Kodagu: ಬಿಜೆಪಿಯ ಭದ್ರಕೋಟೆಗೆ ನುಗ್ಗಲು ‘ಕಾಂಗ್ರೆಸ್’, ಜೆಡಿಎಸ್ ಸಜ್ಜು
ಕೇವಲ ಎರಡೇ ವಿಧಾನಸಭಾ ಕ್ಷೇತ್ರವನ್ನು ಹೊಂದಿರುವ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಚುನಾವಣಾ ಕಾವು ಜೋರಾಗಿದೆ. ಕಳೆದ ನಾಲ್ಕು ಅವಧಿಯಿಂದ ಎರಡೂ ಕ್ಷೇತ್ರಗಳು ಬಿಜೆಪಿ ತೆಕ್ಕೆಯಲ್ಲಿದ್ದು, ಈ ಬಾರಿ ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ.
ವಿಘ್ನೇಶ್ ಎಂ. ಭೂತನಕಾಡು
ಕೊಡಗು (ಏ.24): ಕೇವಲ ಎರಡೇ ವಿಧಾನಸಭಾ ಕ್ಷೇತ್ರವನ್ನು ಹೊಂದಿರುವ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಚುನಾವಣಾ ಕಾವು ಜೋರಾಗಿದೆ. ಕಳೆದ ನಾಲ್ಕು ಅವಧಿಯಿಂದ ಎರಡೂ ಕ್ಷೇತ್ರಗಳು ಬಿಜೆಪಿ ತೆಕ್ಕೆಯಲ್ಲಿದ್ದು, ಈ ಬಾರಿ ಎರಡೂ ಕ್ಷೇತ್ರಗಳಲ್ಲಿ ಗೆಲ್ಲಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಯುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮೂಲಕ ಹೊಸ ಹವಾ ಸೃಷ್ಟಿಸಿದ್ದು, ಭಾರಿ ಪೈಪೋಟಿ ನೀಡಲು ಸನ್ನದ್ಧವಾಗಿದೆ.
ಅಪ್ಪಚ್ಚುಗೆ ಹೊಸ ಮುಖ ಮಂಥರ್ ಸವಾಲ್
ಮಡಿಕೇರಿ: ಕ್ಷೇತ್ರದಲ್ಲಿ ಹಾಲಿ ಶಾಸಕ ಅಪ್ಪಚ್ಚು ರಂಜನ್ 7ನೇ ಬಾರಿಗೆ ಕಣಕ್ಕೆ ಇಳಿದಿದ್ದು, 6ನೇ ಬಾರಿ ಶಾಸಕರಾಗಲು ಮುಂದಾಗಿದ್ದಾರೆ. ಇವರನ್ನು ಸೋಲಿಸಲು ಕಾಂಗ್ರೆಸ್, ಜೆಡಿಎಸ್ ಶತಾಯಗತಾಯ ಯತ್ನಿಸುತ್ತಿವೆ. ಕಾಂಗ್ರೆಸ್‌ನಿಂದ ಡಾ.ಮಂಥರ್ ಗೌಡಗೆ ಟಿಕೆಟ್ ನೀಡಲಾಗಿದೆ. ಜೆಡಿಎಸ್‌ನಿಂದ ನಾಪಂಡ ಮುತ್ತಪ್ಪನವರು ಸ್ಪರ್ಧೆಗೆ ಇಳಿದಿದ್ದಾರೆ. ಎಸ್‌ಡಿಪಿಐ ಕೂಡ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದು, ಅಮಿನ್ ಮೊಹಿಸಿನ್ ಕಣದಲ್ಲಿದ್ದಾರೆ. ಇದರಿಂದ ಈ ಕ್ಷೇತ್ರದಲ್ಲಿ ಬಿಜೆಪಿಯೇತರ ಮತಗಳು ವಿಭಜನೆಯಾಗುವ ಸಾಧ್ಯತೆಗಳಿವೆ. ಅಪ್ಪಚ್ಚು ರಂಜನ್ ಅವರು 1994 ಹಾಗೂ 1998ರಲ್ಲಿ ಸೋಮವಾರಪೇಟೆ ಕ್ಷೇತ್ರದಿಂದ ಎರಡು ಬಾರಿ ಹಾಗೂ ಪುನರ್ ವಿಂಗಡಣೆಗೊಂಡಿರುವ ಮಡಿಕೇರಿ ಕ್ಷೇತ್ರದಿಂದ 2008, 2013 ಹಾಗೂ 2018ರಲ್ಲಿ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ.
ಬಿಎಸ್‌ವೈ, ಈಶ್ವರಪ್ಪ, ಕಾಗೋಡು ಚುನಾವಣೆ ನಿವೃತ್ತಿಯ ಬಳಿಕದ ಮೊದಲ ಚುನಾವಣೆ: ಮ್ಯಾಜಿಕ್ ನಿರೀಕ್ಷೆ
ಕಳೆದ ಮೂರೂ ಚುನಾವಣೆಗಳಲ್ಲಿ ಇಲ್ಲಿ ಮಾಜಿ ಸಚಿವ ಬಿ.ಎ.ಜೀವಿಜಯ ಅವರೇ ಅಪ್ಪಚ್ಚು ರಂಜನ್‌ಗೆ ಭಾರಿ ಪೈಪೋಟಿ ಕೊಟ್ಟವರು. ಮೂರೂ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ನಡುವೆ ನೇರ ಸ್ಪರ್ಧೆ ಇತ್ತು. ಆದರೆ, ಈಗ ಜೀವಿಜಯ ಅವರು ಕಾಂಗ್ರೆಸ್‌ನಲ್ಲಿದ್ದರೂ ಇಲ್ಲಿ ಟಿಕೆಟ್ ದೊರಕದ ಹಿನ್ನೆಲೆಯಲ್ಲಿ ಮತ್ತೆ ಜೆಡಿಎಸ್‌ನ್ನು ಬೆಂಬಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಜೀವಿಜಯ ಇನ್ನೂ ತಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ. ಕಾಂಗ್ರೆಸ್‌ನಿಂದ ಮಂಥರ್‌ಗೌಡ ಅವರು ಕಣದಲ್ಲಿದ್ದು ಗೆಲುವಿಗೆ ಶ್ರಮಿಸಿದ್ದಾರೆ. ಬಿಜೆಪಿ-ಕಾಂಗ್ರೆಸ್ ಪೈಪೋಟಿ ನಡುವೆ ಹೋರಾಟ ಹಾಗೂ ಸಮಾಜ ಸೇವೆ ಮೂಲಕ ಹೆಸರು ಮಾಡಿರುವ ಜೆಡಿಎಸ್‌ನ ನಾಪಂಡ ಮುತ್ತಪ್ಪ ಕೂಡ ತೀವ್ರ ಸ್ಪರ್ಧೆ ನೀಡಲು ಸಜ್ಜಾಗಿದ್ದಾರೆ. ತಳಮಟ್ಟದಿಂದಲೇ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗ, ಅರೆಭಾಷೆ ಗೌಡ, ಲಿಂಗಾಯತ ಮತದಾರರೇ ಹೆಚ್ಚಿದ್ದರೂ, ಕೊಡವ ಜನಾಂಗದ ಅಪ್ಪಚ್ಚು ರಂಜನ್ ಸತತವಾಗಿ ಗೆದ್ದು ಬರುತ್ತಿದ್ದಾರೆ.
‘ಕೈ-ಕಮಲ’ ನೇರ ಹಣಾಹಣಿ
ವಿರಾಜಪೇಟೆ: ವಿರಾಜಪೇಟೆಯಲ್ಲಿ ಕಳೆದ 20 ವರ್ಷದಿಂದ ಬಿಜೆಪಿಯೇ ಗೆಲುವು ಸಾಧಿಸುತ್ತಿದ್ದು, ಮಾಜಿ ಸ್ಪೀಕರ್ ಹಾಗೂ ಹಾಲಿ ಶಾಸಕ ಕೆ.ಜಿ.ಬೋಪಯ್ಯ ಅವರು ಈ ಕ್ಷೇತ್ರದಲ್ಲಿ ನಾಲ್ಕನೇ ಬಾರಿಗೆ ಸ್ಪರ್ಧೆಗೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಸತತ ಹ್ಯಾಟ್ರಿಕ್ ಗೆಲುವು ಕಂಡಿರುವ ಬೋಪಯ್ಯ, ಈ ಬಾರಿ ಕೂಡ ಗೆಲ್ಲುವ ಉತ್ಸಾಹದಲ್ಲಿದ್ದಾರೆ. ಇವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ಎ.ಕೆ.ಸುಬ್ಬಯ್ಯ ಅವರ ಪುತ್ರ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಸಜ್ಜಾಗಿದ್ದಾರೆ. ಪೊನ್ನಣ್ಣ ಈ ಬಾರಿ ಉತ್ತಮ ಪೈಪೋಟಿ ನೀಡುವ ನಿರೀಕ್ಷೆಯಿದ್ದು, ಬಿಜೆಪಿ-ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡು ಬರುವ ಸಾಧ್ಯತೆಯಿದೆ. ಜೆಡಿಎಸ್‌ನಿಂದ ಮನ್ಸೂರ್ ಅಲಿ ಅವರನ್ನು ಕಣಕ್ಕಿಳಿಸಲಾಗಿದೆ. ಆದರೆ, ಇಲ್ಲಿ ಜೆಡಿಎಸ್ ಹೆಚ್ಚು ಪ್ರಬಲವಾಗಿಲ್ಲ.
2008ರಲ್ಲಿ ಪುನರ್ ವಿಂಗಡಣೆಗೊಂಡಿರುವ ವಿರಾಜಪೇಟೆ ಕ್ಷೇತ್ರದಲ್ಲಿ ಬೋಪಯ್ಯನವರು ಬಿಜೆಪಿಯಿಂದ ಸತತ ನಾಲ್ಕನೇ ಬಾರಿಗೆ ಅಭ್ಯರ್ಥಿಯಾಗಿದ್ದಾರೆ. ಕೊಡವ, ಕೊಡವ ಭಾಷಿಕರು, ಮುಸಲ್ಮಾನರ ಹೆಚ್ಚು ಮತಗಳಿದ್ದರೂ ಅರೆಭಾಷೆ ಗೌಡ ಜನಾಂಗದ ಹಾಗೂ ಕ್ಷೇತ್ರದ ಹೊರಗಿನವರಾದ ಬೋಪಯ್ಯ ಸತತವಾಗಿ ಗೆದ್ದು ಬರುತ್ತಿದ್ದಾರೆ. ಕೊಡವ ಜನಾಂಗದ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದಾರೆ. ಆದರೆ, ಈ ಬಾರಿ ಕೊಡವರಾಗಿರುವ ಪೊನ್ನಣ್ಣನವರು ಬೋಪಯ್ಯ ಅವರನ್ನು ಮಣಿಸಲು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇಂದು ಗುಂಡ್ಲುಪೇಟೆ, ಆಲೂರಲ್ಲಿ ಅಮಿತ್ ಶಾ ಬೃಹತ್ ರೋಡ್ ಶೋ
ಪೊನ್ನಣ್ಣ ಅವರು ಕಳೆದ ಎರಡು ವರ್ಷದಿಂದ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಸಮಾಜ ಸೇವೆ, ಕಾನೂನು ಸೇವೆಗಳ ಮೂಲಕ ಜನರ ಗಮನ ಸೆಳೆದಿದ್ದಾರೆ. ಬೋಪಯ್ಯನವರು ತಮ್ಮ ಕ್ಷೇತ್ರದ ಅಭಿವೃದ್ಧಿಯ ಕೆಲಸಗಳನ್ನು ಮತದಾರರಿಗೆ ಮನವರಿಕೆ ಮಾಡಿ, ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.