ಬೆಂಗಳೂರು, [ಜ.02]: ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವಿನ ಮೈತ್ರಿ ಸರ್ಕಾರದಲ್ಲಿ ಒಂದಲ್ಲ ಒಂದಕ್ಕೆ ಅಸಮಾಧನಗಳು ಸ್ಫೋಟಗೊಳ್ಳುತ್ತಲೇ ಇವೆ. ಇದಕ್ಕೆ ಪೂರಕವೆಂಬಂತೆ ಆರ್.ಬಿ ತಿಮ್ಮಾಪುರ್​ಗೆ ಕೊಡಬೇಕಾಗಿದ್ದ ಖಾತೆಗೆ ಜೆಡಿಎಸ್ ಕನ್ನ ಹಾಕಿದೆ.

 ರಾಜ್ಯದ ನೂತನ ಸಚಿವ ಸಂಪುಟದಲ್ಲಿ ವಿಧಾನಪರಿಷತ್​ ಸದಸ್ಯ, ಬಾಗಲಕೋಟೆಯ ಆರ್‌.ಬಿ.ತಿಮ್ಮಾಪುರ್ ಮಂತ್ರಿ ಭಾಗ್ಯವೇನೋ ಸಿಕ್ಕಿದೆ. ಎಐಸಿಸಿ ಪಟ್ಟಿಯಲ್ಲಿ ಆರ್.ಬಿ ತಿಮ್ಮಾಪುರ್​ಗೆ ಬಂದರು ಮತ್ತು ಒಳನಾಡು ಸಾರಿಗೆ, ಸಕ್ಕರೆ 2 ಖಾತೆ ಹಂಚಿಕೆ ಮಾಡಿದೆ. 

ಆದ್ರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯ ಪತ್ರದಲ್ಲಿ ಆರ್.ಬಿ.ತಿಮ್ಮಾಪುರ್​ಗೆ ಸಕ್ಕರೆ ಖಾತೆ ಮಾತ್ರ ಪ್ರಕಟಿಸಿದ್ದು, ಬಂದರು ಮತ್ತು ಒಳನಾಡು ಸಾರಿಗೆ ಖಾತೆಯನ್ನ ಯಾರಿಗೂ ಹಂಚದ ಕುಮಾರಸ್ವಾಮಿ ಅವರು ತಮ್ಮಲ್ಲಿಯೇ ಇಟ್ಟುಕೊಂಡಿದ್ದಾರೆ. 

ಸಂಪುಟ ಪುನಾರಚನೆ ಬಳಿಕ ಆರ್.ಬಿ.ತಿಮ್ಮಾಪುರ್​​​​ಗೆ ಬಂದರು ಮತ್ತು ಒಳನಾಡು ಸಾರಿಗೆ, ಸಕ್ಕರೆ ಎರಡು ಖಾತೆಗಳನ್ನು ನೀಡಲಾಗಿತ್ತು. ಆದ್ರೆ ನೋಟಿಫಿಕೇಶನ್​​ನಲ್ಲಿ ಆರ್.ಬಿ ತಿಮ್ಮಾಪುರ್​ಗೆ ಸಕ್ಕರೆ ಖಾತೆ ಮಾತ್ರ ನೀಡಲಾಗಿದ್ದು, ಸುತ್ತೋಲೆಯಲ್ಲಿ ಪ್ರಕಟ ಮಾಡದಿರೋದಕ್ಕೆ ಆರ್.ಬಿ.ತಿಮ್ಮಾಪುರ್ ಶಾಕ್ ಆಗಿದ್ದಾರೆ.

ಈ ಬೆಳವಣಣಿಗೆ ರಾಜ್ಯ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಜೆಡಿಎಸ್, ಕಾಂಗ್ರೆಸ್ ಜೊತೆ ಸೇರಿ ಮೈತ್ರಿ ಧರ್ಮ ಪಾಲಿಸ್ತಿಲ್ವಾ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.