ರಾಜ್ಯದಲ್ಲೇ ಅತ್ಯಂತ ಹೆಚ್ಚು ಕಪ್ಪು ಮಣ್ಣು ಹೊಂದಿದ ಕ್ಷೇತ್ರಗಳಲ್ಲಿ ಒಂದಾಗಿರುವ ಕ್ಷೇತ್ರ ನವಲಗುಂದ. ಮಹದಾಯಿ ಹೋರಾಟ, ಬಂಡಾಯದ ನೆಲ ಎಂದೂ ಹೆಸರು ಪಡೆದಿರುವ ಕ್ಷೇತ್ರವಿದು. ಹೋರಾಟದ ವಿಷಯ ಬಂದರೆ ಸದಾ ಮುಂಚೂಣಿಯಲ್ಲಿರುವ ಕ್ಷೇತ್ರ. ಕಳೆದ ಏಳೆಂಟು ವರ್ಷದಿಂದ ಮಹದಾಯಿಗಾಗಿ ಇಲ್ಲಿ ನಿರಂತರ ಧರಣಿ ನಡೆಯುತ್ತಿರುವುದು ವಿಶೇಷ.

ಶಿವಾನಂದ ಗೊಂಬಿ

ಹುಬ್ಬಳ್ಳಿ (ಏ.4) : ರಾಜ್ಯದಲ್ಲೇ ಅತ್ಯಂತ ಹೆಚ್ಚು ಕಪ್ಪು ಮಣ್ಣು ಹೊಂದಿದ ಕ್ಷೇತ್ರಗಳಲ್ಲಿ ಒಂದಾಗಿರುವ ಕ್ಷೇತ್ರ ನವಲಗುಂದ. ಮಹದಾಯಿ ಹೋರಾಟ, ಬಂಡಾಯದ ನೆಲ ಎಂದೂ ಹೆಸರು ಪಡೆದಿರುವ ಕ್ಷೇತ್ರವಿದು. ಹೋರಾಟದ ವಿಷಯ ಬಂದರೆ ಸದಾ ಮುಂಚೂಣಿಯಲ್ಲಿರುವ ಕ್ಷೇತ್ರ. ಕಳೆದ ಏಳೆಂಟು ವರ್ಷದಿಂದ ಮಹದಾಯಿಗಾಗಿ ಇಲ್ಲಿ ನಿರಂತರ ಧರಣಿ ನಡೆಯುತ್ತಿರುವುದು ವಿಶೇಷ.

ಈ ಕ್ಷೇತ್ರವನ್ನು ಬಿಜೆಪಿ(BJP)ಯ ಶಂಕರ ಪಾಟೀಲ ಮುನೇನಕೊಪ್ಪ(Shankar patil munenakoppa) ಪ್ರತಿನಿಧಿಸುತ್ತಿದ್ದಾರೆ. ಇವರಿಂದ ಕ್ಷೇತ್ರವನ್ನು ಕಸಿದುಕೊಳ್ಳಲು ಕಾಂಗ್ರೆಸ್‌ ಇನ್ನಿಲ್ಲದ ಕಸರತ್ತು ನಡೆಸಿದೆ. ಅತ್ತ ಕ್ಷೇತ್ರ ಉಳಿಸಿಕೊಳ್ಳಬೇಕು ಎಂಬ ಹಂಬಲ ಬಿಜೆಪಿಯದ್ದು. ಆದರೆ ಎರಡೂ ಪಕ್ಷಗಳು ಈಗಿನಿಂದಲೇ ಚುನಾವಣೆ ತಯಾರಿಯಲ್ಲಿ ತೊಡಗಿವೆ.

ಕಳೆದುಕೊಂಡ ಹಾನಗಲ್‌ ಕ್ಷೇತ್ರವನ್ನು ಮತ್ತೆ ಪಡೆಯಬೇಕು: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ಕ್ಷೇತ್ರದಲ್ಲಿ ಈ ವರೆಗೆ ನಡೆದ 14 ಚುನಾವಣೆಗಳಲ್ಲಿ 9 ಬಾರಿ ಕಾಂಗ್ರೆಸ್‌, 3 ಬಾರಿ ಬಿಜೆಪಿ, ಒಂದು ಬಾರಿ ಜೆಡಿಎಸ್‌ ಗೆಲುವು ಕಂಡಿವೆ. ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಆದರೂ 2004ರಿಂದ ಈಚೆಗೆ ಕಾಂಗ್ರೆಸ್‌ ಇಲ್ಲಿ ಗೆಲುವು ಕಂಡಿಲ್ಲ. ಇತ್ತೀಚಿಗಂತೂ ಬಿಜೆಪಿ ಈ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದೆ. ಕಳೆದ ಚುನಾವಣೆ ವರೆಗೂ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮಧ್ಯೆ ತ್ರಿಕೋನ ಸ್ಪರ್ಧೆ ನಡೆಯುತ್ತಿತ್ತು. ಆದರೆ, ಕಳೆದ ವರ್ಷದ ವರೆಗೂ ಜೆಡಿಎಸ್‌ನಲ್ಲಿದ್ದ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ಕಾಂಗ್ರೆಸ್‌ ಸೇರಿದ್ದಾರೆ. ಹೀಗಾಗಿ, ಈ ಸಲ ಬಿಜೆಪಿ-ಕಾಂಗ್ರೆಸ್‌ ಮಧ್ಯೆ ನೇರಾನೇರ ಸ್ಪರ್ಧೆ ನಡೆಯಲಿದೆ.

ಮುನೇನಕೊಪ್ಪ-ಕೋನರಡ್ಡಿ:

ಹಾಲಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರೇ ಬಿಜೆಪಿ ಅಭ್ಯರ್ಥಿಯಾಗುವುದು ಖಚಿತ. ಮುನೇನಕೊಪ್ಪ 3 ಬಾರಿ ಚುನಾವಣೆ ಎದುರಿಸಿ ಎರಡು ಬಾರಿ ಗೆದ್ದವರು. ಸದ್ಯ ಅವರ ರಾಜಕೀಯ ಗುರು ಬಸವರಾಜ ಬೊಮ್ಮಾಯಿ(CM Basavaraj bommai) ನೇತೃತ್ವದ ಸಂಪುಟದಲ್ಲಿ ಸಚಿವರಾಗಿದ್ದಾರೆ. ಬೆಣ್ಣಿಹಳ್ಳ- ತುಪರಿಹಳ್ಳ ಸೇರಿದಂತೆ ಹಲವಾರು ಉತ್ತಮ ಕೆಲಸ ನಡೆಸಿ ಜನಮನ್ನಣೆ ಪಡೆದು ಹಿಡಿತ ಸಾಧಿಸಿದ್ದಾರೆ. ಜತೆಗೆ ಕಳಸಾ-ಬಂಡೂರಿ ಯೋಜನೆಗೂ ಡಿಪಿಆರ್‌ ಓಕೆ ಆಗಿ ಇದೀಗ ಟೆಂಡರ್‌ ಕೂಡ ಕರೆದಿರುವುದು ಇವರಿಗೆ ಪ್ಲಸ್‌ ಪಾಯಿಂಟ್‌.

ಕಾಂಗ್ರೆಸ್ಸಿನಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿದೊಡ್ಡದಿದೆ. ಮಾಜಿ ಸಚಿವ ಕೆ.ಎನ್‌. ಗಡ್ಡಿ, ಇತ್ತೀಚೆಗೆ ಜೆಡಿಎಸ್‌ನಿಂದ ಕಾಂಗ್ರೆಸ್ಸಿಗೆ ಬಂದಿರುವ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ, ಕಳೆದ ಬಾರಿ ಕಾಂಗ್ರೆಸ್‌ ಟಿಕೆಟ್‌ ಪಡೆದು ಪರಾಭವಗೊಂಡಿರುವ ವಿನೋದ ಅಸೂಟಿ, ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಸಂಬಂಧಿ ಹಾಗೂ ಜಿಪಂ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೇ ಪಾಟೀಲ, ಜಿಪಂ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, ಬಾಪುಗೌಡ ಪಾಟೀಲ, ರಾಜಶೇಖರ ಮೆಣಸಿನಕಾಯಿ, ಚಂಬಣ್ಣ ಹಾಳದೋಟರ ಹೀಗೆ ಎಂಟು ಜನರು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಆದರೆ ಕೋನರಡ್ಡಿ, ಅಸೂಟಿ ಕೊಂಚ ಮುಂಚೂಣಿಯಲ್ಲಿದ್ದಾರೆ. ಕೋನರಡ್ಡಿ ಅವರಿಗೆ ಟಿಕೆಟ್‌ ಸಿಗುವುದು ಪಕ್ಕಾ ಎನ್ನಲಾಗುತ್ತಿದೆ.

ಕೋನರಡ್ಡಿ ಜೆಡಿಎಸ್‌ ಬಿಟ್ಟಬಳಿಕ ಅಲ್ಲಿ ಹೇಳಿಕೊಳ್ಳುವಂತಹ ಗಟ್ಟಿಕುಳ ಇಲ್ಲ. ಆದರೂ ಪಕ್ಷದ ಮತ ಒಗ್ಗೂಟಿಸಲು ಪ್ರಕಾಶ ಅಂಗಡಿ, ಶ್ರೀಶೈಲ ಮೂಲಿಮನಿ, ಮುಸ್ತಾಫ್‌ ಕುನ್ನಿಬಾವಿ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಆಮ್‌ ಆದ್ಮಿ ಪಕ್ಷವೂ ಇಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಜತೆಗೆ ಮಹದಾಯಿ ಹೋರಾಟಗಾರರ ಪೈಕಿ ಕಣಕ್ಕಿಳಿಯುವ ಸಾಧ್ಯತೆಯುಂಟು. ಕಾಂಗ್ರೆಸ್‌ ಟಿಕೆಟ್‌ ಯಾರಿಗೆ ಸಿಗುತ್ತದೆ ಎಂಬುದರ ಮೇಲೆ ಕ್ಷೇತ್ರದಲ್ಲಿನ ಅಖಾಡ ನಿರ್ಧಾರವಾಗಲಿದೆ.

ಈ ಎಲ್ಲದರ ನಡುವೆ ಇವ್ಯಾವುದರ ಬಗ್ಗೆ ಚಿಂತೆ ಮಾಡದೇ ತಮ್ಮ ಮತಗಳನ್ನು ಗಟ್ಟಿಗೊಳಿಸಲು ಎಲ್ಲ ಆಕಾಂಕ್ಷಿಗಳು ಕ್ಷೇತ್ರದಲ್ಲಿ ಬೆವರು ಸುರಿಸುತ್ತಿದ್ದಾರೆ.

ನವಲಗುಂದ ಬಂಡಾಯ: ಶಂಕರ ಪಾಟೀಲ ಮುನೇನಕೊಪ್ಪ ವಿರುದ್ಧ ಸ್ಪರ್ಧೆಗೆ 8 ಕಾಂಗ್ರೆಸಿಗರು ಸಿದ್ಧ!

ಕೈಗೆ ಆಶೀರ್ವಾದ:

1957ರಿಂದ 1967ರ ವರೆಗೆ ನಡೆದ ಮೂರು ಚುನಾವಣೆಯಲ್ಲಿ ಆರ್‌.ಎಂ. ಪಾಟೀಲ, 1972, 1983, 1985, 1989 ಹೀಗೆ ನಾಲ್ಕು ಬಾರಿಗೆ ಎಂ.ಕೆ. ಕುಲಕರ್ಣಿ, 1978ರಲ್ಲಿ ಒಂದು ಬಾರಿ ಎಸ್‌.ಪಿ. ಪಾಟೀಲ ಆಯ್ಕೆಯಾಗಿದ್ದರು. 1994, 1999ರಲ್ಲಿ ಕೆ.ಎನ್‌. ಗಡ್ಡಿ, 2004ರಲ್ಲಿ ಆರ್‌.ಬಿ. ಶಿರಿಯಣ್ಣವರ, 2008 ಹಾಗೂ 2018ರಲ್ಲಿ ಶಂಕರ ಪಾಟೀಲ ಮುನೇನಕೊಪ್ಪ, 2013ರಲ್ಲಿ ಎನ್‌.ಎಚ್‌. ಕೋನರಡ್ಡಿ ಆಯ್ಕೆಯಾಗಿದ್ದಾರೆ. 2004ರಿಂದ ಈಚೆಗೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆದ್ದಿಲ್ಲ. 3 ಬಾರಿ ಬಿಜೆಪಿ, ಒಂದು ಬಾರಿ ಜೆಡಿಎಸ್‌ ಪಾಲಾಗಿದೆ.

ಮತದಾರರು: ಹುಬ್ಬಳ್ಳಿ, ಅಣ್ಣಿಗೇರಿ ನವಲಗುಂದ ತಾಲೂಕುಗಳನ್ನೊಂಡ ಕ್ಷೇತ್ರದಲ್ಲಿ 2.07 ಲಕ್ಷಕ್ಕೂ ಅಧಿಕ ಮತದಾರರಿದ್ದಾರೆ.