ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ‘ಮರು ಚಿಂತನೆ’ ನಡೆಸುವಂತೆ ನೀಡಿದ ಸೂಚನೆ ಹಿನ್ನೆಲೆಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವ ಹಾಗೂ ವರುಣ ಕ್ಷೇತ್ರದತ್ತ ಮುಖ ಮಾಡುವ ಸಾಧ್ಯತೆಯಿದೆ.  

ಬೆಂಗಳೂರು (ಮಾ.19): ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ‘ಮರು ಚಿಂತನೆ’ ನಡೆಸುವಂತೆ ನೀಡಿದ ಸೂಚನೆ ಹಿನ್ನೆಲೆಯಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವ ಹಾಗೂ ವರುಣ ಕ್ಷೇತ್ರದತ್ತ ಮುಖ ಮಾಡುವ ಸಾಧ್ಯತೆಯಿದೆ. ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆ ವೇಳೆ ರಾಹುಲ್‌ ಗಾಂಧಿ ಅವರೇ ಖುದ್ದಾಗಿ ಕೋಲಾರ ಕ್ಷೇತ್ರ ಸುರಕ್ಷಿತವಲ್ಲ ಎಂಬ ವರದಿಗಳಿವೆ. ಈ ಹಿನ್ನೆಲೆಯಲ್ಲಿ ನೀವು ಸುರಕ್ಷಿತ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಸೂಕ್ತ ಎಂದು ನೇರವಾಗಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. 

ಈ ಸಲಹೆ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಸ್ಪರ್ಧಿಸುವ ಬಗ್ಗೆ ಮರು ಚಿಂತನೆ ನಡೆಸುವ ಇಕ್ಕಟ್ಟಿಗೆ ಸಿದ್ದರಾಮಯ್ಯ ಸಿಲುಕಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಕೋಲಾರ ಜಿಲ್ಲೆಯ ಪ್ರಮುಖ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ಕೋಲಾರದಿಂದಲೇ ಸ್ಪರ್ಧಿಸಬೇಕು ಎಂಬ ಒತ್ತಡವನ್ನು ಸಿದ್ದರಾಮಯ್ಯ ಅವರ ಮೇಲೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಆದರೆ, ರಾಹುಲ್‌ ಗಾಂಧಿ ಅವರೇ ನೇರ ಸೂಚನೆ ನೀಡಿರುವುದರಿಂದ ಕೋಲಾರ ನಾಯಕರ ಒತ್ತಡಕ್ಕೆ ಸಿದ್ದರಾಮಯ್ಯ ಮಣಿಯುವುದು ಕಷ್ಟಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಮೈಸೂರು ಜಿಲ್ಲೆಯ ವರುಣದಲ್ಲಿ ಈಗ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಶಾಸಕರಾಗಿದ್ದಾರೆ. ಇದು ಈ ಹಿಂದೆ ಸಿದ್ದರಾಮಯ್ಯ ಪ್ರತಿನಿಧಿಸಿದ್ದ ಕ್ಷೇತ್ರವಾಗಿದೆ.

ಪರವಾನಗಿ ಪಡೆಯದೆ ಬ್ಯಾನರ್ಸ್, ಫ್ಲೆಕ್ಸ್, ಪೋಸ್ಟರ್ ಅಂಟಿಸುವುದು ನಿಷೇಧ: ಜಿಲ್ಲಾಧಿಕಾರಿ ರಮೇಶ್

ಸಿಇಸಿಯಲ್ಲಿ ಏನಾಯ್ತು?: ರಾಜ್ಯ ನಾಯಕತ್ವ ಕಳುಹಿಸಿದ್ದ ಒಂಟಿ ಹೆಸರಿನ ಕ್ಷೇತ್ರಗಳ ಬಗ್ಗೆ ರಾಹುಲ್‌ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತತ್ವದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚೆ ನಡೆಯುವಾಗ ಕೋಲಾರ ವಿಚಾರ ಪ್ರಸ್ತಾಪವಾಗಿದೆ. ಏಕೆಂದರೆ, ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರ ಒಂಟಿ ಹೆಸರನ್ನು ರಾಜ್ಯ ನಾಯಕತ್ವ ಶಿಫಾರಸು ಮಾಡಿತ್ತು. ಈ ವಿಷಯ ಪ್ರಸ್ತಾಪವಾದಾಗ ಸಿದ್ದರಾಮಯ್ಯ ಅವರು, ‘ಈ ಬಗ್ಗೆ ನನ್ನ ಕೆಲವು ಭಾವನೆಗಳನ್ನು ತಿಳಿಸುವುದಿದೆ’ ಎಂದು ಹೇಳಿದ್ದು, ಅದಕ್ಕೆ ರಾಹುಲ್‌ ಗಾಂಧಿ ಅವರು, ‘ಪಟ್ಟಿಯ ಬಗ್ಗೆ ಚರ್ಚೆ ಮುಗಿದ ನಂತರ ಪ್ರತ್ಯೇಕವಾಗಿ ಮಾತನಾಡೋಣ’ ಎಂದು ವಿಷಯವನ್ನು ಅಲ್ಲಿಗೆ ನಿಲ್ಲಿಸಿದರು ಎನ್ನಲಾಗಿದೆ.

ಅನಂತರ ಸಭೆ ಮುಕ್ತಾಯದ ಹಂತದಲ್ಲಿ ಉಳಿದ ನಾಯಕರಿಂದ ಪ್ರತ್ಯೇಕಗೊಂಡು ಸಿದ್ದರಾಮಯ್ಯ, ರಾಹುಲ್‌ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಕೆಲ ನಿಮಿಷಗಳ ಕಾಲ ನೇರಾನೇರ ಚರ್ಚೆ ನಡೆಸಿದ್ದಾರೆ. ಈ ಹಂತದಲ್ಲಿ ರಾಹುಲ್‌ ಗಾಂಧಿ ಅವರು, ‘ಕೋಲಾರ ಕ್ಷೇತ್ರ ಅಷ್ಟು ಸುರಕ್ಷಿತವಲ್ಲ ಎಂಬ ವರದಿಗಳಿವೆ. ಹೀಗಾಗಿ, ಸುರಕ್ಷಿತ ಕ್ಷೇತ್ರದಿಂದ ನೀವು ಸ್ಪರ್ಧಿಸಿ. ಒಂದು ವೇಳೆ ನೀವು ಕೋಲಾರದಿಂದಲೇ ಸ್ಪರ್ಧಿಸಿದರೆ ವಿರೋಧಿಗಳೆಲ್ಲ ಒಗ್ಗೂಡಿ ನೀವು ಆ ಕ್ಷೇತ್ರದ ಕಡೆ ಹೆಚ್ಚು ಗಮನ ಕೊಡುವಂತೆ ಹಾಗೂ ಅಲ್ಲಿಯೇ ನೆಲೆಯೂರುವಂತೆ ಮಾಡುವ ಸಾಧ್ಯತೆಯಿದೆ. ನೀವು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತವಾಗಿರುವವರು. ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಬೇಕಿದೆ. ಹೀಗಾಗಿ, ರಿಸ್‌್ಕ ಬೇಡ. ಕೋಲಾರ ಸ್ಪರ್ಧೆ ಬಗ್ಗೆ ಮರು ಚಿಂತನೆ ಮಾಡಿ’ ಎಂದು ಹೇಳಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ‘ಆಯ್ತು’ ಎಂದಿದ್ದಾರೆ.

2ನೇ ಸಭೆ: ಇದಾದ ನಂತರ ರಾಹುಲ್‌ ಗಾಂಧಿ ಸಭೆಯಿಂದ ತೆರಳಿದ್ದು, ನಂತರ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ 2ನೇ ಸಭೆ ನಡೆದಿದೆ. ಈ ಸಭೆಗೆ ಖುದ್ದು ಕಾಂಗ್ರೆಸ್‌ ಚುನಾವಣಾ ರಣನೀತಿ ತಜ್ಞ ಸುನೀಲ್‌ ಕುನುಗೋಲು ಅವರನ್ನು ಕರೆಸಿಕೊಳ್ಳಲಾಗಿತ್ತು. ಅಲ್ಲಿ ಸುನೀಲ್‌ ಅವರು, ‘ಸಿದ್ದರಾಮಯ್ಯ ಅವರಿಗೆ ಕೋಲಾರ ಏಕೆ ರಿಸ್ಕ್‌ ಕ್ಷೇತ್ರ? ಕೋಲಾರದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ನಡುವಿನ ಒಳ ಒಪ್ಪಂದ ಹಾಗೂ ಸ್ಥಳೀಯ ಜಾತಿ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಅವರಿಗೆ ಹೇಗೆ ಹಿನ್ನಡೆಯಾಗುವ ಸಾಧ್ಯತೆಯಿದೆ? ಈ ಹಿನ್ನಡೆಯಿದ್ದರೂ ಗೆಲ್ಲಲು ಸಿದ್ದರಾಮಯ್ಯ ಏನೇನು ಮಾಡಬೇಕಾಗುತ್ತದೆ?’ ಎಂಬುದನ್ನು ಸಾದ್ಯಂತವಾಗಿ ವಿವರಿಸಿದ್ದಾರೆ ಎನ್ನಲಾಗಿದೆ. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಕೋಲಾರ ಸ್ಪರ್ಧೆಯ ಬಗ್ಗೆ ಮರು ಚಿಂತನೆ ಆರಂಭಿಸಿದ್ದು, ಈ ಬಗ್ಗೆ ಆಪ್ತರು ಹಾಗೂ ಕೋಲಾರ ನಾಯಕರೊಂದಿಗೆ ಚರ್ಚಿಸಿ ಅನಂತರ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏನು ಕಾರಣ?
- ಕಾಂಗ್ರೆಸ್ಸಿನ ಚುನಾವಣಾ ಸಮಿತಿ ಸಭೆಯ ವೇಳೆ ಕೋಲಾರ ಪ್ರಸ್ತಾಪ
- ಕೋಲಾರದ ಬಗ್ಗೆ ಕೆಲವು ಭಾವನೆ ತಿಳಿಸಬೇಕು ಎಂದು ಹೇಳಿದ ಸಿದ್ದು
- ಆಮೇಲೆ ಮಾತನಾಡೋಣ ಎಂದು ಮೊಟಕುಗೊಳಿಸಿದ ರಾಹುಲ್‌ ಗಾಂಧಿ
- ಸಭೆಯ ಬಳಿಕ ಸಿದ್ದು, ರಾಹುಲ್‌, ಮಲ್ಲಿಕಾರ್ಜುನ ಖರ್ಗೆ ಪ್ರತ್ಯೇಕ ಚರ್ಚೆ
- ಈ ವೇಳೆ ಸಿದ್ದರಾಮಯ್ಯ ಅವರನ್ನುದ್ದೇಶಿಸಿ ರಾಹುಲ್‌ ಗಾಂಧಿ ಮಾತು
- ಕೋಲಾರ ಸುರಕ್ಷಿತವಲ್ಲ ಎಂಬ ವರದಿ ಇವೆ, ಸುರಕ್ಷಿತ ಕ್ಷೇತ್ರದಿಂದ ಸ್ಪರ್ಧಿಸಿ
- ನೀವು ಕೋಲಾರದಿಂದ ಸ್ಪರ್ಧಿಸಿದರೆ ವಿರೋಧಿಗಳೆಲ್ಲಾ ಒಂದಾಗಿಬಿಡುತ್ತಾರೆ
- ಅಂತಹ ಸಂದರ್ಭ ನೀವು ಅಲ್ಲಿಗೇ ಹೆಚ್ಚು ಸಮಯ ಕೊಡಬೇಕಾಗುತ್ತದೆ
- ಸಿಎಂ ಅಭ್ಯರ್ಥಿ ಅಂತ ಬಿಂಬಿತರಾದವರು ರಾಜ್ಯಾದ್ಯಂತ ಪ್ರವಾಸ ಮಾಡಬೇಕು
- ರಿಸ್ಕ್‌ ಬೇಡ, ಕೋಲಾರ ಬಗ್ಗೆ ಮರುಚಿಂತನೆ ನಡೆಸಿ ಎಂದು ರಾಹುಲ್‌ ಸಲಹೆ
- ಆಯ್ತು ಎಂದು ಒಪ್ಪಿಗೆ ನೀಡಿದ ಸಿದ್ದು. ಬೆಂಗಳೂರಲ್ಲಿ ಕೋಲಾರ ಮುಖಂಡರ ಸಭೆ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಅಸಲಿಮುಖ ಮತ್ತೊಮ್ಮೆ ಕಳಚಿ ಬಿದ್ದಿದೆ: ಅನಿತಾ ಕುಮಾ​ರ​ಸ್ವಾಮಿ ಟೀಕೆ

ವರದಿಯಲ್ಲೇನಿದೆ?
- ಕೋಲಾರ ನಗರದ ಪ್ರದೇಶದಲ್ಲಿ ಸಿದ್ದು ಪರ ಅಲೆ ಇದೆ, ಗ್ರಾಮೀಣ ಭಾಗದಲ್ಲಿ ಆ ರೀತಿ ಇಲ್ಲ
- ಹಳ್ಳಿ ಭಾಗದಲ್ಲಿ ಜೆಡಿಎಸ್‌, ಬಿಜೆಪಿ ಪ್ರಭಾವ ಇದೆ. ಆ ಪಕ್ಷಗಳ ನೆಟ್‌ವರ್ಕ್ ಬಲಯುತವಾಗಿದೆ
- ಕೆ.ಎಚ್‌.ಮುನಿಯಪ್ಪ, ಜಿ.ಪರಮೇಶ್ವರ್‌ ಸೋಲಿನ ಹಿಂದೆ ಸಿದ್ದು ಪಾತ್ರವಿದೆ ಎಂಬ ಭಾವನೆ ಇದೆ
- ಹೀಗಾಗಿ ಪರಿಶಿಷ್ಟ ಎಡ, ಬಲ ಎರಡು ಗುಂಪುಗಳಿಗೂ ಸಿದ್ದರಾಮಯ್ಯ ಬಗ್ಗೆ ಸಂಪೂರ್ಣ ಒಲವಿಲ್ಲ
- ಸದ್ಯ ಕೋಲಾರದಲ್ಲಿ ಕೆಲಸ ಮಾಡುತ್ತಿರುವ ನಾಯಕರಿಗೆ ಜನರ ಅಭಿಪ್ರಾಯ ರೂಪಿಸುವ ಕ್ಷಮತೆ ಇಲ್ಲ
- ಕೃಷ್ಣ ಬೈರೇಗೌಡ ಅವರು ಒಕ್ಕಲಿಗ ಮತ ಸೆಳೆಯಬಲ್ಲರು. ಆದರೆ ಅವರು ಹೆಚ್ಚು ಟೈಂ ಕೊಡಲಾಗದು
- ಕೆ.ಶ್ರೀನಿವಾಸಗೌಡ ವಿರುದ್ಧವಾದ ಅಲೆ ಇದೆ. ಕೋಲಾರದಲ್ಲಿ ಸಿದ್ದು ಪರ ಗಟ್ಟಿ ನಾಯಕರು ಬೇಕು
- ಇದಾಗದಿದ್ದ ಪಕ್ಷದಲ್ಲಿ ಸಿದ್ದರಾಮಯ್ಯ ಅವರೇ 15ರಿಂದ 20 ದಿನ ಕ್ಷೇತ್ರದಲ್ಲಿ ನೆಲೆ ನಿಲ್ಲಬೇಕು
- ಕಾಂಗ್ರೆಸ್‌ ಚುನಾವಣಾ ತಂತ್ರಗಾರ ಸುನೀಲ್‌ ಕುನಗೋಲು ತಂಡದಿಂದ 2 ಹಂತದ ವರದಿ ಸಲ್ಲಿಕೆ

ಕೋಲಾರದಿಂದ ನಾನು ಸ್ಪರ್ಧಿಸಿದರೆ ಸೋಲುವ ಸಾಧ್ಯತೆ ಇದೆ ಎಂದು ಸಮೀಕ್ಷಾ ವರದಿಗಳು ತಿಳಿಸಿವೆ ಎಂಬ ಸುದ್ದಿಗಳು ಸುಳ್ಳು. ಕೋಲಾರದಿಂದ ಸ್ಪರ್ಧಿಸುವ ಕುರಿತು ಚುನಾವಣಾ ಸಮಿತಿ ಸಭೆಯಲ್ಲಿ ಇನ್ನೂ ಇತ್ಯರ್ಥವಾಗಿಲ್ಲ. ಅಂತಿಮವಾಗಿ ಹೈಕಮಾಂಡ್‌ ಯಾವ ಕ್ಷೇತ್ರದಿಂದ ಸ್ಪರ್ಧಿಸಲು ಸೂಚಿಸುತ್ತದೆಯೋ ಅಲ್ಲಿಂದ ಕಣಕ್ಕೆ ಇಳಿಯುತ್ತೇನೆ. ಕೋಲಾರದಲ್ಲಿ ನನಗೆ ಹಿನ್ನಡೆಯಾಗುತ್ತದೆ, ಅಲ್ಲಿ ಸ್ಪರ್ಧಿಸಬೇಡಿ ಎಂದು ಯಾರೂ ಹೇಳಿಲ್ಲ. ಊಹಾಪೋಹಗಳಿಗೆ ಬೆಲೆ ಕೊಡಬೇಕಿಲ್ಲ.
- ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ