ನಾಯಕತ್ವ ಬದಲಾವಣೆ ಅಂತೆ-ಕಂತೆ, ಬಿಎಸ್‌ವೈಗೆ ಪರ್ಯಾಯ ನಾಯಕ ಯಾರು?
ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಸುದ್ದಿ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಸಿಎಂ ಬಿಎಸ್ ಯಡಿಯೂರಪ್ಪ ಬದಲಾಗುತ್ತಾರಂತೆ, ತಯಾರಿ ಆಗಿದೆ, ಅಂತಿಮ ನಿರ್ಣಯವೊಂದೇ ಬಾಕಿ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತದೆ.
ಬೆಂಗಳೂರು (ಮೇ. 21): ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಅದೇನೋ ಗೊತ್ತಿಲ್ಲ ನಾಯಕತ್ವ ಬದಲಾವಣೆ ಎಂಬ ತೂಗುಕತ್ತಿ ಯಾವಾಗಲೂ ತೂಗುತ್ತಿರುತ್ತದೆ. ಒಮ್ಮೆ ಸಂಘದ ಅಂಗಳದಿಂದ, ಇನ್ನೊಮ್ಮೆ ದಿಲ್ಲಿ ಹೈಕಮಾಂಡ್ ಮೂಲಗಳಿಂದ, ಮಗದೊಮ್ಮೆ ದಿಲ್ಲಿಗೆ ಹೋಗಿ ಬರುವ ಸಚಿವರುಗಳಿಂದ, ‘ಮುಂದಿನ ತಿಂಗಳು ಪಕ್ಕಾ, ತಯಾರಿ ಆಗಿ ಹೋಗಿದೆ, ನಿರ್ಣಯ ಅಷ್ಟೇ ಬಾಕಿ’ ಹೀಗೆಲ್ಲಾ ಸುದ್ದಿ ಬರುತ್ತಲೇ ಇರುತ್ತವೆ. ಈ ಬಾರಿಯೂ ಜೂ.15ರೊಳಗೆ ಏನೋ ಯೋಚನೆ ಇದೆ. ಚುನಾವಣೆಗೆ ಎರಡು ವರ್ಷ ಉಳಿಯಿತು, ವರಿಷ್ಠರು ಯೋಚಿಸುತ್ತಿದ್ದಾರೆ ಎಂದೆಲ್ಲಾ ಸುದ್ದಿಗಳು ಬರುತ್ತಿರುವುದು ಬಿಜೆಪಿ ಮೂಲಗಳಿಂದಲೇ.
ಆದರೆ ಯಡಿಯೂರಪ್ಪನವರ ಜಾಗಕ್ಕೆ ಯಾರು, ಈ ಹಂತದಲ್ಲಿ ಲಿಂಗಾಯತ ಜನನಾಯಕನನ್ನು ತೆಗೆಯುವುದು ಸಾಧ್ಯವೇ, ಇದಕ್ಕೆಲ್ಲ ಯಡಿಯೂರಪ್ಪ ಒಪ್ಪುತ್ತಾರೆಯೇ, ಒಂದು ವೇಳೆ ಲಿಂಗಾಯತರು ಮುನಿಸಿಕೊಂಡರೆ ಬಿಜೆಪಿಗೆ ವೋಟ್ ಬ್ಯಾಂಕ್ ಯಾರು ಎಂಬೆಲ್ಲ ಪ್ರಶ್ನೆ ಕೇಳಿದರೆ ಪಕ್ಕಾ ಉತ್ತರ ಸಿಗುವುದಿಲ್ಲ. ಬಹುಶಃ ಈ ಉತ್ತರ ಸಿಗದ ಪ್ರಶ್ನೆಗಳೇ ಯಡಿಯೂರಪ್ಪನವರ ಪರವಾಗಿ ಇರುವ ಅಂಶಗಳು. ಇವತ್ತಿಗೂ ತಕ್ಕಡಿ ತೂಗಿ ಯಡಿಯೂರಪ್ಪನವರನ್ನು ಒಂದು ಕಡೆ ಹಾಕಿದರೆ ಅವರ ಸಮಕ್ಕೆ ಬರುವ ಒಬ್ಬ ನಾಯಕನೂ ಕರ್ನಾಟಕ ಬಿಜೆಪಿಯಲ್ಲಿ ಕಾಣುತ್ತಿಲ್ಲ.
ಬಂಗಾಳ ಗದ್ದುಗೆ ಗೆದ್ದ ಮಮತಾ ಬ್ಯಾನರ್ಜಿ ಮೋದಿಗೆ ಪರ್ಯಾಯವಾಗಿ ನಿಲ್ಲಬಲ್ಲರೇ?
ಯಾವುದೇ ಸ್ಥಿತಿಯಲ್ಲಿ ಜನಪ್ರಿಯ ನಾಯಕತನ ಬದಲಾವಣೆ ಆಗಬೇಕಾದರೆ 2 ಸಂಗತಿಗಳು ನಡೆಯುತ್ತವೆ. ಒಂದು, ನಾಯಕನನ್ನು ಕೇಳದೇ ಇನ್ನೊಬ್ಬರನ್ನು ತರುವುದು. ಅದು ಒಂದು ರೀತಿಯಲ್ಲಿ ರಾಜಕೀಯ ಆತ್ಮಹತ್ಯೆ; ಅಂಥ ಸಾಧ್ಯತೆ ಕರ್ನಾಟಕದಲ್ಲಿ ಈಗ ಕಡಿಮೆ. ಎರಡು, ನಾಯಕನನ್ನು ರಮಿಸಿ ಮನವೊಲಿಸಿ ಬೇರೊಬ್ಬರನ್ನು ತರುವುದು. ಆಗ ಯಾರನ್ನು ತರುತ್ತೀರಿ ಮತ್ತು ಹೊರ ಹೋಗುವ ನಾಯಕನ ಷರತ್ತುಗಳು ಏನು ಎನ್ನುವುದು ಮುಖ್ಯ ಆಗುತ್ತವೆ. ಯಡಿಯೂರಪ್ಪ ಸ್ವಭಾವ ಗೊತ್ತಿರುವವರಿಗೆ ಅವರು ಅಷ್ಟುಸುಲಭಕ್ಕೆ ಯಾವುದಕ್ಕೂ ಒಪ್ಪುವುದಿಲ್ಲ ಎನ್ನುವುದು ಗೊತ್ತಿರುವ ವಿಷಯ. ದಿಲ್ಲಿ ಮೂಲಗಳನ್ನು ಕೆದಕಿ ಕೇಳಿದರೆ ಬರುವ ಉತ್ತರ ಒಂದೇ- ‘ವಿರೋಧಿಗಳ ಒತ್ತಾಯ ಇದೆ. ಆದರೆ ಇನ್ನೂ ಚರ್ಚೆಯೇ ಆಗಿಲ್ಲ’ ಎಂದು. ಅಂದರೆ ಹೌದು ಅನ್ನೋದಿಲ್ಲ, ಇಲ್ಲ ಅನ್ನೋದಿಲ್ಲ.
ಜೋಡಿಸಬೇಕಾದ ಬಿಂದುಗಳು
ಕರ್ನಾಟಕ ರಾಜಕಾರಣದಲ್ಲಿ, ಅದರಲ್ಲೂ ಬಿಜೆಪಿ ಸರ್ಕಾರ ಇದ್ದಾಗ, ಸುದ್ದಿಗೇನೂ ಕೊರತೆ ಇರೋದಿಲ್ಲ ಬಿಡಿ. ಮತ್ತು ರಾಜಕಾರಣದಲ್ಲಿ ಘಟನೆಗಳನ್ನು ಕಾಕತಾಳೀಯ ಎಂದು ನೋಡಲು ಸಾಧ್ಯವಿಲ್ಲ. ಹೀಗಾಗಿ ಏನು ನಡೆಯುತ್ತಿದೆ ಎಂಬುದು ಅರ್ಥ ಆಗಬೇಕಾದರೆ ಬಿಂದುಗಳನ್ನು ಜೋಡಿಸಿ ನೋಡಬೇಕು. ಕಳೆದ ಒಂದೂವರೆ ತಿಂಗಳ ಹಿಂದೆ ಯಡಿಯೂರಪ್ಪನವರ ವಿರೋಧಿ ಎಂದು ಗುರುತಿಸಿಕೊಂಡಿರುವ ಈಶ್ವರಪ್ಪ ಏಕಾಏಕಿ ಸಕ್ರಿಯರಾಗಿ, ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡು ಹೈಕಮಾಂಡಿಗೆ ಪತ್ರ ಬರೆಯದೆ ನೇರವಾಗಿ ರಾಜ್ಯಪಾಲರಿಗೆ ಪತ್ರ ಬರೆದರು. ಅದಾದ ಮೇಲೆ ಕೋವಿಡ್ ಕಾರಣದಿಂದ ಪರಿಸ್ಥಿತಿ ಶಾಂತವಾಗಿತ್ತು.
ಆದರೆ ಏಕಾಏಕಿ ತಮಿಳುನಾಡಿನಿಂದ ವಾಪಸ್ ಬಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕರ್ನಾಟಕ ಸರ್ಕಾರದ ಮೇಲೆ ಟೀಕೆ ಟಿಪ್ಪಣಿ ಮಾಡಿದರು. ಅದಾಗಿ ಎರಡೇ ದಿನಕ್ಕೆ ದಿಲ್ಲಿಗೆ ಹತ್ತಿರ ಇರುವ ಯುವ ಸಂಸದ ತೇಜಸ್ವಿ ಸೂರ್ಯ ತಮ್ಮದೇ ಸರ್ಕಾರ ಇರುವಾಗ ಬೆಡ್ ಬ್ಲಾಕಿಂಗ್ ಹಗರಣ ನಡೆಯುತ್ತಿದೆ ಎಂದು ಸುದ್ದಿ ಮಾಡಿದರು. ಆ ಘಟನೆ ನಡೆದು ಎರಡೇ ದಿನಕ್ಕೆ ಸಚಿವ ಸಿ.ಪಿ.ಯೋಗೀಶ್ವರ್ ಅಚಾನಕ್ಕಾಗಿ ದಿಲ್ಲಿಗೆ ಹೋಗಿ ಯಡಿಯೂರಪ್ಪನವರ ವಿರುದ್ಧ ದೂರು ನೀಡಿದರು. ಅದಾಗಿ ಎರಡು ದಿನದಲ್ಲಿ ಜಿಂದಾಲ್ ಭೂಮಿ ಪರಭಾರೆಗೆ ಸಂಬಂಧಪಟ್ಟಂತೆ ಪ್ರಬಲ ಪಂಚಮಸಾಲಿ ಸಮುದಾಯದ ಶಾಸಕರಾದ ಅರವಿಂದ ಬೆಲ್ಲದ ಮತ್ತು ಯತ್ನಾಳ್ ಗೌಡರು ನೇರವಾಗಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಅರ್ಥ ಸ್ಪಷ್ಟ, ಇವೆಲ್ಲ ಘಟನಾವಳಿ ನೋಡಿದರೆ ತೆರೆಯ ಹಿಂದೆ ಸಾಕಷ್ಟುಬೆಳವಣಿಗೆ ನಡೆಯುತ್ತಿವೆ. ಆದರೆ ಕರಾರುವಾಕ್ಕಾಗಿ ಹೀಗೆಯೇ ನಡೆಯಬಹುದು ಎಂಬ ಸ್ಥಿತಿ ಇನ್ನೂ ತಲುಪಿಲ್ಲ ಅಷ್ಟೇ.
ಮೋದಿಗೆ ಆಪ್ತರಾಗಿದ್ದ ಪ್ರಶಾಂತ್ ಕಿಶೋರ್ ವಿರೋಧ ಪಾಳಯ ಸೇರಿದ್ಹೇಗೆ..?
ಯೋಗೇಶ್ವರ್ ಪಾಲಿಟಿಕ್ಸ್
ಈ ಬಾರಿಯ ನಾಯಕತ್ವ ಬದಲಾವಣೆಯ ಕೂಗು ಶುರು ಆಗಿದ್ದು ಒಳ್ಳೆ ಖಾತೆ ಕೊಡುತ್ತಿಲ್ಲ ಎಂದು ಯಡಿಯೂರಪ್ಪನವರ ಮೇಲೆ ಮುನಿಸಿಕೊಂಡಿರುವ ಸಿ.ಪಿ.ಯೋಗೇಶ್ವರ್ ಅವರ ದಿಲ್ಲಿ ಯಾತ್ರೆಯ ನಂತರ. ಮೂರು ದಿನ ದಿಲ್ಲಿಯಲ್ಲಿ ಉಳಿದಿದ್ದ ಯೋಗೇಶ್ವರ್, ಅಮಿತ್ ಶಾ, ಜೆ.ಪಿ.ನಡ್ಡಾ, ಬಿ.ಎಲ್.ಸಂತೋಷ್, ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಬಿ.ಎಲ್.ಸಂತೋಷ್ ಅಥವಾ ಪ್ರಹ್ಲಾದ್ ಜೋಶಿ ಇಬ್ಬರಲ್ಲಿ ಯಾರನ್ನಾದರೂ ತನ್ನಿ. ಆದರೆ ಚುನಾವಣೆಗೆ ಎರಡು ವರ್ಷವಿದೆ. ಹೊಸ ನಾಯಕನನ್ನು ತರುವುದಾದರೆ ಈಗಲೇ ತನ್ನಿ ಎಂದು ಯೋಗೇಶ್ವರ್ ದಿಲ್ಲಿ ವರಿಷ್ಠರಿಗೆ ಹೇಳಿ ಬಂದಿದ್ದಾರಂತೆ. ಯಡಿಯೂರಪ್ಪ ಅಧಿಕಾರಕ್ಕೆ ಬಂದ ತಕ್ಷಣ ಇಂಧನ ಖಾತೆ ಕೊಡುತ್ತೇನೆ ಅಂದಿದ್ದರು, ಕೊಡುತ್ತಿಲ್ಲ ಎನ್ನುವುದು ಯೋಗೇಶ್ವರ್ ಅಸಮಾಧಾನಕ್ಕೆ ಮೂಲ ಕಾರಣ.
ಬಿಎಸ್‌ವೈ ಅಗ್ನಿಶಾಮಕ
ದಿಲ್ಲಿ ಮೂಲಗಳು ಹೇಳುವ ಪ್ರಕಾರ, ಜಿಂದಾಲ್ ಪ್ರಕರಣದಲ್ಲಿ ಶಾಸಕ ಅರವಿಂದ ಬೆಲ್ಲದ ಮತ್ತು ಯತ್ನಾಳ್ ಪತ್ರ ಬರೆದ ತಕ್ಷಣ ಅಮಿತ್ ಶಾ ಆಗಲಿ ಅಥವಾ ಜೆ.ಪಿ.ನಡ್ಡಾ ಆಗಲಿ ಸಮಜಾಯಿಷಿ ಏನೂ ಕೇಳಿರಲಿಲ್ಲ. ಆದರೆ ಕೂಡಲೇ ಪರಮಾಪ್ತ ಬಸವರಾಜ್ ಬೊಮ್ಮಾಯಿ ಮತ್ತು ಪುತ್ರ ವಿಜಯೇಂದ್ರರನ್ನು ರಾಜ್ಯದ ಅಡ್ವೋಕೇಟ್ ಜನರಲ್ ಜೊತೆ ದಿಲ್ಲಿಗೆ ಕಳುಹಿಸಿದ ಯಡಿಯೂರಪ್ಪ ಅಲ್ಲಿ ಮಾಡಿಸಿದ್ದು ಬೆಂಕಿ ನಂದಿಸುವ ಪ್ರಯತ್ನ. ಗೃಹ ಸಚಿವ ಬೊಮ್ಮಾಯಿಗೂ ಮತ್ತು ಮುಖ್ಯಮಂತ್ರಿ ಪುತ್ರ ವಿಜಯೇಂದ್ರಗೂ ದಿಲ್ಲಿಗೆ ಹೋದ ತಕ್ಷಣ ಅಮಿತ್ ಶಾ ಭೇಟಿಗೆ ಸಮಯ ಸಿಕ್ಕಿಲ್ಲ. 10 ನಿಮಿಷದ ಅಮಿತ್ ಶಾ ಭೇಟಿಗೆ ಅವಕಾಶ ಸಿಕ್ಕಿದ್ದು 48 ಗಂಟೆಗಳ ನಂತರ. ಅದೇನೋ ಗೊತ್ತಿಲ್ಲ, ಆ ಭೇಟಿಯ ನಂತರ ಅಂತೆ-ಕಂತೆಗಳು ಭರಪೂರ ಆಗಿ ಗರಿಗೆದರಿವೆ.
ಸಂಘ ಮತ್ತು ಬಿಎಸ್‌ವೈ
2009ರಲ್ಲಿ ಅನಂತ ಕುಮಾರ್, ಜಗದೀಶ್ ಶೆಟ್ಟರ್, ಜನಾರ್ದನ ರೆಡ್ಡಿ, ಈಶ್ವರಪ್ಪ, ಶಂಕರಮೂರ್ತಿ ಜೊತೆಗೆ ದಿಲ್ಲಿಯಲ್ಲಿ ಸ್ವತಃ ಅಡ್ವಾಣಿ ಹೀಗೆ ಯಡಿಯೂರಪ್ಪ ಅವರನ್ನು ಬದಲಿಸಬೇಕೆಂದು ಹಲವರು ಕೇಳಿದರೂ ಯಡಿಯೂರಪ್ಪನವರ ಜೊತೆ ಗಟ್ಟಿನಿಂತಿದ್ದು ಸ್ಥಳೀಯ ಸಂಘ. ಮೈಚ ಜಯದೇವ, ಕಲ್ಲಡ್ಕ ಪ್ರಭಾಕರ ಭಟ್ಟ, ಬಿ.ಎಲ್.ಸಂತೋಷ್, ಮುಕುಂದ ಇವರೆಲ್ಲ ಯಡಿಯೂರಪ್ಪ ಪರ ಇದ್ದರು. ಆದರೆ 2021ರಲ್ಲಿ ಸ್ಥಿತಿ ಹಾಗಿಲ್ಲ. ಈಗಿನ ಸಂಘದಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇರುವ ಮುಕುಂದ, ಬಿ.ಎಲ್.ಸಂತೋಷ್, ಮಂಗೇಶ್ ಬೆಂಡೆ ಇವರೆಲ್ಲ ನಾಯಕತ್ವ ಬದಲಾವಣೆಯ ಪರವಾಗಿಯೇ ಇದ್ದಾರೆ.
ಒಮ್ಮೆಯೂ ಒಡೆಯದೆ 100 ವರ್ಷ ನೆಲೆ ನಿಂತ ಏಕೈಕ ಭಾರತೀಯ ಸಂಘಟನೆ RSS, ಕಾರಣ..?
ಆದರೆ ಸಂಘಕ್ಕಿರುವ ಆತಂಕ ಲಿಂಗಾಯತ ವೋಟ್ ಬ್ಯಾಂಕ್‌ನದು. ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗಗಳಲ್ಲಿ ಸಂಘ ಮತ್ತು ಬಿಜೆಪಿ ವಿಸ್ತಾರಕ್ಕೆ ಲಿಂಗಾಯತರ ಬೆಂಬಲ ನಿರ್ಣಾಯಕ. ಯಡಿಯೂರಪ್ಪನವರನ್ನು ಸ್ಪರ್ಶಿಸಲು ಹೋಗಿ ಗಣಿತ ತಿರುವು ಮುರುವು ಆದರೆ ಎಂಬ ಚಿಂತೆ ಸಂಘಕ್ಕೂ ಇದೆ, ದಿಲ್ಲಿ ಹೈಕಮಾಂಡ್‌ಗೂ ಇದೆ. ಪ್ರಾಯಶಃ ಈ ಆತಂಕವೇ ಯಡಿಯೂರಪ್ಪನವರಿಗೆ ನಿರಂತರ ಆಮ್ಲಜನಕ ಪೂರೈಸುತ್ತಿದೆ.
ವಿಜಯೇಂದ್ರ ಫ್ಯಾಕ್ಟರ್
ಒಂದು ವೇಳೆ ಹೈಕಮಾಂಡ್ ನಾಯಕತ್ವ ಬದಲಾವಣೆ ನಿರ್ಧಾರ ತೆಗೆದುಕೊಂಡರೂ ಕೂಡ ಹೈಕಮಾಂಡ್ ಯಡಿಯೂರಪ್ಪನವರ ಮನ ಒಲಿಸಬೇಕೆಂದರೆ ವಿಜಯೇಂದ್ರರಿಗೆ ಏನು ಅವಕಾಶ ಕೊಡುತ್ತದೆ, ಯಡಿಯೂರಪ್ಪ ಅವರ ಮನಸ್ಸಿನಲ್ಲಿ ವಿಜಯೇಂದ್ರಗೆ ಏನು ಬೇಕೆಂದು ಇದೆ, ಹೇಗೆ ಮಾತುಕತೆ ನಡೆಯುತ್ತದೆ ಮತ್ತು ಯಾರು ನಡೆಸುತ್ತಾರೆ ಎಂಬುದೆಲ್ಲಾ ಮುಖ್ಯ ಆಗಲಿದೆ. ರಾಜಕಾರಣ ಎಂದರೆ ಒಂದು ದೃಷ್ಟಿಯುದ್ಧವೂ ಹೌದು. ಯಾರು ಮೊದಲು ಕಣ್ಣು ಪಿಳುಕಿಸುತ್ತಾರೆ ಎನ್ನುವುದರ ಮೇಲೆ ನಿರ್ಣಯಗಳ ಸಮಯ ಮತ್ತು ಸ್ವರೂಪ ಅವಲಂಬಿತವಾಗಿರುತ್ತವೆ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ