ಕರ್ನಾಟಕದಿಂದ ಅನುಭವಿಗಳ ಜೊತೆಗೆ ಹೊಸ ರಕ್ತದ ಪ್ರವೇಶ| ಖರ್ಗೆ, ಮುನಿಯಪ್ಪ ಸ್ಥಾನ ಬದಲಾದರೂ ಸಮಿತಿಯಲ್ಲಿ ಅಸ್ತಿತ್ವ| ದಿನೇಶ್, ಎಚ್‌ಕೆ, ಕೃಷ್ಣಬೈರೇಗೌಡಗೆ ಹೊಸತಾಗಿ ಸ್ಥಾನಮಾನ|
ಬೆಂಗಳೂರು(ಸೆ.12): ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಈ ಬಾರಿ ಕರ್ನಾಟಕದಿಂದ ಅನುಭವಿಗಳ ಜತೆಗೆ ಹೊಸ ರಕ್ತದ ಪ್ರವೇಶವೂ ಆಗಿದೆ. ಅಷ್ಟೇ ಅಲ್ಲ, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕರ್ನಾಟಕಕ್ಕೆ ತುಸು ಉತ್ತಮ ಪ್ರಾತಿನಿಧ್ಯ ದೊರಕಿದೆ.
"
ಶುಕ್ರವಾರ ಪುನರ್ ರಚನೆ ಕಂಡ ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಈ ಬಾರಿ ಕರ್ನಾಟಕದಿಂದ ನಾಲ್ಕು ಮಂದಿ ಸ್ಥಾನ ಪಡೆದಿದ್ದಾರೆ. ಕಳೆದ ಬಾರಿ ಕಾರ್ಯಕಾರಿ ಸಮಿತಿಯಲ್ಲಿದ್ದ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಎಚ್. ಮುನಿಯಪ್ಪ ಅವರು ಸಮಿತಿಯಲ್ಲಿ ತಮ್ಮ ಅಸ್ತಿತ್ವವನ್ನು ಕಾಯ್ದುಕೊಂಡಿದ್ದರೆ, ಇದೇ ಮೊದಲ ಬಾರಿಗೆ ದಿನೇಶ್ ಗುಂಡೂರಾವ್ ಅವರು ಪ್ರವೇಶ ಪಡೆದಿದ್ದಾರೆ. ಜೊತೆಗೆ, ಅನುಭವಿ ಎಚ್.ಕೆ. ಪಾಟೀಲ್ ಸಹ ಸ್ಥಾನ ಗಿಟ್ಟಿಸಿದ್ದಾರೆ. ಇನ್ನು, ಎಐಸಿಸಿ ಸೆಂಟ್ರಲ್ ಎಲೆಕ್ಷನ್ ಅಥಾರಿಟಿಗೆ ಮಾಜಿ ಸಚಿವ ಕೃಷ್ಣ ಬೈರೇಗೌಡ ಪ್ರವೇಶ ಮಾಡುವ ಮೂಲಕ ಕರ್ನಾಟಕಕ್ಕೆ ಹೆಚ್ಚಿನ ಸ್ಥಾನ ದೊರಕಿದಂತಾಗಿದೆ.
ಕುತೂಹಲಕಾರಿ ಸಂಗತಿಯೆಂದರೆ ಹೈಕಮಾಂಡ್‌ನಲ್ಲಿ ಪ್ರಭಾವಿ ಎಂಬ ಕಾರಣಕ್ಕೆ ರಾಜ್ಯದ ವಿಚಾರಗಳಲ್ಲೂ ಹತೋಟಿ ಸಾಧಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಸುದೀರ್ಘ ಕಾಲದ ನಂತರ ಕಾರ್ಯಕಾರಿ ಸಮಿತಿಯಿಂದ ಹೊರಬಿದ್ದಿದ್ದಾರೆ. ಇನ್ನು ಮತ್ತೊಬ್ಬ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಅವರು ಅನಾರೋಗ್ಯದ ಕಾರಣ ಎಐಸಿಸಿಯಿಂದ ಕೊಕ್ ಪಡೆದಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಬದಲಾವಣೆ: ಹೊಸಬರಿಗೆ ರಾಜ್ಯದ ಕೈ ಹೊಣೆ..!
ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಮಾತ್ರ ಮಾಡಲಾಗಿದೆ. ಮೂಲಗಳ ಪ್ರಕಾರ ನಿಕಟ ಭವಿಷ್ಯದಲ್ಲಿ ಖರ್ಗೆ ಅವರನ್ನು ರಾಜ್ಯ ಸಭೆಯಲ್ಲಿ ಪಕ್ಷದ ನಾಯಕನ ಸ್ಥಾನ ನೀಡುವ ಅಥವಾ ಸಂಸದೀಯ ಸಮಿತಿಗಳಲ್ಲಿ ಅವರಿಗೆ ಸ್ಥಾನ ದೊರಕಿಸಿಕೊಡುವ ಕಾರಣದಿಂದ ಅವರಿಗೆ ಸದಸ್ಯ ಸ್ಥಾನ ಮಾತ್ರ ನೀಡಲಾಗಿದೆ ಎನ್ನಲಾಗುತ್ತಿದೆ. ಈ ಬಾರಿ ಬಂಪರ್ ಹೊಡೆದಿರುವುದು ದಿನೇಶ್ ಗುಂಡೂರಾವ್ ಮತ್ತು ಎಚ್.ಕೆ. ಪಾಟೀಲ್.
ಎಚ್.ಕೆ. ಪಾಟೀಲ್ ಅವರು ಮಹಾರಾಷ್ಟ್ರ ರಾಜ್ಯದ ಉಸ್ತುವಾರಿ ಗಿಟ್ಟಿಸಿದ್ದಾರೆ. ಈ ಹೊಣೆ ಇದುವರೆಗೂ ಮಲ್ಲಿಕಾರ್ಜುನ ಖರ್ಗೆ ಅವರು ಹೊಂದಿದ್ದರು. ಇನ್ನು ದಿನೇಶ್ ಗುಂಡೂರಾವ್ ಅವರು ತಮಿಳುನಾಡು, ಪಾಂಡಿಚೇರಿ ಹಾಗೂ ಗೋವಾದ ಉಸ್ತುವಾರಿ ಹೊಣೆ ದೊರಕಿದೆ.
ರಾಜ್ಯಕ್ಕೆ ಹೊಸ ಉಸ್ತುವಾರಿ ಸುರ್ಜೇವಾಲ
ಎಐಸಿಸಿಯಲ್ಲಿ ಹೆಚ್ಚಿನ ಹೊಣೆ ಹೊತ್ತಿದ್ದ ಕಾರಣ ಕರ್ನಾಟಕ ಉಸ್ತುವಾರಿಯಿಂದ ಮುಕ್ತಿ ಕೇಳಿದ್ದ ಕೆ.ಸಿ. ವೇಣುಗೋಪಾಲ್ ಅವರ ಮನವಿಗೆ ಕಾಂಗ್ರೆಸ್ ಹೈಕಮಾಂಡ್ ಅಸ್ತು ಎಂದಿದ್ದು, ಅವರ ಬದಲಾಗಿ ರಣದೀಪ್‌ಸಿಂಗ್ ಸುರ್ಜೇವಾಲ ಅವರು ರಾಜ್ಯದ ಉಸ್ತುವಾರಿಯಾಗಿ ಬಂದಿದ್ದಾರೆ. ಕಾಂಗ್ರೆಸ್‌ನ ಹಿರಿಯರ (ಸೋನಿಯಾ ಗಾಂಧಿ ಟೀಂ) ಹಾಗೂ ಯುವ ಪಡೆ (ರಾಹುಲ್ ಗಾಂಧಿ ಟೀಂ) ಎರಡರೊಂದಿಗೂ ಸಮನ್ವಯ ಸಾಧಿಸಿರುವ ಸುರ್ಜೇವಾಲ ರಾಜ್ಯಕ್ಕೆ ಬಂದಿರುವುದನ್ನು ರಾಜ್ಯ ನಾಯಕತ್ವ ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ಕಾದು ನೋಡಬೇಕು.
