ಮೋದಿ, ಶಾ ಆಟ ನಡೆಯಲ್ಲ: ‘ಮಹಾ’ ಅಖಾಡದಲ್ಲಿ ಸಿದ್ದು ಕಿಡಿ!
ಮೋದಿ, ಶಾ ಆಟ ನಡೆಯಲ್ಲ: ‘ಮಹಾ’ ಅಖಾಡದಲ್ಲಿ ಸಿದ್ದು ಕಿಡಿ| ಆರ್ಥಿಕಾಭಿವೃದ್ಧಿ ಬಗ್ಗೆ ಚರ್ಚೆಯಾಗಲಿ ಎಂದ ಮಾಜಿ ಸಿಎಂ| ಮಹಾ ಚುನಾವಣೆ ಪ್ರಚಾರದಲ್ಲಿ ಸಿದ್ದರಾಮಯ್ಯ ಪ್ರಚಾರ
ವಿಜಯಪುರ[ಅ.18]: ಪ್ರತಿ ಚುನಾವಣೆಗಳಲ್ಲಿ ಭಾವನಾತ್ಮಕ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಚುನಾವಣೆ ಗೆಲ್ಲುವ ಮೋದಿ, ಅಮಿತ್ ಶಾ ಆಟ ಈ ಬಾರಿ ನಡೆಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಜತ್ತ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಪರ ಗುರುವಾರ ಉಮದಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆಗಳಲ್ಲಿ ಬಡತನ ನಿವಾರಣೆ, ರೈತರಿಗೆ ನೀರು, ಯುವಕರಿಗೆ ಉದ್ಯೋಗ, ಆರ್ಥಿಕ ಅಭಿವೃದ್ಧಿ ಚರ್ಚೆಯೇ ವಿಷಯಗಳಾಗಬೇಕು. ಆದರೆ ಪ್ರತಿ ಚುನಾವಣೆಗಳಲ್ಲಿ ದೇಶದ ಜನರ ಭಾವನಾತ್ಮಕ ವಿಚಾರಗಳನ್ನು ಕೆದಕಿ ಮುಂದೆ ತಂದು, ಬಿಜೆಪಿಯವರು ಗೆಲವು ಸಾಧಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಳೆದ ಚುನಾವಣೆ ಸಂದರ್ಭದಲ್ಲಿ ದೇವೇಂದ್ರ ಫಡ್ನವೀಸ್ ಇಂದ್ರಲೋಕವನ್ನೇ ಸೃಷ್ಟಿಸುತ್ತೇನೆ ಎಂದು ಹೇಳಿದ್ದರು. ಇಲ್ಲಿ ಇಂದ್ರಲೋಕ ಆಗಿದೆಯೇ ಎಂದು ಪ್ರಶ್ನಿಸಿದ ಅವರು, ಮೋದಿಯವರು ಸ್ವರ್ಗ ಸೃಷ್ಟಿಮಾಡುತ್ತೇನೆ ಎನ್ನುತ್ತಾರೆ. ಇವರ ಆಡಳಿತ ವೈಖರಿಯಿಂದ ಸ್ವರ್ಗ ಹಾಗಿರಲಿ, ನಮ್ಮ ಜನರಿಗೆ ನರಕ ಬಾರದಿರಲಿ ಎಂದು ಬೇಡಿಕೊಳ್ಳುವಂತಾಗಿದೆ ಎಂದು ವ್ಯಂಗ್ಯವಾಡಿದರು.
ಕರ್ನಾಟಕದಲ್ಲಿ ನಾನು 5 ವರ್ಷ ಮುಖ್ಯಮಂತ್ರಿಗಳಾಗಿದ್ದಾಗ ಭಾಷೆ, ಜಾತಿ, ಕೋಮು ಆಧರಿತ ಸಂಘರ್ಷಗಳು ನಡೆದಿಲ್ಲ. ಸರ್ವರನ್ನೂ ಸಮನಾಗಿ ಕಾಣುವುದು ಕಾಂಗ್ರೆಸ್ ತತ್ವದ ಸಿದ್ಧಾಂತ. ಕರ್ನಾಟಕದಲ್ಲಿ ಮರಾಠಿಗರು, ಮಹಾರಾಷ್ಟ್ರದಲ್ಲಿನ ಕನ್ನಡಿಗರು ಸ್ಥಳೀಯರೊಂದಿಗೆ ಸಹೋದರತೆ ಸಾಧಿಸಿದರೆ ಮಾತ್ರ ಆಯಾ ಭಾಗಗಳು ಅಭಿವೃದ್ಧಿಯಾಗುತ್ತವೆ ಎಂದರು.