ಬೆಂಗಳೂರು(ಜು.20): ಬಹುಶ: ಕರ್ನಾಟಕ ವಿಧಾನಸಭೆ ಈಗ ಅನುಭವಿಸುತ್ತಿರುವಷ್ಟು ನೋವು, ಸಂಕಟ ಹಿಂದೆಂದೂ ಅನುಭವಿಸಿರಲಾರದು.

ಘಟಾನುಘಟಿ ಸಂಸದೀಯ ಪಟುಗಳನ್ನು ಒಡಲಲಿಟ್ಟುಕೊಂಡಿದ್ದ ವಿಧಾನಸಭೆ, ಸುಭದ್ರತೆಯ ಭಾವನೆಯಲ್ಲಿ ಸುಖವಾಗಿತ್ತು. ರಾಜಕೀಯದ ಹೊರತಾಗಿಯೂ ಈ ನಾಯಕರು ತನ್ನ ಘನತೆ ಕಾಪಾಡಲಿದ್ದಾರೆ ಎಂಬ ಅದಮ್ಯ ವಿಶ್ವಾಸದಲ್ಲಿ ನಿದ್ರಿಸುತ್ತಿತ್ತು.

ಆದರೆ ಈಗ ಕಾಲ ಬದಲಾಗಿದೆ. ವಿಧಾನಸಭೆಯ ಮೊಗಸಾಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಆ ಘಟಾನುಘಟಿ ನಾಯಕರೆಲ್ಲಾ ಈಗ ಮರೆಯಾಗಿದ್ದಾರೆ. ಅಂತಹ ನಾಯಕರನ್ನು ಆರಿಸಿ ಕಳುಹಿಸುತ್ತಿದ್ದ ಮತದಾರ ಪೀಳಿಗೆಯೂ ಈಗ ಮರೆಯಾಗಿದೆ.

ಹೀಗಾಗಿ ವಿಧಾನಸಭೆ ಮೊಗಸಾಲೆಯಲ್ಲಿ ಕಾಣುವ ಜನಪ್ರತಿನಿಧಿಗಳಲ್ಲಿ ಬಹುತೇಕರು ವಿಧಾನಸಭೆಯ ಅಸ್ಮಿತೆಯನ್ನು ಬದಿಗಿರಿಸಿ ತಮ್ಮ ಜೇಬು ತುಂಬಿಸಿಕೊಳ್ಳಲು ಹಾತೋರೆಯುವ ಬಕಪಕ್ಷಿಗಳು.

ಇದೇ ಕಾರಣಕ್ಕೆ ರಾಜ್ಯ ವಿಧಾನಸಭೆ ಆಗಗ ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿರುತ್ತದೆ. ಹಿಂದೆಲ್ಲಾ 5 ವರ್ಷ ನಾನು ಸುರಕ್ಷಿತ ಎಂದು ಬೀಗುತ್ತಿದ್ದ ವಿಧಾನಸಭೆ ಇದೀಗ ವರ್ಷ ವರ್ಷಕ್ಕೂ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುವುದು ನೋಡಿ ಅಳುತ್ತಿದೆ.

ಕೇವಲ ಒಂದುವರೆ ವರ್ಷದ ಹಿಂದೆ ಜನಾಧಿಕಾರ(?) ಪಡೆದ ಸರ್ಕಾರವೊಂದನ್ನು ಸ್ವಾಗತಿಸಿದ್ದ ವಿಧಾನಸಭೆ ಇದೀಗ ಅದರ ನಿರ್ಗಮನ ಕಾಣುವ ಅನಿವಾರ್ಯತೆಗೆ ಸಿಲುಕಿದೆ. 

ಆಡಳಿತ ಪಕ್ಷದ ಶಾಸಕರ ರಾಜೀನಾಮೆಯಿಂದ ಬಹುಮತ ಕಳೆದುಕೊಂಡಿರುವ ರಾಜ್ಯ ಸಮ್ಮಿಶ್ರ ಸರ್ಕಾರ ಇದೇ ಸೋಮವಾರ(ಜು22)ದಂದು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಬೇಕಿದೆ. ವಿಶ್ವಾಸಮತದ ಹಣೆಬರಹ ಏನಾಗಲಿದೆ ಎಂಬುದು ರಾಜ್ಯದ ಪ್ರತಿಯೊಬ್ಬರಿಗೂ ಗೊತ್ತಿರುವ ಸಂಗತಿ.

ಬಡಿದಾಡಿ ಅಧಿಕಾರಕ್ಕೇರಿದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ, ಇದೀಗ ನಿರ್ಗಮಿಸುವ ಹೊಸ್ತಿಲಲ್ಲಿದೆ. ಮುಂದೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬರುವುದೋ, ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವುದೋ ಎಂಬ ಪ್ರಶ್ನೆಗೆ ಕಾಲವೇ ಉತ್ತರ ಹೇಳಬೇಕು.

ಆದರೆ ವಿಶ್ವಾಸಮತಕ್ಕಾಗಿ ಮೈತ್ರಿ ಸರ್ಕಾರ ತೆಗೆದುಕೊಳ್ಳುತ್ತಿರುವ ಸಮಯ ಕಂಡು ವಿಪಕ್ಷ ಬಿಜೆಪಿ ಮಾತ್ರವಲ್ಲ ರಾಜ್ಯದ ಜನರೂ  ರೋಸಿ ಹೋಗಿದ್ದಾರೆ. ಸದನದಲ್ಲಿ ವಿಶ್ವಾಸಮತ ಯಾಚಿಸದೇ ಕಾಲಹರಣ ಮಾಡುತ್ತಿರುವ ಸರ್ಕಾರದ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ.

ಸದ್ಯ ವಿಶ್ವಾಸಮತ ಯಾಚನೆ ಸೋಮವಾರಕ್ಕೆ ಮುಂದೂಡಲಾಗಿದ್ದು, ಅಂದಾದರೂ ಸಿಎಂ ವಿಶ್ವಾಸಮತ ಯಾಚಿಸುವ ಮೂಲಕ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲಿದ್ದಾರಾ ಕಾದು ನೋಡಬೇಕಿದೆ. 

ಆದರೆ ವಿಶ್ವಾಸಮತ ಯಾಚನೆ ಮುಂದೂಡುತ್ತಿರುವ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಕೇವಲ ಒಂದುವರೆ ವರ್ಷದ ಹಿಂದೆ ಬಿಜೆಪಿ ವಿಶ್ವಾಸಮತ ಯಾಚಿಸುವ ವೇಳೆ ಹೇಗೆಲ್ಲಾ ನಡೆದುಕೊಂಡಿತ್ತು, ಸುಪ್ರೀಂಕೋರ್ಟ್ ಮೊರೆ ಹೋಗಿ ಹೇಗೆ ಯಡಿಯೂರಪ್ಪ ಅವರನ್ನು ಕಟ್ಟಿ ಹಾಕಿತ್ತು ಎಂಬುದರ ಮೆಲುಕು ಹಾಕುವುದು ಅವಶ್ಯ. 

ರಾಜ್ಯ ರಾಜಕಾರಣದ ಹಿನ್ನೋಟ:

2018ರಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆದು ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ ಅಧಿಕಾರಕ್ಕೇರಲು ಬೇಕಾದ ಅಗತ್ಯ ಸಂಖ್ಯಾಬಲ ಇರಲಿಲ್ಲವಾದರೂ, ಸಂಖ್ಯಾಬಲ ಗಿಟ್ಟಿಸುವ ಭರವಸೆಯಲ್ಲಿ ರಾಜ್ಯಪಾಲರ ಮುಂದೆ ಸರ್ಕಾರ ರಚಿಸುವ ಹಕ್ಕು ಮಂಡಿಸಿತು.

ಅದರಂತೆ ಬಿಜೆಪಿಗೆ ಸರ್ಕಾರ ರಚಿಸಲು ಅನುಮತಿ ನೀಡಿದ ರಾಜ್ಯಪಾಲರು ವಿಶ್ವಾಸಮತ ಯಾಚಿಸಲು 15 ದಿನಗಳ ಕಾಲಾವಕಾಶ ನೀಡಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್-ಜೆಡಿಎಸ್, ತಮ್ಮ ಬಳಿ ಅಗತ್ಯ ಸಂಖ್ಯಾಬಲವಿದ್ದು, ತಮಗೆ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ಕೋರಿ ರಾಜ್ಯಪಾಲರ ಮುಂದೆ ಹಕ್ಕು ಮಂಡಿಸಿತು.

ಅಲ್ಲದೇ ಯಡಿಯೂರಪ್ಪ ಅವರಿಗೆ ವಿಶ್ವಾಸಮತ ಯಾಚಿಸಲು 15 ದಿನಗಳ ಕಾಲಾವಕಾಶದ ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಸುಪ್ರೀಂಕೋರ್ಟ್’ನಲ್ಲಿ ಅರ್ಜಿ ಸಲ್ಲಿಸಲಾಯಿತು.

ಅದರಂತೆ 18-5-2018ರಂದು  ಸುಪ್ರೀಂಕೋರ್ಟ್’ನಲ್ಲಿ ವಿಚಾರಣೆ ನಡೆದು ರಾಜ್ಯಪಾಲರ 15 ದಿನಗಳ ಕಾಲಾವಕಾಶವನ್ನು ಅನೂರ್ಜಿತಗೊಳಿಸಲಾಯಿತು.

ಬಿಜೆಪಿ ಪರ ಮುಕುಲ್ ರೋಹ್ಟಗಿ ವಾದಿಸಿದರೆ, ಕಾಂಗ್ರೆಸ್-ಜೆಡಿಎಸ್ ಪರ ಅಭಿಷೇಕ್ ಸಿಂಘ್ವಿ, ಕಪಿಲ್ ಸಿಬಲ್ ಸುಪ್ರೀಂಕೋರ್ಟ್ ಮುಂದೆ ವಾದ ಮಂಡಿಸಿದ್ದರು.

ಎರಡೂ ಕಡೆಯ ವಾದ ಆಲಿಸಿದ್ದ ನ್ಯಾ.ಎಕೆ ಸಿಕ್ರಿ ನೇತೃತ್ವದ ತ್ರಿಸದಸ್ಯ ಪೀಠ ಕೂಡಲೇ ವಿಶ್ವಾಸಮತ ಯಾಚಿಸುವಂತೆ ಬಿಎಸ್. ಯಡಿಯೂರಪ್ಪ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಹೀಗಾಗಿ ರಾಜ್ಯಪಾಲರ ಮುಂದೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಬಿಎಸ್. ಯಡಿಯೂರಪ್ಪ ಸದನದಲ್ಲಿ ಬಹುಮತ ಪಡೆಯದ ಹಿನ್ನೆಲೆಯಲ್ಲಿ ವಿಶ್ವಾಸಮತವನ್ನೂ ಯಾಚಿಸದೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಅಲ್ಲಿಯವೆಗೂ ಬಿಜೆಪಿಯ ಆಪರೇಶನ್ ಕಮಲಕ್ಕೆ ಹೆದರಿ ರೆಸಾರ್ಟ್’ನಲ್ಲಿ ಮುಖ ಮುಚ್ಚಿಕೊಂಡಿದ್ದ ಕಾಂಗ್ರೆಸ್-ಜೆಡಿಎಸ್ ಶಾಸಕರು, ಅಂದು ಇಸ್ತ್ರಿ ಮಾಡಿದ ಬಟ್ಟೆ ಧರಿಸಿ, ರಾಜಭವನಕ್ಕೆ ಬಂದು ಅಧಿಕಾರ ಸ್ವೀಕರಿಸಿದರು. 

ಹೀಗೆ ಅಸ್ತಿತ್ವಕ್ಕೆ ಬಂದ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ಈ ಒಂದೂವರೆ ವರ್ಷದಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿದೆ ಎಂಬುದು ಮತ್ತೊಮ್ಮೆ ಚರ್ಚೆ ಮಾಡುವ ವಿಚಾರ. ಆದರೆ ಸದ್ಯ ಈ ಸರ್ಕಾರ ನಿರ್ಗಮನದ ಹಾದಿಯಲ್ಲಿದೆ. 

ಆದರೆ ವಿಶ್ವಾಸಮತ ಯಾಚನೆಗೆ ಅಂದು ಪಟ್ಟು ಹಿಡಿದು, ಇಂದು ವಿಳಂಬ ಧೋರಣೆ ಅನುಸರಿಸುತ್ತಿರುವ ಈ ಸರ್ಕಾರದ ನಡೆ ಮಾತ್ರ ಪ್ರಶ್ನಾರ್ಹ.