ಬೆಂಗಳೂರು, (ಸೆ.25): ಜೆಡಿಎಸ್ ವರಿಷ್ಠ ಹಾಗೂ ರಾಜ್ಯಸಭಾ ಸದಸ್ಯ ದೇವೇಗೌಡರು ರಾಜ್ಯಸಭಾ ಸದಸ್ಯರಾದ ನಂತರ ನಿಯಮಗಳ ಪ್ರಕಾರ ರಾಜ್ಯ ಸರ್ಕಾರ ಕಾರು ನೀಡಬೇಕಿದೆ. 

ಈ ಹಿನ್ನೆಲೆ ರಾಜ್ಯ ಸರ್ಕಾರ ಸುಮಾರು 60 ಲಕ್ಷ ರೂ. ಬೆಲೆಯ ವೋಲ್ವೋ ಹೊಸ ಕಾರನ್ನು ಖರೀದಿಸಿದೆ. 15 ದಿನಗಳ ಹಿಂದಷ್ಟೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಹೆಸರಿನಲ್ಲಿ ಕಾರು ಖರೀದಿ ಮಾಡಲಾಗಿದ್ದು, ಇದೀಗ ದೇವೇಗೌಡ ಅವರಿಗೆ ಈ ಕಾರನ್ನು ನೀಡಲಾಗಿದೆ.

ಸಿದ್ದರಾಮ್ಯಯ ಮನೆಗೆ ಬಂತು ಹೊಸ ಕಾರು: ಕೊಟ್ಟಿದ್ಯಾರು...? 

 ದೇವೇಗೌಡರ ಈ ಹೊಸ ಕಾರಿಗೆ ನೋಂದಣಿ ಕೆಎ 53 ಜಿ 3636 ನೀಡಲಾಗಿದೆ, ಈ ಮೂಲಕ ದೇವೇಗೌಡರು ರಾಜ್ಯದಲ್ಲಿ ಅತಿ ದುಬಾರಿ ಸರ್ಕಾರಿ ಕಾರು ಹೊಂದಿರುವ ಜನಪ್ರತಿನಿಧಿ ಎನಿಸಿಕೊಂಡಿದ್ದಾರೆ.

ಇದು ಕರ್ನಾಟಕ ರಾಜ್ಯದ ಯಾವುದೇ ಜನಪ್ರತಿನಿಧಿಗೆ ರಾಜ್ಯ ಸರ್ಕಾರವು ನೀಡಿದ ಅತ್ಯಂತ ದುಬಾರಿ ಬೆಲೆಯ ವಾಹನವಾಗಿದೆ. ಈ ಕಾರು ರಾಜ್ಯಸಭಾ ಸದಸ್ಯರಿಗೆ ನೀಡಬಹುದಾದ ಕಾರಿನ ಬೆಲೆಗಿಂತ ಮೂರು ಪಟ್ಟು ಹೆಚ್ಚು ಬೆಲೆಯನ್ನು ಹೊಂದಿದೆ. ರಾಜ್ಯ ಸರ್ಕಾರವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಕಾರನ್ನು ನೀಡಲಾಗಿದೆ.

ಕರ್ನಾಟಕದ ಬಹುತೇಕ ಮಂತ್ರಿಗಳು ಹಾಗೂ ಶಾಸಕರು ಟೊಯೊಟಾ ಇನೋವಾ ಕ್ರಿಸ್ಟಾ ಎಂಪಿವಿಯನ್ನು ಬಳಸುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೊಯೋಟಾ ಫಾರ್ಚೂನರ್ ಕಾರು ಬಳಸುತ್ತಿದ್ದಾರೆ.