ಬೆಂಗಳೂರು, (ಅ.24): ಅಕ್ರಮ ಡಿನೋಟಿಫಿಕೇಷನ್ ಸಂಬಂಧಿಸಿದಂತೆ  ಮಾಜಿ ಸಿಎಂ ಸಿದ್ದರಾಮಯ್ಯ ಅವರುಗೆ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್ ರದ್ದುಗೊಳಿಸಿ ಹೈಕೋರ್ಟ್ ಶುಕ್ರವಾರದಂದು ಆದೇಶಿಸಿದೆ.

ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ರವರಿದ್ದ ಹೈಕೋರ್ಟ್ ಪೀಠ ಇಂದು (ಶನಿವಾರ) ಈ ಆದೇಶ ಹೊರಡಿಸಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ಕುರಿತಂತೆ ತಮ್ಮ ವಿರುದ್ಧ ಹೊರಡಿಸಲಾಗಿರುವ ಸಮನ್ಸ್ ರದ್ದು ಕೋರಿ ಸಿದ್ದರಾಮಯ್ಯ ಅವರು ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಅವರಿದ್ದ ನ್ಯಾಯಪೀಠ, ಸಮನ್ಸ್ ರದ್ದುಗೊಳಿಸಿ ಆದೇಶ ನೀಡಿದೆ.

ಸಿದ್ದರಾಮಯ್ಯಗೆ ಸಂಕಷ್ಟ: ವಿಚಾರಣೆಗೆ ಬರುವಂತೆ ಕೋರ್ಟ್ ಸಮನ್ಸ್

ಮೈಸೂರಿನ ವಿಜಯನಗರ 2ನೆ ಹಂತದ ಬಡಾವಣೆ ನಿರ್ಮಾಣಕ್ಕೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ(ಮುಡಾ) ಸ್ವಾಧೀನಪಡಿಸಿಕೊಂಡಿದ್ದ 535 ಎಕರೆ ಜಮೀನಿನಲ್ಲಿ 30 ಗುಂಟೆ ಜಮೀನು ಡಿನೋಟಿಫೈ ಮಾಡಲಾದ ಪ್ರಕರಣದಲ್ಲಿ ಸಿದ್ದರಾಮಯ್ಯ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆಂಬ ಆರೋಪ ಎದುರಿಸುತ್ತಿದ್ದರು.

ಈ ಕುರಿತಂತೆ ತನಿಖೆ ನಡೆಸಿದ್ದ ಸ್ಥಳೀಯ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ಆದರೆ ಕ್ಲೀನ್ ಚಿಟ್ ನೀಡಿದ್ದನ್ನು ಗಂಗರಾಜು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬಿ ರಿಪೋರ್ಟ್ ರದ್ದುಗೊಳಿಸಿ, ವಿಚಾರಣೆಗೆ ಖುದ್ದು ಹಾಜರಾಗುವಂತೆ ಸಿದ್ದರಾಮಯ್ಯನವರಿಗೆ ಸಮನ್ಸ್ ಜಾರಿಗೊಳಿಸಿತ್ತು. ನ್ಯಾಯಾಲಯದ ಆದೇಶದ ವಿರುದ್ಧ ಸಿದ್ದರಾಮಯ್ಯ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.