ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ಡಿ.ಕೆ. ಶಿವಕುಮಾರ್, ಪ್ರಮಾಣ ವಚನಕ್ಕೂ ಮುನ್ನ ಹಿರಿಯ ನಾಯಕರಾದ ಯಡಿಯೂರಪ್ಪ ಹಾಗೂ ದೇವೇಗೌಡರನ್ನು ಭೇಟಿ ಮಾಡಿ ರಾಜಕೀಯ ತಂತ್ರಗಾರಿಕೆ ಪ್ರದರ್ಶಿಸಿದ್ದಾರೆ. ಇದರೊಂದಿಗೆ, ತಮ್ಮ ಸಚಿವ ಸಂಪುಟದಲ್ಲಿ ಎಲ್ಲಾ ಪ್ರಮುಖ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವ ಮೂಲಕ ಸಾಮಾಜಿಕ ಸಮೀಕರಣವನ್ನೂ ಸಾಧಿಸಿದ್ದಾರೆ.
ಬೆಂಗಳೂರು: ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಇಂದು ಮತ್ತೊಂದು ಸುವರ್ಣ ಅಧ್ಯಾಯ ಬರೆಯಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ್ದ ‘ಕನಕಪುರ ಬಂಡೆ’ ಖ್ಯಾತಿಯ ಡಿ.ಕೆ. ಶಿವಕುಮಾರ್ ಅವರು ಇಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಾರಥ್ಯ ವಹಿಸಿಕೊಳ್ಳುತ್ತಿದ್ದಾರೆ. ಆದರೆ, ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ಡಿಕೆಶಿ ನಡೆಸಿರುವ ರಾಜಕೀಯ ಚದುರಂಗದಾಟ ಹಾಗೂ ತಂತ್ರಗಾರಿಕೆಯ ಹೆಜ್ಜೆಗಳು ಇಡೀ ರಾಜ್ಯ ರಾಜಕಾರಣವೇ ಬೆರಗಾಗುವಂತೆ ಮಾಡಿದೆ.
ತಮ್ಮೊಂದಿಗೆ ಒಟ್ಟು 13+1 ಜನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅಧಿಕೃತವಾಗಿ ಹೇಳಿದ ಡಿ.ಕೆ. ಶಿವಕುಮಾರ್, ದೇವೆಗೌಡರ ಮನೆಗೆ ಹೋಗ್ತಿದ್ದೇನೆ ಬಳಿಕ ಪ್ರಮಾಣ ವಚನ ನಡೆಯಲಿದೆ. ರಾಹುಲ್ ಗಾಂಧಿ ಬರ್ತಾ ಇದ್ದಾರೆ ಎಂದು ಹೇಳಿದರು.
ಜಾತಿವಾರು ಸಮೀಕರಣ:
ಸಚಿವ ಸಂಪುಟದ 'ಪರ್ಫೆಕ್ಟ್' ಬ್ಯಾಲೆನ್ಸಿಂಗ್ ಆಕ್ಟ್! ಡಿ.ಕೆ. ಶಿವಕುಮಾರ್ (1+13) ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ರಾಜ್ಯದ ಎಲ್ಲಾ ಪ್ರಮುಖ ಸಮುದಾಯಗಳಿಗೂ ಸಮಾನ ಪ್ರಾತಿನಿಧ್ಯ ನೀಡುವ ಮೂಲಕ ಸಾಮಾಜಿಕ ನ್ಯಾಯದ ಸಮೀಕರಣವನ್ನು ಅತ್ಯಂತ ಅಚ್ಚುಕಟ್ಟಾಗಿ ಹೆಣೆಯಲಾಗಿದೆ.
ಸಂಭಾವ್ಯ ಸಚಿವರ ಅಧಿಕೃತ ಪಟ್ಟಿ (13+1):
ಶ್ರೀ ಡಿ.ಕೆ. ಶಿವಕುಮಾರ್ (ಮುಖ್ಯಮಂತ್ರಿ)
ಡಾ. ಜಿ. ಪರಮೇಶ್ವರ್ (ಉಪ ಮುಖ್ಯಮಂತ್ರಿ )
ಶ್ರೀ ಕೆ.ಎಚ್. ಮುನಿಯಪ್ಪ
ಶ್ರೀ ಕೆ.ಜೆ. ಜಾರ್ಜ್
ಶ್ರೀ ಎಂ.ಬಿ. ಪಾಟೀಲ್
ಶ್ರೀ ರಾಮಲಿಂಗಾರೆಡ್ಡಿ
ಶ್ರೀ ಸತೀಶ್ ಜಾರಕಿಹೊಳಿ
ಶ್ರೀ ಕೃಷ್ಣ ಬೈರೇಗೌಡ
ಶ್ರೀ ಪ್ರಿಯಾಂಕ್ ಖರ್ಗೆ
ಶ್ರೀ ಯು.ಟಿ. ಖಾದರ್
ಶ್ರೀ ಈಶ್ವರ್ ಖಂಡ್ರೆ
ಶ್ರೀ ಯತೀಂದ್ರ ಸಿದ್ದರಾಮಯ್ಯ
ಶ್ರೀ ಬೈರತಿ ಸುರೇಶ್
ಶ್ರೀ ಶರಣಪ್ರಕಾಶ್ ಪಾಟೀಲ್
ಜಾತಿವಾರು ಪ್ರಾತಿನಿಧ್ಯದ ಲೆಕ್ಕಾಚಾರ ಇಲ್ಲಿದೆ:
ಲಿಂಗಾಯತ: 3 ಸ್ಥಾನಗಳು
ಒಕ್ಕಲಿಗ (ಡಿಕೆಶಿ ಸೇರಿ): 3 ಸ್ಥಾನಗಳು
ದಲಿತ (SC): 3 ಸ್ಥಾನಗಳು
ಕುರುಬ: 2 ಸ್ಥಾನಗಳು
ಹಿಂದುಳಿದ ವರ್ಗ (ST): 1 ಸ್ಥಾನ
ಮುಸ್ಲಿಂ: 1 ಸ್ಥಾನ
ಕ್ರಿಶ್ಚಿಯನ್: 1 ಸ್ಥಾನ
ಈ ಸಮೀಕರಣದ ಮೂಲಕ ಯಾವುದೇ ಒಂದು ಸಮುದಾಯಕ್ಕೆ ಅನ್ಯಾಯವಾಗದಂತೆ ತಡೆಯಲಾಗಿದ್ದು, ಮುಂಬರುವ ದಿನಗಳಲ್ಲಿ ಆಡಳಿತ ಸುಗಮವಾಗಿ ನಡೆಯಲು ಹಾದಿ ಸುಲಭ ಮಾಡಿಕೊಳ್ಳಲಾಗಿದೆ.
ಮುತ್ಸದ್ದಿಗಳ ಮನೆಗೆ ಡಿಕೆಶಿ ಭೇಟಿ
ಪ್ರಮಾಣವಚನಕ್ಕೂ ಮುನ್ನ ರಾಜ್ಯದ ಇಬ್ಬರು ಧೀಮಂತ ಮುತ್ಸದ್ದಿ ನಾಯಕರಾದ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಈ ಭೇಟಿಯ ಹಿಂದೆ ಕೇವಲ ಸೌಜನ್ಯವಿರಲಿಲ್ಲ, ಬದಲಿಗೆ ಅತ್ಯಂತ ವ್ಯವಸ್ಥಿತವಾದ ದೂರದೃಷ್ಟಿಯ ರಾಜಕೀಯ ಲೆಕ್ಕಾಚಾರವಿತ್ತು!
ಒಂದು ಗೌರವ, ಇನ್ನೊಂದು ದೂರದೃಷ್ಟಿಯ ಸಂದೇಶ! ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಇಬ್ಬರು ಪ್ರಭಾವಿ ಜಾತಿ ಸಮುದಾಯಗಳ ಪ್ರಶ್ನಾತೀತ ನಾಯಕರನ್ನು ಭೇಟಿ ಮಾಡಿದ್ದಾರೆ. ಈ ಮೂಲಕ ಇಡೀ ರಾಜ್ಯಕ್ಕೆ ಅತ್ಯಂತ ಸ್ಪಷ್ಟ ಹಾಗೂ ಪ್ರಬಲ ಸಂದೇಶ ರವಾನಿಸಿದ್ದಾರೆ. ಜೊತೆಗೆ ಇಬ್ಬರು ನಾಯಕರಿಗೆ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ.
ಯಡಿಯೂರಪ್ಪ ನಿವಾಸಕ್ಕೆ ಭೇಟಿ:
ಲಿಂಗಾಯತ ಸಮುದಾಯದ ವಿಶ್ವಾಸ ಗಳಿಕೆಯ ತಂತ್ರ ಈ ಹಿಂದೆ ಉಪಮುಖ್ಯಮಂತ್ರಿಯಾಗಿ (ಡಿಸಿಎಂ) ಆಯ್ಕೆಯಾಗಿದ್ದಾಗಲೂ ಡಿ.ಕೆ. ಶಿವಕುಮಾರ್ ಅವರು ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು. ಇಂದು ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆಯ ದಿನದಂದೂ ಸಹ ಬಿಎಸ್‌ವೈ ನಿವಾಸಕ್ಕೆ ತೆರಳಿ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದಿದ್ದಾರೆ. ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕರಾಗಿದ್ದರೂ, ಅವರು ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ. ಬಿಎಸ್‌ವೈ ಆಶೀರ್ವಾದ ಪಡೆಯುವ ಮೂಲಕ ಲಿಂಗಾಯತ ಸಮುದಾಯದ ಮನಸ್ಸು ಗೆಲ್ಲುವುದು ಮತ್ತು ಆ ಸಮುದಾಯದಲ್ಲಿ ತಮ್ಮ ಬಗ್ಗೆ ಅನುಕಂಪ ಸೃಷ್ಟಿಸಿಕೊಳ್ಳುವ ಎಚ್ಚರಿಕೆಯ ಹೆಜ್ಜೆಯನ್ನು ಡಿಕೆಶಿ ಇಟ್ಟಿದ್ದಾರೆ.
ದೇವೇಗೌಡರ ಮನೆಗೆ ಭೇಟಿ:
ಯಡಿಯೂರಪ್ಪ ಅವರ ಭೇಟಿಯ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ, ತಾವೇ ಖುದ್ದಾಗಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ಈ ಭೇಟಿಯ ಹಿಂದೆ ಹಳೇ ಮೈಸೂರು ಭಾಗದ ಒಕ್ಕಲಿಗ ನಾಯಕತ್ವದ ದೊಡ್ಡ ಪ್ಲಾನ್ ಅಡಗಿದೆ. ಒಕ್ಕಲಿಗ ಸಮುದಾಯದ ಸರ್ವೋಚ್ಚ ನಾಯಕರಾಗಿರುವ ದೇವೇಗೌಡರ ಗೌರವ ಕಾಯುತ್ತಲೇ, ಇನ್ಮುಂದೆ ಇಡೀ ಒಕ್ಕಲಿಗ ಸಮುದಾಯದ ನಾಯಕತ್ವದ ನೊಗವನ್ನು ನಾನೇ ಹೊರಲಿದ್ದೇನೆ ಎಂಬ ಪರೋಕ್ಷ ಸಂದೇಶವನ್ನು ಡಿಕೆಶಿ ರವಾನಿಸಿದ್ದಾರೆ.
ಬೆಂಗಳೂರಿಗೆ ಹರಿದು ಬರಲಿರುವ ಹೈಕಮಾಂಡ್ ದಂಡು! ರಾಜ್ಯ ರಾಜಕಾರಣದ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಎಐಸಿಸಿ ರಾಷ್ಟ್ರೀಯ ನಾಯಕರ ದಂಡೇ ಬೆಂಗಳೂರಿಗೆ ಆಗಮಿಸುತ್ತಿದೆ. ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ದೆಹಲಿಯಿಂದ ಒಂದೇ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಹೈಕಮಾಂಡ್ ನಾಯಕರ ಸಮ್ಮುಖದಲ್ಲಿ ನಡೆಯಲಿರುವ ಈ ಅದ್ಧೂರಿ ಪ್ರಮಾಣ ವಚನ ಕಾರ್ಯಕ್ರಮವು ಕೇವಲ ಅಧಿಕಾರ ಸ್ವೀಕಾರ ಸಮಾರಂಭವಾಗಿರದೆ, ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಶಕ್ತಿ ಪ್ರದರ್ಶನದ ವೇದಿಕೆಯೂ ಆಗಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತಗೆದುಕೊಂಡು, ಸ್ವಂತ ಸಮುದಾಯದ ಹಿಡಿತ ಸಾಧಿಸಿ, ಹೈಕಮಾಂಡ್ ಕೃಪಾಕಟಾಕ್ಷದೊಂದಿಗೆ ಮುಖ್ಯಮಂತ್ರಿ ಪೀಠ ಏರುತ್ತಿರುವ ಡಿಕೆಶಿ ಅವರ ಮುಂದಿನ ಆಡಳಿತ ವೈಖರಿ ಹೇಗಿರಲಿದೆ ಎಂಬುದನ್ನು ಇಡೀ ರಾಜ್ಯವೇ ಕುತೂಹಲದಿಂದ ನೋಡುತ್ತಿದೆ.


