ಬೆಂಗಳೂರು, (ಮೇ.28): ಕೋವಿಡ್ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಗಳನ್ನು ಮುಂದೂಡಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ ನಡೆಸುವ  ಬಗ್ಗೆ ಪರಿಶೀಲಿಸಿದ್ದು,ಪ್ರಸ್ತುತ ಪರಿಸ್ಥಿತಿಯನ್ನು “ಅಸಾಧಾರಣ ಪರಿಸ್ಥಿತಿ” ಎಂದು ಪರಿಗಣಿಸಲಾಗಿದೆ.

ಚುನಾವಣೆ ಆಯೋಗ ಮೊರೆ ಹೋದ ಕಾಂಗ್ರೆಸ್: ರಾಜ್ಯದಲ್ಲಿ ರಂಗೇರಿದ ರಾಜಕೀಯ

 ಸಂವಿಧಾನದ ಪರಿಚ್ಛೇದ 243-ಕೆ ರಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ಸಂಬಂಧ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಲು ತೀರ್ಮಾನಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲಕೋಕಿಸಿ ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ ನಡೆಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಆಯೋಗದ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯದಲ್ಲಿನ 6,025 ಗ್ರಾಮ ಪಂಚಾಯಿತಿಗಳಲ್ಲಿ 2020ರ ಜೂನ್ ತಿಂಗಳಿಂದ ಆಗಸ್ಟ್ ತಿಂಗಳವರೆಗೆ 5,800 ಗ್ರಾಮ ಪಂಚಾಯಿತಿಗಳಿಗೆ ಅವಧಿಮುಗಿಯಲಿದ್ದು, ಅದಕ್ಕಾಗಿ ಚುನಾವಣೆ ನಡೆಸಬೇಕಾಗಿತ್ತು.

ಆದರೆ, ಕೋವಿಡ್-19 ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಿ ಆಡಳಿತ ಸಮಿತಿ ನೇಮಕ ಮಾಡುವ ನಿರ್ಧಾರಕ್ಕೆ ಸರ್ಕಾರ ಬಂದಿತ್ತು. ಇದಕ್ಕೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಅಲ್ಲದೇ ಕಾಂಗ್ರೆಸ್ ನಿಯೋಗವೊಂದು ರಾಜ್ಯ ಚುನಾವಣೆ ಆಯೋಗವನ್ನು ಭೇಟಿ ಮಾಡಿ ಈ ಬಗ್ಗ ಮನವರಿಕೆ ಮಾಡಿ ಕೊಟ್ಟಿತ್ತು.