Asianet Suvarna News Asianet Suvarna News

ಸಿದ್ದರಾಮಯ್ಯ ನಾಯಕತ್ವದಲ್ಲಿ ಕರ್ನಾಟಕ ಬಳಲುತ್ತಿದೆ: ವಿಜಯೇಂದ್ರ

ಡಿಕೆಶಿ ಅವರು ಈಗಾಗಲೇ ಶಾಸಕರು ಇದ್ದಾರೆ. ಆದರೂ ಚನ್ನಪಟ್ಟಣದಲ್ಲಿ ಸ್ಪರ್ಧೆಯ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಇದು ಅವರ ಪಕ್ಷದ ತೀರ್ಮಾನ. ಆದರೂ ಜನರ ಮನದಾಳದಲ್ಲಿ ಏನಿದೆ ಅನ್ನೋದು ಇನ್ನೂ ನಿಗೂಢವಾಗಿದೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ 
 

Karnataka is Suffering under Siddaramaiah Leadership says BJP State President BY Vijayendra grg
Author
First Published Jun 21, 2024, 9:16 AM IST

ಬೆಂಗಳೂರು(ಜೂ.21):  ನಾಳೆ(ಶನಿವಾರ) ಬೆಂಗಳೂರಿನ ಅರಮನೆ ಮೈದಾನದಲ್ಲಿ ನೂತನ ಸಂಸದರು ಹಾಗೂ ನೂತನ ಕೇಂದ್ರ ಸಚಿವರಿಗೆ ಸನ್ಮಾನ ಸಮಾರಂಭ ನಡೆದಯಲಿದೆ. ಕರ್ನಾಟಕದಿಂದ ಬಿಜೆಪಿ, ಜೆಡಿಎಸ್‌ನಿಂದ ಆಯ್ಕೆ ಯಾಗಿರುವ 19 ಸಂಸದರು ಹಾಗೂ ಕೇಂದ್ರದ ಸಚಿವ ಸಂಪುಟಕ್ಕೆ ಆಯ್ಕೆಯಾದ ಸಚಿವರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಚನ್ನಪಟ್ಟಣದಲ್ಲಿ ಡಿಕೆಶಿ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಡಿಕೆಶಿ ಅವರು ಈಗಾಗಲೇ ಶಾಸಕರು ಇದ್ದಾರೆ. ಆದರೂ ಚನ್ನಪಟ್ಟಣದಲ್ಲಿ ಸ್ಪರ್ಧೆಯ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಇದು ಅವರ ಪಕ್ಷದ ತೀರ್ಮಾನ. ಆದರೂ ಜನರ ಮನದಾಳದಲ್ಲಿ ಏನಿದೆ ಅನ್ನೋದು ಇನ್ನೂ ನಿಗೂಢವಾಗಿದೆ.  ಬೆಂಗಳೂರು ಗ್ರಾಮೀಣ ಕ್ಷೇತ್ರದಲ್ಲಿ ತಮ್ಮನ್ನು ಸೋಲಿಸೋರೇ ಇಲ್ಲ ಅಂತ ಅವರು ಅನ್ಕೊಂಡಿದ್ರು.  ಆದರೆ ಜನರ ತೀರ್ಪು ಏನಿತ್ತು ಅಂತ ಎಲ್ರೂ ನೋಡಿದ್ದೀರ. ಚನ್ನಪಟ್ಟಣ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಯಾರಾಗಬೇಕು ಅಂತ ನಾವು ಮತ್ತು ಜೆಡಿಎಸ್ ನಾಯಕರು ಅತೀ ಶೀಘ್ರದಲ್ಲೇ ತೀರ್ಮಾನ ಮಾಡ್ತೇವೆ ಎಂದು ತಿಳಿಸಿದ್ದಾರೆ. 

ದರ್ಶನ್ & ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಕೇಸ್‌: ಆರೋಪಿಗಳು ಎಷ್ಟೇ ದೊಡ್ಡವರಾದ್ರೂ ಕ್ರಮ ಜರುಗಿಸಬೇಕು, ವಿಜಯೇಂದ್ರ

ದಾವಣಗೆರೆ ಸೋಲಿಗೆ ಯಡಿಯೂರಪ್ಪ, ವಿಜಯೇಂದ್ರ ಕಾರಣ ಎಂಬ ಶಾಸಕ ಬಿ.ಪಿ. ಹರೀಶ್ ಹೇಳಿಕೆ ವಿಚಾರಕ್ಕೆ  ಗರಂ ಆದ ವಿಜಯೇಂದ್ರ ಬಿಜೆಪಿ ಶಾಸಕ ಬಿ.ಪಿ. ಹರೀಶ್‌ಗೆ ತಾಕೀತು ಮಾಡಿದ್ದಾರೆ. ನಮ್ಮ ಶಾಸಕ ಮಿತ್ರ ಹರೀಶ್ ಆಗಲೀ ಅಥವಾ ಬೇರೆ ಯಾರೇ ಆಗಲೀ ಅವರಿಗೆ ಒಂದು ಮಾತು ಹೇಳ್ತೇನೆ. ಬಹಿರಂಗವಾಗಿ ಹೇಳಿಕೆ ಕೊಡೋದ್ರಿಂದ ಸಮಸ್ಯೆಗೆ ಪರಿಹಾರ ಸಿಗುತ್ತೆ ಅಂದ್ರೆ ಹೇಳಲಿ, ನನ್ನದೇನೂ ತಕರಾರಿಲ್ಲ. ಆದರೆ ನಾನು ರಾಜ್ಯಾಧ್ಯಕ್ಷ ಆಗಿ ಮನವಿ ಮಾಡೋದು, ಏನೇ ಸಮಸ್ಯೆ ಇದ್ರೂ ಪಕ್ಷದ ಕಚೇರಿಗೆ ಬಂದು ಚರ್ಚೆ ಮಾಡಿ. ಈ ರೀತಿ ಹೇಳಿಕೆ ಕೊಡೋದರಿಂದ ಅದು ಪಕ್ಷಕ್ಕೂ ಲಾಭ ಆಗಲ್ಲ, ಸಂಘಟನೆಗೂ ಲಾಭ ಆಗಲ್ಲ. ಬಿಜೆಪಿಯಲ್ಲಿ ಗುಂಪುಗಾರಿಕೆ ಜಾಸ್ತಿ ಆಗುತ್ತಿಲ್ಲ, ಎಲ್ಲವನ್ನೂ ಸರಿ ಮಾಡ್ತೇವೆ ಎಂದಿದ್ದಾರೆ. 

ರಾಜ್ಯದ ಹಣಕಾಸು ವ್ಯವಸ್ಥೆ ಮೇಲುಸ್ತುವಾರಿಗೆ ವಿದೇಶಿ ಕನ್ಸಲ್ಟೆನ್ಸಿ ನೇಮಕ ವಿಚಾರದ ಬಗ್ಗೆ ಮಾತನಾಡಿದ ವಿಜಯೇಂದ್ರ, ಇದು ಆಶ್ಚರ್ಯ ಮತ್ತು ಶಾಕಿಂಗ್ ಕೂಡ, ಸಿಎಂ ಸುತ್ತ ಅಷ್ಟು ತಜ್ಞ ಅಧಿಕಾರಿಗಳು ಇರುವಾಗ ವಿದೇಶಿ ಕನ್ಸಲ್ಟೆನ್ಸಿ ಆಯ್ಕೆ ಮಾಡಿದ್ದಾರೆ. ಕಳೆದ ಒಂದು ವರ್ಷದಿಂದ ಸಿದ್ದರಾಮಯ್ಯ ಸರ್ಕಾರ ಎಲ್ಲಾ ವಿಧದಲ್ಲೂ ವಿಫಲ ಆಗಿದೆ. ಒಂದು ವರ್ಷದಿಂದ ಯಾವುದೇ ಅಭಿವೃದ್ಧಿ ಇಲ್ಲ, ಹೂಡಿಕೆ ಬಂದಿಲ್ಲ. ಕರ್ನಾಟಕ ಸಿದ್ದರಾಮಯ್ಯ ನಾಯಕತ್ವದಲ್ಲಿ ಬಳಲುತ್ತಿದೆ. ಯಾಕೆ ಸಿದ್ದರಾಮಯ್ಯ ನಮ್ಮ ರಾಜ್ಯದಿಂದಲೇ ಸೂಕ್ತ ವ್ಯಕ್ತಿಯನ್ನು ಗುರುತಿಸಲಿಲ್ಲ?. ಹಲವು ಹಿರಿಯ ಐಎಎಸ್ ಅಧಿಕಾರಿಗಳು ಇದ್ದಾರೆ. ಯಡಿಯೂರಪ್ಪ, ಎಸ್ ಎಂ. ಕೃಷ್ಣ ಇವರೆಲ್ಲಾ ಸಿಎಂ ಆಗಿದ್ದಾಗ ಕರ್ನಾಟಕ ಎಲ್ಲಾ ಹಂತದಲ್ಲೂ ಮುಂದಿತ್ತು. ಯಾವುದೇ ವಿದೇಶಿ ತಜ್ಞರು ಸಿದ್ದರಾಮಯ್ಯಗೆ ಸಹಕಾರ ಮಾಡುತ್ತಾರೆ ಅಂತಾ ನನಗೆ ಅನ್ನಿಸುತ್ತಿಲ್ಲ. ಸಿದ್ದರಾಮಯ್ಯ ಕರ್ನಾಟಕವನ್ನು ಅಭಿವೃದ್ಧಿಶೀಲ ರಾಜ್ಯ, ರಾಜ್ಯಕ್ಕೆ ಸಂಪನ್ಮೂಲ ಹೂಡಿಕೆ ಬರುವುದನ್ನು ಬಯಸುತ್ತಾರೋ ಇಲ್ಲವೋ ಎಂಬುದನ್ನು ರಾಜ್ಯಕ್ಕೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ. 

Latest Videos
Follow Us:
Download App:
  • android
  • ios