ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ: ಬಿಜೆಪಿ, ಕಾಂಗ್ರೆಸ್ ನೇರ ಹಣಾಹಣಿ
ಪಶ್ಚಿಮಘಟ್ಟತಪ್ಪಲನ್ನು ಹೊದ್ದುಕೊಂಡಿರುವ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಎಂಟು ಮಂದಿ ಕಣದಲ್ಲಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆಯೇ ಇಲ್ಲಿ ಜಿದ್ದಾಜಿದ್ದಿ. ಈ ಬಾರಿಯೂ ಇದೇ ಪರಿಸ್ಥಿತಿ. ಬಿಜೆಪಿಯಲ್ಲಿ ಹಾಲಿ ಶಾಸಕ ಹರೀಶ್ ಪೂಂಜಾ ಎರಡನೇ ಬಾರಿ ಕ್ಷೇತ್ರ ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಇದ್ದರೆ, ಕಾಂಗ್ರೆಸ್‌ನ ಹೊಸಮುಖ ರಕ್ಷಿತ್ ಶಿವರಾಮ್ ಅದೃಷ್ಟಪರೀಕ್ಷೆಗೆ ಹೊರಟಿದ್ದಾರೆ.
ಆತ್ಮಭೂಷಣ್
ಮಂಗಳೂರು (ಏ.29) : ಪಶ್ಚಿಮಘಟ್ಟತಪ್ಪಲನ್ನು ಹೊದ್ದುಕೊಂಡಿರುವ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಎಂಟು ಮಂದಿ ಕಣದಲ್ಲಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆಯೇ ಇಲ್ಲಿ ಜಿದ್ದಾಜಿದ್ದಿ. ಈ ಬಾರಿಯೂ ಇದೇ ಪರಿಸ್ಥಿತಿ. ಬಿಜೆಪಿಯಲ್ಲಿ ಹಾಲಿ ಶಾಸಕ ಹರೀಶ್ ಪೂಂಜಾ(Harish poonja) ಎರಡನೇ ಬಾರಿ ಕ್ಷೇತ್ರ ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಇದ್ದರೆ, ಕಾಂಗ್ರೆಸ್‌ನ ಹೊಸಮುಖ ರಕ್ಷಿತ್ ಶಿವರಾಮ್(Rakshith shivaram) ಅದೃಷ್ಟಪರೀಕ್ಷೆಗೆ ಹೊರಟಿದ್ದಾರೆ. ಜೆಡಿಎಸ್, ಆಮ್‌ಆದ್ಮಿ ಸೇರಿದಂತೆ ಇತರೆ ಪಕ್ಷಗಳಿದ್ದರೂ ಪ್ರಬಲ ಸೆಣಸಾಟದಲ್ಲಿ ಗೌಣ ಎನಿಸಿವೆ. ಬಿಜೆಪಿಯು ಹಿಂದುತ್ವ ಮತ್ತು ಅಭಿವೃದ್ಧಿಯನ್ನು ಪ್ರಮುಖ ಅಂಜೆಂಡಾ ಮಾಡಿದರೆ, ಬಿಜೆಪಿಯ ದುರಾಡಳಿತವನ್ನೇ ಕಾಂಗ್ರೆಸ್ ಪ್ರಚಾರಕ್ಕೆ ಅಸ್ತ್ರವಾಗಿಸಿದೆ. ಇಲ್ಲಿ ಬಿಲ್ಲವ ಹಾಗೂ ಒಕ್ಕಲಿಗರ ಪ್ರಾಬಲ್ಯ ಇದೆ.
ಪೂಂಜಾ ವಿಶ್ವಾಸ:
ಕಳೆದ ಐದು ವರ್ಷಗಳಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳು ತನ್ನ ಕೈಹಿಡಿಯುತ್ತವೆ ಎನ್ನುವುದು ಅಭ್ಯರ್ಥಿ ಹರೀಶ್ ಪೂಂಜಾ ಅವರ ಲೆಕ್ಕಾಚಾರ. ಅದಕ್ಕಾಗಿ ಚುನಾವಣೆ ಘೋಷಣೆ ಮೊದಲೇ ಕ್ಷೇತ್ರದಾದ್ಯಂತ ಓಡಾಟ ಶುರು ಮಾಡಿದ್ದಾರೆ. ಕಾರ್ಯಕರ್ತರ ಜತೆ ತನ್ನ ಶ್ರಮಿಕ ಹೆಸರಿನ ಕಚೇರಿ ಮೂಲಕ ನಿರಂತರ ಸಂಪರ್ಕ ಇರಿಸಿಕೊಂಡಿದ್ದಾರೆ. ಇವರ ಹಿಂದೆ ಕಾರ್ಯಕರ್ತರ ದಂಡೇ ಇರುವುದರಿಂದ ಮೊದಲ ಸುತ್ತಿನ ಪ್ರಚಾರ ಪೂರ್ಣಗೊಳಿಸಿದ್ದಾರೆ. ಎಲ್ಲ ಬೂತ್‌ಗಳಲ್ಲಿ ಕಾರ್ಯಕರ್ತರ ತಂಡ ಇರುವುದರಿಂದ ಸಂಘಪರಿವಾರದ ಸಹಕಾರದಲ್ಲಿ ಮನೆ ಮನೆ ಸಂಪರ್ಕ ಆರಂಭಿಸಿದ್ದಾರೆ. ಈಗ ಎರಡನೇ ಸುತ್ತು ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ನಡುವೆ ಬೆಳ್ತಂಗಡಿ ಕ್ಷೇತ್ರಕ್ಕೆ ಬಿಜೆಪಿ ಕೇಂದ್ರ ನಾಯಕರನ್ನು ಪ್ರಚಾರಕ್ಕೆ ಕರೆಸಿಕೊಳ್ಳುವ ಚಿಂತನೆಯಲ್ಲಿದೆ.
ಕೈವಶಕ್ಕೆ ಹೋರಾಟ:
ಕೈ ತಪ್ಪಿರುವ ಬೆಳ್ತಂಗಡಿ ಕ್ಷೇತ್ರವನ್ನು ಮರಳಿ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ಯುವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ. ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಸಂಬಂಧಿಯಾದ ಅಭ್ಯರ್ಥಿ ರಕ್ಷಿತ್ ಶಿವರಾಮ್ ಹೊಸಮುಖವಾದರೂ ಇವರ ತವರು ಬೆಳ್ತಂಗಡಿ. ಕಳೆದ ಒಂದು ವರ್ಷದಿಂದ ಕ್ಷೇತ್ರ ಪರ್ಯಟನೆಯಲ್ಲಿ ನಿರತರಾಗಿದ್ದರು. ಹೀಗಾಗಿ ಈಗ ಕ್ಷೇತ್ರದ ಪರಿಚಯ ಮಾಡಿಕೊಂಡಿದ್ದು, ಇನ್ನೂ ಪ್ರಥಮ ಸುತ್ತು ಪೂರ್ಣಗೊಳಿಸಿಲ್ಲ. ರಕ್ಷಿತ್ ಶಿವರಾಮ್ ಅವರು ಈಗಷ್ಟೇ ಪ್ರಚಾರಕ್ಕೆ ಇಳಿದಿದ್ದಾರೆ. ಅಭ್ಯರ್ಥಿ ಘೋಷಣೆ ವಿಳಂಬ ಆಗಿರುವುದು ಪ್ರಚಾರ ಕಾರ್ಯದಲ್ಲಿ ತುಸು ಹಿನ್ನಡೆಗೆ ಕಾರಣವಾಗಿದೆ. ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ಜನತೆಗೆ ಮನದಟ್ಟು ಮಾಡಲು ಯತ್ನಿಸುತ್ತಿದ್ದಾರೆ. ಅಲ್ಲದೆ ಶಾಸಕ ಹರೀಶ್ ಪೂಂಜಾ ಅವರು ಕ್ಷೇತ್ರದ ಏಳಿಗೆಗೆ ಗಮನಾರ್ಹ ಯೋಜನೆ ಹಾಕಿಕೊಂಡಿಲ್ಲ. ಅದಕ್ಕಾಗಿ ಈ ಬಾರಿ ಬದಲಾವಣೆ ಬೇಕು ಎಂದು ಮನೆಗಳ ಮನ ತಲುಪಲು ಯತ್ನಿಸುತ್ತಿದ್ದಾರೆ. ರಕ್ಷಿತ್ ಶಿವರಾಮ್‌ಗೆ ಮಾಜಿ ಶಾಸಕ ವಸಂತ ಬಂಗೇರ ಅವರ ಸಾಥ್ ಇದೆ. ಸಿನಿಮಾ ನಟರು ಹಾಗೂ ಪಕ್ಷದ ನಾಯಕರನ್ನು ಕ್ಷೇತ್ರಕ್ಕೆ ಆಹ್ವಾನಿಸುವ ಇರಾದೆ ಕಾಂಗ್ರೆಸಿಗರಲ್ಲಿ ಇದೆ.
ಒಳ ಏಟು ಭೀತಿ:
ಇಲ್ಲಿ ಬಿಲ್ಲವರೇ(Billava community) ಪ್ರಬಲರಾಗಿದ್ದು, ಇವರ ಒಲವು ಯಾರ ಕಡೆಗೆ ಎಂಬುದು ನಿರ್ಣಾಯಕವಾಗಲಿದೆ. ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ಅವರು ಬಿಲ್ಲವ ಸಮುದಾಯಕ್ಕೆ ಸೇರಿದ್ದು, ಜಾತಿ ಓಲೈಕೆಗೆ ಮುಂದಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಬಿಜೆಪಿಯ ಹರೀಶ್ ಪೂಂಜಾ ಅವರು ಬಿಲ್ಲವ ಸಮುದಾಯ ಜತೆ ಇದ್ದು, ಅದು ವಿಭಜನೆಯಾಗದಂತೆ ಪ್ರಯತ್ನಿಸುತ್ತಿದ್ದಾರೆ. ಇವೆಲ್ಲದರ ನಡುವೆ ಬಿಲ್ಲವ ಸಮುದಾಯದ ಒಳ ಏಟು ಇವರಿಬ್ಬರಲ್ಲಿ ಒಬ್ಬರಿಗೆ ಹೊಡೆತ ನೀಡಿದರೂ ಫಲಿತಾಂಶದಲ್ಲಿ ಏರುಪೇರು ಆಗಲಿದೆ.
ಕಣದಲ್ಲಿ ಒಟ್ಟು 8 ಮಂದಿ
ಈ ಬಾರಿ ಕಣದಲ್ಲಿ ಒಟ್ಟು 8 ಮಂದಿ ಇದ್ದಾರೆ.
ಬಿಜೆಪಿಯಿಂದ ಹರೀಶ್ ಪೂಂಜಾ, ಕಾಂಗ್ರೆಸ್‌ನಿಂದ ರಕ್ಷಿತ್ ಶಿವರಾಮ್, ಜೆಡಿಎಸ್‌ನಿಂದ ಅಶ್ರಫ್ ಆಲಿಕುಂಞಿ ಮುಂಡಾಜೆ, ಆಮ್‌ಆದ್ಮಿ ಪಾರ್ಟಿಯ ಜನಾರ್ದನ ಬಂಗೇರ, ಎಸ್‌ಡಿಪಿಐನ ಅಕ್ಬರ್ ಬೆಳ್ತಂಗಡಿ, ಸರ್ವೋದಯ ಕರ್ನಾಟಕ ಪಕ್ಷದ ಆದಿತ್ಯ ನಾರಾಯಣ ಕೊಲ್ಲಾಜೆ, ತುಳುವೆರೆ ಪಕ್ಷದ ಶೈಲೇಶ್ ಆರ್.ಜೆ ಹಾಗೂ ಪಕ್ಷೇತರನಾಗಿ ಮಹೇಶ್ ಆಟೋ ಕಣದಲ್ಲಿದ್ದಾರೆ.
2018 ಫಲಿತಾಂಶ
ಹರೀಶ್ ಪೂಂಜಾ(ಬಿಜೆಪಿ)ಗೆಲವು-98,417, ವಸಂತ ಬಂಗೇರ(ಕಾಂಗ್ರೆಸ್)-75,443, ನೋಟಾ-1,245, ಒಟ್ಟು ಚಲಾವಣೆಯಾದ ಮತಗಳು-1,79,550
ಜಾತಿ ಲೆಕ್ಕಾಚಾರ
ಬಿಲ್ಲವ-75,000, ಒಕ್ಕಲಿಗ-36,000, ಮುಸ್ಲಿಂ-38,000, ಎಸ್‌ಸಿ ಎಸ್‌ಟಿ-31,000, ಬಂಟ್ಸ್-22,000 ಹಾಗೂ ಇತರೆ.
ಒಟ್ಟು ಮತದಾರರು-2,28,871, ಪುರುಷರು-1,13,774, ಮಹಿಳೆಯರು-1,15,096, ತೃತೀಯ ಲಿಂಗಿ-01