karnataka leadership change ಸುವರ್ಣಸೌಧ ಕಾರಿಡಾರ್‌ನಲ್ಲೂ ಸಿಎಂ ಬದಲಾವಣೆ ಚರ್ಚೆ: ಸುಳಿವು ನೀಡಿದ ಕಾಂಗ್ರೆಸ್ ನಾಯಕ!
- ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಸಿಎಂ ಹೇಳಿಕೆ
- ಸಿಎಂ ಮಾತು ಯಾರೂ ಕೇಳ್ತಿಲ್ಲ, ಆಡಳಿತ ಕುಸಿದಿದೆ
- ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಎಂದ ಡಿಕೆಶಿ
ಬೆಳಗಾವಿ(ಡಿ.21): ರಾಜ್ಯಾಡಳಿತ ಸಂಪೂರ್ಣ ಕುಸಿದಿದ್ದು, ಮುಖ್ಯಮಂತ್ರಿ ಮಾತು ಯಾರೂ ಕೇಳುತ್ತಿಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆಂದು ಸುವರ್ಣ ಸೌಧದ ಕಾರಿಡಾರ್‌ನಲ್ಲೂ ಸಚಿವರೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿ ಬೊಮ್ಮಾಯಿ(Basavaraj Bommai) ಸಿಎಂ ಸ್ಥಾನದಿಂದ ಬದಲಾಗುತ್ತಾರೆ, ಮುರುಗೇಶ ನಿರಾಣಿ(Murugesh Nirani) ಮುಖ್ಯಮಂತ್ರಿ ಆಗುತ್ತಾರೆಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಂದಿನಿಂದಲೂ ಗೊಂದಲ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಅವರಿದ್ದ ವೇದಿಕೆಯಲ್ಲೇ ನಿರಾಣಿ ಕೂಡ ಬಸವರಾಜ ಬೊಮ್ಮಾಯಿ ಮುಂದೆ ಕೇಂದ್ರ ಸಚಿವರಾಗುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಬಿಜೆಪಿಯವರು ಎಷ್ಟಾದ್ರೂ ಸಿಎಂ ಮಾಡಿಕೊಳ್ಳಲಿ. ಯಡಿಯೂರಪ್ಪ ಅವರನ್ನು ಮತ್ತೆ ಬೇಕಾದರೂ ಮುಖ್ಯಮಂತ್ರಿ ಸ್ಥಾನದಲ್ಲಿ ತಂದು ಕೂರಿಸಲಿ, ನಮ್ಮದೇನೂ ಅಭ್ಯಂತರ ಇಲ್ಲ ಎಂದರು.
CM Emotional Speech: ಸ್ಥಾನ-ಮಾನದ ಬಗ್ಗೆ ಬೊಮ್ಮಾಯಿ ಭಾವುಕ ಮಾತು, ರಾಜಕಾರಣದಲ್ಲಿ ಸಂಚಲನ
ಭಾವನಾತ್ಮಕ ಮಾತು ಸಹಜ: ಮುಖ್ಯಮಂತ್ರಿ ಬೊಮ್ಮಾಯಿ ಅವರು ತಮ್ಮ ಕ್ಷೇತ್ರದಲ್ಲಿ ಭಾವನಾತ್ಮಕವಾಗಿ ಮಾತನಾಡಿದ್ದು ಸಹಜ. ನಾನು ಕೂಡ ನನ್ನ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತ. ನಮ್ಮ ಜನರ ಎದುರು ನಮ್ಮ ಅಧಿಕಾರ ತೋರಲು ಆಗುವುದಿಲ್ಲ. ಹೀಗಾಗಿ ಅವರ ಹೇಳಿಕೆಯಲ್ಲಿ ತಪ್ಪಿಲ್ಲ ಎಂದು ಶಿಗ್ಗಾಂವಿಯಲ್ಲಿ ಬೊಮ್ಮಾಯಿ ಅವರ ಭಾವನಾತ್ಮಕ ಭಾಷಣವನ್ನು ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡರು.
ಸ್ವಕ್ಷೇತ್ರ ಶಿಗ್ಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಶಾಶ್ವತವಲ್ಲ ಎಂದು ಭಾವುಕರಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿ ಸೇರಿದಂತೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿದೆ.
Karnataka Politics: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಮುರುಗೇಶ್ ನಿರಾಣಿ ಬ್ಯಾಟಿಂಗ್
ಮುಖ್ಯಮಂತ್ರಿ ಬೊಮ್ಮಾಯಿ ಅವರು ಸ್ಥಾನ ತ್ಯಜಿಸುವ ಸನ್ನಿವೇಶ ಎದುರಾಗಿದೆಯೇ ಎಂಬ ಅನುಮಾನಗಳ ನಡುವೆಯೇ ಬರುವ ಸಂಕ್ರಾಂತಿ ಬಳಿಕ ಮುಂಬರುವ ಚುನಾವಣೆ ಗುರಿಯಾಗಿಸಿಕೊಂಡು ಗುಜರಾತ್ ಮಾದರಿಯಂತೆ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡುವ ಸಾಧ್ಯತೆ ಬಗ್ಗೆ ಬಿಜೆಪಿ ಪಾಳೆಯದಲ್ಲಿ ಗಂಭೀರ ಚರ್ಚೆ ಅರಂಭವಾಗಿದೆ. ಆದರೆ, ಅದರ ಸ್ವರೂಪ ಹೇಗಿರುತ್ತದೆ? ಯಾರನ್ನು ಕೈಬಿಡಬಹುದು? ಯಾರಿಗೆ ಅವಕಾಶ ಸಿಗಬಹುದು ಎಂಬಿತ್ಯಾದಿ ಅಂಶಗಳ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
ಪ್ರಸಕ್ತ ವಿಧಾನಮಂಡಲದ ಅಧಿವೇಶನ ಮುಗಿದ ಬಳಿಕ ಪಕ್ಷದ ನಾಯಕರು ಈ ಬಗ್ಗೆ ಚರ್ಚೆ ನಡೆಸಬಹುದು. ಪಕ್ಷದ ವರಿಷ್ಠರು ರಾಜ್ಯ ನಾಯಕರನ್ನು ಕರೆಸಿಕೊಂಡು ಮಾತುಕತೆ ನಡೆಸುವ ಸಾಧ್ಯತೆಯೂ ಇದೆ. ಆ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬದಲಿಸಿ ಬೇರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಸಾಧ್ಯತೆ ಬಗ್ಗೆಯೂ ಸ್ಪಷ್ಟಚಿತ್ರಣ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.
ಈಗಿರುವ ಸಂಪುಟದ ಹಲವು ಸಚಿವರ ಬಗ್ಗೆ ಪಕ್ಷದ ವರಿಷ್ಠರು ಸಮಾಧಾನ ಹೊಂದಿಲ್ಲ. ಸಚಿವರು ತಮ್ಮ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಿಸಿಕೊಂಡು ಬರುವ ಪ್ರಯತ್ನವನ್ನೂ ತೋರುತ್ತಿಲ್ಲ. ಮೇಲಾಗಿ, ಪಕ್ಷದ ಕಾರ್ಯಕರ್ತರಿಗೆ ಹತ್ತಿರವಾಗಿಲ್ಲ ಎಂಬ ದೂರಿದೆ. ಹೀಗಾಗಿ, ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಮುಂದಿನ ಚುನಾವಣೆ ಉದ್ದೇಶದಿಂದ ಕೆಲಸ ಮಾಡಬಲ್ಲವರನ್ನು ಸಚಿವರನ್ನಾಗಿಸಬೇಕು. ಈಗಿರುವ ಎಲ್ಲರನ್ನೂ ಪಕ್ಷದ ಸಂಘಟನೆಗೆ ಬಳಸಿಕೊಳ್ಳಬಹುದೇ ಎಂಬ ದಿಕ್ಕಿನಲ್ಲೂ ಚಿಂತನೆ ನಡೆಯುತ್ತಿದೆ.
ಹಾಗಂತ ಈಗಿರುವ ಎಲ್ಲ ಸಚಿವರನ್ನೂ ಕೈಬಿಡುವಂಥ ಸಾಹಸಕ್ಕೆ ಬಿಜೆಪಿ ಕೈಹಾಕಲಿದೆಯೇ ಎಂಬುದು ಕುತೂಹಲಕರವಾಗಿದೆ. ಗುಜರಾತ್‌ನಲ್ಲಿ ಏಕಾಏಕಿ ಮಾಡಿದಂತೆ ಕರ್ನಾಟಕದಲ್ಲೂ ಎಲ್ಲ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸುವ ಬಗ್ಗೆ ಮಾತು ಕೇಳಿಬರುತ್ತಿದ್ದರೂ ಆ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ಆದರೆ, ಜಾತಿ ಸಮೀಕರಣ ಮತ್ತು ಪ್ರಾದೇಶಿಕ ಸಮತೋಲನ ಗಮನದಲ್ಲಿ ಇಟ್ಟುಕೊಂಡು ಸಂಪುಟಕ್ಕೆ ಮೇಜರ್ ಸರ್ಜರಿ ಮಾಡುವ ಬಗ್ಗೆ ಬಿಜೆಪಿ ಪಾಳೆಯದ ತೆರೆಮರೆಯಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.