ಬಿಜೆಪಿ ಮುಖಂಡ ಕೆ.ಎಸ್‌. ಈಶ್ವರಪ್ಪ ಅವರು ಚುನಾವಣಾ ನಿವೃತ್ತಿ ಘೋಷಿಸಿದ ಪತ್ರವನ್ನು ‘ಲವ್‌ ಲೆಟರ್‌’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವ್ಯಂಗ್ಯವಾಡಿದ್ದಾರೆ.ಇನ್ನೂ ಬಹಳ ಜನ ಇಂತಹ ಲೆಟರ್‌ ಕೊಡೋರಿದ್ದಾರೆ. ಬಿಜೆಪಿಯವರದ್ದು ಇಷ್ಟೆಲ್ಲಾ ಇದ್ದರೂ ನೀವ್ಯಾಕೆ ಬರೀ ಕಾಂಗ್ರೆಸ್‌ನವರ ಬೆನ್ನು ಬಿದ್ದಿದ್ದಿರಿ ಎಂದು ಎಂದು ಪತ್ರಕರ್ತರಿಗೆ ಪ್ರಶ್ನಿಸಿದರು.

ಬೆಂಗಳೂರು (ಏ.12): ಬಿಜೆಪಿ ಮುಖಂಡ ಕೆ.ಎಸ್‌. ಈಶ್ವರಪ್ಪ ಅವರು ಚುನಾವಣಾ ನಿವೃತ್ತಿ ಘೋಷಿಸಿದ ಪತ್ರವನ್ನು ‘ಲವ್‌ ಲೆಟರ್‌’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವ್ಯಂಗ್ಯವಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ‘ಈಶ್ವರಪ್ಪ ಲವ್‌ ಲೆಟರ್‌ (ರಾಜಕೀಯ ನಿವೃತ್ತಿ ಪತ್ರ) ಬರೆದಿದ್ದಾರೆ.

ಇನ್ನೂ ಬಹಳ ಜನ ಇಂತಹ ಲೆಟರ್‌ ಕೊಡೋರಿದ್ದಾರೆ. ಬಿಜೆಪಿಯವರದ್ದು ಇಷ್ಟೆಲ್ಲಾ ಇದ್ದರೂ ನೀವ್ಯಾಕೆ ಬರೀ ಕಾಂಗ್ರೆಸ್‌ನವರ ಬೆನ್ನು ಬಿದ್ದಿದ್ದಿರಿ. ಆ ಕಡೆಯೂ ನೋಡಿ’ ಎಂದು ಪತ್ರಕರ್ತರಿಗೆ ಪ್ರಶ್ನಿಸಿದರು. ಬಿಜೆಪಿ ನಾಯಕ ಲಕ್ಷ್ಮಣ ಸವದಿ(Laxman savadi) ಅವರು ಕಾಂಗ್ರೆಸ್‌(join congress) ಸೇರುತ್ತಾರಾ ಎಂಬ ಪ್ರಶ್ನೆಗೆ, ಲಕ್ಷ್ಮಣ ಸವದಿ ಕಾಂಗ್ರೆಸ್‌ ಸೇರ್ಪಡೆಯಾಗುತ್ತಾರೆ ಎನ್ನುವುದು ಸುಳ್ಳು. ನಮ್ಮ ಮುಂದೆ ಸದ್ಯ ಯಾವುದೇ ಬಿಜೆಪಿ ನಾಯಕರು ಪಕ್ಷ ಸೇರ್ಪಡೆ ಪ್ರಸ್ತಾಪವು ಇಲ್ಲ. ಶಿವಮೊಗ್ಗ, ಹಾವೇರಿ ಕಡೆಯ ಕೆಲವರು ಬಂದಿದ್ದರು. ಆದರೆ, ನಮ್ಮವರಿಗೂ ಸ್ಥಾನಮಾನ ಬೇಕಲ್ಲ. ಖಾಲಿ ಖುರ್ಚಿ ಇದ್ದಾಗ ಕೂರಿಸಬಹುದು. ಒಂದು ವೇಳೆ ಬಿಜೆಪಿಗೆ ರಾಜೀನಾಮೆ ಕೊಟ್ಟು ಬೇಡಿಕೆ, ಷರತ್ತುಗಳಿಲ್ಲದೆ ಬಂದರೆ ನಾವು ಸೇರಿಸಿಕೊಳ್ಳುತ್ತೇವೆ ಎಂದರು.

ವಿಧಾನಸಭಾ ಚುನಾವಣೆ: ರಾಜ್ಯದಲ್ಲಿ ನಾಳೆಯಿಂದ ನಾಮಪತ್ರ ಸಲ್ಲಿಕೆ ಶುರು!

ಈಶ್ವರಪ್ಪ ರಾಜಕೀಯ ನಿವೃತ್ತಿ ವಿಚಾರವಾಗಿ ಮಾತನಾಡಿದ ಅವರು, ನಾನು ವಿಧಾನಸಭೆಯಲ್ಲೇ ಅವರ ಬಗ್ಗೆ ಏನು ಹೇಳಬೇಕೋ ಎಲ್ಲಾ ಹೇಳಿದ್ದೇನೆ, ಅವರಿಗೆ ಒಳ್ಳೆಯದಾಗಲಿ. ರಾಜ್ಯಕ್ಕೆ ಸೇವೆ ಮಾಡಿದ್ದಾರೆ ಎಂದು ಹೇಳಿದರು.

ಪಕ್ಷ ಕೈಬಿಡೋ ಮೊದಲು ನಾನೇ ನಿವೃತ್ತಿ ಪಡೆದೆ: ಈಶ್ವರಪ್ಪ

ಶಿವಮೊಗ್ಗ (ಏ.12) : ಚುನಾವಣಾ ರಾಜಕೀಯದಿಂದ ನಿವೃತ್ತಿ ಕೋರಿ ನಾನು ಬರೆದ ಪತ್ರವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಅಂಗೀಕರಿಸಬೇಕು. ಪಕ್ಷ ನನ್ನ ಕೈ ಬಿಡುವುದಕ್ಕಿಂತ ಮೊದಲು ನಾನೇ ರಾಷ್ಟಾ್ರಧ್ಯಕ್ಷರಿಗೆ ಪತ್ರ ಬರೆದು ನಿವೃತ್ತಿ ತೆಗೆದುಕೊಂಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ, ಆದರೆ ಚುನಾವಣೆ ಜವಾಬ್ದಾರಿ ನೀಡಿದರೆ ಅದನ್ನು ನಿರ್ವಹಿಸಲು ಸಿದ್ಧನಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ(KS Eshwarappa) ತಿಳಿಸಿದರು.

ಚುನಾವಣಾ ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುತ್ತಿರುವ ನಿರ್ಧಾರ ಕುರಿತು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಖಚಿತಪಡಿಸಿದ ಅವರು, ಈ ಬಾರಿ ಚುನಾವಣೆಯಲ್ಲಿ ಅನೇಕ ಹಿರಿಯರನ್ನು ಕೈಬಿಡಲಾಗಿದೆ. ನಾಲ್ಕೈದು ಬಾರಿ ಗೆದ್ದು ಮಂತ್ರಿಯಾದವರಿಗೂ ಟಿಕೆಟ್‌ ತಪ್ಪಿದೆ. ಹೀಗಾಗಿ ಅವರೇ ನನ್ನ ಕೈ ಬಿಡುವುದಕ್ಕಿಂತ ನಾನೇ ಅವರಿಗೆ ಪತ್ರ ಬರೆದು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದೇನೆ. ಕಾರ್ಯಕರ್ತರು ಇದಕ್ಕೆ ಒಪ್ಪಲ್ಲ ಎಂಬುದು ನನಗೆ ತಿಳಿದಿತ್ತು. ಹೀಗಾಗಿ, ಯಾರೊಂದಿಗೂ ಚರ್ಚಿಸಲಿಲ್ಲ. ನನ್ನ ಈ ನಿರ್ಧಾರದಿಂದ ಕ್ಷೇತ್ರದಲ್ಲಿ ಬಿಜೆಪಿಗೆ ಯಾವುದೇ ತೊಂದರೆಯಾಗುವುದಿಲ್ಲ. ಲಕ್ಷ ಲಕ್ಷ ಕಾರ್ಯಕರ್ತರು ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಅವರೆಲ್ಲರ ಶ್ರಮ ಫಲ ನೀಡಲಿದೆ ಎಂದರು.

ಪಕ್ಷಕ್ಕೆ ದ್ರೋಹ ಮಾಡಲ್ಲ: ಒಂದೇ ನಿಮಿಷದಲ್ಲಿ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಬಹುದು. ಆದರೆ ಯಾವ ತಾಯಿ ನಮ್ಮನ್ನು ಸಾಕಿ ಸಲಹಿದಳೋ ಅವಳಿಗೆ ದ್ರೋಹ ಬಗೆಯಬಾರದು. ನಮಗೂ ನೋವಾಗುತ್ತದೆ. ಆದರೆ ಪಕ್ಷ ತೆಗೆದುಕೊಂಡ ತೀರ್ಮಾನ ಅದು. ಜಗದೀಶ್‌ ಶೆಟ್ಟರ್‌ ಕೂಡ ಪಕ್ಷೇತರರಾಗಿ ನಿಲ್ಲುವ ಬಗ್ಗೆ ಹೇಳಿಕೆ ನೀಡಿದ್ದು ಸರಿಯಲ್ಲ. ಪಕ್ಷ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ, ಹಾಗಾಗಿ ಪಕ್ಷದ ಜತೆಗೆ ನಿಲ್ಲಬೇಕು ಎಂದು ಹಿರಿಯರು ತಿಳಿ ಹೇಳುತ್ತಾರೆ. ಕಾರ್ಯಕರ್ತರು ಏನೇ ಸರ್ಕಸ್‌ ಮಾಡಿದರೂ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ ಎಂದರು.

ಟಿಕೆಟ್ ಘೋಷಣೆ ಮುನ್ನ ವಿಕೆಟ್ ಪತನ, ಆಲೌಟ್ ಲಕ್ಷಣ: ಈಶ್ವರಪ್ಪ ರಾಜೀನಾಮೆಗೆ ಬಿಜೆಪಿ ಕುಟುಕಿದ ಡಿಕೆಶಿ!

ಈ ಬಾರಿ ಚುನಾವಣೆಯಲ್ಲಿ ಅನೇಕ ಹಿರಿಯರನ್ನು ಕೈಬಿಡಲಾಗುತ್ತಿದೆ. ನಾಲ್ಕೈದು ಬಾರಿ ಗೆದ್ದು ಮಂತ್ರಿಯಾದವರಿಗೂ ಟಿಕೆಟ್‌ ತಪ್ಪುತ್ತದೆ. ಹೀಗಾಗಿ ಅವರೇ ನನ್ನ ಕೈ ಬಿಡುವುದಕ್ಕಿಂತ ನಾನೇ ಅವರಿಗೆ ಪತ್ರ ಬರೆದು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದೇನೆ.

- ಕೆ.ಎಸ್‌.ಈಶ್ವರಪ್ಪ, ಮಾಜಿ ಸಚಿವ