Asianet Suvarna News Asianet Suvarna News

ಕಾಂಗ್ರೆಸ್‌ ಪಿಎಫ್‌ಐ ಏಜೆಂಟ್‌, ಸವದಿ ಪಕ್ಷದ್ರೋಹಕ್ಕೆ ತಕ್ಕ ಪಾಠ ಕಲಿಸಿ: ಕೇಂದ್ರ ಸಚಿವ ಅಮಿತ್‌ ಶಾ ಗುಡುಗು

ಕಾಂಗ್ರೆಸ್‌ ಪಿಎಫ್‌ಐ ಏಜೆಂಟ್‌ ರೀತಿಯಲ್ಲಿ ಕೆಲಸ ಮಾಡುತ್ತಿದೆ. ವೋಟ್‌ ಬ್ಯಾಂಕ್‌ ರಾಜಕಾರಣದಿಂದಾಗಿ ಕಾಂಗ್ರೆಸ್‌ ಒಂದು ಸಮುದಾಯದ ತುಷ್ಟೀಕರಣ ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ. 

Karnataka Election 2023 Congress PFI Agent Says Union Minister Amit Shah gvd
Author
First Published May 7, 2023, 6:42 AM IST

ಬೆಳಗಾವಿ (ಮೇ.07): ಕಾಂಗ್ರೆಸ್‌ ಪಿಎಫ್‌ಐ ಏಜೆಂಟ್‌ ರೀತಿಯಲ್ಲಿ ಕೆಲಸ ಮಾಡುತ್ತಿದೆ. ವೋಟ್‌ ಬ್ಯಾಂಕ್‌ ರಾಜಕಾರಣದಿಂದಾಗಿ ಕಾಂಗ್ರೆಸ್‌ ಒಂದು ಸಮುದಾಯದ ತುಷ್ಟೀಕರಣ ಮಾಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆರೋಪಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ, ಚಿಕ್ಕೋಡಿ, ಯಮಕನಮರಡಿ, ಸವದತ್ತಿ ಕ್ಷೇತ್ರಗಳಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದ ಅವರು ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಿ ಪ್ರತ್ಯೇಕವಾಗಿ 10 ಸಾವಿರ ಕೋಟಿ ರು. ತೆಗೆದಿಡಬೇಕು ಮತ್ತು ಮೀಸಲಾತಿ ನೀಡಬೇಕೆಂಬುದು ಪಿಎಫ್‌ಐನ ಎರಡು ಬೇಡಿಕೆಗಳಾಗಿತ್ತು. 

ಕಾಂಗ್ರೆಸ್‌ ಈ ಎರಡೂ ಬೇಡಿಕೆಗಳನ್ನು ಬಜೆಟ್‌ನಲ್ಲಿ ಈಡೇರಿಸುವುದಾಗಿ ಭರವಸೆ ನೀಡಿದೆ. ತಾನು ಅಧಿಕಾರಕ್ಕೆ ಬಂದರೆ ಪಿಎಫ್‌ಐ ಮೇಲಿನ ನಿಷೇಧ ವಾಪಸ್‌ ತೆಗೆಯುವುದಾಗಿ ಹೇಳುತ್ತಿದೆ. ಆದರೆ ನಾವು ಯಾವತ್ತೂ ತುಷ್ಟೀಕರಣದ ರಾಜಕಾರಣ ಮಾಡಲ್ಲ, ದೇಶಿ ವಿರೋಧಿ ಚಟುವಟಿಕೆಯಲ್ಲಿ ಯಾರೇ ತೊಡಗಿಕೊಂಡರೂ ಅವರನ್ನು ಜೈಲಿಗಟ್ಟುತ್ತೇವೆ ಎಂದರು. ಸುಮಾರು ಎಪ್ಪತ್ತು ವರ್ಷಗಳವರೆಗೆ ಕಾಂಗ್ರೆಸ್‌ ಶ್ರೀರಾಮನನ್ನು ಬಂಧನದಲ್ಲಿರಿಸಿತ್ತು. ರಾಮಮಂದಿರ ನಿರ್ಮಾಣ ಮಾಡಲು ಅವಕಾಶವನ್ನೇ ನೀಡಿರಲಿಲ್ಲ. ಆದರೆ, ಮೋದಿ ಅವರು ಪ್ರಧಾನಿ ಆದ ಬಳಿಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. 

ಯಶವಂತಪುರದಲ್ಲಿ ಬಿಜೆಪಿ- ಕಾಂಗ್ರೆಸ್ಸಿಗರ ನಡುವೆ ಗಲಾಟೆ: ಕುಸುಮಾರನ್ನು ತಳ್ಳಾಡಿ, ದರ್ಪ ತೋರಿದ ಪೊಲೀಸರು?

ಆದರೂ ಕಾಂಗ್ರೆಸ್‌ ಸುಮ್ಮನೆ ಕೂರಲಿಲ್ಲ. ಬಜರಂಗಬಲಿಗೆ ಅಗೌರವ ತೋರುವ ಕೆಲಸ ಮಾಡಿತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಜರಂಗಬಲಿಯ ಜನ್ಮದಿನ ಯಾವುದು ಎಂದು ಪ್ರಶ್ನಿಸಲು ಆರಂಭಿಸಿದರು. ಇಡೀ ದೇಶಕ್ಕೆ ಬಜರಂಗಬಲಿಯ ಜನ್ಮದಿನ ಯಾವುದೆಂಬುದು ಗೊತ್ತು. ಹನುಮ ಜಯಂತಿಯಂದೇ ಬಜರಂಗ ಬಲಿಯ ಜನ್ಮದಿನ. ಕಾಂಗ್ರೆಸ್‌ಗೆ ಇದೆಲ್ಲ ಯಾಕೆ ನೆನಪಿಲ್ಲವೆಂದರೆ ತುಷ್ಟೀಕರಣದ ರಾಜಕಾರಣದಿಂದಾಗಿ ಅವರ ಕಣ್ಣು ಮಂಜಾಗಿದೆ ಎಂದು ಕಿಡಿಕಾರಿದರು. ಜತೆಗೆ, ಬಜರಂಗಬಲಿಗೆ ಅವಮಾನ ಮಾಡುವ, ಬಜರಂಗದಳ ನಿಷೇಧ ಮಾಡುವ ಮಾತು ಆಡುತ್ತಿರುವ ಕಾಂಗ್ರೆಸ್‌ ಈ ಬಾರಿಯ ಚುನಾವಣೆಯಲ್ಲಿ ತಕ್ಕ ಪರಿಣಾಮ ಎದುರಿಸಲಿದೆ ಎಂದು ಶಾ ಇದೇ ವೇಳೆ ತಿಳಿಸಿದರು.

ಸವದಿ ವಿರುದ್ಧವೂ ಕಿಡಿ: ಲಕ್ಷ್ಮಣ ಸವದಿ ವಿರುದ್ಧವೂ ಕಿಡಿಕಾರಿದ ಶಾ ಅವರು, ಅವರು ಬಿಜೆಪಿ ತೊರೆದು ಬಜರಂಗಿಗೆ ಅವಮಾನ ಮಾಡಿದ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗಿದ್ದಾರೆ. ಪಕ್ಷಕ್ಕೆ ದ್ರೋಹ ಮಾಡಿದ ಅವರಿಗೆ ತಕ್ಕ ಪಾಠ ಕಲಿಸಬೇಕು. ಲಕ್ಷ್ಮಣ ಸವದಿ ಸೋತಾಗ ನಾನೇ ಅವರ ಜತೆಗೆ ಮಾತನಾಡಿದೆ. ಅವರೇ ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಿ ಎಂದು ಕೇಳಿದರು. ಅದರಂತೆ ನಾವು ಅವರನ್ನು ಎಂಎಲ್‌ಸಿ ಕೂಡ ಮಾಡಿದೆವು. ಜತೆಗೆ, ಉಪ ಮುಖ್ಯಮಂತ್ರಿ ಕೂಡ ಮಾಡಿದೆವು. ಎಂಎಲ್‌ಸಿ ಅವಧಿ ಇದ್ದರೂ ಅವರು ಏಕೆ ಬಿಜೆಪಿ ಬಿಟ್ಟು ಹೋದಿರಿ ಎಂದು ಜನ ಪ್ರಶ್ನೆ ಮಾಡಬೇಕು ಎಂದರು.

ಸವದಿ ಅವರು ನನ್ನ ಬಳಿ ಬಂದಾಗಲೆಲ್ಲ ಕಾಂಗ್ರೆಸ್‌ ವಿರುದ್ಧ ಬೈದಿದ್ದರು. ಆದರೆ, ಈಗ ಅದೆ ಕಾಂಗ್ರೆಸ್‌ ಸೇರಿದ್ದೀರಿ ಎಂದು ವಾಗ್ದಾಳಿ ನಡೆಸಿದ ಶಾ, ಸವದಿ ಬಿಜೆಪಿ ಸಿದ್ಧಾಂತಕ್ಕೆ ವಿರುದ್ಧ ಹೋಗಿ ದೋಖಾ ಮಾಡಿದ್ದಾರೆ ಎಂದರು. ಗ್ಯಾರಂಟಿ ಕೊಟ್ಟಲ್ಲೆಲ್ಲ ಸೋಲು: ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ರಾಜ್ಯದಲ್ಲಿ ಜನರಿಗೆ ಐದು ಚುನಾವಣಾ ಗ್ಯಾರಂಟಿ ಕೊಟ್ಟಿದ್ದಾರೆ. ಆದರೆ ಅವರು ಎಲ್ಲೆಲ್ಲ ಗ್ಯಾರಂಟಿ ಕೊಟ್ಟಿದ್ದಾರೆ ಅಲ್ಲೆಲ್ಲ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದೆ. ದೇಶದ ಜನ ರಾಹುಲ್‌ ಬಾಬಾ ಗ್ಯಾರಂಟಿಯನ್ನು ನಂಬಲ್ಲ, ಮೋದಿ ಗ್ಯಾರಂಟಿ ನಂಬುತ್ತಾರೆ ಎಂದು ವ್ಯಂಗ್ಯವಾಡಿದರು.

ಈ ಬಾರಿ ನಾನೇ ಸಿಎಂ: ಎಚ್‌.ಡಿ.ಕುಮಾರಸ್ವಾಮಿ ವಿಶ್ವಾಸ

ಇದೇ ವೇಳೆ ಮೋದಿ ವಿರುದ್ಧದ ವಿಷ ಸರ್ಪ ಹೇಳಿಕೆ ಕುರಿತೂ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಶಾ, ಖರ್ಗೆಯವರೇ ಮೋದಿಯವರನ್ನು ಎಷ್ಟುಬೈಯುತ್ತೀರೋ ಬೈಯಿರಿ. ನೀವು ಬೈದಷ್ಟುಕಮಲ ಅರಳಿದೆ, ಬಿಜೆಪಿ ಗೆಲ್ಲಲಿದೆ ಎಂದರು. ಇದೇ ವೇಳೆ ರಾಜ್ಯದಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ನೀಡಿದರೆ ಕರ್ನಾಟಕದ ಅಭಿವೃದ್ಧಿಯ ಜವಾಬ್ದಾರಿಯನ್ನು ಪ್ರಧಾನಿ ಮೋದಿ ಮತ್ತು ರಾಜ್ಯ ಸರ್ಕಾರದ್ದಾಗಿರಲಿದೆ ಎಂಬ ಗ್ಯಾರಂಟಿ ನೀಡುವುದಾಗಿ ಶಾ ಭರವಸೆ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Follow Us:
Download App:
  • android
  • ios