* ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನಗೊಂಡಿರುವ ಆನಂದ್‌ ಸಿಂಗ್‌ * ಸಚಿವ ಸ್ಥಾನಕ್ಕಷ್ಟೇ ಅಲ್ಲ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ ಗುಲ್ಲು* ಕಚೇರಿ ಬೋರ್ಡ್‌ ಕೂಡ ತೆರವು 

ಹೊಸಪೇಟೆ(ಆ.11): ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನಗೊಂಡಿರುವ ಆನಂದ್‌ ಸಿಂಗ್‌ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿರುವುದರ ವಿಜಯನಗರದ ರಾಣಿ ಪೇಟೆಯಲ್ಲಿರುವ ಅವರ ಶಾಸಕರ ಕಚೇರಿಯ ಫಲ​ಕವೂ ತೆರವುಗೊಂಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸಚಿವ ಸ್ಥಾನದ ಜತೆಗೆ ಆನಂದ್‌ ಸಿಂಗ್‌ ಅವರು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆಯೇ ಎಂಬ ಪ್ರಶ್ನೆಗಳು ಎದ್ದಿವೆ.

ತಮಗೆ ನೀಡಿರುವ ಅರಣ್ಯ ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದ ಆನಂದ್‌ ಸಿಂಗ್‌ ಅವರು ಈ ಸಂಬಂಧ ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಖುದ್ದು ಭೇಟಿಯಾಗಿ ಚರ್ಚಿಸಿದ್ದರು. ಈ ಮಧ್ಯೆ, ಮಂಗಳವಾರ ದಿಢೀರ್‌ ಆಗಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಸುದ್ದಿ ಹರಿದಾಡುತ್ತಿದ್ದಂತೆ ಸಂಜೆ 5.30ರ ವೇಳೆಗೆ ವಿಜಯನಗರದಲ್ಲಿರುವ ಅವರ ಕಚೇರಿಯಲ್ಲಿ ‘ಶಾಸಕರ ಕಾರ್ಯಾಲಯ’ ಎಂದು ದೊಡ್ಡ ಅಕ್ಷರಗಳಲ್ಲಿದ್ದ ಬೋರ್ಡ್‌ ಅನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.

ತಮ್ಮ ಹಳೆಯ ಮನೆಯಲ್ಲೇ ಶಾಸಕರ ಕಚೇರಿ ಮಾಡಿಕೊಂಡಿದ್ದ ಆನಂದ್‌ ಸಿಂಗ್‌ ಇದೀಗ ದಿಢೀರ್‌ ಆಗಿ ಬೋರ್ಡ್‌ ತೆರವುಗೊಳಿಸಿರುವುದು ಕಾರ್ಯಕರ್ತರು, ಬೆಂಬಲಿಗರಲ್ಲಿ ಅಚ್ಚರಿ, ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಕೆಲ ಮುಖಂಡರು ಅವರನ್ನು ಭೇಟಿ ಮಾಡಲು ಮುಂದಾದರೂ ಅವರು ಯಾರ ಸಂಪರ್ಕಕ್ಕೂ ಸಿಗಲಿಲ್ಲ.

ವಿಜಯನಗರದ ರಾಣಿಪೇಟೆಯಲ್ಲಿರುವ ಆನಂದ್‌ ಸಿಂಗ್‌ ಅವರ ಕಾರ್ಯಾಲಯದ ಬೋರ್ಡ್‌ ಅನ್ನು ಮಂಗಳವಾರ ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.