Asianet Suvarna News Asianet Suvarna News

Karnataka BJP: ಕೇಂದ್ರ-ರಾಜ್ಯ ನಾಯಕರ ಒಮ್ಮತದ ಕೊರತೆ; ಬಿಜೆಪಿ ಅಭ್ಯರ್ಥಿ ಪಟ್ಟಿ ಇನ್ನೂ ಕಗ್ಗಂಟು!

  • ಕೇಂದ್ರ, ರಾಜ್ಯ ನಾಯಕರ ಮಧ್ಯೆ ಮೂಡದ ಒಮ್ಮತ
  • ಗುಜರಾತ್‌ ಮಾದರಿ ಪ್ರಯೋಗಕ್ಕೆ ವರಿಷ್ಠರಿಂದ ಹಲವು
  • ಹಾಲಿಗಳ ಕೈಬಿಡುವುದಕ್ಕೆ ರಾಜ್ಯ ನಾಯಕರ ಅಸಮ್ಮತಿ
  • ಇಂದು ಅಮಿತ್‌ ಶಾ ಸಭೆ: ಬಳಿಕ ಪಟ್ಟಿಬಿಡುಗಡೆ?
Karnataka election news BJP candidate list release  still delayed at bengaluru rav
Author
First Published Apr 11, 2023, 1:30 AM IST

ಬೆಂಗಳೂರು (ಏ.11) : ಆಡಳಿತಾರೂಢ ಬಿಜೆಪಿಯಲ್ಲಿ ಪ್ರಸಕ್ತ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಕಗ್ಗಂಟಾಗಿ ಪರಿಣಮಿಸಿದ್ದು, ಅಳೆದೂ ತೂಗಿ ಅಂತಿಮಗೊಳಿಸಲಾಗುತ್ತಿದೆ.

ಸಮೀಕ್ಷೆಗಳ ಆಧಾರದ ಮೇಲೆ ಹಾಲಿ ಇರುವ ಹಲವು ಶಾಸಕರನ್ನು ಕೈಬಿಟ್ಟು ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ನಡುವೆ ಒಮ್ಮತಾಭಿಪ್ರಾಯದ ಕೊರತೆ ಉಂಟಾಗಿದೆ. ಇದೇ ಕಾರಣದಿಂದಾಗಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಬಿಡುಗಡೆ (BJP Candidate list)ವಿಳಂಬವಾಗತೊಡಗಿದೆ ಎಂದು ತಿಳಿದು ಬಂದಿದೆ.

ಬಿಜೆಪಿ ಅಭ್ಯರ್ಥಿ ಪಟ್ಟಿ ಶೀಘ್ರವೇ ಘೋಷಣೆ: ನಳಿನ್‌ ಕುಮಾರ್‌ ಕಟೀಲ್‌

ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit shah) ಅವರು ಮಂಗಳವಾರ ದೆಹಲಿಗೆ ವಾಪಸಾದ ಬಳಿಕ ಅವರ ನೇತೃತ್ವದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಆ ಸಭೆಯಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದು ಒಮ್ಮತಾಭಿಪ್ರಾಯ ಮೂಡಿದಲ್ಲಿ ರಾತ್ರಿಯೇ ಪಟ್ಟಿಬಿಡುಗಡೆಯಾಗಬಹುದು. ಇಲ್ಲದಿದ್ದರೆ ಬುಧವಾರಕ್ಕೆ ಮುಂದೂಡಿಕೆಯಾಗಲಿದೆ. ಗುರುವಾರ ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಹೀಗಾಗಿ, ಬುಧವಾರದೊಳಗೆ ಅಭ್ಯರ್ಥಿಗಳ ಮೊದಲ ಪಟ್ಟಿಬಿಡುಗಡೆಯಾಗುವುದು ನಿಶ್ಚಿತ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದೇ ವೇಳೆ ಟಿಕೆಟ್‌ ಘೋಷಣೆಯಾದ ಬಳಿಕ ಆಕಾಂಕ್ಷಿಗಳಿಂದ ಉಂಟಾಗಬಹುದಾದ ಭಿನ್ನಾಭಿಪ್ರಾಯದ ಪ್ರಮಾಣವನ್ನು ಈಗಲೇ ಕಡಮೆ ಮಾಡಿಕೊಳ್ಳಬೇಕು. ಜತೆಗೆ ಶತಾಯಗತಾಯ ಈ ಬಾರಿಯಾದರೂ ಅನ್ಯ ಪಕ್ಷಗಳ ಶಾಸಕರ ನೆರವಿಲ್ಲದೆ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಏರುವಷ್ಟುಸ್ಥಾನಗಳನ್ನು ಪಕ್ಷ ಗಳಿಸಬೇಕು ಎಂಬ ನಿಲವಿಗೆ ಬರಲಾಗಿದೆ. ಈ ಕಾರಣಕ್ಕಾಗಿ ಟಿಕೆಟ್‌ ಹಂಚಿಕೆ ಪ್ರಕ್ರಿಯೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಕೈಗೊಳ್ಳಲಾಗುತ್ತಿದೆ ಎಂಬ ವಾದವೂ ಬಿಜೆಪಿ ಪಾಳೆಯದಿಂದ ಕೇಳಿಬಂದಿದೆ.

ಕಳೆದ ಶನಿವಾರದಿಂದ ಮೂರು ದಿನಗಳ ಕಾಲ ಸತತವಾಗಿ ಸಭೆ ನಡೆದರೂ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ನಡುವಿನ ಮಾತುಕತೆ ಅಪೂರ್ಣವಾಗಿದೆ. ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ಬಳಿಯಿರುವ ಮಾಹಿತಿಗಳು ತಾಳೆಯಾಗುತ್ತಿಲ್ಲ. ತಮ್ಮದೇ ಸಂಪರ್ಕ ಜಾಲ ಮತ್ತು ಸಮೀಕ್ಷೆಗಳನ್ನು ಆಧರಿಸಿ ಮಾಹಿತಿ ಸಂಗ್ರಹಿಸಿರುವ ವರಿಷ್ಠರು ಅವುಗಳನ್ನು ಮುಂದಿಟ್ಟು ಸುಮಾರು 25ರಿಂದ 30 ಹಾಲಿ ಶಾಸಕರಿಗೆ ಕೊಕ್‌ ನೀಡುವ ಮೂಲಕ ಉತ್ತರ ಪ್ರದೇಶ, ಗುಜರಾತ್‌ ರಾಜ್ಯಗಳಲ್ಲಿ ನಡೆಸಿದಂಥ ರಾಜಕೀಯ ಪ್ರಯೋಗ ಮಾಡುವ ಬಗ್ಗೆ ರಾಜ್ಯ ನಾಯಕರ ಅಭಿಪ್ರಾಯ ಕೇಳುತ್ತಿದ್ದಾರೆ.

ಆದರೆ, ತಳಮಟ್ಟದ ಮಾಹಿತಿ ಹೊಂದಿರುವ ರಾಜ್ಯ ನಾಯಕರು ಇದಕ್ಕೆ ಸಮ್ಮತಿ ಸೂಚಿಸುತ್ತಿಲ್ಲ. ಉತ್ತರ ಭಾರತದ ರಾಜ್ಯಗಳಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಈ ರೀತಿಯ ರಾಜಕೀಯ ಪ್ರಯೋಗ ಮಾಡುವುದು ಸರಿಯಾಗಲಿಕ್ಕಿಲ್ಲ. ಇದರಿಂದ ಹಾಲಿ ಶಾಸಕರು ಬಂಡಾಯದ ಬಾವುಟ ಹಾರಿಸಬಹುದು ಅಥವಾ ಮುನಿಸಿಕೊಂಡು ಪಕ್ಷಕ್ಕೆ ಧಕ್ಕೆ ಉಂಟು ಮಾಡಬಹುದು. ತೀರಾ ವರ್ಚಸ್ಸು ಕಳೆದುಕೊಂಡಿರುವ ಬೆರಳೆಣಿಕೆಯಷ್ಟುಹಾಲಿ ಶಾಸಕರನ್ನು ಬೇಕಾದರೆ ಕೈಬಿಡಬಹುದು ಎಂಬ ಮಾತನ್ನು ರಾಜ್ಯ ನಾಯಕರು ಹೇಳಿದ್ದಾರೆ ಎನ್ನಲಾಗಿದೆ.

ಹೀಗಾಗಿಯೇ ಭಾನುವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ(PM Narendra Modi), ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda), ಕೇಂದ್ರ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಸಂಸದೀಯ ಮಂಡಳಿ ಸಭೆ ನಡೆದರೂ ಅಭ್ಯರ್ಥಿಗಳ ಪಟ್ಟಿಅಂತಿಮಗೊಳಿಸಲು ಸಾಧ್ಯವಾಗಲಿಲ್ಲ. ಅದಕ್ಕೂ ಮೊದಲು ಹಲವು ಸುತ್ತಿನ ಸಭೆಗಳು ನಡೆದು ಒಂದು ಹಂತದ ಪಟ್ಟಿಸಿದ್ಧಗೊಂಡಿತ್ತು. ಆದರೆ, ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನಿ ಮೋದಿ ಅವರು ನೀಡಿದ ಸಲಹೆ ಅನುಸಾರ ಮತ್ತಷ್ಟುಚರ್ಚೆ ಮಾಡಲು ನಿರ್ಧರಿಸಲಾಯಿತು. ಆ ಪ್ರಕಾರ, ಸೋಮವಾರ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ನೇತೃತ್ವದಲ್ಲಿ ಸಭೆ ನಡೆದು ವಿಸ್ತೃತವಾಗಿ ಸಮಾಲೋಚನೆ ನಡೆಸಲಾಯಿತು.

ಕೊನೆ ಕ್ಷಣದಲ್ಲಿ ಮತ್ತೊಂದು ಸಮೀಕ್ಷೆ?

ಅಭ್ಯರ್ಥಿಗಳ ಆಯ್ಕೆ ಸಂಬಂಧ ಬಿಜೆಪಿ ವರಿಷ್ಠರು ಕೊನೆಯ ಕ್ಷಣದಲ್ಲಿ ಮತ್ತೊಂದು ಸಮೀಕ್ಷೆಯ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಸುಮಾರು 30ರಿಂದ 40 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ಗೊಂದಲ ಏರ್ಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯೇ ಬಿಜೆಪಿ ವರಿಷ್ಠರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೂರು ಪ್ರತ್ಯೇಕ ಸಂಸ್ಥೆಗಳಿಂದ ಸಮೀಕ್ಷೆ ನಡೆಸಿದ್ದಾರೆ. ಸೋಮವಾರ ಸಂಜೆ ಈ ಮೂರು ಸಮೀಕ್ಷೆಗಳ ವರದಿಗಳು ಸಲ್ಲಿಕೆಯಾಗಿದ್ದು, ಆ ವರದಿಯ ಆಧಾರದ ಮೇಲೆ ಮತ್ತೊಂದು ಸುತ್ತಿನ ಮಾತುಕತೆ ನಡೆದಿದೆ. ಈ ವರದಿಯ ಆಧಾರದ ಮೇಲೆಯೇ ಟಿಕೆಟ್‌ ಅಂತಿಮವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

25ಕ್ಕೂ ಹೆಚ್ಚು ಶಾಸಕರಿಗೆ ಕೊಕ್‌?

ಬಿಜೆಪಿಯ ಸುಮಾರು 25ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್‌ ನೀಡದೇ ಇರುವ ಬಗ್ಗೆ ಬಿಜೆಪಿ ಹೈಕಮಾಂಡ್‌ ಮಟ್ಟದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ.

ಅಂದರೆ, ಆ ಕ್ಷೇತ್ರಗಳಲ್ಲಿ ಹೊಸಬರಿಗೆ ಅವಕಾಶ ನೀಡುವ ಮೂಲಕ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಉದ್ದೇಶವನ್ನು ವರಿಷ್ಠರು ಹೊಂದಿದ್ದಾರೆ. ಇದು ಎಷ್ಟರಮಟ್ಟಿಗೆ ಅನುಷ್ಠಾನಕ್ಕೆ ಬರಲಿದೆ ಎಂಬುದು ಕುತೂಹಲಕರವಾಗಿದೆ.

ಇಷ್ಟೊಂದು ಸಂಖ್ಯೆಯಲ್ಲಿ ಹಾಲಿ ಶಾಸಕರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಲು ರಾಜ್ಯ ನಾಯಕರು ಒಪ್ಪುತ್ತಿಲ್ಲ. ಅಂತಿಮವಾಗಿ ರಾಜ್ಯ ನಾಯಕರ ಅಭಿಪ್ರಾಯಕ್ಕೇ ಮನ್ನಣೆ ಸಿಕ್ಕಲ್ಲಿ ಕೊಕ್‌ ನೀಡುವ ಶಾಸಕರ ಸಂಖ್ಯೆ 8 ಅಥವಾ 10ಕ್ಕೆ ಇಳಿಯಬಹುದು. ಒಂದು ವೇಳೆ ವರಿಷ್ಠರ ಮಾತೇ ಅಂತಿಮವಾದಲ್ಲಿ 25ಕ್ಕೂ ಹೆಚ್ಚು ಶಾಸಕರು ಟಿಕೆಟ್‌ ಕಳೆದುಕೊಳ್ಳಬಹುದು ಎಂಬ ಮಾತು ಕೇಳಿಬರುತ್ತಿದೆ.

ವಿಳಂಬ ಯಾಕೆ?

ಅಭ್ಯರ್ಥಿಗಳ ಕುರಿತು ರಾಜ್ಯ, ರಾಷ್ಟ್ರೀಯ ನಾಯಕರ ಬಳಿಕ ಪ್ರತ್ಯೇಕ ಮಾಹಿತಿ ಇವೆ. ಹಲವು ಶಾಸಕರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ವಿಚಾರದಲ್ಲಿ ರಾಜ್ಯ, ಕೇಂದ್ರ ನಾಯಕರ ಮಧ್ಯೆ ಒಮ್ಮತ ಮೂಡುತ್ತಿಲ್ಲ. ಹೀಗಾಗಿ ಅಭ್ಯರ್ಥಿಗಳ ಮೊದಲ ಪಟ್ಟಿವಿಳಂಬ.

ಬಿಜೆಪಿ ಹಿರಿಯ ನಾಯಕರಿಗೆ ಡಬಲ್‌ ಟೆನ್ಶನ್‌! ಎರಡೂ ಕ್ಷೇತ್ರದಲ್ಲಿ ಸ್ಫರ್ಧಿಸಲು ಸೂಚನೆ

ಇಂದು ರಾತ್ರಿ ಅಥವಾ ನಾಳೆ ಪಟ್ಟಿಬಿಡುಗಡೆ

ಅಭ್ಯರ್ಥಿಗಳ ಪಟ್ಟಿವಿಚಾರವಾಗಿ ಸುದೀರ್ಘ ಸಭೆ ನಡೆದಿದೆ. ಅಮಿತ್‌ ಶಾ ಅವರು ಮಂಗಳವಾರ ದೆಹಲಿಗೆ ಆಗಮಿಸಲಿದ್ದಾರೆ. ಬಳಿಕ ಮಂಗಳವಾರ ರಾತ್ರಿ ಅಥವಾ ಬುಧವಾರ ಪಟ್ಟಿಬಿಡುಗಡೆಯಾಗುವ ಸಾಧ್ಯತೆ ಇದೆ.

- ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ಬಿಜೆಪಿ ಅಭ್ಯರ್ಥಿಗಳ ಪಟ್ಟಿಇಂದು ಪ್ರಕಟ

ಅಭ್ಯರ್ಥಿಗಳ ಪಟ್ಟಿತಯಾರಿ ಅಂತಿಮ ಹಂತಕ್ಕೆ ಬಂದಿದೆ. ಗೃಹ ಸಚಿವ ಅಮಿತ್‌ ಶಾ ಅವರು ದೆಹಲಿಯಲ್ಲಿಲ್ಲ. ಅವರು ವಾಪಸಾದ ಬಳಿಕ ಭೇಟಿ ಮಾಡಿ ಚರ್ಚಿಸಿ ಪಟ್ಟಿಬಿಡುಗಡೆ ಮಾಡುತ್ತೇವೆ. ಮಂಗಳವಾರ ಪಟ್ಟಿಬಿಡುಗಡೆಯಾಗಲಿದೆ.

ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

Follow Us:
Download App:
  • android
  • ios