ಬೈ ಎಲೆಕ್ಷನ್‌ನಿಂದ JDS ದೂರ ಸರಿದ ಗುಟ್ಟು ಹೇಳಿದ ಸಿದ್ದರಾಮಯ್ಯ!
ಉಪಚುನಾವಣೆ ಮತ್ತು ಕುರುಬ ಸಮುದಾಯ ಮೀಸಲಾತಿ ಹೋರಾಟದ ಬಗ್ಗೆ ಸಿದ್ದರಾಮಯ್ಯ ಅಭಿಪ್ರಾಯ/ ಸಚಿವ ಈಶ್ವರಪ್ಪ ವಿರುದ್ಧ ವಾಗ್ದಾಳಿ/ ಮೀಸಲಾತಿ ಹೋರಾಟಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ/ ಜೆಡಿಎಸ್ ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿದೆ
ಬೆಂಗಳೂರು/ ಹುಬ್ಬಳ್ಳಿ (ಫೆ. 11) ಕುರುಬ ಸಮುದಾಯದ ಮೀಸಲು ಹೋರಾಟ ಮತ್ತು ಮುಂಬರುವ ಉಪಚುನಾವಣೆ ಬಗ್ಗೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಉಪಚುನಾವಣೆ ನಡೆಯಲಿರುವ ಉತ್ತರ ಕರ್ನಾಟಕದ ಭಾಗಗಳಲ್ಲಿ ಜೆಡಿ(ಎಸ್) ದುರ್ಬಲವಾಗಿದೆ. ಈ ಹಿನ್ನೆಲೆಯಲ್ಲಿ ತಮಗಿರುವ ಅಲ್ಪಸ್ವಲ್ಪ ಬಲವನ್ನು ಬಿಜೆಪಿಗೆ ಧಾರೆಯೆರೆದು ಆ ಪಕ್ಷಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಜೆಡಿ(ಎಸ್) ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
'ಹಿಂದ' ಹೋರಾಟದಿಂದ ಸಿದ್ದರಾಮಯ್ಯ ಹಿಂದೆ ಸರಿಯಲು ಈ ಕರೆ ಕಾರಣ
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂಧ ಕುಲಶಾಸ್ತ್ರ ಅಧ್ಯಯನ ಮಾಡುವಂತೆ ನಾನು ಮುಖ್ಯಮಂತ್ರಿಯಾಗಿದ್ದಾಗ ಆದೇಶಿಸಿದ್ದೆ, ಈಗಲೂ ಅಧ್ಯಯನ ನಡೆಯುತ್ತಿದೆ, ಅದು ಮುಗಿದು ವರದಿ ಬಂದ ನಂತರ ಸರ್ಕಾರದ ಮೇಲೆ ಒತ್ತಾಡ ಹೇರಬೇಕು. ಈಗಲೇ ಸಮಾವೇಶ, ಮೆರವಣಿಗೆಗಳು ಅನಗತ್ಯ ಅನ್ನೋದು ನನ್ನ ಅನಿಸಿಕೆ ಎಂದು ತಿಳಿಸಿದ್ದಾರೆ.
ಕುರುಬರ ಮೀಸಲಾತಿ ಹೋರಾಟದಲ್ಲಿ ಆರ್.ಎಸ್.ಎಸ್ ಮತ್ತು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಕುರುಬ ಸಮುದಾಯವನ್ನು ಒಡೆಯುವುದೇ ಅವರ ಮುಖ್ಯ ಉದ್ದೇಶ. ಈಶ್ವರಪ್ಪನವರು ಹೋರಾಟ ಮಾಡುತ್ತಿರೋದು ಯಾರ ವಿರುದ್ಧ? ತಮ್ಮದೇ ಸರ್ಕಾರದ ವಿರುದ್ಧವಲ್ಲವೇ? ಅರ್ಥವಾಗೋಕೆ ಇದಕ್ಕಿಂತ ಹೆಚ್ಚು ಬೇಕಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
5 ವರ್ಷ ಮುಖ್ಯಮಂತ್ರಿಯಾಗಿ ನಾಡಿನ ಶೋಷಿತ ಸಮುದಾಯಗಳಿಗಾಗಿ ಏನೆಲ್ಲಾ ಕೆಲಸ ಮಾಡಿದ್ದೇನೆ ಎಂದು ಜನರಿಗೆ ಗೊತ್ತು. ನನ್ನ ಕೆಲಸದ ಬಗ್ಗೆ ಸರ್ಟಿಫಿಕೇಟ್ ಕೊಡೋಕೆ ಈಶ್ವರಪ್ಪ ಯಾರು? ಅವರು ಕೊಡೋ ಸರ್ಟಿಫಿಕೇಟ್ ಅಗತ್ಯ ನನಗಿಲ್ಲ. ತಮ್ಮ ಸರ್ಕಾರ ಏನು ಮಾಡಿದೆ ಎಂದು ಅವರು ಹೇಳಬೇಕು ಎಂದು ಈಶ್ವರಪ್ಪ ಮೇಲೆ ಹರಿಹಾಯ್ದಿದ್ದಾರೆ.