ಬೆಂಗಳೂರು[ಫೆ.05]: ತತ್ವ, ನಿಷ್ಠೆಗೆ ಈಗ ಅಗ್ನಿ ಪರೀಕ್ಷೆಯ ಕಾಲ. ಇಂತಹ ಅಗ್ನಿ ಪರೀಕ್ಷೆಗಳನ್ನು ನಾವು ಸಹ ಎದುರಿಸಿದ್ದೇವೆ. ಕಾಗೆ, ಕೋಗಿಲೆ ಎರಡೂ ಕಪ್ಪು. ವಸಂತ ಕಾಲ ಬಂದಾಗಲೇ ಕಾಗೆನೋ ಅಥವಾ ಕೋಗಿಲೆನೋ ಎನ್ನುವುದು ಗೊತ್ತಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಮಾರ್ಮಿಕವಾಗಿ ಹೇಳಿದ್ದಾರೆ.

ಮಂತ್ರಿ ಸ್ಥಾನಕ್ಕಾಗಿ ಬಿಜೆಪಿಯ ಕೆಲ ಶಾಸಕರು ಸಭೆ ನಡೆಸಿದ ಕುರಿತು ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ವಸಂತ ಕಾಲ ಸಂಪ್ರಾಪ್ತ ಕಾಕ ಕಾಕಹ, ಪಿಕ ಪಿಕಹಾ’ ಎಂಬ ಸಂಸ್ಕೃತಿ ನಾಣ್ಣುಡಿಯಂತೆ ಕಾಲ ಬಂದಾಗ ತತ್ವ ನಿಷ್ಠರು ಯಾರು? ಅವಕಾಶವಾದಿಗಳು ಯಾರು ಎಂಬುದು ಗೊತ್ತಾಗಲಿದೆ ಎಂದು ಹೇಳಿದರು.

ನಾನು ತ್ಯಾಗಿಯೂ ಅಲ್ಲ, ಪರಮ ಸ್ವಾರ್ಥದ ರಾಜಕಾಣಿಯೂ ಅಲ್ಲ. ತತ್ವ ನಿಷ್ಠೆಯ ರಾಜಕಾರಣ ಮಾತ್ರ ಮಾಡುತ್ತೇನೆ. ರಾಜಕಾರಣದಲ್ಲಿ ರಾಜಕೀಯ ವಿರೋಧಿಗಳು ಮಾತ್ರವಲ್ಲ, ಎಡ​- ಬಲದಲ್ಲಿ ಇರುವವರ ಜತೆಯೂ ಹೋರಾಟ ಮಾಡಬೇಕಾಗುತ್ತದೆ. ಸದ್ಯಕ್ಕೆ ನನಗೆ ಕೊಟ್ಟಿರುವ ಖಾತೆಯನ್ನು ನಿರ್ವಹಿಸುತ್ತಿದ್ದೇನೆ. ಒಂದು ವೇಳೆ ಖಾತೆ ಬದಲಾದರೆ ಆಗ ಅದರಲ್ಲಿ ಕಾರ್ಯ ನಿರ್ವಹಿಸುತ್ತೇನೆ. ಒಂದು ರೀತಿಯಲ್ಲಿ ಇದೊಂದು ರಿಲೇ ಓಟವಿದ್ದಂತೆ. ಯಾವ ಬ್ಯಾಟನ್‌ ನೀಡುತ್ತಾರೋ ಅದನ್ನು ಹಿಡಿದು ಓಡುತ್ತೇನೆ. ಅದು ಪ್ರವಾಸೋದ್ಯಮ ಆಗಿರಬಹುದು, ಕನ್ನಡ ಮತ್ತು ಸಂಸ್ಕೃತಿ ಆಗಿರಬಹುದು ಅಥವಾ ಮತ್ತೊಂದು ಆಗಿರಬಹುದು ಎಂದರು.

ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಬಿಜೆಪಿಯ ಶಾಸಕರೇ ಸಭೆ ನಡೆಸುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವನಾಗಿ ನಾನು ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಾರೆ. ಅವರ ಬಗ್ಗೆ ನನಗೆ ಸಹಾನುಭೂತಿ ಇದೆ. ಅವರ ಭಾವನೆಗಳೂ ಅರ್ಥವಾಗುತ್ತವೆ ಎಂದು ಇದೇ ವೇಳೆ ತಿಳಿಸಿದರು.