ಕೋಲಾರ(ಮಾ. 08)  ಬಿಜೆಪಿಯ ನಾಯಕರು ನನ್ನ ಜೊತೆ ಇದ್ದಾರೆ. ಮುಂದಿನ ಭವಿಷ್ಯ ಹೇಳುವ ತ್ರಿಕಾಲ ಜ್ಞಾನಿ ನಾನಲ್ಲ. ಸರ್ಕಾರ ನೂರಕ್ಕೆ ನೂರು ಸುಭದ್ರವಾಗಿರುತ್ತೆ ಎಂದು ಮಾಜಿ ಸಚಿವ ಆರ್ ಶಂಕರ್ ಭವಿಷ್ಯ ನುಡಿದಿದ್ದಾರೆ.

ನಾನು ಮಂತ್ರಿ ಆಗಿದವನು, ನಿಗಮ ಮಂಡಳಿ ಬೇಡಿಕೆ ಇಟ್ಟಿಲ್ಲ. ಲಕ್ಷ್ಮಣ ಸೌದಿ ಜೊತೆ ನಾನು ಎಂಎಲ್ಸಿ ಟಿಕೆಟ್ ಕೇಳಿದ್ದೆ ಆದ್ರೆ ಸಿಗಲಿಲ್ಲ. ಜೂನ್ ತಿಂಗಳಲ್ಲಿ ನಡೆಯುವ ಎಂಎಲ್ಸಿ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗಲಿದೆ . ಎಂಎಲ್ಸಿ ಮಾಡಿ ಮಂತ್ರಿ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ಕಾನೂನು ತೊಡಕಿನಿಂದ ವಿಳಂಬವಾಗಿದೆ ಎಂದು ಹೇಳಿದ್ದಾರೆ.

ಜೆಡಿಎಸ್ ಮತ್ತು ಕಾಂಗ್ರೆಸ್ ದೋಸ್ತಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ರಾಜಕೀಯ ಏರುಪೇರಾಗಿತ್ತು. 17 ಶಾಸಕರು ಏಕಾಏಕಿ ರಾಜೀನಾಮೆ ನೀಡಿದ್ದರು. ಪರಿಣಾಮ ದೋಸ್ತಿ ಸರ್ಕಾರ ಪತನವಾಗಿ  ಬಿಜೆಪಿ ಅಧಿಕಾರ ಹಿಡಿದಿತ್ತು. ಬಿಎಸ್ ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರು. ಈ ವೇಳೆ ಹಿಂದಿನ ಅಂದರೆ 2018ರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಲಕ್ಷ್ಮಣ ಸವದಿ ಅವರನ್ನು ಡಿಸಿಎಂ ಮಾಡಲಾಗಿತ್ತು.

ಇದಾದ ಮೇಲೆ ರಾಜೀನಾಮೆ ನೀಡಿದ್ದ ಕ್ಷೇತ್ರಗಳಿಗೆ ಉಪಚುನಾವಣೆ ಎದುರಾಗಿತ್ತು. ರಾಣೆಬೆನ್ನೂರು ಕ್ಷೇತ್ರದಿಂದ ಗೆದ್ದಿದ್ದ ಆರ್ ಶಂಕರ್ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ರಾಜೀನಾಮೆ ಕೊಟ್ಟ ಪಟ್ಟಿಯಲ್ಲಿ ಪಕ್ಷೇತರ ಶಾಸಕರಾಗಿದ್ದ ಆರ್. ಶಂಕರ್ ಇದ್ದರು.

ಇನ್ನೊಂದು ಕಡೆ ಸಿಪಿ ಯೋಗೇಶ್ವರ, ಮುರುಗೇಶ ನಿರಾಣಿ,  ಉಮೇಶ್ ಕತ್ತಿಯಂಥಹ ನಾಯಕರು ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಇದ್ದಾರೆ. ಒಟ್ಟಿನಲ್ಲಿ ಜೂನ್ ನಂತರ ಮತ್ತೊಂದು ರಾಜಕಾರಣ ಹೈಡ್ರಾಮಾಕ್ಕೆ ಕರ್ನಾಟಕ ಸಾಕ್ಷಿಯಾದರೆ ಅಚ್ಚರಿ ಇಲ್ಲ.