ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಬಳಿಕ ಬಂಡಾಯದ ಬಿಸಿ ಹೆಚ್ಚಾಗಿದೆ. ಹಲವು ನಾಯಕರು ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಒಬ್ಬೊಬ್ಬ ಹಿರಿಯ ನಾಯಕರು ಪಕ್ಷಕ್ಕೆ ಗುಡ್ ಬೈ ಹೇಳುತ್ತಿದ್ದಾರೆ. ಇದೀಗ ಆರ್ ಶಂಕರ್ ಸರದಿ. ರಾಣೇಬೆನ್ನೂರು ಟಿಕೆಟ್ ಕೈತಪ್ಪಿದ ಕಾರಣಕ್ಕೆ ಆರ್ ಶಂಕರ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಬೆಂಗಳೂರು(ಏ.12): ಕರ್ನಾಟಕ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಮೂರು ಪಕ್ಷಗಳು ಜಿದ್ದಾಜಿದ್ದಿನ ಹೋರಾಟಕ್ಕೆ ಸಜ್ಜಾಗಿದೆ. ಆದರೆ ಮೂರು ಪಕ್ಷಕ್ಕೆ ಬಂಡಾಯದ ಬಿಸಿ ಕಾಡುತ್ತಿದೆ. ಟಿಕೆಟ್ ಕೈತಪ್ಪಿದ ಕಾರಣ ಪಕ್ಷಕ್ಕೆ ಗುಡ್ ಬೈ ಹೇಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಬಿಜೆಪಿಯಲ್ಲಿ ಒಬ್ಬರ ಹಿಂದೊಬ್ಬರು ರಾಜೀನಾಮೆ ಸಲ್ಲಿಕೆಗೆ ಮುಂದಾಗಿದ್ದಾರೆ. ರಾಣೇಬೆನ್ನೂರು ಟಿಕೆಟ್ ಕೈತಪ್ಪಿದ ಕಾರಣಕ್ಕೆ ಅಸಮಾಧಾಾಗೊಂಡಿರುವ ಆರ್ ಶಂಕರ್, ಇದೀಗ ತಮ್ಮ ಎಂ.ಎಲ್.ಸಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸಭಾಪತಿ ಭಸವರಾಜ್ ಹೊರಟ್ಟಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.ವಿಧಾನಸೌಧದಲ್ಲಿರುವ ಸಭಾಪತಿ ಬಸವರಾಜ್ ಹೊರಟ್ಟಿ ಕಚೇರಿಗೆ ತೆರಳಿ ಆರ್ ಶಂಕರ್ ರಾಜೀನಾಮೆ ಸಲ್ಲಿಸಿದ್ದಾರೆ.

ರಾಣೆಬೆನ್ನೂರು ಕ್ಷೇತ್ರದಲ್ಲಿ ಹಾಲಿ ಶಾಸಕ ಅರುಣ್‌ ಕುಮಾರ್‌ಗೆ ಬಿಜೆಪಿ ಟಿಕೆಟ್‌ ನೀಡಿದೆ. ಆರ್ ಶಂಕರ್ ಕಾಂಗ್ರೆಸ್‌ನಿಂದ ಟಿಕೆಟ್ ಬಯಸಿದ್ದರು. ಆದರೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಬಿಜೆಪಿಯ ನಾಯಕರ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದ್ದರು. ಆದರೆ ಯಾವೂದು ಕೈಗೂಡಲಿಲ್ಲ. ಇದೀಗ ಆರ್ ಶಂಕರ್ ಪಕ್ಷೇತರರಾಗಿ ಸ್ಪರ್ಧಿಸುವ ಮನಸ್ಸು ಮಾಡಿದ್ದಾರೆ. ಆದರೆ ಯಾವುದೂ ಖಚಿತಗೊಂಡಿಲ್ಲ.

ಮೊದಲೇ ಹೇಳಿದ್ದರೆ ಈಶ್ವರಪ್ಪ ರೀತಿ ರಾಜೀನಾಮೆ ಕೊಡುತ್ತಿದ್ದೆ, ಟಿಕೆಟ್ ಕೈತಪ್ಪಿದ್ದಕ್ಕೆ ರಘುಪತಿ ಭಟ್ ಕಣ್ಣೀರು!

2018ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಆರ್‌. ಶಂಕರ್‌ ಅವರು ಈ ಸಲ ಕಾಂಗ್ರೆಸ್‌ನಿಂದ ಟಿಕೆಟ್‌ ಪಡೆಯಲು ನಡೆಸಿದ ಪ್ರಯತ್ನ ವಿಫಲವಾಗಿದೆ. ಬಿಜೆಪಿಯಿಂದಲೇ ಒಂದು ಚಾನ್ಸ್‌ ಕೇಳೋಣವೆಂದು ಆ ನಿಟ್ಟಿನಲ್ಲೂ ಕಸರತ್ತು ನಡೆಸಿ ವಿಫಲರಾಗಿದ್ದಾರೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಕೆ.ಬಿ. ಕೋಳಿವಾಡರನ್ನು ಪಕ್ಷೇತರ ಅಭ್ಯರ್ಥಿ ಆರ್‌. ಶಂಕರ್‌ ಸೋಲಿಸಿ ಇತಿಹಾಸ ನಿರ್ಮಿಸಿದ್ದರು. ಆದರೆ, ಕ್ಷಿಪ್ರ ರಾಜಕೀಯ ಬೆಳವಣಿಗೆ ಬಯಸಿದ್ದ ಆರ್‌.ಶಂಕರ್‌, ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ, ಬಳಿಕ, ಬಿಜೆಪಿಯ ‘ಆಪರೇಷನ್‌ ಕಮಲ’ಕ್ಕೆ ಒಳಗಾಗಿ, ಅಲ್ಲಿಯೂ ಸಚಿವರಾಗಲು ಹೋಗಿ ತಮ್ಮ ಶಾಸಕ ಸ್ಥಾನ ಕಳೆದುಕೊಂಡರು. 2019ರ ಉಪಚುನಾವಣೆಯಲ್ಲಿ ಯುವ ನಾಯಕ ಅರುಣಕುಮಾರ ಪೂಜಾರ ಅವರನ್ನು ಕಣಕ್ಕಿಳಿಸಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು. ಈಗ ಬಿಜೆಪಿಯಿಂದ ವಿಧಾನ ಪರಿಷತ್‌ ಸದಸ್ಯರಾಗಿರುವ ಆರ್‌.ಶಂಕರ್‌ ಈ ಬಾರಿಯ ವಿಧಾನಸಭಾ ಚುನಾವಣಾ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಆದರೆ ಎರೆಡೆರಡು ದೋಣಿ ಮೇಲೆ ಕಾಲಿಡಲು ಹೋದ ಆರ್ ಶಂಕರ್ ಪೆಟ್ಟು ತಿಂದಿದ್ದಾರೆ. ಯಾವ ಪಕ್ಷದೊಂದಿಗೂ ನಿಷ್ಠೆ ಇಲ್ಲದಿರುವುದೇ ಆರ್‌.ಶಂಕರ್‌‌ಗೆ ಅತ್ತ ಕಾಂಗ್ರೆಸ್, ಇತ್ತ ಬಿಜೆಪಿಯಿಂದಲೂ ಟಿಕೆಟ್ ಸಿಕ್ಕಿಲ್ಲ. ರಾಣೇಬೆನ್ನೂರಿನಲ್ಲಿ ಹಾಲಿ ಶಾಸಕ, ಸಿಎಂ ಬೊಮ್ಮಾಯಿ ಅವರ ಮಾನಸಪುತ್ರ ಎನಿಸಿರುವ ಅರುಣಕುಮಾರ ಪೂಜಾರಗೆ ಟಿಕೆಟ್ ನೀಡಿರುವ ಬಿಜೆಪಿ ಆರ್ ಶಂಕರ್ ಕಡೆಗಣಿಸಿದೆ.

ಕರ್ನಾಟಕ ಬಿಜೆಪಿ ಅಭ್ಯರ್ಥಿ ಆಯ್ಕೆ ಚಿತ್ರಣ ಬದಲಾಯಿಸಿದ ಮೋದಿ, ಒಂದೇ ಮಾತಿನಿಂದ 52 ಹೊಸಬರಿಗೆ ಅವಕಾಶ!

2004ರಿಂದ ಈಚೆಗೆ ನಡೆದ ಐದು ಚುನಾವಣೆಗಳಲ್ಲಿ ಕೆ.ಬಿ.ಕೋಳಿವಾಡ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. 2004 ಮತ್ತು 2008ರಲ್ಲಿ ಬಿಜೆಪಿಯ ಜಿ.ಶಿವಣ್ಣ ಭರ್ಜರಿ ಗೆಲುವು ದಾಖಲಿಸಿದ್ದರು. 2013ರಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಪರ ಅಲೆ, ಬಿಜೆಪಿ ಹೋಳಾಗಿ ಕೆಜೆಪಿ ಜನ್ಮತಾಳಿದ್ದರ ಲಾಭ ಗಳಿಸಿದ ಕೋಳಿವಾಡ ಗೆಲುವು ಸಾಧಿಸಿದ್ದರು. 2018ರಲ್ಲಿ ಆರ್‌.ಶಂಕರ್‌ ಗೆದ್ದಿದ್ದರೆ. 2019ರ ಉಪಚುನಾವಣೆ ಹಾಲಿ ಶಾಸಕ ಅರುಣ ಕುಮಾರ ಪೂಜಾರ ಪಾಲಿಗೆ ಅದೃಷ್ಟತಂದಿತ್ತಿತು. ಸದ್ಯ ಅರುಣಕುಮಾರ ಮತ್ತು ಆರ್‌.ಶಂಕರ್‌ ನಡುವೆ ಹೊಂದಾಣಿಕೆ ಇಲ್ಲದ್ದರಿಂದ ಇಬ್ಬರೂ ಪ್ರತ್ಯೇಕವಾಗಿ ಸ್ಪರ್ಧೆಗೆ ಇಳಿಯುತ್ತಿದ್ದಾರೆ.