ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ಸುಳ್ಳು ಕ್ಯಾಂಪೇನ್ ಶುರು ಮಾಡಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸೇರಿದಂತೆ ಹಲವರು ಅಭಿವೃದ್ಧಿಗೆ ಹಣ ಇಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಬೆಂಗಳೂರು(ಫೆ.14): ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಅರೆಬರೆ ಪೂರೈಸಿ ಈಗ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.
ಮಂಗಳವಾರ ರಾಜ್ಯ ಬಿಜೆಪಿ ಕಚೇರಿಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ಸುಳ್ಳು ಕ್ಯಾಂಪೇನ್ ಶುರು ಮಾಡಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸೇರಿದಂತೆ ಹಲವರು ಅಭಿವೃದ್ಧಿಗೆ ಹಣ ಇಲ್ಲ ಎಂದು ಹೇಳಿದ್ದಾರೆ. ಪೂರ್ವ ಯೋಜನೆ ಇಲ್ಲದೆ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಈಗ ಅರೆಬರೆ ಪೂರೈಸಿದಂತೆ ತೋರಿಸಿ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ವಿರುದ್ಧ ಆರೋಪಿಸಲಾಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ವೈಫಲ್ಯ ಮುಚ್ಚಿಡ್ಡಲು ದಿಲ್ಲಿಯಲ್ಲಿ ಪ್ರತಿಭಟನೆ: ಸಚಿವ ಪ್ರಲ್ಹಾದ್ ಜೋಶಿ
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ 2004ರಿಂದ 2014ರ ವರೆಗೆ ರಾಜ್ಯಕ್ಕೆ 60 ಸಾವಿರ ಕೋಟಿ ರು. ಅನುದಾನ ನೀಡಲಾಗಿತ್ತು. ಆದರೆ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ ರಾಜ್ಯಕ್ಕೆ 2.36 ಲಕ್ಷ ಕೋಟಿ ರು. ಅನುದಾನ ನೀಡಿದೆ. ಯುಪಿಎ ಅವಧಿಯ ಐದಾರು ಪಟ್ಟು ಹೆಚ್ಚು ತೆರಿಗೆಯನ್ನು ರಾಜ್ಯಕ್ಕೆ ನೀಡಲಾಗಿದೆ. ಜಿಎಸ್‌ಟಿ ಪರಿಹಾರ ನಯಾ ಪೈಸೆ ಬಾಕಿ ಇಲ್ಲ. ಹೀಗಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರನ್ನು ಅಭಿನಂದಿಸಬೇಕೋ ಅಥವಾ ಟೀಕಿಸಬೇಕೋ ಎಂದು ಪ್ರಶ್ನಿಸಿದರು.
ಯುಪಿಎ ಎರಡು ಅವಧಿಯಲ್ಲಿ ರಾಜ್ಯಕ್ಕೆ ಎನ್‌ಡಿಆರ್ ಎಫ್ ನಿಧಿಯಿಂದ 3,655 ಸಾವಿರ ಕೋಟಿ ರು. ನೀಡಲಾಗಿತ್ತು. ಆದರೆ, ಕಳೆದ 10 ವರ್ಷಗಳಲ್ಲಿ 12,542 ಸಾವಿರ ಕೋಟಿ ರು. ನೀಡಲಾಗಿದೆ. ಆದರೆ, ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ವಿರುದ್ಧ ಸುಳ್ಳು ಮಾಹಿತಿ ನೀಡುವ ಕ್ಯಾಂಪೇನ್ ಶುರು ಮಾಡಿದ್ದಾರೆ. ಹೀಗಾಗಿ ಇವರನ್ನು ಸುಳ್ಳು ರಾಮಯ್ಯ ಎನ್ನಬೇಕು. ಜನಕ್ಕೆ ನೀಡಿದ ಭರವಸೆ ಪೂರೈಸಲು ಸಾಧ್ಯವಾಗಿಲ್ಲ. ಇನ್ನು ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಗುಂಪುಗಳ ನಡುವಿನ ಜಗಳವನ್ನು ಬೇರೆಡೆಗೆ ತಿರುಗಿಸಲು ಈ ರೀತಿ ನಾಟಕ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಕೇಂದ್ರ ಯೋಜನೆಗಳನ್ನು ತಮ್ಮದೇ ಎಂದು ಸುಳ್ಳು ಹೇಳುತ್ತಿದ್ದಾರೆ. ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿರುವ ವ್ಯಕ್ತಿ ಈ ರೀತಿಯ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನ ತಕ್ಕಪಾಠ ಕಲಿಸಲಿದ್ದಾರೆ ಎಂದರು.
