ಸುಮಾರು ನಾಲ್ಕು ದಶಕಗಳ ಬಿಜೆಪಿ ನಂಟು ಕಡಿದುಕೊಳ್ಳಲು ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಭಾನುವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್‌ನತ್ತ ಹೆಜ್ಜೆ ಇರಿಸಿದ್ದಾರೆ.
ಬೆಂಗಳೂರು/ಶಿರಸಿ (ಏ.17): ಸುಮಾರು ನಾಲ್ಕು ದಶಕಗಳ ಬಿಜೆಪಿ ನಂಟು ಕಡಿದುಕೊಳ್ಳಲು ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಭಾನುವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್‌ನತ್ತ ಹೆಜ್ಜೆ ಇರಿಸಿದ್ದಾರೆ. ಶಿರಸಿಗೆ ತೆರಳಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಖುದ್ದಾಗಿ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಸಂಜೆ ಬೆಂಗಳೂರಿಗೆ ಆಗಮಿಸಿದ ಅವರೊಂದಿಗೆ ಕಾಂಗ್ರೆಸ್ ನಾಯಕರು ಸತತ ಸಮಾಲೋಚನೆ ನಡೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಅವರು ತಡರಾತ್ರಿ ಶೆಟ್ಟರ್ ಅವರ ನಿವಾಸಕ್ಕೆ ತೆರಳಿ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಸೋಮವಾರ ಕಾಂಗ್ರೆಸ್ ಪಕ್ಷ ಸೇರುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಸೇರ್ಪಡೆ ಎಲ್ಲಿ ಎಂಬುದರ ಬಗ್ಗೆ ಇನ್ನೂ ಸ್ಪಷ್ಟಮಾಹಿತಿ ಹೊರಬಿದ್ದಿಲ್ಲ. ಬೆಂಗಳೂರಿನಲ್ಲಿ ಸಾಂಕೇತಿಕವಾಗಿ ಸೇರ್ಪಡೆಯಾಗಿ ಬಳಿಕ ಹುಬ್ಬಳ್ಳಿಯಲ್ಲಿ ಹೆಚ್ಚಿನ ಜನರನ್ನು ಸೇರಿಸಿ ಅಧಿಕೃತವಾಗಿ ಸೇರ್ಪಡೆಯಾಗುವ ನಿರೀಕ್ಷೆಯೂ ಇದೆ ಎನ್ನಲಾಗಿದೆ.
ಲಕ್ಷ್ಮಣ ಸವದಿ ದುಡುಕಿನ ನಿರ್ಣಯ ಕೈಗೊಂಡಿದ್ದಾರೆ: ಶಾಸಕ ಬಸನಗೌಡ ಯತ್ನಾಳ
ಶಾಮನೂರು ವಿಮಾನದಲ್ಲಿ ಶೆಟ್ಟರ್ ಬೆಂಗಳೂರಿಗೆ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಹುಬ್ಬಳ್ಳಿಯಿಂದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಅವರ ಬೀಗರಾದ ಶಾಮನೂರು ಶಿವಶಂಕರಪ್ಪ ಅವರ ಖಾಸಗಿ ವಿಮಾನದಲ್ಲೇ ಬೆಂಗಳೂರಿಗೆ ಆಗಮಿಸಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮುಖಂಡರಾದ ಗಿರೀಶ ಗದಿಗೆಪ್ಪಗೌಡರ ಹಾಗೂ ರಾಬರ್ಚ್ ದದ್ದಾಪುರಿ ಸ್ವಾಗತಿಸಿ ಬೆಂಗಳೂರಿಗೆ ಕಳುಹಿಸಿಕೊಟ್ಟರು. ಶೆಟ್ಟರ್ ಅವರೊಂದಿಗೆ ಕಾಂಗ್ರೆಸ್ ಮುಖಂಡರಾದ ಯು.ಬಿ. ಶೆಟ್ಟಿ, ರಜತ್ ಉಳ್ಳಾಗಡ್ಡಿಮಠ, ಶಾಜಮಾನ ಮುಜಾಹಿದ ಕೂಡ ಇದ್ದರು.
ಅದಕ್ಕೂ ಮೊದಲು ಕಾಂಗ್ರೆಸ್ ಮುಖಂಡ, ಸಿದ್ದರಾಮಯ್ಯ ಅಭಿಮಾನಿಗಳ ಸಂಘದ ಅಧ್ಯಕ್ಷ ಗಿರೀಶ ಗದಿಗೆಪ್ಪಗೌಡರ ಅವರು ಶೆಟ್ಟರ್ ಮನೆಗೆ ಆಗಮಿಸಿ ರುದ್ರಾಕ್ಷಿ ಮಾಲೆ ಹಾಕಿ ಕಾಲಗೆರಗಿ ಸ್ವಾಗತಿಸಿದ್ದು ವಿಶೇಷ. ಈ ನಡುವೆ ಶೆಟ್ಟರ್ ಅವರು ಭಾನುವಾರ ರಾತ್ರಿವರೆಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರಲಿಲ್ಲ. ಕಾಂಗ್ರೆಸ್ ನಾಯಕರೊಂದಿಗಿನ ಮಾತುಕತೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬಿಜೆಪಿಗೆ ಅಧಿಕೃತ ವಿದಾಯ ಹೇಳಲಿದ್ದಾರೆ ಎನ್ನಲಾಗಿದೆ.
ಸ್ಪರ್ಧೆ ಖಚಿತ -ಶೆಟ್ಟರ್: ಈ ನಡುವೆ ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾಧ್ಯಮದೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್, ಯಾವುದೇ ಕಾರಣವಿಲ್ಲದೇ ನನಗೆ ಟಿಕೆಟ್ ವಂಚನೆ ಮಾಡಿರುವುದು ನೋವು ತಂದಿದೆ. ಮುಂದಿನ ಸ್ಪರ್ಧೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ. ಆದರೆ ಸ್ಪರ್ಧೆ ಮಾಡುವುದಂತೂ ನಿಜ ಎಂದರು.
‘ನನಗೆ ಮುಖ್ಯಮಂತ್ರಿ ಸ್ಥಾನ ಬೇಡ, ಯಾವುದೇ ಮಂತ್ರಿ ಸ್ಥಾನ ನೀಡುವುದು ಬೇಡ ಎಂದು ಈಗಾಗಲೇ ಪಕ್ಷದ ವರಿಷ್ಠರಿಗೆ ತಿಳಿಸಿದ್ದೆ. ಬೊಮ್ಮಾಯಿ ಅವರ ಸರ್ಕಾರದಲ್ಲೂ ನಾನು ಯಾವುದೇ ಸ್ಥಾನ ಅಲಂಕರಿಸದೇ ಪಕ್ಷದ ಏಳಿಗೆಗೆ ಶ್ರಮಿಸಿದ್ದೇನೆ. ನನಗೆ ಟಿಕೆಟ್ ನೀಡದಿರಲು ಯಾವುದಾದರೂ ಒಂದು ಕಾರಣವನ್ನೂ ತಿಳಿಸಿಲ್ಲ. ಆರೋಗ್ಯದ ಸಮಸ್ಯೆ ಇಲ್ಲ, ಕಪ್ಪು ಚುಕ್ಕೆ ಹೊಂದಿಲ್ಲ, ನನ್ನದು ಸೀಡಿ ಹೊರ ಬಂದಿಲ್ಲ, ಭ್ರಷ್ಟಾಚಾರವಿಲ್ಲ. ಇಷ್ಟಾದರೂ ನನಗೆ ಟಿಕೆಟ್ ಕೈ ತಪ್ಪಲು ಯಾರೋ ಒಬ್ಬರು ಕಾರಣರಾಗಿದ್ದಾರೆ’ ಎಂದರು.
‘ಕಳೆದ ಮೂವತ್ತು ವರ್ಷಗಳಿಂದ ಪಕ್ಷ ನನಗೆ ಬೆಂಬಲ ನೀಡಿದೆ. ಪಕ್ಷದ ಬಲವರ್ಧನೆಗೆ ನಾನು ಶ್ರಮಿಸಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿಯ ಕಾರ್ಯಕರ್ತರೂ ಇಲ್ಲದ ಸ್ಥಿತಿ ಇದ್ದಾಗ ಪಕ್ಷ ಬೆಳೆಸಿದ್ದೇನೆ. ಬಿ.ಎಸ್. ಯಡಿಯೂರಪ್ಪ, ಅನಂತಕುಮಾರ ಅವರ ಜತೆ ಪಕ್ಷದ ಸಂಘಟನೆಗೆ ಎಲ್ಲೆಡೆ ಓಡಾಟ ನಡೆಸಿದ್ದೇನೆ. ಯಾವ ಕಾರಣಕ್ಕೆ ನನಗೆ ಟಿಕೆಟ್ ನೀಡುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿ ಎಂದು ನಿನ್ನೆಯಿಂದಲೂ ನಾನು ಕೇಳುತ್ತಿದ್ದರೂ ಯಾವುದೇ ಉತ್ತರ ಸಿಕ್ಕಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಹ್ಲಾದ ಜೋಶಿ ಅವರೂ ಮನೆಗೆ ಬಂದು ಮಾತನಾಡಿದರು. ನಾನು ಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ, ಶಾಸಕನಾಗಿಯೇ ಸಾರ್ವಜನಿಕರ ಸೇವೆ ಮಾಡಬೇಕು ಎಂಬ ಆಸೆ ಈಡೇರಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಯಡಿಯೂರಪ್ಪ ಸಹ ಈಗ ಮಾತನಾಡುತ್ತಿಲ್ಲ. ಒಂದು ಕಾಲದಲ್ಲಿ ಅವರೂ ಪಕ್ಷ ಬಿಟ್ಟು ಕೆಜೆಪಿಗೆ ಹೋಗಿದ್ದರು. ನನ್ನ ಪರವಾಗಿ ಮಾತನಾಡುತ್ತಿದ್ದ ಅವರು ಈಗ ಮಾತನಾಡದಿರುವುದು ಪಕ್ಷದ ವರಿಷ್ಠರ ಸೂಚನೆಯ ಹಿನ್ನೆಲೆಯಲ್ಲಿ ಇರಬಹುದು. ಆದರೆ, ಪಕ್ಷದ ಕೆಲ ಸ್ವ ಹಿತಾಸಕ್ತಿ ನಾಯಕರ ಷಡ್ಯಂತ್ರದಿಂದಾಗಿ ನನಗೆ ಟಿಕೆಟ್ ಕೈ ತಪ್ಪಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಅಮಿತ್ ಶಾ ಜತೆ ಶೆಟ್ಟರ್ ಚರ್ಚೆ?: ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಶಿರಸಿ ಕಚೇರಿಗೆ ಆಗಮಿಸಿದ ಜಗದೀಶ ಶೆಟ್ಟರ್, ಕಾಗೇರಿ ಅವರೊಂದಿಗೆ ಸುಮಾರು ಒಂದೂವರೆ ತಾಸುಗಳ ಕಾಲ ಪ್ರತ್ಯೇಕ ಕೊಠಡಿಯಲ್ಲಿ ಮಾತುಕತೆ ನಡೆಸಿದರು. ಈ ವೇಳೆ ಕೇಂದ್ರ ಸಚಿವ ಅಮಿತ್ ಶಾ ಅವರನ್ನೂ ದೂರವಾಣಿಯಲ್ಲಿ ಸಂಪರ್ಕಿಸಿ ಮಾತುಕತೆ ನಡೆಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಯಾರ ಮಾತಿಗೂ ಬಗ್ಗದ ಜಗದೀಶ ಶೆಟ್ಟರ್, ಅಂತಿಮವಾಗಿ ತಮ್ಮ ರಾಜೀನಾಮೆ ಪತ್ರವನ್ನು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕೈಗಿತ್ತರು.
ರಾಜ್ಯದ ಅಭಿವೃದ್ಧಿಗಾಗಿ ನನ್ನ ಕೈ ಹಿಡಿದು ಬಿಜೆಪಿ ಪಕ್ಷವನ್ನು ಬೆಂಬಲಿಸಿ: ಸಚಿವ ಗೋವಿಂದ ಕಾರಜೋಳ
ನನಗೆ ಟಿಕೆಟ್ ನೀಡದಿರಲು ಯಾವುದಾದರೂ ಒಂದು ಕಾರಣವನ್ನೂ ತಿಳಿಸಿಲ್ಲ. ಆರೋಗ್ಯದ ಸಮಸ್ಯೆ ಇಲ್ಲ, ಕಪ್ಪು ಚುಕ್ಕಿ ಹೊಂದಿಲ್ಲ, ನನ್ನದು ಸಿಡಿ ಹೊರ ಬಂದಿಲ್ಲ, ಭ್ರಷ್ಟಾಚಾರವಿಲ್ಲ. ಇಷ್ಟಾದರೂ ನನಗೆ ಟಿಕೆಟ್ ಕೈ ತಪ್ಪಲು ಯಾರೋ ಒಬ್ಬರು ಕಾರಣರಾಗಿದ್ದಾರೆ
-ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ
