Asianet Suvarna News Asianet Suvarna News

Chitradurga: ರಂಗೇರಿದ ಹೊಳಲ್ಕೆರೆ ಚುನಾವಣಾ ಅಖಾಡ: ಮಾಜಿ ಸಚಿವ ಎಚ್.ಆಂಜನೇಯಗೆ ಅದ್ದೂರಿ ಸ್ವಾಗತ

ಹೊಳಲ್ಕೆರೆ ವಿಧಾನಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಎಲ್ಲ ಪಕ್ಷಗಳ ಅಭ್ಯರ್ಥಿಗಳಿಗಿಂತ ಮುಂಚೆಯೇ ಕಾಂಗ್ರೆಸ್ ಪಕ್ಷದ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಎಚ್.ಆಂಜನೇಯ ಅಖಾಡಕ್ಕೆ ಇಳಿದಿದ್ದಾರೆ. 

Karnataka Election 2023 Congress Candidate H Anjaneya Started Election Campaign In Chitradurga gvd
Author
First Published Mar 31, 2023, 9:22 PM IST

ವರದಿ: ಕಿರಣ್.ಎಲ್.ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಮಾ.31): ಹೊಳಲ್ಕೆರೆ ವಿಧಾನಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಎಲ್ಲ ಪಕ್ಷಗಳ ಅಭ್ಯರ್ಥಿಗಳಿಗಿಂತ ಮುಂಚೆಯೇ ಕಾಂಗ್ರೆಸ್ ಪಕ್ಷದ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಎಚ್.ಆಂಜನೇಯ ಅಖಾಡಕ್ಕೆ ಇಳಿದಿದ್ದಾರೆ. ಒಂದು ವಾರದಿಂದ ಕಾಲಿಗೆ ಚಕ್ರಕಟ್ಟಿಕೊಂಡು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಹಳ್ಳಿ-ಹಳ್ಳಿಗೆ ಸಂಚರಿಸುತ್ತಿರುವ ಆಂಜನೇಯ ಅವರಿಗೆ ಶುಕ್ರವಾರ ವಿವಿಧ ತಾಂಡಾಗಳಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಗ್ರಾಮಕ್ಕೆ ಮಾಜಿ ಸಚಿವ ಆಂಜನೇಯ ಆವರು ಆಗಮಿಸುತ್ತಾರೆ ಎಂದು ಸುದ್ದಿ ತಿಳಿದ ಸಾವಿರಾರು ಮಂದಿ, ಅವರ ಸ್ವಾಗತಕ್ಕೆ ಕಾದು ಕುಳಿತಿದ್ದರು. ಊರಿಗೆ ಆಗಮಿಸುತ್ತಿದ್ದಂತೆ ಆಂಜನೇಯ ಅವರನ್ನು ನೂರಾರು ಬೈಕ್ ರ‌್ಯಾಲಿ ಮೂಲಕ ತಾಂಡಾಕ್ಕೆ ಕರೆ ತರಲಾಯಿತು. 

ಹಟ್ಟಿ ಪ್ರವೇಶಿಸುತ್ತಿದ್ದಂತೆ ಆಂಜನೇಯ ಅವರಿಗೆ ಹೂವಿನ ಮಳೆಯೇ ಸುರಿಸಲಾಯಿತು. ಆರ್.ಡಿ.ಕಾವಲ್, ಲಂಬಾಣಿಹಟ್ಟಿ, ತುಪ್ಪದಹಳ್ಳಿ ಲಂಬಾಣಿಹಟ್ಟಿ, ಕೆಂಚಪುರ ಲಂಬಾಣಿ ಹಟ್ಟಿ ಸೇರಿ ಅನೇಕ ಊರುಗಳಲ್ಲಿ ಲಂಬಾಣಿ ಸಮುದಾಯದ ನೂರಾರು ಮಹಿಳೆಯರು ಗುಂಪು-ಗುಂಪಾಗಿ ಸಾಂಪ್ರಾದಾಯಿಕ ನೃತ್ಯದ ಮೂಲಕ ಆಂಜನೇಯ ಅವರನ್ನು ಸ್ವಾಗತಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ರಂಗು ನೀಡಿ  ಗಮನಸೆಳೆದರು. ಪ್ರತಿ ಹಟ್ಟಿ, ತಾಂಡಗಳಲ್ಲಿ ನೂರಾರು ಯುವಕರು, ಮಹಿಳೆಯರು ವಿಶೇಷವಾಗಿ ಸ್ವಾಗತಿಸಿ, ಬೀಳ್ಕೊಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನೀವು ಮಿನಿಸ್ಟರ್ ಆಗಿದ್ದಾಗ ನಮ್ಮೂರಿಗೆ ಬಹಳ  ಅನುಕೂಲ ಮಾಡಿಕೊಟ್ಟಿದ್ದೀರಾ ಸ್ವಾಮಿ, ನೀವು ನಮ್ಮ ಮೇಲಿಟ್ಟಿರುವ ಪ್ರೀತಿಯನ್ನು ಮರೆಯೋದಿಲ್ಲ ಎಂದರು. 

ಕೊಡಗಿನ ಅಭ್ಯರ್ಥಿಗಳ ಆಯ್ಕೆಗೆ ಮತದಾನದ ಮೂಲಕ ಅಭಿಪ್ರಾಯ ಸಂಗ್ರಹಿಸಿದ ಬಿಜೆಪಿ!

ಕೋಟ್ಯಾಂತರ ರೂಪಾಯಿ ಅನುದಾನ ಕೊಟ್ಟಿದ್ದೀರಾ, ನಮ್ಮ ಮಕ್ಕಳಿಗೆ ಕಾರು, ಬೈಕ್ ಸಹಾಯಧನದಡಿ ಕೊಟ್ಟಿದ್ದಿರಾ, ಹೊಲಕ್ಕೆ ಬೋರ್‌ವೆಲ್ ಕೊರೆಯಿಸಿ ಕೊಟ್ಟಿದ್ದೀರಾ. ಅದರ ಪರಿಣಾಮ ಇಂದು ಬೆಳೆ ಬೆಳೆದು ಜೀವನ ಕಟ್ಟಿಕೊಂಡಿದ್ದೀವೆ ಸ್ವಾಮಿ. ನಮ್ಮೂರಿನ ರಸ್ತೆಗಳನ್ನು ಸೀಮೆಂಟ್ ರಸ್ತೆ ಮಾಡಿದ್ದೀರಾ, ನಿಮ್ಮ ಋಣ ನಮ್ಮ ಮೇಲೈತೆ ಸ್ವಾಮಿ ಎಂದು ಆಂಜನೇಯ ಅವರ ಅಧಿಕಾರದ ಅವಧಿ ಅಭಿವೃದ್ಧಿ ಕಾರ್ಯವನ್ನು ತಾಂಡಾದ ಜನ ಸ್ಮರಿಸಿದರು. ಹಟ್ಟಿಗಳಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಆಂಜನೇಯ, ನಿಮ್ಮೂರಿಗೆ ರಸ್ತೆ,, ನಿಮ್ಮ ಹೊಲಕ್ಕೆ ಕೊಳವೆಬಾವಿ, ಯುವಕರಿಗೆ ಕಾರು, ದುಡಿಯುವ ಕೈಗೆ ಉದ್ಯೋಗ ಸಮಾಜ ಕಲ್ಯಾಣ ಸಚಿವನಾಗಿದ್ದಾಗ ಮಾಡಿದ್ದೀನಿ ಎಂಬುದಕ್ಕಿಂತ ಅವೆಲ್ಲವೂ ನಿಮ್ಮ ಹಕ್ಕು, ನಿಮಗೆ ದೊರಕಿಸಿಕೊಡುವುದು ಅಧಿಕಾರಿಗಳ, ಜನಪ್ರತಿನಿಧಿಗಳ ಕರ್ತವ್ಯ. 

ನಾನೂ ಕೂಡ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ಇದರಲ್ಲಿ ವಿಶೇಷತೆ ಇಲ್ಲ. ಆದರೆ, ನಿಮ್ಮ ಅಭಿಮಾನ, ಪ್ರೀತಿ ಸ್ಮರಣೀಯವಾಗಿದೆ ಎಂದು ಭಾವುಕರಾಗಿ ಮಾತನಾಡಿದರು. ಮಹಿಳೆಯರು, ಯುವಕರು ವಿಶೇಷವಾಗಿ ನನ್ನನ್ನು ಸ್ವಾಗತಿಸಿದ್ದಾರೆ. ಸಾಂಪ್ರಾದಾಯಿಕ ನೃತ್ಯ, ಬೈಕ್ ರ‌್ಯಾಲಿ ಮಾಡಿದ್ದೀರಾ. ಇದಕ್ಕೆ ಪ್ರತಿಯಾಗಿ ನಾನು ಮುಂದಿನ ದಿನಗಳಲ್ಲಿ ನಿಮ್ಮಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ತಾಂಡಾ, ಗೊಲ್ಲರಹಟ್ಟಿ ಸೇರಿ ಅನೇಕ ಹಳ್ಳಿಗಳು ಸೌಲಭ್ಯಗಳಿಂದ ವಂಚಿತವಾಗಿದ್ದವು. ನಾನು ಸಮಾಜ ಕಲ್ಯಾಣ ಸಚಿವನಾಗಿದ್ದ ಸಂದರ್ಭ ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇನೆ. ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿದ್ದರಿಂದ ಮಂತ್ರಿಯಾಗಿ ಕೆಲಸ ಮಾಡಲು ಸಾಧ್ಯವಾಯಿತು. ಇನ್ಮುಂದೆಯೂ ಹೊಳಲ್ಕೆರೆ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಬದ್ಧನಾಗಿದ್ದೇನೆ ಎಂದು ಹೇಳಿದರು.

ಸಿದ್ದು ಪಾಳೇಗಾರಿಕೆ ಮಾಡ್ಕೊಂಡು, ದೇವೇಗೌಡರನ್ನು ಹೆದರಿಸ್ತಿದ್ರು: ಎಚ್‌.ಡಿ.ಕುಮಾರಸ್ವಾಮಿ

ಲಿಂಗಾಯತ, ಯಾದವ, ನಾಯಕ, ಲಂಬಾಣಿ, ಕುರುಬ ಹೀಗೆ ಎಲ್ಲ  ವರ್ಗದವರಿಗೆ ಸರ್ಕಾರದಿಂದ ಸಲ್ಲಬೇಕಾದ ಸೌಲಭ್ಯವನ್ನು ಸಚಿವನಾಗಿದ್ದ ಸಂದರ್ಭ ದೊರಕಿಸಿಕೊಡಲು ಶ್ರಮಿಸಿದ್ದೇನೆ. ರಾಜ್ಯದಲ್ಲಿ ಎಲ್ಲ ಸಮುದಾಯದವರಿಗೆ ಸಮುದಾಯ ಭವನ, ಶಿಕ್ಷಣ, ಉದ್ಯೋಗಕ್ಕೆ ಸರ್ಕಾರದಿಂದ ಅನೇಕ ಯೋಜನೆ ಜಾರಿಗೊಳಿಸಿದ್ದು, ಅವುಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಚಿಂತನೆ ಇದೆ. ನಿಮ್ಮೆಲ್ಲರ ಸಹಕಾರ ಇದ್ದರೆ ಸಾಧ್ಯವಾಗಲಿದೆ ಎಂದು ತಿಳಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Follow Us:
Download App:
  • android
  • ios