* ಸ್ಥಳೀಯ ಸಂಸ್ಥೆಗಳ ಎಲೆಕ್ಷನ್ ಮೀಸಲಾತಿ* ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯಕ್ಕೆ ಆಯೋಗ ರಚನೆ* ನ್ಯಾಯಮೂರ್ತಿ ಭಕ್ತವತ್ಸಲ ಅಧ್ಯಕ್ಷತೆಯಲ್ಲಿ ಆಯೋಗ

ಬೆಂಗಳೂರು, (ಮೇ.08): ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳಿಗೆ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ಕುರಿತು ಅಧ್ಯಯನ ನಡೆಸಲು ಸರ್ಕಾರ ಪ್ರತ್ಯೇಕ ಆಯೋಗವನ್ನು ರಚಿಸಿ ಆದೇಶಿಸಿದೆ. ನ್ಯಾಯಮೂರ್ತಿ ಭಕ್ತವತ್ಸಲ ಅವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಲಾಗಿದ್ದು, ನಿವೃತ್ತ ಐಎಎಸ್ ಅಧಿಕಾರಿ ಸಿ.ಆರ್. ಚಿಕ್ಕಮಠ ಅವರು ಈ ಆಯೋಗದ ಸದಸ್ಯರಾಗಿ ನೇಮಕಗೊಂಡಿದ್ದಾರೆ. 

ಹಿಂದುಳಿದ ವರ್ಗಗಳಿಗೆ ಪಂಚಾಯತ್ ರಾಜ್ ಸಂಸ್ಥೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ (Local Bodies Election ) ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ಕುರಿತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಸೂಚನೆಯಂತೆ ಈ ಆಯೋಗ ರಚಿಸಲಾಗಿದೆ.

ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಒಳ್ಳೆಯ ದಿನಗಳು ಬರಲಿವೆ, ಸಿಎಂ ಭರವಸೆ

 ಈ ಬಗ್ಗೆ ಮಾರ್ಚ್ 23 ಹಾಗೂ 31 ರಂದು ನಡೆದ ಸರ್ವಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ನಗರ ಸ್ಥಳೀಯ ಸಂಸ್ಥೇಗಳಿಗೆ ಹಿಂದುಳಿದ ವರ್ಗಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಿಯೇ ಚುನಾವಣೆ ನಡೆಸುವ ಕುರಿತು ಚರ್ಚಿಸಲಾಗಿತ್ತು. 

ಅದರಂತೆ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಿ, ಈ ಹಿಂದುಳಿದ ವರ್ಗಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ಅಧ್ಯಯನ ನಡೆಸಿ, ಶಿಫಾರಸು ಮಾಡಲು ಈ ಆಯೋಗವನ್ನು ರಚಿಸಲಾಗಿದೆ.

ಸದರಿ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ನೇಮಕದ ನಿಯಮಗಳ ಕುರಿತು ಷರತ್ತು ಹಾಗೂ ನಿಬಂಧನೆಗಳನ್ನು ಹಾಗೂ ಆಯೋಗದ ಉಲ್ಲೇಖಿಸಿದ ನಿಯಮಗಳ ಕುರಿತಂತೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. 

ಸರ್ವಪಕ್ಷ ಸಭೆಯಲ್ಲಿ ಏನಾಗಿತ್ತು?
ಹಿಂದುಳಿದ ವರ್ಗಗಳ ಮೀಸಲಾತಿ ಕಲ್ಪಿಸಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು ಎಂದು ಒಮ್ಮತದ ತೀರ್ಮಾನವಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದರು.

ಎಲ್ಲಾ ಆಯಾಮಗಳಲ್ಲಿ ವಿಚಾರ ಮಾಡಿ ಹಿಂದುಳಿದ ವರ್ಗಗಳಿಗೆ ರಾಜಕೀಯವಾಗಿ ಹಿಂದುಳಿದಿರುವುದನ್ನು ಗುರುತಿಸಬೇಕು. ಅದಕ್ಕಾಗಿ ಸಮಿತಿ ರಚಿಸಬೇಕು. ಒಟ್ಟಾರೆ ಮೀಸಲಾತಿ ಶೇ.50 ಮೀರಬಾರದು ಎನ್ನುವ ಸರ್ವೋಚ್ಚ ನ್ಯಾಯಾಲಯದ ಷರತ್ತುಗಳನ್ವಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.ಈ ತಿಂಗಳ ಅಂತ್ಯದೊಳಗೆ ಮುಂದಿನ ಸಭೆ ನಿಗದಿಪಡಿಸಲಾಗುವುದು. ಆ ಸಭೆಯಲ್ಲಿ ವಿರೋಧ ಪಕ್ಷದ ನಾಯಕರ ಹಾಜರಾತಿಯಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು.

ಆಯೋಗ ರಚಿಸಿ ವರದಿ ಪಡೆದು ಚುನಾವಣೆಗೆ ಹೋಗಬೇಕೆ ಅಥವಾ ಸರ್ವೋಚ್ಚ ನ್ಯಾಯಾಲಯದಲ್ಲಿ ಪುನರ್ ಪರಿಶೀಲನಾ ಅರ್ಜಿ ಹಾಕಬೇಕೆ ಎನ್ನುವ ಆಯ್ಕೆ ನಮ್ಮ ಮುಂದಿದೆ. ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡದೆ ಚುನಾವಣೆಗೆ ಹೋಗಲು ಸಾಧ್ಯವಿಲ್ಲ ಎಂದಿದ್ದರು.