ಹಿರೇಕೆರೂರಲ್ಲಿ ಬಿ.ಸಿ.ಪಾಟೀಲ, ಬಣಕಾರ ನಡುವೆ ಜಿದ್ದಾಜಿದ್ದಿ: ಅಭ್ಯರ್ಥಿಗಳು ಅವರೇ, ಪಕ್ಷ ಮಾತ್ರ ಬೇರೆ!

ಅಲಿಖಿತ ಸಾದರ ಲಿಂಗಾಯತ ಕ್ಷೇತ್ರವೆನಿಸಿರುವ ಹಿರೇಕೆರೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಮತ್ತು ಕಾಂಗ್ರೆಸ್ಸಿನ ಯು.ಬಿ.ಬಣಕಾರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಇವರಿಬ್ಬರ ನಡುವೆ ನಡೆಯುತ್ತಿರುವ ಐದನೇ ಮುಖಾಮುಖಿ ಇದಾಗಿದ್ದು, ಯಾರೇ ಗೆದ್ದರೂ ಅಲ್ಪಮತಗಳ ಅಂತರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. 
 

Karnataka Election 2023 Fight between BC Patil and UB Banakar in Hirekerur Constituency gvd

ನಾರಾಯಣ ಹೆಗಡೆ

ಹಾವೇರಿ (ಮೇ.05): ಅಲಿಖಿತ ಸಾದರ ಲಿಂಗಾಯತ ಕ್ಷೇತ್ರವೆನಿಸಿರುವ ಹಿರೇಕೆರೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ ಮತ್ತು ಕಾಂಗ್ರೆಸ್ಸಿನ ಯು.ಬಿ.ಬಣಕಾರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಇವರಿಬ್ಬರ ನಡುವೆ ನಡೆಯುತ್ತಿರುವ ಐದನೇ ಮುಖಾಮುಖಿ ಇದಾಗಿದ್ದು, ಯಾರೇ ಗೆದ್ದರೂ ಅಲ್ಪಮತಗಳ ಅಂತರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ವಜ್ಞನ ನಾಡು ಹಿರೇಕೆರೂರು ಕ್ಷೇತ್ರದಲ್ಲಿ ಪಕ್ಷದಷ್ಟೇ ವ್ಯಕ್ತಿ ಮತ್ತು ಜಾತಿ ರಾಜಕಾರಣಕ್ಕೂ ಪ್ರಾಶಸ್ತ್ಯವಿದೆ. ಇದುವರೆಗಿನ ಕ್ಷೇತ್ರದ ಚುನಾವಣಾ ಇತಿಹಾಸದಲ್ಲಿ ಗೆದ್ದವರೆಲ್ಲ ಸಾದರ ಲಿಂಗಾಯತರು ಎಂಬುದು ವಿಶೇಷ. ಈಗ ಇಲ್ಲಿ ಕೃಷಿ ಸಚಿವ, ಕೌರವ ಖ್ಯಾತಿಯ ಬಿ.ಸಿ.ಪಾಟೀಲ ಬಿಜೆಪಿಯಿಂದ, ಯು.ಬಿ.ಬಣಕಾರ ಕಾಂಗ್ರೆಸ್ಸಿನಿಂದ ಕಣಕ್ಕಿಳಿದಿದ್ದಾರೆ.

ಹಿಂದಿನ 4 ಚುನಾವಣೆಗಳಲ್ಲಿ ಬೇರೆ, ಬೇರೆ ಪಕ್ಷಗಳಿಂದ ಇವರಿಬ್ಬರ ನಡುವೆಯೇ ನೇರ ಸ್ಪರ್ಧೆ ನಡೆದಿದೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ 555 ಮತಗಳ ಅಂತರದಲ್ಲಿ ಗೆದ್ದು ಮೀಸೆ ತಿರುವಿದ್ದ ಬಿ.ಸಿ. ಪಾಟೀಲ ಈ ಸಲ ಬಿಜೆಪಿಯಿಂದ ಕಣದಲ್ಲಿದ್ದಾರೆ. ಆಗ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಣಕಾರ ಈ ಸಲ ಕಾಂಗ್ರೆಸ್‌ ಹುರಿಯಾಳಾಗಿದ್ದಾರೆ. ಯಾವುದೇ ಪಕ್ಷದಲ್ಲಿದ್ದರೂ ಗೆಲ್ಲುವ ಸಾಮರ್ಥ್ಯವನ್ನು ಇಬ್ಬರೂ ಹೊಂದಿರುವುದು ವಿಶೇಷ. ಬಿ.ಸಿ.ಪಾಟೀಲ ಅವರು ಜೆಡಿಎಸ್‌ನಿಂದ ಒಂದು ಸಲ, ಕಾಂಗ್ರೆಸ್ಸಿನಿಂದ ಎರಡು ಸಲ, ಬಿಜೆಪಿಯಿಂದ ಒಂದು ಸಲ ಗೆದ್ದಿದ್ದಾರೆ. ಬಣಕಾರ, ಬಿಜೆಪಿ ಮತ್ತು ಕೆಜೆಪಿಯಿಂದ ತಲಾ ಒಂದು ಸಲ ಗೆದ್ದಿದ್ದಾರೆ. ಇಬ್ಬರೂ ತಮ್ಮದೇ ಆದ ಓಟ್‌ಬ್ಯಾಂಕ್‌ ಹೊಂದಿದ್ದು, ನೇರ ಪೈಪೋಟಿ ನಡೆಯುತ್ತಿದೆ. ಇದರಿಂದ ಕ್ಷೇತ್ರದಲ್ಲಿ ಭಾರೀ ಕುತೂಹಲ ಕೆರಳಿಸಿದೆ.

ಎಚ್‌ಕೆಪಾ, ಸಿಸಿಪಾ, ಕಳಕಪ್ಪರಿಂದ ರಂಗೇರಿರುವ ಗದಗ ಎಲೆಕ್ಷನ್ ಅಖಾಡ

2018ರ ಚುನಾವಣೆಯಲ್ಲಿ ಯಾವ ಪಕ್ಷದ ಚಿಹ್ನೆಯಡಿ ಸ್ಪರ್ಧಿಸಿದ್ದರೋ ಅವರು ಇಂದು ಅದಲು, ಬದಲಾಗಿದ್ದಾರೆ. ಆಗ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಗೆದ್ದಿದ್ದ ಬಿ.ಸಿ. ಪಾಟೀಲ ಬಿಜೆಪಿ ಸೇರಿ 2019ರಲ್ಲಿ ಉಪಚುನಾವಣೆ ಎದುರಿಸಿ ಪುನರಾಯ್ಕೆಯಾಗಿ ಕೃಷಿ ಸಚಿವರಾಗಿದ್ದಾರೆ. ಆಗಿನಿಂದಲೂ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಪಾಟೀಲರೊಂದಿಗೆ ಬಿಜೆಪಿಯಲ್ಲೇ ಇದ್ದ ಬಣಕಾರ, ಚುನಾವಣೆ ಸಮೀಪಿಸುತ್ತಲೇ ಕಾಂಗ್ರೆಸ್‌ ಸೇರಿ ಕೌರವನ ವಿರುದ್ಧವೇ ತೊಡೆ ತಟ್ಟಿದ್ದಾರೆ. ಕ್ಷೇತ್ರದಿಂದ ಇದುವರೆಗೆ ಯು.ಬಿ.ಬಣಕಾರ ಎರಡು ಸಲ, ಬಿ.ಸಿ.ಪಾಟೀಲ ನಾಲ್ಕು ಸಲ ಗೆದ್ದಿದ್ದಾರೆ. 1994ರಲ್ಲಿ ಬಿಜೆಪಿಯಿಂದ ಗೆದ್ದು ಜಿಲ್ಲೆಯ ಮೊದಲ ಬಿಜೆಪಿ ಶಾಸಕರೆನಿಸಿರುವ ಬಣಕಾರ, 2013ರಲ್ಲಿ ಕೆಜೆಪಿಯಿಂದ ಗೆದ್ದಿದ್ದರು. 2004ರಲ್ಲಿ ಜೆಡಿಎಸ್‌ನಿಂದ ಗೆದ್ದಿದ್ದ ಬಿ.ಸಿ.ಪಾಟೀಲ, 2008 ಹಾಗೂ 2018ರಲ್ಲಿ ಕಾಂಗ್ರೆಸ್ಸಿನಿಂದ, 2019ರಲ್ಲಿ ಬಿಜೆಪಿಯಿಂದ ಗೆದ್ದಿದ್ದಾರೆ. ಈ ಸಲ ಇಬ್ಬರ ನಡುವೆ ಮತ್ತೊಮ್ಮೆ ಜಂಗೀ ಕುಸ್ತಿ ಏರ್ಪಟ್ಟಿದೆ.

ಅಭಿವೃದ್ಧಿ, ಅನುಕಂಪ: ಬಿ.ಸಿ.ಪಾಟೀಲ ಈ ಸಲ ಬಿಜೆಪಿಯ ಸಾಂಪ್ರದಾಯಿಕ ಮತಗಳಾದ ಮಹಿಳೆಯರು, ಯುವಕರನ್ನು ನೆಚ್ಚಿಕೊಂಡಿದ್ದಾರೆ. ಅಲ್ಲದೇ, ಮಂತ್ರಿಯಾಗಿ ಕ್ಷೇತ್ರದಲ್ಲಿ ನೀರಾವರಿ, ರಸ್ತೆ ಇತ್ಯಾದಿ ಮೂಲಸೌಲಭ್ಯಕ್ಕೆ ಸಾವಿರಾರು ಕೋಟಿ ರು.ಅನುದಾನ ತಂದಿರುವುದರಿಂದ ಜನತೆ ಮತ್ತೊಮ್ಮೆ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಅಲ್ಲದೇ, ಅಬ್ಬರದ ಪ್ರಚಾರವನ್ನೂ ಕೈಗೊಂಡಿದ್ದಾರೆ. ಸುದೀಪ್‌ ಮತ್ತಿತರ ಸ್ಟಾರ್‌ ಪ್ರಚಾರಕರನ್ನು ಕರೆಸಿ ಪ್ರಚಾರ ನಡೆಸುತ್ತಿದ್ದಾರೆ.

ಬಣಕಾರ ಸದ್ದಿಲ್ಲದೇ ಪ್ರಚಾರ ನಡೆಸುತ್ತಿದ್ದು, ಮನೆ, ಮನೆ ಭೇಟಿಯಾಗಿ ಮತದಾರರನ್ನು ಓಲೈಸುತ್ತಿದ್ದಾರೆ. ಮಾಜಿ ಶಾಸಕ ಬಿ.ಎಚ್‌.ಬನ್ನಿಕೋಡ ಅವರನ್ನು ಜತೆಗಿಟ್ಟುಕೊಂಡು ತಿರುಗುತ್ತಿದ್ದಾರೆ. ಅನುಕಂಪದ ಆಧಾರದ ಮೇಲೆ ಜನರನ್ನು ಸೆಳೆದುಕೊಳ್ಳುತ್ತಿದ್ದಾರೆ. ಇಬ್ಬರ ಸ್ಪರ್ಧೆ ಎರಡು ಮದಗಜಗಳ ನಡುವಿನ ಕಾಳಗದಂತಾಗಿದ್ದು, ಕಣದಲ್ಲಿರುವ ಜೆಡಿಎಸ್‌ ಸೇರಿದಂತೆ ಉಳಿದ ಪಕ್ಷೇತರ ಅಭ್ಯರ್ಥಿಗಳು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮತಗಳೂ ಸಾಕಷ್ಟಿವೆ. ಅವುಗಳ ಮೇಲೆ ಕಾಂಗ್ರೆಸ್‌ ಕಣ್ಣಿಟ್ಟಿದೆ. ಬಿ.ಸಿ. ಪಾಟೀಲ ಎಲ್ಲ ವರ್ಗದವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಮುನ್ನಡೆಯುತ್ತಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

ಕಾಂಗ್ರೆಸ್‌ ಭದ್ರಕೋಟೆ ಚಾಮರಾಜನಗರದಲ್ಲಿ ಸೋಮಣ್ಣರಿಂದ ಬಿಜೆಪಿ ರಣಕಹಳೆ

ಕಳೆದ (2019) ಉಪಚುನಾವಣೆ ಫಲಿತಾಂಶ
ಬಿ.ಸಿ.ಪಾಟೀಲ-85,562(ಬಿಜೆಪಿ).
ಬಿ.ಎಚ್‌.ಬನ್ನಿಕೋಡ-56,495(ಕಾಂಗ್ರೆಸ್‌).

ಜಾತಿ ಲೆಕ್ಕಾಚಾರ
ಲಿಂಗಾಯತರು-70 ಸಾವಿರ.
ಎಸ್ಸಿ-25 ಸಾವಿರ.
ಎಸ್ಟಿ- 20 ಸಾವಿರ.
ಅಲ್ಪ ಸಂಖ್ಯಾತರು- 20 ಸಾವಿರ.
ಇತರರು-34 ಸಾವಿರ.

Latest Videos
Follow Us:
Download App:
  • android
  • ios