ಪರಿಶಿಷ್ಟ ಜಾತಿ-ಜನಾಂಗವನ್ನು ಬರೀ ವೋಟ್ ಬ್ಯಾಂಕನ್ನಾಗಿಸಿಕೊಂಡಿದ್ದ ಕಾಂಗ್ರೆಸ್, ಆ ಸಮಾಜದ ಮತವನ್ನು ಗಿಟ್ಟಿಸಿಕೊಂಡು ತಾವೆ ಮುಂದೆ ಹೋಗಿದ್ದಾರೆ ಹೊರತು ತಳಸಮುದಾಯಗಳ ಅಭಿವೃದ್ಧಿಯನ್ನು ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ರಾಯಚೂರು (ಏ.17): ಪರಿಶಿಷ್ಟ ಜಾತಿ-ಜನಾಂಗವನ್ನು ಬರೀ ವೋಟ್ ಬ್ಯಾಂಕನ್ನಾಗಿಸಿಕೊಂಡಿದ್ದ ಕಾಂಗ್ರೆಸ್, ಆ ಸಮಾಜದ ಮತವನ್ನು ಗಿಟ್ಟಿಸಿಕೊಂಡು ತಾವೆ ಮುಂದೆ ಹೋಗಿದ್ದಾರೆ ಹೊರತು ತಳಸಮುದಾಯಗಳ ಅಭಿವೃದ್ಧಿಯನ್ನು ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು. ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಮೀಸಲಾತಿ ಹೆಚ್ಚಿಸಿ ಮತ್ತು ಒಳ ಮೀಸಲಾತಿ ಜಾರಿಗೊಳಿಸಿದ್ದಾಗಿ ಪರಿಶಿಷ್ಟಸಮುದಾಯಗಳ ಒಕ್ಕೂಟದಿಂದ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣದಲ್ಲಷ್ಟೇ ಸಾಮಾಜಿಕ ನ್ಯಾಯ ಕಲ್ಪಿಸಿದ್ದಾರೆ ಹೊರತು ಆ ಸಮುದಾಗಳ ಬಹುದಿನಗಳ ಬೇಡಿಕೆಯಾಗಿದ್ದ ಒಳ ಮೀಸಲಾತಿ ಕಲ್ಪಿಸುವ ಕೆಲಸ ಮಾಡಿಲ್ಲ. ಕಾಂಗ್ರೆಸ್ ಹಿಂದಿನಿಂದಲೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳನ್ನು ವೋಟ್ ಬ್ಯಾಂಕ್‌ನ್ನಾಗಿ ನೋಡುತ್ತಾ ಬಂದಿವೆ. ಬರಿ ಮಾತಿನಲ್ಲಿಯೇ ಸಾಮಾಜಿಕ ನ್ಯಾಯವೆಂದು ಹೇಳುವ ಮೂಲಕ ಎಲ್ಲ ಸಮುದಾಯಗಳಿಗೆ ಮೋಸ ಮಾಡಿವೆ. ಆದರೆ, ಈಗ ಜನರನ್ನು ಮೋಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ದೂರಿದರು. ಕಾಂಗ್ರೆಸ್ ತಾವು ಅಧಿಕಾರಕ್ಕೆ ಬಂದರೆ, ಒಳಮೀಸಲಾತಿಯನ್ನು ತೆಗೆದು ಹಾಕಲಾಗುವುದು ಎಂದು ಭರವಸೆಯ ಮಾತುಗಳನ್ನಾಡುತ್ತಿದ್ದಾರೆ.
ರಾಜ್ಯದ ಅಭಿವೃದ್ಧಿಗಾಗಿ ನನ್ನ ಕೈ ಹಿಡಿದು ಬಿಜೆಪಿ ಪಕ್ಷವನ್ನು ಬೆಂಬಲಿಸಿ: ಸಚಿವ ಗೋವಿಂದ ಕಾರಜೋಳ
ಆದರೆ, ಜನರು ಕಾಂಗ್ರೆಸ್‌ಗೆ ಅಧಿಕಾರ ನೀಡುವುದಿಲ್ಲ. ಮೀಸಲಾತಿ ವಿಚಾರದಲ್ಲಿ ಕೈ ಹಾಕಿದರೆ ರಾಜ್ಯದ ಪ್ರತಿ ಹಳ್ಳಿಯಲ್ಲಿಯೂ ಕ್ರಾಂತಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕಾಂಗ್ರೆಸ್‌ನವರು ಅಧಿಕಾರ ಯಾರಿಗೂ ಶಾಶ್ವತವಾಗಿ ಉಳಿಯುವುದಿಲ್ಲ ಎಂಬುವುದನ್ನು ಅರಿತುಕೊಳ್ಳಬೇಕು. ಸ್ವಾತಂತ್ರ್ಯ ದೊರಕಿದಾಗ ದೇಶದಲ್ಲಿ ಕೇವಲ 33 ಕೋಟಿ ಜನಸಂಖ್ಯೆ ಇತ್ತು. ಆಗ ಪರಿಶಿಷ್ಟಜಾತಿಯಲ್ಲಿ 6 ಜಾತಿಗಳು ಹಾಗೂ ಪರಿಶಿಷ್ಟಪಂಗಡದಲ್ಲಿ 6 ಜಾತಿಗಳು ಮಾತ್ರ ಇದ್ದವು. ಎಲ್ಲ ಜಾತಿಗಳನ್ನು ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಂಗಡಗಳಿಗೆ ಕಾಂಗ್ರೆಸ್ ಸೇರ್ಪಡೆ ಮಾಡುತ್ತಾ ಬಂದಿದೆ ಎಂದು ದೂರಿದರು. ಡಾ.ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಜನಸಂಖ್ಯೆ ಹಾಗೂ ಜಾತಿಯ ಅನುಗುಣವಾಗಿ ಮೀಸಲಾತಿ ನೀಡಬೇಕೆಂಬುವುದು ಇದೆ. ಕೆಲ ರಾಜ್ಯಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಶೇ.50ಕ್ಕೂ ಮೀಸಲಾತಿ ಕಲ್ಪಿಸಿದೆ.
ಕಾಂಗ್ರೆಸ್‌ನವರು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಸಮುದಾಯದವರನ್ನು ದಿಕ್ಕು ತಪ್ಪಿಸುತ್ತಾ ಬರುತ್ತಿದೆ. ರಾಜ್ಯದಲ್ಲಿ ನಿಜವಾದ ಸಾಮಾಜಿಕ ನ್ಯಾಯವನ್ನು ಬಿಜೆಪಿ ಕಲ್ಪಿಸಿದೆ. ಪರಿಶಿಷ್ಟಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡಬೇಕಂಬ ಉದ್ದೇಶದಿಂದ ರಾಜ್ಯ ಬಿಜೆಪಿ ಸರ್ಕಾರ ಒಳಮೀಸಲಾತಿಯನ್ನು ಅಂಗೀಕರಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಕಾಂಗ್ರೆಸ್ ಕಾಲ ಮುಗಿದಿದೆ. ಇಷ್ಟುದಿನ ವೋಟ್ ಬ್ಯಾಂಕ್‌ಗೆ ತುತ್ತಾಗಿದ್ದ ಸಮುದಾಯಗಳು ಚಿಂತನೆಯಲ್ಲಿ ಬಿದಿದ್ದು, ಇನ್ನು ಯಾರ ಪರವಾಗಿ ನಿಲ್ಲಬೇಕು ಎನ್ನುವ ತೀರ್ಮಾನವನ್ನು ಅವರೇ ಮಾಡಲಿದ್ದಾರೆ ಎಂದು ಹೇಳಿದರು.
ಎದುರಾಳಿ ಯಾರೇ ಆದರೂ ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ: ಬಾಲಚಂದ್ರ ಜಾರಕಿಹೊಳಿ
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ, ಸಚಿವ ಗೋವಿಂದ ಕಾರಜೋಳ, ಸಂಸದ ರಾಜಾ ಅಮರೇಶ್ವರ ನಾಯಕ, ಎಂಎಲ್ಸಿ ಎನ್.ರವಿ ಕುಮಾರ, ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಶಾಸಕ ತಿಪ್ಪರಾಜು ಹವಲ್ದಾರ್,ಪ್ರತಾಪಗೌಡ ಪಾಟೀಲ್ ಮಾತನಾಡಿದರು. ಈ ಸಂದರ್ಭದಲ್ಲಿ ಪಕ್ಷದ ವಿವಿಧ ಮೋರ್ಚಾಗಳ ಪ್ರಮುಖರು, ಕಾರ್ಯಕರ್ತರು, ವಿವಿಧ ಸಮಾಜದ ಮುಖಂಡರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
