ಹೊಸ ಸಿಎಂ ಹುದ್ದೆ ಯಾವ ಜಾತಿಗೆ? ಮೋದಿ, ಶಾ ಹೊಸ ಪ್ರಯೋಗ?

* ಹೊಸ ಸಿಎಂ ಹುದ್ದೆ ಯಾವ ಜಾತಿಗೆ? ಇನ್ನೂ ಸಸ್ಪೆನ್ಸ್‌

* ಲಿಂಗಾಯತರೋ ಅಥವಾ ಲಿಂಗಾಯತೇತರರೊ?

* ರಾಜಕೀಯ ಪ್ರಯೋಗ ನಡೆಸ್ತಾರಾ ಮೋದಿ, ಶಾ?

Karnataka Leadership Change Which Community Leader Will Become Next Chief Minister pod

ವಿಜಯ್‌ ಮಲಗಿಹಾಳ

ಬೆಂಗಳೂರು(ಜು.24): ಹಾಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜೀನಾಮೆ ನೀಡುವುದು ನಿಶ್ಚಿತವಾದ ಬೆನ್ನಲ್ಲೇ ಮುಂದಿನ ಮುಖ್ಯಮಂತ್ರಿ ಗದ್ದುಗೆ ಯಾವ ಸಮುದಾಯಕ್ಕೆ ಸಿಗಬಹುದು ಎಂಬ ಕುತೂಹಲ ಕೇವಲ ಆಡಳಿತಾರೂಢ ಬಿಜೆಪಿಯಷ್ಟೇ ಅಲ್ಲ ಇತರ ರಾಜಕೀಯ ಪಕ್ಷಗಳಲ್ಲೂ ತೀವ್ರವಾಗಿದೆ.

ಲಿಂಗಾಯತ ಸಮುದಾಯಕ್ಕೆ ಸೇರಿದ ಯಡಿಯೂರಪ್ಪ ಅವರ ನಿರ್ಗಮನದ ಹಿನ್ನೆಲೆಯಲ್ಲಿ ಅದೇ ಸಮುದಾಯಕ್ಕೆ ಸೇರಿದವರಿಗೆ ನೀಡಬಹುದು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿರುವ ಸಾಮಾನ್ಯ ನಿರೀಕ್ಷೆ. ಆದರೆ, ರಾಜಕೀಯ ಪ್ರಯೋಗ ಮಾಡುವುದರಲ್ಲಿ ನಿಷ್ಣಾತರಾಗಿರುವ ನರೇಂದ್ರ ಮೋದಿ-ಅಮಿತ್‌ ಶಾ ಜೋಡಿ ಕರ್ನಾಟಕದಲ್ಲಿಯೂ ಮುಂದಿನ ಮುಖ್ಯಮಂತ್ರಿ ಆಯ್ಕೆಯಲ್ಲಿ ಹೊಸ ಪ್ರಯೋಗ ಮಾಡುವ ಮೂಲಕ ರಾಜಕೀಯ ಪಂಡಿತರ ಎಣಿಕೆಯನ್ನು ಸುಳ್ಳಾಗಿಸಬಹುದು ಎಂಬ ಮಾತು ಬಿಜೆಪಿ ಪಾಳೆಯದಿಂದ ಕೇಳಿಬರುತ್ತಿದೆ.

ಹಾಗಂತ ಈಗಾಗಲೇ ಯಾರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬುದರ ನಿರ್ಧಾರ ಆಗಿದೆ ಎಂದರ್ಥವಲ್ಲ. ಈಗಾಗಲೇ ಹಲವು ರಾಜ್ಯಗಳಲ್ಲಿ ಈ ರೀತಿ ಪ್ರಬಲ ಸಮುದಾಯಗಳ ನಿರೀಕ್ಷೆಗಳನ್ನು ಬದಿಗಿಟ್ಟು ಬೇರೊಂದು ಸಮುದಾಯದವರನ್ನು ಮುಖ್ಯಮಂತ್ರಿಯನ್ನಾಗಿಸಿದ ಬಿಜೆಪಿ ಹೈಕಮಾಂಡ್‌ ಇತರ ರಾಜ್ಯಗಳಂತೆ ಕರ್ನಾಟಕದಲ್ಲಿಯೂ ಅಂಥ ಗಟ್ಟಿನಿರ್ಧಾರಕ್ಕೆ ಬರುತ್ತಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಯೋಗ ಮಾಡಬಹುದೇ ಎಂಬ ಗಂಭೀರ ಚಿಂತನೆ ಹೈಕಮಾಂಡ್‌ ಮಟ್ಟದಲ್ಲಿ ನಡೆಯುತ್ತಿದೆ. ಅಂತಿಮವಾಗಿ ಇದಕ್ಕೆ ಧೈರ್ಯ ಮಾಡುತ್ತದೆಯೇ ಎಂಬುದು ಕುತೂಹಲಕರವಾಗಿದೆ.

ಮುಖ್ಯವಾಗಿ ಈಗ ಸುಗಮವಾಗಿ ರಾಜೀನಾಮೆ ನೀಡಲು ಮುಂದಾಗಿರುವ ಯಡಿಯೂರಪ್ಪ ಅವರು ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಸೂಕ್ತ ಪ್ರಾತಿನಿಧ್ಯ ಅಥವಾ ಸ್ಥಾನಮಾನ ಸಿಗದೇ ಇದ್ದಲ್ಲಿಯೂ ಹೀಗೆಯೇ ನಿರ್ಲಿಪ್ತವಾಗಿ ಇರುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪುತ್ರನಿಗೆ ತಮ್ಮ ನಿರೀಕ್ಷೆಯಂತೆ ಸೂಕ್ತ ಸ್ಥಾನಮಾನ ನೀಡಿದಲ್ಲಿ ಲಿಂಗಾಯತರನ್ನು ಹೊರತುಪಡಿಸಿ ಬೇರೊಂದು ಸಮುದಾಯದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರೂ ಯಡಿಯೂರಪ್ಪ ಅವರು ಪಕ್ಷದ ಸಂಘಟನೆಯಲ್ಲಿ ಕೈಜೋಡಿಸುವ ಮೂಲಕ ಧಕ್ಕೆಯಾಗದಂತೆ ನೋಡಿಕೊಳ್ಳಬಹುದು ಎಂಬ ಚಿಂತೆಯೂ ವರಿಷ್ಠರಲ್ಲಿದೆ.

ಹಾಗಾದಲ್ಲಿ ಈ ಬಾರಿ ಲಿಂಗಾಯತ ಸಮುದಾಯದವರಿಗೇ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಯಾವುದೇ ತೊಂದರೆ ಮೈಮೇಲೆ ಎಳೆದುಕೊಳ್ಳಲಾರದು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಹೊಸ ಪ್ರಯೋಗ ಕೈಗೊಳ್ಳಲು ಮುಂದಾಗಬಹುದು ಎಂದು ತಿಳಿದು ಬಂದಿದೆ.

ಯಾರ ಹೆಸರು ಮುಂಚೂಣಿಯಲ್ಲಿ?:

ಲಿಂಗಾಯತರನ್ನು ಹೊರತುಪಡಿಸಿ ಬೇರೊಂದು ಸಮುದಾಯಕ್ಕೆ ನೀಡಲು ವರಿಷ್ಠರು ಮನಸ್ಸು ಮಾಡಿದರೂ ಸಂಘ ಪರಿವಾರದ ಹಿನ್ನೆಲೆಯುಳ್ಳ, ಹಿಂದುತ್ವದ ಪ್ರತಿಪಾದಕರೂ ಆಗಿರುವಂಥವರಿಗೆ ಅವಕಾಶ ಸಿಗಲಿದೆ. ಹೀಗಾಗಿ, ಬ್ರಾಹ್ಮಣ ಸಮುದಾಯದ ಪ್ರಹ್ಲಾದ್‌ ಜೋಶಿ, ಒಕ್ಕಲಿಗ ಸಮುದಾಯದ ಸಿ.ಟಿ.ರವಿ ಅವರ ಹೆಸರುಗಳು ಮುಂಚೂಣಿಗೆ ಬಂದಿವೆ.

ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರ ಹೆಸರೂ ಪಕ್ಷದ ಪಾಳೆಯದಿಂದ ಸದ್ದಿಲ್ಲದೆ ಹರಿದಾಡುತ್ತಿದೆ.

ಆದರೆ, ಹಿಂದುಳಿದ ವರ್ಗ ಹಾಗೂ ದಲಿತ ವರ್ಗಗಳಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಈವರೆಗೆ ಹೆಚ್ಚಿನ ಒಲವು ವರಿಷ್ಠರಲ್ಲಿ ಕಂಡು ಬಂದಿಲ್ಲ.

ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಜೆಪಿ ವರಿಷ್ಠರು ಲಿಂಗಾಯತ ಸಮುದಾಯದ ಪ್ರಾಬಲ್ಯವನ್ನು ಮೀರಿ ಬೇರೊಂದು ಸಮುದಾಯಕ್ಕೆ ಅವಕಾಶ ಕಲ್ಪಿಸಿದರೆ ಮುಂದಿನ ಚುನಾವಣೆಗಳನ್ನು ಎದುರಿಸಲು ತೊಂದರೆಯಾಗಬಹುದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಹಾಗೆ ಮಾಡುವುದರಿಂದ ಪ್ರತಿಪಕ್ಷ ಕಾಂಗ್ರೆಸ್‌ಗೆ ಅನುಕೂಲವಾಗಬಹುದೇನೊ ಎಂಬ ಆತಂಕವೂ ಇದೆ.

ಆದರೆ, ತಮ್ಮ ಸಲಹೆ-ಸೂಚನೆ ಅನುಸಾರ ಸಮರ್ಥವಾಗಿ ಆಡಳಿತ ನಡೆಸುವ ವ್ಯಕ್ತಿಯೊಬ್ಬ ಯಾವುದೇ ಸಮುದಾಯಕ್ಕೆ ಸೇರಿರಲಿ ಅಂಥವರನ್ನು ಮುಂದಿಟ್ಟುಕೊಂಡು ಹೋದರೆ ಪಕ್ಷಕ್ಕೆ ಅನುಕೂಲವಾಗಬಹುದೇ ಎಂಬ ಚರ್ಚೆ ಹೈಕಮಾಂಡ್‌ ಮಟ್ಟದಲ್ಲಿ ನಡೆದಿದೆ. ಈ ಬಗ್ಗೆ ರಾಜ್ಯದ ಸಂಘ ಪರಿವಾರದ ಮುಖಂಡರ ಅಭಿಪ್ರಾಯವನ್ನೂ ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios