Asianet Suvarna News Asianet Suvarna News

ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಎಂ. ರಘುಪತಿ ನಿಧನ!

* ಮಾಜಿ ಸಚಿವ  ಎಂ. ರಘುಪತಿ ನಿಧನ

* 1976-1982ರಲ್ಲಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಎಂ ರಘುಪತಿ

* ಜನತಾ ಪರಿವಾರದ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರು

Karnataka Former Minister Minister M Raghupati Dies
Author
Bangalore, First Published Jun 18, 2022, 9:02 AM IST | Last Updated Jun 18, 2022, 9:02 AM IST

ಬೆಂಗಳೂರು(ಜು.18) ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಎಂ. ರಘುಪತಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ತಮ್ಮ ಮಲ್ಲೇಶ್ವರಂನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಿನ ಯಶವಂತಪುರದಲ್ಲಿ ಜನಿಸಿದ್ದ ರಘುಪತಿಯವರು, ಜನತಾ ಪರಿವಾರದಿಂದ ಮಲ್ಲೇಶ್ವರಂ ಮತ್ತು ಶಿವಾಜಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾದ್ದರು. ಬಳಿಕ 1976-1982ರಲ್ಲಿ ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 

ಜನತಾ ಪರಿವಾರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ರಘುಪತಿ ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಟಿ ರಾಮ ರಾವ್‌ಗೆ ಆತ್ಮೀಯರಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದರು. ಇನ್ನು ಇಂದು ಮುಂಜಾನೆ ಅಗಲಿದ ಎಂ.ರಘುಪತಿ ಪಾರ್ಥೀವ ಶರೀರವನ್ನು ಅವರ ಮಲ್ಲೇಶ್ವರಂ ನಿವಾಸದಲ್ಲಿ ಇರಿಸಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಭಾನುವಾರ ಬೆಳಗ್ಗೆ ಅಂತಿಮ ವಿಧಿವಿಧಾನ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ.

ರಾಜಕೀಯ ಬದುಕು

ಶಾಲಾ ದಿನಗಳಲ್ಲಿ ಕ್ರೀಡಾ ಚಟುವಟಿಗಳಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಇವರು 1969 ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧಿವೇಶನದಲ್ಲಿ (ರಿಕ್ವಿಸಿಷನ್ ಮೀಟಿಂಗ್) ಭಾಗವಹಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. 1969ರಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದರು. 1970 ರಲ್ಲಿ N.S.U.I (ಕರ್ನಾಟಕ) ಸಂಸ್ಥಾಪಕ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು. ಬಳಿಕ ಎಕ್ಸ್‌ಪೋ 70 ಗೆ ಭೇಟಿ ನೀಡಲು ಆಯ್ಕೆಯಾದ ವಿದ್ಯಾರ್ಥಿ ತಂಡದ ಮುಂದಾಳತ್ವ ವಹಿಸಿದ್ದರು. ಅಲ್ಲದೇ 1970 ರಲ್ಲಿ 7 ದಿನಗಳ ಕಾಲ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

ವಿದ್ಯಾರ್ಥಿಗಳ ಕಲ್ಯಾಣ ಯೋಜನೆಗಳಿಗಾಗಿ ಭಾಗವಹಿಸಿದ ವಿದ್ಯಾರ್ಥಿಗಳ ಆಂದೋಲನದ ಮುಂದಾಳತ್ವವನ್ನೂ ಅವರು ವಹಿಸಿದ್ದರು. ಇದರ ಪರಿಣಾಮವಾಗಿಯೇ ‘ಜಾನ್ ಮಥಾಯ್’ ಸಮಿತಿಯನ್ನು ಸರ್ಕಾರವು 1971 ರಲ್ಲಿ ನೇಮಿಸಿತು. ಬಳಿಕ 1973ರಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾದರು ಹಾಗೂ 1974 ರಲ್ಲಿ 'ಕಾಂಗ್ರೆಸ್ ಪ್ರದರ್ಶನ' ಕಾರ್ಯದರ್ಶಿಯಾಗಿದರು. ತದ ನಂತರ 1975ರಲ್ಲಿ ಭಾರತೀಯ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. 
 

Latest Videos
Follow Us:
Download App:
  • android
  • ios