ಕಾಂಗ್ರೆಸ್ ನಾಯಕರ ಗ್ಯಾರಂಟಿ, ಚುನಾವಣೆ ನಂತರ ಗಳಗಂಟಿ: ಸಿಎಂ ಬೊಮ್ಮಾಯಿ ಲೇವಡಿ
ಚುನಾವಣೆ ವೇಳೆ ಕಾಂಗ್ರೆಸ್ ಕೊಟ್ಟಿರುವ ಗ್ಯಾರೆಂಟಿ ಕಾರ್ಡ್ ಜೀವ ಇಲ್ಲದ ವಿಸಿಟಿಂಗ್ ಕಾರ್ಡ್ ಇದ್ದಂತೆ. ಅದು ಚುನಾವಣೆ ನಡೆಯುವವರೆಗೂ ಮಾತ್ರ ಗ್ಯಾರಂಟಿ, ಚುನಾವಣೆ ನಂತರ ಅದು ಗಳಗಂಟಿ.
ಬೆಂಗಳೂರು (ಏ.23): ಚುನಾವಣೆ ವೇಳೆ ಕಾಂಗ್ರೆಸ್ ಕೊಟ್ಟಿರುವ ಗ್ಯಾರೆಂಟಿ ಕಾರ್ಡ್ ಜೀವ ಇಲ್ಲದ ವಿಸಿಟಿಂಗ್ ಕಾರ್ಡ್ ಇದ್ದಂತೆ. ಅದರಲ್ಲಿ ಉಪ್ಪಿನಕಾಯಿ ಹಾಕೋದು ಬಿಟ್ರೆ ಬೇರೇನೂ ಮಾಡೋಕೆ ಆಗಲ್ಲ. ಚುನಾವಣೆ ನಡೆಯುವವರೆಗೂ ಅದು ಗ್ಯಾರಂಟಿ, ಚುನಾವಣೆ ನಂತರ ಅದು ಗಳಗಂಟಿ ಎಂದು ಸಿಎಂ ಬೊಮ್ಮಾಯಿ ಲೇವಡಿ ಮಾಡಿದರು.
ಯಲಹಂಕ ಮತ್ತು ರಾಜಾನುಕುಂಟೆಯಲ್ಲಿ ಭಾನುವಾರ ನಡೆದ ಜಯವಾಹಿನಿ ಯಾತ್ರೆಯಲ್ಲಿ (BJP Janavahini Road Show) ಯಲಹಂಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ಆರ್ ವಿಶ್ವನಾಥ್ (SR Vishwanath) ಪರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತೀಯ ಜನತಾ ಪಕ್ಷದ ಜಯವಾಹಿನಿ ಯಾತ್ರೆಯನ್ನು ಯಲಹಂಕದಿಂದ ಶುಭಾರಂಭ ಮಾಡಿದ್ದೇವೆ. ಯಲಹಂಕ ಕ್ಷೇತ್ರ ಅತಿ ಹೆಚ್ಚು ಮತಗಳಿಂದ ಆರಿಸಿ ಬರುವ ಬೆಂಗಳೂರಿನ ನಂಬರ್ ಒನ್ ಕ್ಷೇತ್ರ. ಅದಕ್ಕೆ ಕಾರಣ ಕಳೆದ ಹದಿನೈದು ವರ್ಷದಿಂದ ನಿಮ್ಮ ಸೇವೆ ಮಾಡುತ್ತಿರುವ ಎಸ್ ಆರ್ ವಿಶ್ವನಾಥ ಅವರು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಕಾಂಗ್ರೆಸ್‌ನ್ನ ನಿರ್ಮಾ ಸರ್ಫ್ ಹಾಕಿ ತೊಳೆದ ಸಿದ್ದರಾಮಯ್ಯ: ಮನೆಗೆ ಹೋಗೋದಷ್ಟೇ ಬಾಕಿ
ಸಿದ್ದರಾಮಯ್ಯ ಅವರದ್ದು ಹಗರಣಗಳ ಸರ್ಕಾರ: 2013-18 ರ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಪೊಲಿಸ್ ನೇಮಕಾತಿ ಹಗರಣ, ಪ್ರಶ್ನೆ ಪತ್ರಿಕೆ ಲೀಕ್ ಹಗರಣ, ಶಿಕ್ಷಕ ನೇಮಕಾತಿ ಹಗರಣ, 8000 ಕೋಟಿ ಮೌಲ್ಯದ 843 ಎಕರೆ ರಿಡೂ ಹಗರಣ ಮಾಡಿ ಸಿದ್ದರಾಮಯ್ಯ ಬೆಂಗಳೂರನ್ನು ಲೂಟಿ ಮಾಡಿದ್ದಾರೆ. ಇಂತ ಕಾಂಗ್ರೆಸ್ ಅನ್ನು ಕಿತ್ತೊಗೆದರೆ ಭ್ರಷ್ಟಾಚಾರ ಕಿತ್ತೊಗೆದಂತಾಗುತ್ತದೆ. ಜಾತಿ ಜಾತಿ ನಡುವೆ ವಿಷ ಬೀಜ ಬಿತ್ತಿ ಜಾತಿ ಒಡೆಯುವ ಕೆಲಸ ಮಾಡಿದ್ದಾರೆ. ಧರ್ಮವನ್ನು ಒಡೆಯುವ ಕೆಲಸ ಮಾಡಿದ್ದಾರೆ. ಅವರು ಕೊಟ್ಟಿರುವ ಗ್ಯಾರೆಂಟಿ ಕಾರ್ಡ್ (congress Guarantee card) ಜೀವ ಇಲ್ಲದ ವಿಸಿಟಿಂಗ್ ಕಾರ್ಡ್ ಇದ್ದಂತೆ. ಅದರಲ್ಲಿ ಉಪ್ಪಿನಕಾಯಿ ಹಾಕೋದು ಬಿಟ್ರೆ ಬೇರೇನೂ ಮಾಡೋಕೆ ಆಗಲ್ಲ. ಚುನಾವಣೆವರೆಗೂ ಅದು ಗ್ಯಾರಂಟಿ. ಚುನಾವಣೆ ನಂತರ ಅದು ಗಳಗಂಟಿ. ಆದ್ದರಿಂದ ಕಾಂಗ್ರೆಸ್ ಕಿತ್ತೊಗೆಯಲು ಕೆಂಪೇಗೌಡರು ಮೆಟ್ಟಿದ ಗಂಡು ಭೂಮಿಯಿಂದ ನನ್ನ ಪ್ರಚಾರ ಮಾಡುತ್ತಿದ್ದೇನೆ ಎಂದರು.
ಉತ್ತಮ ಆಡಳಿತ ಬಿಜೆಪಿ ಧ್ಯೇಯ: ಎಲ್ಲ ವರ್ಗಗಳನ್ನೂ ಸಮಾನವಾಗಿ ನೋಡಿಕೊಂಡಿರುವ ನಾಡಪ್ರಭು ಕೆಂಪೇಗೌಡರ ದಿಟ್ಟ ಆಡಳಿತ, ಕಾಯಕವೇ ಕೈಲಾಸ ಎಂದಿರುವ ಬಸವ ಪಥದ ಆಡಳಿತ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೀನ ದಲಿತರ ರಕ್ಷಣೆ ಮತ್ತು ಉದ್ಧಾರ ಮಾಡುವ ಆಡಳಿತ, ಕನಕದಾಸರ ದಾಸವಾಣಿ ಅನುಷ್ಠಾನ ಮಾಡುವ ಆಡಳಿತ ಕೊಡುವುದು ನಮ್ಮ ಬಿಜೆಪಿಯ ಧ್ಯೇಯ. ಬಿಜೆಪಿ ಪಕ್ಷ ಆಂತರಿಕ ಮೀಸಲಾತಿ ಕೊಟ್ಟು, ಹಿಂದುಳಿದ ವರ್ಗದ ಮೀಸಲಾತಿ ಹೆಚ್ಚಳ ಮಾಡಿದೆ. ಆದ್ದರಿಂದ ಡಬಲ್ ಎಂಜಿನ್ ಸರ್ಕಾರದ ಕೆಲಸಗಳನ್ನು ಮನೆಮನೆಗೆ ತಲುಪಿಸಬೇಕು. ಯಲಹಂಕದಲ್ಲಿ ಎಲ್ಲ ಸಮುದಾಯಗಳ ಜನರು ರಾಜ್ಯ ಅಥವಾ ಕೇಂದ್ರದ ಒಂದಿಲ್ಲೊಂದು ಯೋಜನೆಯ ಅನುಕೂಲ ಪಡೆದಿದ್ದಾರೆ. ವಿಶ್ವನಾಥ್ ಅವರನ್ನು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬನ್ನಿ. ಅವರು ಕೇವಲ ಯಲಹಂಕ ಮಾತ್ರವಲ್ಲ, ಸುತ್ತಲೂ ಇರುವ 8 ಕ್ಷೇತ್ರಗಳನ್ನು ಗೆಲ್ಲಿಸುತ್ತಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಪರಿವಾರದ ಪಕ್ಷಕ್ಕೆ ಅವಕಾಶ ಕೊಡಬೇಡಿ: ಬೆಂಗಳೂರು ಮಹಾನಗರದಲ್ಲಿ ಸಿಗುವ ಎಲ್ಲ ಸೌಲಭ್ಯಗಳು ರಾಜಾನುಕುಂಟೆಯಲ್ಲಿ ಸಿಗುವಷ್ಟು ಅಭಿವೃದ್ಧಿ ಕೆಲಸ ಆಗಿದೆ. ವಿಶ್ವನಾಥ್ ಮಾಡಿರುವ 10% ಅಭಿವೃದ್ಧಿ ಕೆಲಸ ಮಾಡಿ ತೋರಿಸಲಿ ಎಂದು ಕಾಂಗ್ರೆಸ್‌ಗೆ ಸವಾಲು ಹಾಕುತ್ತೇನೆ. ರಾಜ್ಯದಲ್ಲಿ ಮತ್ತೊಂದು ಪಕ್ಷ ಇದೆ. ಬಹುಮತ ಬರದಿದ್ದರೆ, ಜೆಡಿಎಸ್ ನವರು ತಾವು ಮೇಲೆ ಹತ್ತಿ ಕೂಡಲು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಸ್ವಜನ ಪಕ್ಷ ಮತ್ತು ಪರಿವಾರದ ಪಕ್ಷಕ್ಕೆ ಈ ಬಾರಿ ಅವರಿಗೆ ಅವಕಾಶ ಕೊಡಬಾರದು. ಬಿಜೆಪಿ ಮಾತ್ರ ಕರ್ನಾಟಕದ ಕಲ್ಯಾಣ ಮಾಡಲು ಸಾಧ್ಯ. ಆದ್ದರಿಂದ ಬಿಜೆಪಿಯನ್ನು ಸ್ಪಷ್ಟ ಬಹುಮತದಿಂದ ಗೆಲ್ಲಿಸಬೇಕು. ನಾನು ರಾಜ್ಯದ ಮೂಲೆಮೂಲೆಯಲ್ಲಿ ಸುತ್ತಿದ್ದೇನೆ. ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ಯಾವುದೇ ಶಕ್ತಿಗೆ ಸಾಧ್ಯ ಇಲ್ಲ ಎಂದು ಹೇಳಿದರು.
ಬಿಜೆಪಿಗೆ ಸ್ಪಷ್ಟ ಬಹುಮತ ಬರುವುದನ್ನು ತಡೆಯಲು ಯಾವುದೇ ಶಕ್ತಿಗೆ ಸಾಧ್ಯವಿಲ್ಲ
1 ಲಕ್ಷ ಮತಗಳ ಲೀಡ್ ನಿಂದ ಗೆಲ್ಲಿಸಿ: ನನಗೆ ಈಗ ಅತ್ಯಂತ ಆತ್ಮೀಯ ನೆಚ್ಚಿನ ಬಲಭೀಮ ಸ್ನೇಹಿತ. ಯಾಕೆಂದರೆ ನನ್ನ ತಂದೆಯ ಹೆಸರು ಎಸ್ ಆರ್ ಬೊಮ್ಮಾಯಿ, ನನ್ನ ಸ್ಮೇಹಿತನ ಹೆಸರು ಎಸ್ ಆರ್ ವಿಶ್ವನಾಥ್. ಇವರು ಯಾವಾಗ ಎದುರಿಗೆ ಬಂದಾಗ ನಮ್ಮ ತಂದೆ ನೆನಪಿಗೆ ಬರುತ್ತಾರೆ. ಬೆಂಗಳೂರಿನ ಭವ್ಯ ಭವಿಷ್ಯ ಬರೆಯಲು, ಜತೆಗೆ ಯಲಹಂಕ ಗೆ ಹೊಸ ಚಿಂತನೆ ಕೊಡಲು ಎಸ್ ಆರ್ ವಿಶ್ವನಾಥ ಅವರು 1 ಲಕ್ಷ ಮತಗಳಿಂದ ಲೀಡ್ ನಿಂದ ಗೆಲ್ಲಿಸಿದರೆ ರಾಜ್ಯದಲ್ಲಿ ಬಿಜೆಪಿ 130 ಸ್ಥಾನ ಪಡೆದು ಮತ್ತೆ ಸರ್ಕಾರ ಸ್ಥಾಪನೆ ಮಾಡಲಿದೆ ಎಂದು ಹೇಳಿದರು.
ಏಪ್ರಿಲ್ 13 ರಿಂದ ಆರಂಭವಾಗಿದ್ದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಏಪ್ರಿಲ್ 21ರವರೆಗೆ ಪೂರ್ಣಗೊಂಡಿದೆ. ನಾಮಪತ್ರ ಹಿಂಪಡೆಯಲು ನಾಳೆ ಏಪ್ರಿಲ್ 24 ಕೊನೆಯ ದಿನವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.