪಗಳಿಗೆ ತೀಕ್ಷ$್ಣ ಪ್ರತಿಕ್ರಿಯೆ ನೀಡಿದ ಸುಧಾಕರ್‌, ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸುತ್ತಿರುವುದು ಜನರಿಗಾಗಿ ಅಲ್ಲ, ಕಮಿಷನ್‌ಗಾಗಿ ಕಾರ್ಯನಿರ್ವಹಿಸುವಷ್ಟುನೀಚ ವ್ಯಕ್ತಿ ನಾನಲ್ಲ ಎಂದು ಹೇಳಿದರು.

ಎಚ್‌ಡಿಕೆ ಅದೃಷ್ಟದ ಸಿಎಂ:

‘ನಾನು ರೈತ ಕುಟುಂಬದ ಸಾಮಾನ್ಯ ಶಿಕ್ಷಕನ ಮಗನಾಗಿ ರಾಜಕೀಯಕ್ಕೆ ಬಂದು ಜನರ ಸೇವೆ ಮಾಡುತ್ತಿದ್ದೇನೆಯೇ ಹೊರತು ನಮ್ಮ ತಂದೆಯ ಹೆಸರು ಹೇಳಿಕೊಂಡು ರಾಜಕೀಯಕ್ಕೆ ಬಂದಿಲ್ಲ. ನೀವು ಎರಡು ಬಾರಿ ಅದೃಷ್ಟದಿಂದ ಮುಖ್ಯಮಂತ್ರಿಯಾಗಿದ್ದೀರೇ ಹೊರತು ನಿಮ್ಮ ಸ್ವಂತ ಪರಿಶ್ರಮದಿಂದಲ್ಲ. ನಿಮ್ಮ ತಂದೆಯ ಹೆಸರು ಹೇಳಿಕೊಂಡು ರಾಜಕಾರಣ ಮಾಡಿದ್ದೀರಿ. ನಾನು ಸ್ವಂತ ಪರಿಶ್ರಮದಿಂದ, ಜನರಿಂದ ನಾಯಕನಾಗಿದ್ದೇನೆ’ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.

‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಲ್ಲರನ್ನೂ ಸಮಾನವಾಗಿ ನೋಡಿದ್ದರೆ 5 ವರ್ಷ ಮುಖ್ಯಮಂತ್ರಿಯಾಗಿ ನೀವೇ ಮುಂದುವರಿಯುತ್ತಿದ್ದಿರಿ. ಆದರೆ ನೀವು ಅದನ್ನು ಮಾಡದೆ ಸ್ವಾರ್ಥ ಮಾಡಿದ ಪರಿಣಾಮ ಮಧ್ಯದಲ್ಲಿಯೇ ಸರ್ಕಾರ ಪತನವಾಯಿತು ಎಂಬುದನ್ನು ಅರಿಯಿರಿ. ಸರ್ಕಾರದ ಪತನಕ್ಕೆ ನಾನೇ ರೂವಾರಿ ಎಂದು ಬಹಿರಂಗವಾಗಿ ಹೇಳಲು ನನಗೆ ಯಾವುದೇ ಹೆದರಿಕೆಯಿಲ್ಲ. ನಾನು ನನ್ನ ಪ್ರಜೆಗಳಿಗೆ ಮಾತ್ರ ಹೆದರುತ್ತೇನೆ’ ಎಂದು ತಿರುಗೇಟು ನೀಡಿದರು.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.