Asianet Suvarna News Asianet Suvarna News

ಬಿಎಸ್‌ವೈ ಸರ್ಕಾರದ ಮೊದಲ ಜಂಟಿ ಅಧಿವೇಶನ ಇಂದು!

ಬಿಎಸ್‌ವೈ ಸರ್ಕಾರದ ಮೊದಲ ಜಂಟಿ ಅಧಿವೇಶನ ಇಂದು| ರಾಜ್ಯಪಾಲರಿಂದ ಭಾಷಣ, ವಿವಿಧ ಮಸೂದೆ ಮಂಡನೆ| ಅನರ್ಹರಾಗಿದ್ದವರು ಮಂತ್ರಿಗಳಾಗಿ ಇಂದು ಸದನ ಪ್ರವೇಶ| ಸರ್ಕಾರದ ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜು| ಗೋಲಿಬಾರ್‌, ದೇಶದ್ರೋಹ ಕೇಸ್‌ಗಳ ಬಗ್ಗೆ ತರಾಟೆ ಸಂಭವ

Karnataka Politics First Joint Assembly Session Of BS Yediyurappa Govt
Author
Bangalore, First Published Feb 17, 2020, 7:43 AM IST

ಬೆಂಗಳೂರು[ಫೆ.17]: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರದ ಮೊಟ್ಟಮೊದಲ ವಿಧಾನ ಮಂಡಲದ ಜಂಟಿ ಅಧಿವೇಶನ ಸೋಮವಾರ ನಡೆಯಲಿದೆ. ಇನ್ನೂ ಬಗೆಹರಿಯದ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯವೆಂಬ ಕೆಂಡವನ್ನು ಮಡಿಲಲ್ಲಿ ಇಟ್ಟುಕೊಂಡೇ ಮಂಗಳೂರು ಗೋಲಿಬಾರ್‌, ನೆರೆ ಪರಿಸ್ಥಿತಿ ನಿಭಾಯಿಸುವಲ್ಲಿನ ವೈಫಲ್ಯ, ದೇಶದ್ರೋಹ ಪ್ರಕರಣಗಳ ಹೆಸರಿನಲ್ಲಿ ಪೊಲೀಸ್‌ ವ್ಯವಸ್ಥೆ ದುರುಪಯೋಗ ಹಾಗೂ ರಾಜ್ಯ ಸರ್ಕಾರವನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಿದೆ ಎಂದು ಆರೋಪಿಸಿ ಪ್ರಬಲ ಪ್ರತಿರೋಧಕ್ಕೆ ಸಜ್ಜಾಗಿರುವ ಪ್ರತಿಪಕ್ಷಗಳನ್ನು ಎದುರಿಸುವ ಕಠಿಣ ಸವಾಲನ್ನು ಯಡಿಯೂರಪ್ಪ ಅವರು ಎದುರಿಸಬೇಕಿದೆ.

ಸರ್ಕಾರವು ವಾಡಿಕೆಯಂತೆ ಜನವರಿಯಲ್ಲೇ ವಿಧಾನಮಂಡಲ ಜಂಟಿ ಅಧಿವೇಶನ ನಡೆಸಬೇಕಿತ್ತು. ಆದರೆ, ಯಡಿಯೂರಪ್ಪ ಅವರು ವಿಶ್ವ ಆರ್ಥಿಕ ಒಕ್ಕೂಟದ ಸಮಾವೇಶದಲ್ಲಿ ಭಾಗವಹಿಸುವ ಕಾರಣ ನೀಡಿ ಜ.20ರಿಂದ 30ರವರೆಗೆ ನಿಗದಿಯಾಗಿದ್ದ ಅಧಿವೇಶನವನ್ನು ಮುಂದೂಡಲಾಗಿತ್ತು. ಹೀಗಾಗಿ ವರ್ಷದ ಮೊದಲ ಅಧಿವೇಶನ ಸೋಮವಾರ ಪ್ರಾರಂಭವಾಗಲಿದ್ದು, ಫೆ.20ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ.

ಮೊದಲಿಗೆ ವಿಧಾನಸಭೆ ಹಾಗೂ ಪರಿಷತ್‌ನ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲ ವಿ.ಆರ್‌. ವಾಲಾ ಭಾಷಣ ಮಾಡಲಿದ್ದು, ಸರ್ಕಾರದ ಆದ್ಯತೆ, ನೀತಿ, ಕಾರ್ಯಕ್ರಮಗಳನ್ನು ಜನತೆ ಮುಂದೆ ತೆರೆದಿಡಲಿದ್ದಾರೆ. ಸರ್ಕಾರದ ಮುಂದಿನ ಒಂದು ವರ್ಷದವರೆಗಿನ ನಡೆ ಹಾಗೂ ಯೋಜನೆಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಲಿದ್ದಾರೆ.

ಹದಿನೈದನೇ ವಿಧಾನಸಭೆಯ ಆರನೇ ಅಧಿವೇಶನದ ಆರಂಭಕ್ಕೆ ಭಾಷಣದ ಮೂಲಕ ಅಡಿಗಲ್ಲು ಹಾಕಲಿರುವ ರಾಜ್ಯಪಾಲರನ್ನು ಸ್ವಾಗತಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ಕೆ. ಪ್ರತಾಪ್‌ಚಂದ್ರ ಶೆಟ್ಟಿಸಿದ್ಧತೆ ಮಾಡಿಕೊಂಡಿದ್ದಾರೆ. ರಾಜ್ಯಪಾಲರ ಭಾಷಣದ ಬಳಿಕ ಅದರ ಪ್ರತಿಯನ್ನು ಸಭೆಯಲ್ಲಿ ಮಂಡಿಸಿ ಹದಿನೈದು ನಿಮಿಷಗಳ ಕಾಲ ಕಲಾಪ ಮುಂದೂಡಲಾಗುವುದು. ಬಳಿಕ ವಿಧಾನಸಭೆ ಹಾಗೂ ವಿಧಾನಪರಿಷತ್‌ ಪ್ರತ್ಯೇಕವಾಗಿ ಮರು ಸಮಾವೇಶಗೊಳ್ಳಲಿದೆ. ಈ ವೇಳೆ ಕಳೆದ ಅಧಿವೇಶನದಲ್ಲಿ ವರದಿಯನ್ನು ಒಪ್ಪಿಸಿದ ನಂತರ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಸಭೆಯ ಮುಂದೆ ಮಂಡಿಸಲಾಗುವುದು. ಬಳಿಕ ಸಂತಾಪ ಸೂಚನೆ ನಿರ್ಣಯ ಮಂಡಿಸಿ ಮಂಗಳವಾರಕ್ಕೆ ಕಲಾಪ ಮುಂದೂಡುವ ಸಾಧ್ಯತೆ ಇದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಸರ್ಕಾರಕ್ಕೆ ಅಗ್ನಿ ಪರೀಕ್ಷೆ:

ನೂತನ ಸರ್ಕಾರದ ರೂವಾರಿ ಯಡಿಯೂರಪ್ಪ ಅವರು ಈವರೆಗೆ ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಶಮನ, ಉಪ ಚುನಾವಣೆ ಸಿದ್ಧತೆ, ಉಪ ಚುನಾವಣೆಯಲ್ಲಿ ಅರ್ಹರಾದ ಶಾಸಕರಿಗೆ ಸಚಿವ ಸ್ಥಾನ ನೀಡುವುದು, ಸಚಿವ ಸ್ಥಾನ ದೊರೆಯದೆ ಅತೃಪ್ತರಾದವರನ್ನು ಸಂತೈಸುವುದರಲ್ಲೇ ಮಗ್ನರಾಗಿದ್ದರು. ಈ ನಡುವೆ ಉತ್ತರ ಕರ್ನಾಟಕದ ನೆರೆ ಮತ್ತಿತರ ವಿಚಾರಗಳಿಂದಾಗಿ ಸಂಪೂರ್ಣ ಆಡಳಿತದತ್ತ ದೃಷ್ಟಿಕೇಂದ್ರೀಕರಿಸಲು ಸಾಧ್ಯವಾಗಿಲ್ಲ.

ಇದೀಗ ಸಂಪೂರ್ಣ ಆಡಳಿತದತ್ತ ದೃಷ್ಟಿಹರಿಸಿ ಯಡಿಯೂರಪ್ಪ ಅವರಲ್ಲಿನ ಆಡಳಿತಗಾರ ತೆರೆದುಕೊಳ್ಳುವ ಹೊತ್ತಿನಲ್ಲೇ ಅಧಿವೇಶನ ಶುರುವಾಗಿದೆ. ಇದರ ಬೆನ್ನಲ್ಲೇ ಮಾ.2ರಿಂದ ಬಜೆಟ್‌ ಅಧಿವೇಶನ ಶುರುವಾಗಲಿದ್ದು, ಮಾ.5ರಂದು ಬಜೆಟ್‌ ಮಂಡನೆ ಮಾಡಬೇಕಿದೆ. ಮೊದಲ ಜಂಟಿ ಅಧಿವೇಶನಕ್ಕೆ ಸಿದ್ಧವಾಗಿರುವ ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧ ಮುಗಿಬೀಳಲು ವಿಪಕ್ಷಗಳು ತೀವ್ರ ಸಿದ್ಧತೆ ಮಾಡಿಕೊಂಡಿವೆ. ಹೀಗಾಗಿ ಉಭಯ ಸದನಗಳಲ್ಲಿ ಭಾರೀ ಜಟಾಪಟಿ ನಿರೀಕ್ಷಿಸಲಾಗಿದೆ.

ಪ್ರತಿಪಕ್ಷದ ತಂತ್ರ ಏನು:

ರಾಜ್ಯಪಾಲರ ಭಾಷಣಕ್ಕೂ ಅಡ್ಡಿಪಡಿಸಿ ಪ್ರತಿಭಟನೆ ನಡೆಸಲು ವಿಪಕ್ಷಗಳು ಸಿದ್ಧತೆ ನಡೆಸಿವೆ. ಇದು ಸಾಧ್ಯವಾಗದಿದ್ದರೂ ರಾಜ್ಯಪಾಲರ ಭಾಷಣದ ಬಳಿಕ ಉಳಿದ ಮೂರೂ ದಿನಗಳ ಕಾಲ ಸರ್ಕಾರದ ವಿರುದ್ಧ ಮುಗಿಬೀಳಲು ರಣತಂತ್ರ ರೂಪಿಸಿವೆ.

ಸರ್ಕಾರದ ಆಡಳಿತ ವೈಫಲ್ಯ, ನೆರೆ ಪರಿಹಾರ ವಿಳಂಬ, ಸಿಎಎ ಹೋರಾಟಗಾರರ ವಿರುದ್ಧ ಗೋಲಿಬಾರ್‌, ದೇಶದ್ರೋಹ ಪ್ರಕರಣ ದಾಖಲಿಸಿರುವುದು, ಪ್ರಮುಖವಾಗಿ ಸದನದ ಸದಸ್ಯರಾದ ಯು.ಟಿ.ಖಾದರ್‌ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವುದನ್ನು ಕಾಂಗ್ರೆಸ್‌ ಗಂಭೀರವಾಗಿ ಪರಿಗಣಿಸಿದೆ. ಜತೆಗೆ ಬೀದರ್‌ನ ಶಾಹೀನ್‌ ಶಾಲೆಯ ಪುಟ್ಟಮಕ್ಕಳ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿರುವ ಸರ್ಕಾರವು ಹುಬ್ಬಳ್ಳಿಯ ಕೆಎಲ್‌ಇ ಕಾಲೇಜಿನ ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿದ್ದರೂ ಅವರನ್ನು ಬಿಡುಗಡೆ ಮಾಡಿರುವುದನ್ನು ಸದನದಲ್ಲಿ ಪ್ರಸ್ತಾಪಿಸಲಿದೆ. ಪಾಕಿಸ್ತಾನದ ಪರ ಘೋಷಣೆ ಕೂಗಿರುವುದು ನಿಜವಾದ ದೇಶದ್ರೋಹ, ಅವರನ್ನು ಬಿಡುಗಡೆ ಮಾಡಿದ್ದು ಏಕೆ ಎಂಬ ವಿಚಾರ ಇಟ್ಟುಕೊಂಡು ಹೋರಾಟ ರೂಪಿಸಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಮಠ ಮಾನ್ಯಗಳಿಗೆ ಅಕ್ಕಿ, ಗೋಧಿ ನೀಡುತ್ತಿದ್ದ ಅನ್ನ ದಾಸೋಹ ಯೋಜನೆ ಸ್ಥಗಿತಗೊಳಿಸಿರುವುದು, ಅನ್ನಭಾಗ್ಯ ಯೋಜನೆಯಡಿ ವಿತರಿಸುತ್ತಿರುವ ಅಕ್ಕಿ ಪ್ರಮಾಣ ಕಡಿಮೆ ಮಾಡಲು ಮುಂದಾಗಿರುವುದು, ಅರಣ್ಯನಾಶದ ಸಂಬಂಧ 15 ಪ್ರಕರಣ ಎದುರಿಸುತ್ತಿರುವ ಆನಂದ್‌ ಸಿಂಗ್‌ ಅವರಿಗೆ ಅರಣ್ಯ ಖಾತೆ ನೀಡಿರುವುದು ಸೇರಿದಂತೆ ಆಡಳಿತದ ವೈಫಲ್ಯಗಳನ್ನೂ ಪ್ರಸ್ತಾಪಿಸಲಿದೆ.

ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಸಾಧ್ಯತೆ:

2019ರ ಫೆ.6ರಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಿಜೆಪಿ ಸದಸ್ಯರು ರಾಜ್ಯಪಾಲ ವಿ.ಆರ್‌. ವಾಲಾ ಭಾಷಣಕ್ಕೆ ಅಡ್ಡಿ ಪಡಿಸಿದ್ದರು. ತೀವ್ರ ಗದ್ದಲದ ಹಿನ್ನೆಲೆಯಲ್ಲಿ ರಾಜ್ಯಪಾಲರು ತಮ್ಮ ಭಾಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಹೊರನಡೆದಿದ್ದರು. ಬಿಜೆಪಿ ವಿರೋಧದಿಂದಾಗಿ ಎರಡೇ ಪುಟಕ್ಕೆ ರಾಜ್ಯಪಾಲರು ತಮ್ಮ ಭಾಷಣ ಮೊಟಕುಗೊಳಿಸಿ ಕೊನೆಯ ಪ್ಯಾರಾವನ್ನು ಓದಿ ಭಾಷಣವನ್ನು ಮಂಡಿಸಲಾಗಿದೆ ಎಂದು ಪ್ರಕಟಿಸಿ ಸದನದಿಂದ ಹೊರ ನಡೆದಿದ್ದರು.

ಇದೀಗ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಹ ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಪಡಿಸಲಿವೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಸರ್ಕಾರವು ತನ್ನ ಸಾಧನೆ ಹಾಗೂ ಭವಿಷ್ಯದ ಕಾರ್ಯಕ್ರಮಗಳ ಬಗ್ಗೆ ಯಾವ ಅಂಶಗಳನ್ನು ರಾಜ್ಯಪಾಲರಿಂದ ಹೇಳಿಸಲಿದೆ ಎಂಬುದರ ಮೇಲೆ ಇದು ನಿರ್ಧಾರವಾಗಲಿದೆ. ಜತೆಗೆ, ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡಿದರೆ ಅದಕ್ಕೂ ವಿರೋಧ ವ್ಯಕ್ತವಾಗುವ ಸಾಧ್ಯತೆಯಿದೆ.

ವಿಪಕ್ಷಗಳು ಅಡ್ಡಿಪಡಿಸುವ ಸಾಧ್ಯತೆ ಇರುವುದರಿಂದಲೇ ವಿಧಾನಪರಿಷತ್‌ ಕಾರ್ಯದರ್ಶಿಗಳು ವಿಧಾನಪರಿಷತ್‌ ಕಾರ್ಯ ವಿಶ್ವಾಸ ಹಾಗೂ ನಡವಳಿಕೆ ನಿಯಮಾವಳಿ 26ರ ನಿಯಮ ಉಲ್ಲೇಖಿಸಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದರೆ ಅಗೌರವ ಎಂದು ಪರಿಗಣಿಸಿ ಸದಸ್ಯರನ್ನು ಸದನದಿಂದ ಅಮಾನತು ಮಾಡಲು ಅವಕಾಶವಿದೆ ಎಂದು ಆದೇಶಿಸಿದೆ. ಈ ಬಗ್ಗೆ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಅವರೂ ಸಹ ಪೂರಕ ಹೇಳಿಕೆ ನೀಡಿದ್ದಾರೆ. ಹೀಗಾಗಿ ಸೋಮವಾರದ ಜಂಟಿ ಅಧಿವೇಶನ ಏನಾಗಲಿದೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.

"

Follow Us:
Download App:
  • android
  • ios