ಟ್ರಬಲ್ ಶೂಟರ್ ಡಿಕೆಶಿ ವಿರುದ್ಧ ಸಾಮ್ರಾಟ ಆರ್.ಅಶೋಕ್ ಕಣಕ್ಕೆ
ಜೆಡಿಎಸ್ - ಕಾಂಗ್ರೆಸ್ ನ ಭದ್ರಕೋಟೆಯಾಗಿರುವ ರಾಮನಗರ ಜಿಲ್ಲೆಯಲ್ಲಿ ಕಮಲ ಅರಳಿಸುವ ಉಮೇದಿನಲ್ಲಿರುವ ಬಿಜೆಪಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಟಕ್ಕರ್ ನೀಡಲು ಕನಕಪುರ ಕ್ಷೇತ್ರದಿಂದ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಕಣಕ್ಕಿಳಿಸುತ್ತಿದೆ.
ಎಂ.ಅಫ್ರೋಜ್ ಖಾನ್
ರಾಮನಗರ (ಏ.12) : ಜೆಡಿಎಸ್ - ಕಾಂಗ್ರೆಸ್ ನ ಭದ್ರಕೋಟೆಯಾಗಿರುವ ರಾಮನಗರ ಜಿಲ್ಲೆಯಲ್ಲಿ ಕಮಲ ಅರಳಿಸುವ ಉಮೇದಿನಲ್ಲಿರುವ ಬಿಜೆಪಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಟಕ್ಕರ್ ನೀಡಲು ಕನಕಪುರ ಕ್ಷೇತ್ರದಿಂದ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಕಣಕ್ಕಿಳಿಸುತ್ತಿದೆ.
ಪದ್ಮನಾಭನಗರ ಕ್ಷೇತ್ರದ ಜೊತೆಗೆ ಕನಕಪುರ ಕ್ಷೇತ್ರದಿಂದಲೂ ಆರ್.ಅಶೋಕ್(R Ashok) ಸ್ಪರ್ಧೆಗಿಳಿಯಲಿದ್ದು, ಇದು ವಿಪಕ್ಷಗಳಿಗೆ ಮಾತ್ರವಲ್ಲ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಲ್ಲೂ ಅಚ್ಚರಿ ಮೂಡಿಸಿದೆ. ಉಳಿದಂತೆ ನಿರೀಕ್ಷೆಯಂತೆ ಚನ್ನಪಟ್ಟಣ ಕ್ಷೇತ್ರದಿಂದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್(CP Yogeshwar) , ರಾಮನಗರ ಕ್ಷೇತ್ರದಿಂದ ರಾಜ್ಯ ರೇಷ್ಮೆ ಕೈಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ಗೌತಮ್ ಗೌಡ ಹಾಗೂ ಮಾಗಡಿ ಕ್ಷೇತ್ರದಲ್ಲಿ ಯುವ ಮುಖಂಡ ಪ್ರಸಾದ್ ಗೌಡ ಅವರಿಗೆ ಟಿಕೆಟ್ ನೀಡಲಾಗಿದೆ.
ಚುನಾವಣಾ ನಿವೃತ್ತಿ ಘೋಷಣೆ, ಈಶ್ವರಪ್ಪ ನಿರ್ಧಾರ ಯುವಕರಿಗೆ ಸ್ಫೂರ್ತಿ: ತೇಜಸ್ವಿ ಸೂರ್ಯ
ಬಂಡೆ ಉರುಳಿಸಲು ಸಾಮ್ರಾಟ ದಾಳ :
ಕನಕಪುರ ಕ್ಷೇತ್ರ(Kanakapur assembly constituency)ದಲ್ಲಿ ಎದುರಾಳಿಯೇ ಇಲ್ಲದೆ ಗೆದ್ದು ಚಕ್ರಾಧಿಪತಿಯಂತೆ ಮರೆಯುತ್ತಿದ್ದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್(DK Shivakumar) ಅವರನ್ನು ಸ್ವ ಕ್ಷೇತ್ರದಲ್ಲಿಯೇ ಕಟ್ಟಿಹಾಕಲು ಸಾಮ್ರಾಟ ಆರ್. ಅಶೋಕ್ ಅವರನ್ನು ಬಿಜೆಪಿ ದಾಳವಾಗಿ ಪ್ರಯೋಗಿಸುತ್ತಿದೆ.
ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷ ಮಾತ್ರವಲ್ಲ ಒಕ್ಕಲಿಗ ಸಮುದಾಯದಲ್ಲಿಯೂ ಪ್ರಬಲ ನಾಯಕರು ಆಗಿದ್ದಾರೆ. ಅವರಿಗೆ ಸರಿಸಮಾನವಾಗಿ ಪೈಪೋಟಿ ನೀಡುವಂತಹ ಬಿಜೆಪಿ ನಾಯಕರು ಕ್ಷೇತ್ರದಲ್ಲಿ ಇರಲಿಲ್ಲ. ಹೀಗಾಗಿ ಶಿವಕುಮಾರ್ ಅವರನ್ನು ಶತಾಯ ಗತಾಯ ಸೋಲಿಸಲೇ ಬೇಕೆಂದು ಪಣ ತೊಟ್ಟಿರುವ ವರಿಷ್ಠರು, ಸಚಿವರೂ ಅಷ್ಟೇ ಅಲ್ಲದೆ ಒಕ್ಕಲಿಗ ಸಮುದಾಯದ ನಾಯಕರೂ ಆಗಿರುವ ಆರ್.ಅಶೋಕ್ ಅವರನ್ನು ಅಖಾಡಕ್ಕಿಳಿಸುತ್ತಿದೆ.
ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಕನಕಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಜಗನ್ನಾಥ್ , ಮುಖಂಡರಾದ ರವಿ ಕುಮಾರ್ , ನಂದಿನಿಗೌಡ ಹಾಗೂ ಅಪ್ಪಾಜಿಗೌಡ ಹೆಸರು ಚಾಲ್ತಿಯಲ್ಲಿತ್ತು. ಆದರೆ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಆದರೀಗ ಶಿವಕುಮಾರ್ ವಿರುದ್ಧ ಸ್ಪರ್ಧಿಸಲು ಪ್ರಬಲ ಅಭ್ಯರ್ಥಿಯೇ ಕಣಕ್ಕಿಳಿಯುತ್ತಿರುವ ಕಾರಣ ಕಮಲ ಪಾಳಯದಲ್ಲಿ ಅಸಮಾಧಾನ ಕಂಡು ಬರುತ್ತಿಲ್ಲ. ಜೆಡಿಎಸ್ ತನ್ನ ಹುರಿಯಾಳನ್ನು ಅಂತಿಮಗೊಳಿಸಿದ ನಂತರ ಚುನಾವಣೆ ಮತ್ತಷ್ಟುರಂಗೇರುವುದರಲ್ಲಿ ಅನುಮಾನ ಇಲ್ಲ.
ದಳಪತಿ ವರ್ಸಸ್ ಸೈನಿಕನ ಕಾದಾಟಕ್ಕೆ ಅಖಾಡ ರೆಡಿ:
ಬೊಂಬೆನಾಡು ಚನ್ನಪಟ್ಟಣ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೆಸರು ಪ್ರಕಟಗೊಳ್ಳುತ್ತಿದ್ದಂತೆ ಅವರ ಕುರಿತು ಹರಿದಾಡುತ್ತಿದ್ದ ಪಕ್ಷಾಂತರದ ವದಂತಿಗಳಿಗೆ ಅಂತಿಮವಾಗಿ ತೆರೆ ಬಿದ್ದಿದೆ. ಈ ಮೂಲಕ ಜೆಡಿಎಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಯೋಗೇಶ್ವರ್ ನಡುವಿನ ಕುಸ್ತಿಗೆ ಅಖಾಡ ಸಿದ್ಧಗೊಂಡಂತಾಗಿದೆ.
ಕಾಂಗ್ರೆಸ್ ಪಕ್ಷ ಚನ್ನಪಟ್ಟಣ ಅಭ್ಯರ್ಥಿ ಘೋಷಣೆ ಮಾಡದೆ ಯೋಗೇಶ್ವರ್ ಬರುವಿಕೆಯನ್ನು ಎದುರು ನೋಡುತ್ತಿತ್ತು. ಕೈ ನಾಯಕರು ಅವರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದರು. ಬಿಜೆಪಿಯ ಮೊದಲ ಪಟ್ಟಿಯಲ್ಲಿ ಹೆಸರು ಪ್ರಕಟಗೊಳ್ಳದಿದ್ದರೆ ಯೋಗೇಶ್ವರ್ ಸಿಂಪತಿ ಗಿಟ್ಟಿಸಿಕೊಂಡು ಕಾಂಗ್ರೆಸ್ ಸೇರ್ಪಡೆಯಾಗುವುದು ನಿಶ್ಚಿತ ಎನ್ನಲಾಗಿತ್ತು.
ಈಗ ಕುಮಾರಸ್ವಾಮಿ ಮತ್ತು ಯೋಗೇಶ್ವರ್ ಗೆ ಪೈಪೋಟಿ ನೀಡಬಲ್ಲ ಅಭ್ಯರ್ಥಿಯನ್ನು ಹುಡುಕುವುದೇ ಕಾಂಗ್ರೆಸ್ ಗೆ ತಲೆನೋವಾಗಿ ಪರಿಣನಿಸಿದೆ. ಸಂಸದ ಡಿ.ಕೆ.ಸುರೇಶ್ ಅವರಂತಹ ಪ್ರಬಲ ನಾಯಕರು ಸ್ಪರ್ಧಿಸಿದರೆ ಮಾತ್ರ ತ್ರಿಕೋನ ಸ್ಪರ್ಧೆ ಎದುರು ನೋಡಬಹುದು. ಇಲ್ಲದಿದ್ದರೆ ಎಚ್ ಡಿಕೆ ಮತ್ತು ಸಿಪಿವೈ ನಡುವೆ ದೊಡ್ಡ ಮಟ್ಟದ ಹೋರಾಟ ಕಂಡುಬರುವುದರಲ್ಲಿ ಅನುಮಾನವಿಲ್ಲ. ಆಗ ಕ್ಷೇತ್ರದಲ್ಲಿ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದಂತಾಗುತ್ತದೆ.
ಇನ್ನು ಮಾಗಡಿ ಕ್ಷೇತ್ರದಿಂದ ಯುವ ಮುಖಂಡ ಪ್ರಸಾದ್ ಗೌಡ ಅವರಿಗೆ ಬಿಜೆಪಿ ಅವಕಾಶ ನೀಡಿದೆ. ಜೆಡಿಎಸ್ ನ ಎ.ಮಂಜುನಾಥ್ ಹಾಗೂ ಕಾಂಗ್ರೆಸ್ ನ ಬಾಲಕೃಷ್ಣ ವಿರುದ್ಧ ಸೆಣಸಾಟ ನಡೆಸಲು ಪ್ರಸಾದ್ ಗೌಡ ಕ್ಷೇತ್ರದಾದ್ಯಂತ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಇಲ್ಲಿ ಮಾಗಡಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ರಂಗಧಾಮಯ್ಯ, ಬಿಜೆಪಿ ತಾಲೂಕು ಅಧ್ಯಕ್ಷ ಧನಂಜಯ್ಯ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ನಿರ್ದೇಶಕ ಎಚ್ .ಎನ್ .ಕೃಷ್ಣಮೂರ್ತಿ ಪ್ರಬಲ ಆಕಾಂಕ್ಷಿಯಾಗಿದ್ದರು. ಇವರಲ್ಲಿ ಕೆಲವರು ಬಂಡಾಯದ ಬಾವುಟ ಹಾರಿಸಿದರು ಅಚ್ಚರಿ ಇಲ್ಲ.
ರೇಷ್ಮೆನಗರಿಯಲ್ಲಿ ಬಿಜೆಪಿ ಅಂದುಕೊಂಡಷ್ಟುಶಕ್ತಿಯುತವಾಗಿಲ್ಲ. ಹೀಗಿದ್ದರೂ ಆರ್.ಅಶೋಕ್ ಅವರಂತಹ ಅಚ್ಚರಿ ಅಭ್ಯರ್ಥಿ ಜೊತೆಗೆ ಹೊಸ ಮುಖಗಳಾದ ಯುವ ಮುಖಂಡರಿಗೆ ಟಿಕೆಟ್ ಘೋಷಿಸಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಚನ್ನಪಟ್ಟಣದಲ್ಲಿ ಯೋಗೇಶ್ವರ್ ಬಲವನ್ನೇ ತಮ್ಮ ಸಂಘಟನೆ ಎಂದುಕೊಂಡಿದೆ. ಬೊಂಬೆನಗರಿಯಲ್ಲಿ ಕುಮಾರಸ್ವಾಮಿ ಮತ್ತೊಮ್ಮೆ ಅದೃಷ್ಟಪರೀಕ್ಷೆಗೆ ಮುಂದಾಗುವುದರಿಂದ ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆಯುವುದೇ ಎನ್ನುವುದನ್ನು ಕಾದು ನೋಡಬೇಕಿದೆ.
ಚುನಾವಣೆ ನಿವೃತ್ತಿ ಘೋಷಣೆ: ಈಶ್ವರಪ್ಪರದು ‘ಲವ್ ಲೆಟರ್' ಎಂದ ಡಿಕೆಶಿ
ಸೋಲು ಗೆಲುವಿನಲ್ಲಿ ಕಮಲ ಕಲಿಗಳ ನಿರ್ಣಾಯಕ ಪಾತ್ರ
ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ವಿರುದ್ಧ ಗೌತಮ್ ಗೌಡ ಅವರನ್ನು ಬಿಜೆಪಿ ರಣರಂಗಕ್ಕೆ ಇಳಿಸುತ್ತಿದೆ. ಮೇಲ್ನೋಟಕ್ಕೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯಂತೆ ಕಂಡು ಬಂದರು ಗೌತಮ್ ಗೌಡ ತೆಗೆದುಕೊಳ್ಳುವ ಮತಗಳು ಜೆಡಿಎಸ್ ಹಿನ್ನಡೆಗೆ ಕಾರಣವಾಗಲಿದೆ. ಈ ಕ್ಷೇತ್ರದಲ್ಲಿ ಡಾ.ಪುಣ್ಯಾವತಿ ಹಾಗೂ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ನಿರ್ದೇಶಕ ಡಿ.ನರೇಂದ್ರ ಬಿಜೆಪಿಯಿಂದ ಪ್ರಬಲ ಆಕಾಂಕ್ಷಿಯಾಗಿದ್ದರು. ಟಿಕೆಟ್ ತಪ್ಪಿರುವುದರಿಂದ ಗೌತಮ್ ಗೌಡರ ವಿರುದ್ಧ ಅಸಮಾಧಾನಿತರ ಗುಂಪು ಭಿನ್ನಮತಿಯ ಚಟುವಟಿಕೆ ನಡೆಸುವುದರಲ್ಲಿ ಅನುಮಾನ ಇಲ್ಲ.