ಬೆಂಗಳೂರು[ನ.21]: ಸಚಿವರು, ಶಾಸಕರು ಹಾಗೂ ಪಕ್ಷದ ಮುಖಂಡರ ಪೈಕಿ ಯಾರೊಬ್ಬರೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ಬುಧವಾರ ಪಕ್ಷದ ಕಚೇರಿಯಲ್ಲಿ ನಡೆದ ಉಪಚುನಾವಣೆ ನಡೆಯಲಿರುವ ಹದಿನೈದು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿಗಳ ತಂಡದ ಸಭೆ ನಡೆಸಿದ ಅವರು ಕಾನೂನು ಸಚಿವ ಮಾಧುಸ್ವಾಮಿ ಅವರ ಹೇಳಿಕೆ ವಿವಾದ ಪ್ರಸ್ತಾಪಿಸಿ ಮಾತನಾಡಿದರು.

ಇದು ಸೂಕ್ಷ್ಮ ಸಮಯ. ಒಂದು ವಿವಾದಾತ್ಮಕ ಹೇಳಿಕೆಯಿಂದ ಇಡೀ ಚುನಾವಣೆಯ ಕಣವೇ ಬದಲಾಗುವ ಅಪಾಯವಿರುತ್ತದೆ. ಹೀಗಾಗಿ, ಹೇಳಿಕೆ ನೀಡುವಾಗ ಯೋಚಿಸಿ. ಬಾಯಿಗೆ ಬಂದದ್ದನ್ನು ಮಾತನಾಡಬೇಡಿ. ಸುತ್ತಮುತ್ತಲಿನವರು ಮೊಬೈಲ್‌ಗಳಲ್ಲಿ ಸೆರೆ ಹಿಡಿಯುತ್ತಿರುತ್ತಾರೆ. ಮಾಧುಸ್ವಾಮಿ ಅವರು ಕುರುಬ ಸಮುದಾಯಕ್ಕೆ ಅಗೌರವ ತೋರಿದ್ದಾರೆ ಎನ್ನಲಾದ ವಿಷಯ ಗಂಭೀರ ಸ್ವರೂಪ ಪಡೆದಿದೆ. ಈ ರೀತಿಯ ಘಟನೆ ಮತ್ತೆ ಮರುಕಳಿಸಬಾರದು. ಇದರಿಂದ ಪಕ್ಷ ಮತ್ತು ಸರ್ಕಾರ ಇಕ್ಕಟ್ಟಿಗೆ ಸಿಲುಕುತ್ತದೆ ಎಂದು ಹೇಳಿದರು ಎನ್ನಲಾಗಿದೆ.

ಅನರ್ಹರು ಯಾರೆಂದು ಜನ ನಿರ್ಧರಿಸುತ್ತಾರೆ:

ಈ ನಡುವೆ ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ, ಅನರ್ಹ ಶಾಸಕರ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್‌ ಅನರ್ಹ ಶಾಸಕರು ಚುನಾವಣೆಗೆ ನಿಲ್ಲಬಹುದು ಎಂದು ಹೇಳಿರುವಾಗ ಇದನ್ನು ಪ್ರಶ್ನೆ ಮಾಡಲು ಸಿದ್ದರಾಮಯ್ಯ ಯಾರು ಎಂದು ಪ್ರಶ್ನಿಸಿದರು.

ಅನರ್ಹರು ಯಾರು ಎನ್ನುವುದನ್ನು ಜನ ತೀರ್ಮಾನ ಮಾಡುತ್ತಾರೆ. ಅನರ್ಹ ಶಾಸಕರಿಂದ ಈ ಸರ್ಕಾರ ಬಂದಿದೆ. ಹಾಗಾಗಿ, ರಾಜ್ಯದ ಜನ ಅನರ್ಹ ಶಾಸಕರಿಗೆ ಬೆಂಬಲ ನೀಡುವುದು ನಿಶ್ಚಿತ. ಉಪ ಚುನಾವಣೆಯಲ್ಲಿ ಬಿಜೆಪಿ 15ಕ್ಕೆ 15 ಕ್ಷೇತ್ರಗಳಲ್ಲೂ ಗೆಲ್ಲಲಿದೆ. ಈ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದರು.

ಕಾಂಗ್ರೆಸ್‌ ಲೋಕಸಭಾ ಚುನಾವಣೆಯಲ್ಲಿ ಒಂದು ಸೀಟು ಮಾತ್ರ ಗೆದ್ದಿದೆ. ಆದರೂ ಸಿದ್ದರಾಮಯ್ಯ ಬೊಬ್ಬೆ ಹೊಡೆಯುತ್ತಿದ್ದಾರೆ. ತನ್ನ ಬಿಟ್ಟು ರಾಜ್ಯದಲ್ಲಿ ಬೇರೆ ಯಾರೂ ರಾಜಕಾರಣಿಗಳೇ ಇಲ್ಲ ಎಂಬ ರೀತಿ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಒಬ್ಬಂಟಿಯಾಗಿರುವುದನ್ನು ಮರೆಯಬಾರದು ಎಂದು ಯಡಿಯೂರಪ್ಪ ತಿರುಗೇಟು ನೀಡಿದರು.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.