ಮುಂದಿನ ನಾಯಕತ್ವ ಬೆಳೆಸಲು ಹೊಸಬರಿಗೆ ಮಣೆ: ಅರುಣ್ ಸಿಂಗ್ ಸಮರ್ಥನೆ
ಮುಂದಿನ ನಾಯಕತ್ವ ಬೆಳೆಸುವ ನಿಟ್ಟಿನಲ್ಲಿ ಮತ್ತು ಹೊಸ ಆಲೋಚನೆ ಹೊಂದಿರುವ ಯುವಜನಾಂಗಕ್ಕೆ ಟಿಕೆಟ್ ನೀಡುವ ಮೂಲಕ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆದ್ಯತೆ ನೀಡಲಾಗಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಈ ಮೂಲಕ 52 ಹೊಸಬರಿಗೆ ಟಿಕೆಟ್ ನೀಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ಬೆಂಗಳೂರು (ಏ.12) : ಮುಂದಿನ ನಾಯಕತ್ವ ಬೆಳೆಸುವ ನಿಟ್ಟಿನಲ್ಲಿ ಮತ್ತು ಹೊಸ ಆಲೋಚನೆ ಹೊಂದಿರುವ ಯುವಜನಾಂಗಕ್ಕೆ ಟಿಕೆಟ್ ನೀಡುವ ಮೂಲಕ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಆದ್ಯತೆ ನೀಡಲಾಗಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಈ ಮೂಲಕ 52 ಹೊಸಬರಿಗೆ ಟಿಕೆಟ್ ನೀಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ಮಂಗಳವಾರ ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಬಿಡುಗಡೆ ಮಾಡಿ ಮಾತನಾಡಿದ ಅವರು, ಕರ್ನಾಟಕ ರಾಜ್ಯವು ಹೊಸ ಆರ್ಥಿಕ ನೀತಿಯೊಂದಿಗೆ ಮುನ್ನಡೆಯುತ್ತಿದೆ. ಭಾರತದ ಭವಿಷ್ಯ ನಿರ್ಮಿಸಲು ಯುವಜನಾಂಗದ ಪಾತ್ರ ಬಹಳ ಮುಖ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಈ ಬಾರಿ ಚುನಾವಣೆಯಲ್ಲಿ ಯುವಜನಾಂಗಕ್ಕೆ ಆದ್ಯತೆ ನೀಡಲಾಗಿದೆ. ಇದರಿಂದ ಚುನಾವಣೆಯಲ್ಲಿ ಹೊಸತನವನ್ನು ತರುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.
ನಕ್ಸಲ್ ಆತಂಕವಾದ, ಗಡಿ ಸಮಸ್ಯೆಗೆ ಮೂಲ ಕಾರಣವೇ ಕಾಂಗ್ರೆಸ್: ಅರುಣ್ ಸಿಂಗ್
ಬಿಜೆಪಿ ಪಕ್ಷ ದೊಡ್ಡ ಪಕ್ಷವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಪಕ್ಷ ಬೆಳೆಯುತ್ತಿದೆ. ಕರ್ನಾಟಕ ರಾಜ್ಯದ ಜನತೆಯು ಬಿಜೆಪಿಯ ಮೇಲೆ ನಂಬಿಕೆ ಇಟ್ಟಿದೆ. ಕಾಂಗ್ರೆಸ್ ಗುಂಪುಗಾರಿಕೆಯಿದಾಗಿ ನಿಧಾನವಾಗಿ ಸೋಲುತ್ತಿದ್ದರೆ, ಜೆಡಿಎಸ್ ಮುಳುಗುತ್ತಿದೆ. ಪಕ್ಷದ ಕಾರ್ಯಕರ್ತರು ಅದ್ಭುತ ಸಂಘಟನೆ ಮಾಡಿದ್ದಾರೆ. ಇದೇ ಸಂಘಟನೆಯೊಂದಿಗೆ ಪಕ್ಷ ಬಹುಮತದಿಂದ ಗೆಲುವು ಸಾಧಿಸಲಿದೆ ಎಂದರು.
ಕೇಂದ್ರ ಸರ್ಕಾರವು ರಾಜ್ಯಕ್ಕೆ ಹಲವು ಕೊಡುಗೆಗಳನ್ನು ನೀಡಿದೆ. ಭದ್ರಾ ಮೇಲ್ದಂಡೆ ಯೋಜನೆ ಅಗತ್ಯ ಅನುದಾನ ಒದಗಿಸಲಾಗಿದೆ. ಬೆಂಗಳೂರು-ಮೈಸೂರು ರಸ್ತೆ ಉದ್ಘಾಟಿಸಲಾಗಿದೆ. ಬಂಡವಾಳ ಹೂಡಿಕೆಯಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ. ಅಲ್ಲದೇ, ಉದ್ಯೋಗ ಸೃಷ್ಟಿಸೇರಿದಂತೆ ಹಲವು ವಲಯಗಳಲ್ಲಿ ಮೊದಲ ಸ್ಥಾನದಲ್ಲಿದೆ. ಬಹಳಷ್ಟುಮಂದಿಗೆ ಬ್ಯಾಂಕ್ ಖಾತೆ ಇರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬ್ಯಾಂಕ್ ಖಾತೆ ತೆರೆದು ಡಿಬಿಟಿ ಮೂಲಕ ಹಣ ನೀಡಲಾಗುತ್ತಿದೆ. ಇನ್ನು, ವಿಜಯಸಂಕಲ್ಪ ಯಾತ್ರೆಯು ಅದ್ಬುತವಾಗಿ ಸಫಲತೆ ಕಂಡಿದೆ. ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಪಕ್ಷವನ್ನು ಸಧೃಡಗೊಳಿಸಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಮ್ಯಾನೇಜ್‌ಮೆಂಟ್ ಮಾಡುತ್ತಿದೆ. ಹೀಗಾಗಿ ಬಿಜೆಪಿ ಮತ್ತೆ ಸರ್ಕಾರ ರಚನೆ ಮಾಡಲಿದ್ದೇವೆ. ರಾಜ್ಯ ಚುನಾವಣಾ ಸಮಿತಿ ಎಲ್ಲ ಸದಸ್ಯರ ಅಭಿಪ್ರಾಯಗಳನ್ನು ಪಡೆದು ವಿಸ್ತೃತವಾಗಿ ಚರ್ಚಿಸಲಾಗಿದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಮಾತನಾಡಿ, ಏ.1 ಮತ್ತು 2ರಂದು 31 ಜಿಲ್ಲೆಯಲ್ಲಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿತ್ತು. ಈ ವೇಳೆ ಸಂಘಟನಾ ಕಾರ್ಯಕರ್ತರು ಭಾಗಿಯಾಗಿದ್ದರು. ಏ.3 ಮತ್ತು 4ರಂದು ರಾಜ್ಯ ಚುನಾವಣಾ ಸಮಿತಿ ಸಭೆ ಬೆಂಗಳೂರಲ್ಲಿ ಸಭೆ ನಡೆಸಿ ಚುನಾವಣಾ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಕೇಂದ್ರ ಚುನಾವಣಾ ಸಮಿತಿಗೆ ಶಿಫಾರಸ್ಸು ಮಾಡಲಾಗಿತ್ತು ಎಂದು ಹೇಳಿದರು.
ಬಿಜೆಪಿ ಸರ್ಕಾರದ ಸಾಧನೆ, ಜನೋಪಯೋಗಿ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿ: ಅರುಣ್ ಸಿಂಗ್
ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ಹೆಸರನ್ನು ಅಂತಿಮಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ರಾಜ್ಯ ಚುನಾವಣಾ ಸಮಿತಿ ಸಭೆ ಮಾಡಿರುವ ಶಿಫಾರಸ್ಸಿನ ಮೇರೆಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ ಎಂದರು.