ನಟ ಶಿವರಾಜ್‌ಕುಮಾರ್‌ ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ದಿ.ಎಸ್‌.ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್‌ ಕುಮಾರ್‌ ಅವರು ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಲಿದ್ದಾರೆ. 

ಬೆಂಗಳೂರು (ಏ.28): ನಟ ಶಿವರಾಜ್‌ಕುಮಾರ್‌ ಪತ್ನಿ ಹಾಗೂ ಮಾಜಿ ಮುಖ್ಯಮಂತ್ರಿ ದಿ.ಎಸ್‌.ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್‌ ಕುಮಾರ್‌ ಅವರು ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಲಿದ್ದಾರೆ. ಈವರೆಗೆ ಜೆಡಿಎಸ್‌ ಪಕ್ಷದಲ್ಲಿದ್ದ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಈ ವೇಳೆ ಜೆಡಿಎಸ್‌ನಲ್ಲಿ ಜತೆಗಿದ್ದ ಸಹೋದರ ಮಧು ಬಂಗಾರಪ್ಪ ಇತ್ತೀಚೆಗೆ ಕಾಂಗ್ರೆಸ್‌ ಸೇರ್ಪಡೆಯಾಗಿ ಸೊರಬದಿಂದ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿದ್ದಾರೆ.

ಹೀಗಾಗಿ ಕಳೆದ ಕೆಲವು ದಿನಗಳಿಂದ ಸಹೋದರನ ಪರ ಗೀತಾ ಶಿವರಾಜ್‌ ಕುಮಾರ್‌ ಪ್ರಚಾರವನ್ನೂ ಆರಂಭಿಸಿದ್ದಾರೆ. ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ಹಿರಿಯ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಾರಿ ಗೀತಾ ಜತೆ ಶಿವರಾಜ್‌ ಕುಮಾರ್‌ ಪ್ರಚಾರ ಮಾಡಲಿದ್ದಾರೆಯೇ ಎಂಬುದು ಸಹ ಕುತೂಹಲ ಮೂಡಿಸಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಈಶ್ವರಪ್ಪರಿಂದ ಬಿಜೆಪಿ ಭೀಷ್ಮರಂತೆ ಮಾರ್ಗದರ್ಶನ: ಅಣ್ಣಾಮಲೈ

ತಂದೆ ಆಶಯ ಹೊತ್ತ ಮಧು ಬಂಗಾರಪ್ಪ ಗೆಲವು ನಿಶ್ಚಿತ: ತಂದೆ ಎಸ್‌. ಬಂಗಾರಪ್ಪ ಅವರ ಆಶಯಗಳನ್ನು ಹೊತ್ತು ಜನರ ಕಾಯಕದಲ್ಲಿರುವ ನನ್ನ ಪತಿ ಮಧು ಬಂಗಾರಪ್ಪ ಅವರನ್ನು ಅಧಿಕ ಮತಗಳ ಅಂತರದಿಂದ ಗೆಲುವು ತಂದುಕೊಡುವ ಮೂಲಕ ತಾಲೂಕಿನ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ಪತ್ನಿ ಅನಿತಾ ಮಧು ಬಂಗಾರಪ್ಪ ಹೇಳಿದರು. ತಾಲೂಕಿನ ಗುಂಡಶೆಟ್ಟಿಕೊಪ್ಪ ಗ್ರಾಮದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಮಹಿಳಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರು ಸದಾ ರೈತರ ಪರವಾದ ಕಾಳಜಿ ಹೊಂದಿದ್ದರು. 

ಅವರಂತೆಯೇ ಮಾಜಿ ಶಾಸಕ ಮಧು ಬಂಗಾರಪ್ಪ ರೈತರ ಹಾಗೂ ಹಿಂದುಳಿದ ವರ್ಗದವರ ಪರ ಕಾಳಜಿ ಹೊಂದಿದ್ದು, ಕ್ಷೇತ್ರದ ಆಸ್ತಿಯಾದ ಮಧು ಬಂಗಾರಪ್ಪ ಅವರನ್ನು ಈ ಬಾರಿ ಜನತೆ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು. ಬಿಜೆಪಿ ಸರ್ಕಾರದ ಅಡಳಿತದ ಅವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನತೆ ತತ್ತಿಸಿದ್ದಾರೆ. ಅಡುಗೆ ಸಿಲಿಂಡರ್‌ ಬೆಲೆ ಏರಿಕೆಯಿಂದ ಮಹಿಳೆಯರಿಗೆ ಹೊರೆಯಾಗುತ್ತಿದೆ. ಈ ಬಗ್ಗೆ ಗೃಹಿಣಿಯಾದ ತಮಗೂ ಅರಿವಿದೆ. ಜನಪರವಾದ ಆಡಳಿತ ಕಾಂಗ್ರೆಸ್‌ ಸರ್ಕಾರದಿಂದ ಮಾತ್ರ ಸಾಧ್ಯ. ಕ್ಷೇತ್ರದಲ್ಲಿ ಮಾತ್ರವಲ್ಲದೇ ರಾಜ್ಯದಲ್ಲೂ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು. 

‘ಮನ್‌ ಕಿ ಬಾತ್‌’ ಗಿನ್ನಿಸ್‌ ದಾಖಲೆ ಸೇರುವ ಸಾಧ್ಯ​ತೆ: ಸಂಸದ ಬಿ.ವೈ.ರಾಘವೇಂದ್ರ

ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡ ವೇಳೆಯಲ್ಲಿ ಜನತೆ ತೋರುತ್ತಿರುವ ಪ್ರೀತಿ-ವಿಶ್ವಾಸ ಹಾಗೂ ಮಧು ಬಂಗಾರಪ್ಪ ಅವರಿಗೆ ನೀಡುತ್ತಿರುವ ಬೆಂಬಲವನ್ನು ಗಮನಿಸಿದರೆ ತಮಗೂ ಸಹ ಸಮಾಜ ಸೇವೆಯಲ್ಲಿ ತೊಡಗಬೇಕು ಎನ್ನುವ ಹಂಬಲ ಮೂಡುತ್ತಿದೆ ಎಂದರು. ಇದಕ್ಕೂ ಮೊದಲು ಚಂದ್ರಗುತ್ತಿ ಹೋಬಳಿಯ ಕಡಸೂರು, ಅಂದವಳ್ಳಿ, ತಂಡಿಗೆ ಸೇರಿದಂತೆ ವಿವಿಧಡೆ ಮಧು ಬಂಗಾರಪ್ಪ ಪರವಾಗಿ ಪ್ರಚಾರ ಕಾರ್ಯ ನಡೆಸಿದರು. ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಮಹಿಳಾ ಅಧ್ಯಕ್ಷೆ ಸುಜಾತಾ ಜೋತಾಡಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ರಾಜೇಶ್ವರಿ ಗಣಪತಿ, ಮಹಿಳಾ ಮುಖಂಡರಾದ ಸರಸ್ವತಿ ಪ್ರಶಾಂತ್‌ ಮೇಸ್ತ್ರಿ ಸೇರಿದಂತೆ ಇತರರಿದ್ದರು.