ಬೆಂಗಳೂರು[ಡಿ.11]: ಉಪಚುನಾವಣೆಯಲ್ಲಿ ಸೋಲಿನಿಂದ ಕಂಗೆಡಬೇಕಾದ ಅಗತ್ಯ ಇಲ್ಲ. ಕೇವಲ ಶಾಸಕ ಸ್ಥಾನ ಮಾತ್ರವಲ್ಲದೇ, ಸಚಿವ ಸ್ಥಾನವನ್ನು ಸಹ ತ್ಯಾಗ ಮಾಡಿ ಸಹಾಯ ಮಾಡಿದ್ದೀರಿ. ಹೀಗಾಗಿ ನಿಮ್ಮನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ. ಸೂಕ್ತ ಸ್ಥಾನ ನೀಡುವ ಕುರಿತು ಹೈಕಮಾಂಡ್‌ ಜತೆ ಚರ್ಚೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಉಪ ಚುನಾವಣೆಯಲ್ಲಿ ಪರಾಭವಗೊಂಡಿರುವ ಎಂ.ಟಿ.ಬಿ. ನಾಗರಾಜ್‌ ಅವರಿಗೆ ಆಶ್ವಾಸನೆ ನೀಡಿದ್ದಾರೆ.

ಉಪಚುನಾವಣೆಯ ಸೋಲಿನಿಂದ ಕಂಗೆಟ್ಟಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್‌ ಅವರ ಗರುಡಾಚಾರ್‌ ಪಾಳ್ಯದಲ್ಲಿನ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ ಸಮಾಧಾನ ಹೇಳಿದ ಬಿ.ಎಸ್‌.ಯಡಿಯೂರಪ್ಪ ಹೈಕಮಾಂಡ್‌ ಜೊತೆ ಚರ್ಚಿಸಿ ಸೂಕ್ತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದಾರೆ.

ಮಂಗಳವಾರ ಬೆಳಗ್ಗೆ ಡಾಲರ್ಸ್‌ ಕಾಲೋನಿಯಲ್ಲಿನ ಮುಖ್ಯಮಂತ್ರಿಗಳ ನಿವಾಸಕ್ಕೆ ಎಂ.ಟಿ.ಬಿ.ನಾಗರಾಜ್‌ ಆಗಮಿಸಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಆದರೆ, ಮುಖ್ಯಮಂತ್ರಿಗಳಿಗೆ ಕಾರ್ಯಕ್ರಮಗಳು ನಿಗದಿಯಾಗಿದ್ದರಿಂದ ನಾಗರಾಜ್‌ ಅವರ ಜೊತೆ ಹೆಚ್ಚು ಮಾತನಾಡಲು ಆಗಿರಲಿಲ್ಲ. ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಸಂಜೆ ಬಿಡುವು ಮಾಡಿಕೊಂಡು ನಾನೇ ನಿಮ್ಮ ಮನೆಗೆ ಬರುವುದಾಗಿ ಭರವಸೆ ನೀಡಿದರು.

ಆಶ್ವಾಸನೆ ನೀಡಿದಂತೆ ಯಡಿಯೂರಪ್ಪ ಅವರು ಸಂಜೆ ಮನೆಗೆ ತೆರಳಿ ಚರ್ಚಿಸಿದರು. ಉಪಚುನಾವಣೆಯಲ್ಲಿ ಸೋಲಿನಿಂದ ಕಂಗೆಡಬೇಕಾದ ಅಗತ್ಯ ಇಲ್ಲ. ಸೋತರೂ ನಿಮ್ಮ ಕೈ ಬಿಡುವುದಿಲ್ಲ. ಈ ಹಿಂದೆ ನೀಡಿದ ಭರವಸೆಯಂತೆ ನಡೆದುಕೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದರು.

ಇದೇ ವೇಳೆ ತಮ್ಮ ಸೋಲಿಗೆ ಕಾರಣರಾದ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್‌ ಬಚ್ಚೇಗೌಡ ತಂದೆ ಹಾಗೂ ಸಂಸದ ಬಿ.ಎನ್‌.ಬಚ್ಚೇಗೌಡ ವಿರುದ್ಧ ದೂರುಗಳನ್ನು ನೀಡಿದರು. ತಮ್ಮ ಸೋಲಿಗೆ ಕಾರಣವಾಗಿರುವ ಬಚ್ಚೇಗೌಡ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು ಎನ್ನಲಾಗಿದೆ.

ಎಂ.ಟಿ.ಬಿ.ನಾಗರಾಜ್‌ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು 5-6 ದಿನದಲ್ಲಿ ದೆಹಲಿಗೆ ತೆರಳುತ್ತಿದ್ದು, ವರಿಷ್ಠರ ಜತೆ ಮಾತುಕತೆ ನಡೆಸಿ ಎಂ.ಟಿ.ಬಿ.ನಾಗರಾಜ್‌ ಅವರಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ನಡೆಸುತ್ತೇನೆ. ಹೊಸಕೋಟೆ ಕ್ಷೇತ್ರದಲ್ಲಿ ನಾಗರಾಜ್‌ ಅವರನ್ನು ಕೇಳದೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಹೇಳಿದರು.

ಸಂಸದ ಬಚ್ಚೇಗೌಡ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಬಹಿರಂಗವಾಗಿ ಚರ್ಚೆ ನಡೆಸುವುದಿಲ್ಲ. ಆ ವಿಚಾರ ಹೈಕಮಾಂಡ್‌ ಗಮನಕ್ಕೆ ಬಂದಿದೆ. ಶಿಸ್ತುಕ್ರಮ ಕೈಗೊಳ್ಳುವುದು ಹೈಕಮಾಂಡ್‌ಗೆ ಬಿಟ್ಟವಿಚಾರ ಎಂದರು.