ಬೆಂಗಳೂರು[ಮಾ.05]: ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರ ಜ್ಯೇಷ್ಠ ಪುತ್ರಿ ರಕ್ಷಿತಾ ಮತ್ತು ಹೈದರಾಬಾದ್‌ ಮೂಲದ ರವಿಕುಮಾರ್‌ ಪುತ್ರ ಲಲಿತ್‌ ಸಂಜೀವ್‌ ರೆಡ್ಡಿ ಅವರ ವಿವಾಹ ಗುರುವಾರ ಅದ್ಧೂರಿಯಾಗಿ ಬೆಂಗಳೂರಿನಲ್ಲಿ ನಡೆಯಲಿದೆ. ಮೇಲುಕೋಟೆ ಕಲ್ಯಾಣಿ ಪರಿಕಲ್ಪನೆಯಲ್ಲಿ ಜಗಮಗಿಸುವ ಮಂಟಪ ಸಿದ್ಧಗೊಳಿಸಲಾಗಿದೆ.

ನಗರದ ಅರಮನೆ ಮೈದಾನದಲ್ಲಿ (ವಸಂತನಗರ ಗೇಟ್‌) ನಡೆಯುವ ವಿವಾಹಕ್ಕೆ ಅತಿಥಿಗಳು ಆಗಮಿಸಿದ್ದು, ಬೆಳಗ್ಗೆ 7ರಿಂದ 9 ಗಂಟೆಯೊಳಗಿನ ಶುಭಲಗ್ನದಲ್ಲಿ ರಕ್ಷಿತಾ ಮತ್ತು ಲಲಿತ್‌ ಸಂಜೀವ್‌ ರೆಡ್ಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವಧು-ವರರನ್ನು ಆಶೀರ್ವದಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ನ ಶಾಸಕರು ಪ್ರಮುಖರು ಸಮಾರಂಭಕ್ಕೆ ತೆರಳಲಿದ್ದಾರೆ. ಚಲನಚಿತ್ರ ತಾರೆಯರು, ಉದ್ಯಮಿಗಳು ಸೇರಿದಂತೆ ಇತರೆ ಗಣ್ಯರು ಸೇರಿದಂತೆ ಸಾವಿರಾರು ಸಂಖ್ಯೆಯ ಜನರು ವಿವಾಹ ಮಹೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ.

ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಮದುವೆ ಸಮಾರಂಭವನ್ನು ಕಣ್ತುಂಬಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇಡೀ ಕಲ್ಯಾಣ ಮಂಟಪವನ್ನು ಹೂವಿನಿಂದ ಅಲಂಕಾರ ಮಾಡಲಾಗಿದೆ. ವೆಡ್ಡಿಂಗ್‌ ಪ್ಲಾನರ್‌ ಧ್ರುವ ಅವರ ನೇತೃತ್ವದಲ್ಲಿ ಸೆಟ್‌ ಹಾಕಲಾಗಿದೆ. ಸೆಟ್‌ ನಿರ್ಮಾಣ ಕಾರ್ಯಕ್ಕಾಗಿ 300 ಮಂದಿ ಮತ್ತು 200 ಮಂದಿ ಹೂವಿನ ಅಲಂಕಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅರಮನೆ ಮೈದಾನದ 40 ಎಕರೆ ಜಾಗದಲ್ಲಿ ಅದ್ಧೂರಿಯಾಗಿ ಸಿದ್ಧತೆ ಮಾಡಲಾಗಿದೆ. ಈ ಪೈಕಿ 27 ಎಕರೆ ಜಾಗದಲ್ಲಿ ಮದುವೆ ಕಾರ್ಯ ನಡೆದರೆ, 15 ಎಕರೆ ಪ್ರದೇಶ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಟೆಂಟ್‌ ಹೌಸ್‌ ಉದ್ಯಮಿ ಅಮಾನುಲ್ಲಾಖಾನ್‌ ಆ್ಯಂಡ್‌ ಸನ್ಸ್‌ ಅವರು ಪೀಠೋಪಕರಣ ಮತ್ತು ರೊನಾಲ್ಡ್‌ ಕಂಪನಿ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಮಾಡಿದೆ.

ಭೂರಿ ಭೋಜನ ವ್ಯವಸ್ಥೆ ಇದ್ದು, ಉತ್ತರ ಕರ್ನಾಟಕದಿಂದ ಬಾಣಸಿಗರನ್ನು ಕರೆತರಲಾಗಿದೆ. ಗದಗ ಮತ್ತು ಹುಬ್ಬಳ್ಳಿ ಶೈಲಿಯಲ್ಲಿ ಬಾಳೆ ಎಲೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಒಂದೇ ಬಾರಿಗೆ ಏಳು ಸಾವಿರ ಜನರಿಗೆ ಊಟ ಬಡಿಸುವ ವ್ಯವಸ್ಥೆ ಮಾಡಲಾಗಿದೆ. 500 ಜನರು ಊಟ ಬಡಿಸುವವರು ಮತ್ತು ಒಂದು ಸಾವಿರ ಬಾಣಸಿಗರನ್ನು ನಿಯೋಜಿಸಲಾಗಿದೆ. ಬಳ್ಳಾರಿ, ರಾಯಚೂರು, ಚಿತ್ರದುರ್ಗ ಸೇರಿದಂತೆ ರಾಜ್ಯಾದ್ಯಂತ ಶ್ರೀರಾಮುಲು ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿವಾಹ ಕಾರ್ಯಕ್ರಮದ ಬಳಿಕ ಆರತಕ್ಷತೆ ನಡೆಯಲಿದೆ. ತರುವಾಯ ನವದಂಪತಿ ಬಳ್ಳಾರಿಗೆ ತೆರಳಲಿದ್ದಾರೆ.

9 ದಿನದಿಂದ ಮದುವೆ ಶಾಸ್ತ್ರ:

ಕಳೆದ 9 ದಿನದಿಂದ ಮದುವೆ ಶಾಸ್ತ್ರಗಳು ನಡೆಯುತ್ತಿದ್ದು, ಬುಧವಾರ ಅರಮನೆ ಮೈದಾನದಲ್ಲಿ ಲಗ್ನ ಕಟ್ಟಿಸುವುದು, ವರ ಪೂಜೆ ಸೇರಿದಂತೆ ಇತರೆ ವಿವಾಹ ಶಾಸ್ತ್ರಗಳು ನಡೆದವು. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಂಗೀತ ನಿರ್ದೇಶಕ ಗುರುಕಿರಣ್‌ ನೇತೃತ್ವದಲ್ಲಿ ರಸಮಂಜರಿ ನಡೆಯಿತು. ಫೆ.28ರಂದು ಚಪ್ಪರ ಹಾಕುವ ಕಾರ್ಯ, ಫೆ.29ರಂದು ಮನೆಯ ದೇವರ ಪೂಜೆ ಕಾರ್ಯ, ಮಾ.1ರಂದು ಮೆಹಂದಿ ಮತ್ತು ಬಳೆಶಾಸ್ತ್ರ ಕಾರ್ಯ ನಡೆಯಿತು. ಮಾ.2ರಂದು ಮದುಮಗಳನ್ನಾಗಿ ಮಾಡುವ ಶಾಸ್ತ್ರ ನಡೆದಿದ್ದು, ಶಾಸ್ತ್ರಗಳು ಪೂರ್ಣಗೊಂಡ ಬಳಿಕ ಬಳ್ಳಾರಿಯ ಕನಕ ದುರ್ಗಮಮ್ಮ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ್ದರು.ಮಾ.3ರಂದು ತಾಜ್‌ ವೆಸ್ಟ್‌ ಎಂಡ್‌ ಹೊಟೇಲ್‌ನಲ್ಲಿ ಮೆಹಂದಿ ಕಾರ್ಯಕ್ರಮ ನಡೆಯಿತು.