ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಿರಿ: ಎಚ್.ಆಂಜನೇಯ
ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಿ ದೇಶವನ್ನು ನರಕ ಮಾಡಲು ಹೊರಟಿರುವ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಕಿತ್ತೆಸೆಯಲು ಮತದಾರರಿಗೆ ಸುವರ್ಣ ಅವಕಾಶ ಸಿಕ್ಕಿದ್ದು, ಭ್ರಷ್ಟಸರ್ಕಾರವನ್ನು ಮನೆಗೆ ಕಳಿಸಬೇಕು ಎಂದು ಎಚ್.ಆಂಜನೇಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಿರಿಗೆರೆ (ಏ.17): ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಿ ದೇಶವನ್ನು ನರಕ ಮಾಡಲು ಹೊರಟಿರುವ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಕಿತ್ತೆಸೆಯಲು ಮತದಾರರಿಗೆ ಸುವರ್ಣ ಅವಕಾಶ ಸಿಕ್ಕಿದ್ದು, ಭ್ರಷ್ಟ ಸರ್ಕಾರವನ್ನು ಮನೆಗೆ ಕಳಿಸಬೇಕು ಎಂದು ಎಚ್.ಆಂಜನೇಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಸಿರಿಗೆರೆ ಸುತ್ತಲಿನ ಹಿರೇಬೆನ್ನೂರು, ಗೊಲ್ಲರಹಟ್ಟಿ, ಗೌರಮ್ಮನಹಳ್ಳಿ ಚಿಕ್ಕಬೆನ್ನೂರು, ಚೀಳಂಗಿ ಲಿಂಗವ್ವನಾಗ್ತಿಹಳ್ಳಿ, ಕರಿಯಮ್ಮನಹಟ್ಟಿ, ಹೆಗ್ಗೆರೆ ಸೇರಿದಂತೆ ವಿವಿಧೆಡೆ ಹಮ್ಮಿಕೊಂಡಿದ್ದ ಮತಪ್ರಚಾರದಲ್ಲಿ ಮಾತನಾಡಿದ ಅವರು, ಭ್ರಷ್ಟಆಡಳಿತ ನೀಡಿರುವುದೇ ಬಿಜೆಪಿಯ ಸಾಧನೆಯಾಗಿದೆ ಎಂದರು.
ರಾಷ್ಟ್ರದಲ್ಲಿ ಸಂವಿಧಾನ, ಜಾತ್ಯತೀತ ಸಿದ್ಧಾಂತ ಇನ್ನೂ ಬಲಿಷ್ಠವಾಗಿದೆ. ಕಾಂಗ್ರೆಸ್ ಅಂತಹ ತತ್ವ ಸಿದ್ಧಾಂತಗಳನ್ನು ಪಾಲಿಸಿಕೊಂಡು ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮತ್ತೊಮ್ಮೆ ನಾಂದಿ ಹಾಡಲಾಗುವುದು ಎಂದರು. ಕಾಂಗ್ರೆಸ್ ಪಕ್ಷ ದೇಶದ ಸರ್ವಸ್ವವಾಗಿದೆ. 70 ವರ್ಷದ ಆಡಳಿತದಲ್ಲಿ ದೇಶದ ಅಭಿವೃದ್ಧಿಗೆ ಯಾವ ಕೊಡುಗೆಯನ್ನು ನೀಡಿಲ್ಲ ಎಂದು ಬಿಜೆಪಿಯವರು ಬರೀ ಸುಳ್ಳು ಹೇಳುವುದರಲ್ಲಿ ಜನರನ್ನು ದಾರಿತಪ್ಪಿಸುತ್ತಿದೆ. ದೇಶಕ್ಕೆ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವವರಿಗೆ ನಾವು ಉತ್ತರಿಸುವ ಅಗತ್ಯವಿಲ್ಲ.
ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ: ಎಚ್.ವೈ.ಮೇಟಿ
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿರುವುದೇ ಕಾಂಗ್ರೆಸ್. ಮಹಾತ್ಮಾ ಗಾಂಧಿ, ಜವಹಾರಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮೊದಲಾದ ಮಹಾನ್ ನಾಯಕರ ಸಮೂಹವನ್ನು ಈ ದೇಶಕ್ಕೆ ಕೊಟ್ಟಿರುವುದಕ್ಕೆ ಕಾಂಗ್ರೆಸ್ ಸಾಕ್ಷಿ ಆಗಿದೆ ಎಂದರು. ಸರ್ವ ಧರ್ಮ, ಜಾತಿ, ಭಾಷೆ, ಪ್ರಾಂತ್ಯಗಳನ್ನು ಒಂದುಗೂಡಿಸಿ ಕಾಂಗ್ರೆಸ್ ನಿರ್ಮಿಸಿದ ಬಲಿಷ್ಠ ಸೌಹಾರ್ದ ಭಾರತವನ್ನು ಧರ್ಮದ ಹೆಸರಿನಲ್ಲಿ ಮನುಷ್ಯರ ನಡುವೆ ಹಗೆತನ, ದ್ವೇಷ, ಅಸೂಯೆ, ಕಂದಕವನ್ನು ಸೃಷ್ಟಿಸಿ ದೇಶ ವಿಭಜಿಸುವ ಪ್ರಯತ್ನ ಬಿಜೆಪಿ ಮಾಡುತ್ತಿದೆ.
ಬಿಜೆಪಿ ಹೀಗೆಯೇ ಅಧಿಕಾರದಲ್ಲಿ ಮುಂದುವರಿದರೆ ದೇಶ ಇನ್ನಷ್ಟು ಅಪಾಯಕಾರಿ ಸನ್ನಿವೇಶವನ್ನು ಎದುರಿಸಬೇಕಾದ ಸಮಯ ದೂರವಿಲ್ಲ. ಹಾಗಾಗಿ ಬಿಜೆಪಿಯಿಂದ ದೇಶವನ್ನು ರಕ್ಷಿಸುವುದು ತುರ್ತು ಇರುವುದರಿಂದ ಈ ಬಾರಿ ಕರ್ನಾಟಕ ರಾಜ್ಯದಿಂದಲೇ ಕಾಂಗ್ರೆಸ್ ಜಯಭೇರಿ ಬಾರಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವುದರ ಮೂಲಕ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ಅಧಿಕಾರದಿಂದ ಕೆಳಗಿಳಿಸಲು ನಾಂದಿಯಾಡಬೇಕಿದೆ ಎಂದರು.
ರಾಜ್ಯದ ಅಭಿವೃದ್ಧಿಗಾಗಿ ನನ್ನ ಕೈ ಹಿಡಿದು ಬಿಜೆಪಿ ಪಕ್ಷವನ್ನು ಬೆಂಬಲಿಸಿ: ಸಚಿವ ಗೋವಿಂದ ಕಾರಜೋಳ
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಎಂ.ಎಲ್.ತಿಪ್ಪೇಸ್ವಾಮಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪ್ರಕಾಶ್, ಎಚ್.ಟಿ.ಹನುಮಂತಪ್ಪ, ಮಾಜಿ ಅಧ್ಯಕ್ಷ ಲಿಂಗವ್ವನಾಗ್ತಿಹಳ್ಳಿ ತಿಪ್ಪೇಸ್ವಾಮಿ, ಸಿರಿಗೆರೆಯ ಟಿ.ಎಂ.ಪಿ. ತಿಪ್ಪೇಸ್ವಾಮಿ, ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಮುಬಾರಕ್ ಉಪಸ್ಥಿತರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.