ಬೆಂಗಳೂರು, (ಏ.29): ಕರ್ನಾಟಕ ಉಪಮುಖ್ಯಮಂತ್ರಿ ಸೇರಿದಂತೆ ಐವರು ಸಚಿವರಿಗೆ ಕೊರೋನಾ ಭೀತಿ ಶುರುವಾಗಿದೆ.

ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ, ವೈದ್ಯಕೀಯ ಸಚಿವ ಡಾ. ಕೆ. ಸುಧಾಕರ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೇರಿದಂತೆ ಐವರಿಗೆ ಕೊರೋನಾ ಭಯ ಶುರುವಾಗಿದ್ದು, ಪರೀಕ್ಷೆಗೆ ಒಳಗಾಗಿದ್ದರು.

ಕೊರೋನಾ ಭೀತಿ: ಕರ್ನಾಟಕದ ಇಬ್ಬರು ಸಚಿವರು, ಓರ್ವ ಶಾಸಕ ಬಚಾವ್

ಅದೃಷ್ವಶಾತ್ ಐವರು ಸಚಿವರ ಪೈಕಿ ಬಸವರಾಜ್ ಬೊಮ್ಮಾಯಿ ಹಾಗೂ ಡಿಸಿಎಂ ಅಶ್ವಥ್ ನಾರಾಯಣ ಅವರ ವರದಿ ನೆಗೆಟಿವ್ ಬಂದಿದ್ದು, ಇನ್ನು ಕೆಲವ ಸಚಿವರ ವರದಿ ಬರಬೇಕಿದೆ.

ಆದರೂ ಈ ಐವರು ಸೆಲ್ಫ್ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಈ ಬಗ್ಗೆ ಸಚಿವರಾದ ಸುಧಾಕರ್ ಮತ್ತು ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಕನ್ನಡ ಖಾಸಗಿ ಸುದ್ದಿ ವಾಹಿನಿಯ ಕ್ಯಾಮರಾಮನ್‌ಗೆ ಕೊರೋನಾ ಪಾಸಿಟಿವ್ ಇರುವುದು ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಹಲವರನ್ನು ಆರೋಗ್ಯ ಇಲಾಖೆ ಕ್ವಾರಂಟೈನ್‌ಗೆ ಒಳಪಡಿಸಿದೆ. ಇದರ ಭಯದಿಂದ ಈ ಐವರು ಸಚಿವರೂ ಸಹ ಪರೀಕ್ಷೆಗೆ ಒಳಗಾಗಿದ್ದಲ್ಲದೇ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಕೋವಿಡ್19 ಪಾಸಿಟಿವ್ ಬಂದಿರುವ ಟಿವಿ ಪತ್ರಕರ್ತರ ಜೊತೆ ನಾನು ಕೂಡ ಸಂಪರ್ಕಕ್ಕೆ ಬಂದಿರುವ ವಿಷಯ ಗೊತ್ತಾದ ಹಿನ್ನಲೆಯಲ್ಲಿ, ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದೇನೆ, ನೆಗೆಟಿವ್ ಬಂದಿದೆ. ಹಾಗಿದ್ದರೂ, ಮುನ್ನೆಚ್ಚರಿಕೆಯಿಂದ 7 ದಿನ ನನ್ನ ಮನೆಯಲ್ಲೆ ಕ್ವಾರಂಟೈನ್ ನಲ್ಲಿರಲು ನಿರ್ಧರಿಸಿದ್ದೇನೆ, ಅಲ್ಲಿಂದಲೇ ಕರ್ತವ್ಯವನ್ನು  ನಿರ್ವಹಿಸುತ್ತೇನೆ ಎಂದು ಸುಧಾಕರ್ ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದ್ದಾರೆ.