ಹುಣಸೂರು[ನ.27]: ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್‌. ವಿಶ್ವನಾಥ್‌ ಅವರು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಗುಣಗಾನ ಮುಂದುವರೆಸಿದ್ದು, 2006ರಲ್ಲಿ ಕುಮಾರಸ್ವಾಮಿ ಬೆಸ್ಟ್‌ ಸಿಎಂ ಆಗಿ ಜನ ನೆನಪಿಸಿಕೊಳ್ಳುವಂತಹ ಕೆಲಸ ಮಾಡಿದ್ದರು. ಎರಡನೇ ಬಾರಿಗೆ ಸಿಎಂ ಆದಾಗ ಸಮ್ಮಿಶ್ರ ಸರ್ಕಾರದವರು ಬಿಡಲಿಲ್ಲ ಎಂದಿದ್ದಾರೆ.

ಹುಣಸೂರು ತಾಲೂಕಿನ ತಿಪ್ಲಾಪುರದಲ್ಲಿ ಮತಯಾಚನೆ ವೇಳೆ ಮಾತನಾಡಿದ ಅವರು, ಈಗಲೂ ನಾನು ಕುಮಾರಸ್ವಾಮಿ ಜೊತೆ ಚೆನ್ನಾಗಿದ್ದೇನೆ. ದೇವೇಗೌಡರ ಜೊತೆ ದೂರವಾಣಿಯಲ್ಲಿ ಮಾತನಾಡುತ್ತೇನೆ. ಕುಮಾರಸ್ವಾಮಿ ಮೊದಲ ಬಾರಿ ಸಿಎಂ ಆದಾಗ ಈಗಲೂ ನೆನಪಿಸಿಕೊಳ್ಳುವ ಕೆಲಸ ಮಾಡಿದ್ದಾರೆ. ಕುಮಾರಸ್ವಾಮಿ 2ನೇ ಇನ್ನಿಂಗ್ಸ್‌ ಚೆನ್ನಾಗಿರಲಿಲ್ಲ. ಅವರು ಒಳ್ಳೆಯ ಆಡಳಿತ ನೀಡಲು ಸಮ್ಮಿಶ್ರ ಸರ್ಕಾರದಲ್ಲಿ ಬಿಡಲಿಲ್ಲ. ಬೆಳಗಾದರೆ ಹಲವರನ್ನು ಸಮಾಧಾನ ಮಾಡಿ ದಮ್ಮಯ್ಯ ಅನ್ನುವುದೇ ಆಗಿತ್ತು ಎಂದರು.

ಪರಂ ಪ್ರಚಾರ ನಾಚಿಕೆಗೇಡು:

ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್‌ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜೋಡೆತ್ತುಗಳಲ್ಲ, ಈಗಾಗಲೇ ಜೋಡೆತ್ತುಗಳು ಕಿತ್ತುಕೊಂಡು ಹೋಗಿ ಬಹಳ ದಿನಗಳು ಆಗಿವೆ. ಒಂದು ನೀರಿಗೆ ಎಳೆದರೆ, ಇನ್ನೊಂದು ಏರಿಗೆ ಏಳೆಯುತ್ತಿದೆ ಎಂದು ತಿರುಗೇಟು ನೀಡಿದರು. ಪರಮೇಶ್ವರ್‌ಗೆ ಕಾಂಗ್ರೆಸ್‌ ಮಾಡಿದ ಅಪಮಾನಕ್ಕೆ ಅವರು ಪ್ರಚಾರಕ್ಕೆ ಬರಬಾರದು. ಅವರ ಕಪಾಲಕ್ಕೆ ಹೊಡೆದಂತೆ ಗೃಹ ಖಾತೆ ಕಿತ್ತುಕೊಳ್ಳಲಾಗಿತ್ತು. ಇಷ್ಟಾದರೂ ಯಾವ ಮುಖ ಇಟ್ಟುಕೊಂಡು ಪ್ರಚಾರಕ್ಕೆ ಬಂದಿದ್ದಾರೋ ಗೊತ್ತಿಲ್ಲ. ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಬಂದಿರುವುದು ನಾಚಿಗೇಡಿನ ವಿಚಾರವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕಾಯಿಲೆ ಇರುವುದು ಮಹದೇವಪ್ಪಗೆ:

ವಿಶ್ವನಾಥ್‌ಗೆ ಮಾನಸಿಕ ಗೊಂದಲದ ‘ಡಿಲೀರಿಯಂ’ ಎಂಬ ಕಾಯಿಲೆ ಇದೆ ಎಂಬ ಎಚ್‌.ಸಿ. ಮಹದೇವಪ್ಪ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕಾಯಿಲೆ ನನಗಲ್ಲ ಮಹದೇವಪ್ಪಗೆ. ನಾನು ಆರಾಮಾಗಿ ಜನರ ಜೊತೆ ಇದ್ದೇನೆ. ಮಹದೇವಪ್ಪ ಸಚಿವನಾಗಿದ್ದಾಗ ಒಳ್ಳೆ ಕೆಲಸ ಮಾಡಿದ್ದರೆ ಅವರನ್ನು ಹೊಗಳುತ್ತಿದ್ದೆ. ನಾನು ಸುಖಾಸುಮ್ಮನೆ ಯಾರನ್ನು ಹೊಗಳುವುದಿಲ್ಲ. ನಾನು ಆರೋಗ್ಯವಾಗಿದ್ದೇನೆ, ಜನರೊಟ್ಟಿಗೆ ಇದ್ದೇನೆ. ಡಾ.ಎಚ್‌.ಸಿ. ಮಹದೇವಪ್ಪನಿಗೆ ಕಾಯಿಲೆ ಬಂದಿದೆ, ಯಾವ ಕಾಯಿಲೆ ಅಂತ ಅವರಿಗೆ ಗೊತ್ತಿದೆ ಎಂದು ವಿಶ್ವನಾಥ್‌ ತಿರುಗೇಟು ನೀಡಿದರು.