Asianet Suvarna News Asianet Suvarna News

ಕೊಪ್ಪಳ ಕಾಂಗ್ರೆಸ್‌ ಕೋಟೆಯಲ್ಲಿ ಅರಳಲು ಕಮಲ ಯತ್ನ: ಸಂಚಲನ ಮೂಡಿಸಿದ ರೆಡ್ಡಿ ಎಂಟ್ರಿ

5 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕೊಪ್ಪಳ ಜಿಲ್ಲೆಯು ಚುನಾವಣೆ ಘೋಷಣೆಗೂ ಮುನ್ನವೇ ಜನಾರ್ದನ ರೆಡ್ಡಿಯಿಂದಾಗಿ ಸದ್ದು ಮಾಡಿತ್ತು. ಗಂಗಾವತಿಯಿಂದ ರೆಡ್ಡಿ ಕಣಕ್ಕೆ ಇಳಿದಿದ್ದು ಲಾಭ, ನಷ್ಟಗಳ ಲೆಕ್ಕಾಚಾರ ನಡೆದಿದೆ.

Karnataka Election 2023 BJP is trying to win in the Koppal Congress stronghold gvd
Author
First Published May 4, 2023, 9:55 AM IST

ಸೋಮರಡ್ಡಿ ಅಳವಂಡಿ

ಕೊಪ್ಪಳ (ಮೇ.04): 5 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕೊಪ್ಪಳ ಜಿಲ್ಲೆಯು ಚುನಾವಣೆ ಘೋಷಣೆಗೂ ಮುನ್ನವೇ ಜನಾರ್ದನ ರೆಡ್ಡಿಯಿಂದಾಗಿ ಸದ್ದು ಮಾಡಿತ್ತು. ಗಂಗಾವತಿಯಿಂದ ರೆಡ್ಡಿ ಕಣಕ್ಕೆ ಇಳಿದಿದ್ದು ಲಾಭ, ನಷ್ಟಗಳ ಲೆಕ್ಕಾಚಾರ ನಡೆದಿದೆ. ಕೊಪ್ಪಳದಿಂದ ಸಂಗಣ್ಣ ಕರಡಿ ಸೊಸೆ ಮಂಜುಳಾ ಹೊಸಮುಖವಾಗಿ ಕಣಕ್ಕೆ ಇಳಿದಿದ್ದಾರೆ. ಜಿಲ್ಲೆಯಲ್ಲಿರುವ ಅಂಜನಾದ್ರಿಯಿಂದಾಗಿ ಹಿಂದುತ್ವದ ಚರ್ಚೆಯೂ ನಡೆದಿದೆ. ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಬಿಜೆಪಿ ನಡುವೆ ನೇರಾ ನೇರಾ ಹಣಾಹಣಿ ಇದೆ.

ಕೊಪ್ಪಳ
ಶಾಸಕ ಹಿಟ್ನಾಳ ವಿರುದ್ಧ ಹೊಸಮುಖ ಮಂಜುಳಾ ಕರಡಿ ಕಣಕ್ಕೆ:
ಕೊಪ್ಪಳದಲ್ಲಿ ಕಳೆದ ಮೂರು ಚುನಾವಣೆಗಳಿಂದ ಕಾಂಗ್ರೆಸ್‌ ಮತ್ತು ಬಿಜೆಪಿಯದೆ ಕಾದಾಟವಾಗಿತ್ತು. ಎರಡು ಬಾರಿ ಕಮಲವನ್ನು ಸೋಲಿಸಿ, ಈ ಬಾರಿ ಹ್ಯಾಟ್ರಿಕ್‌ ಸಾಧಿಸುವ ಛಲದಲ್ಲಿ ಕಾಂಗ್ರೆಸ್‌ ಇತ್ತು. ಕಾಂಗ್ರೆಸ್ಸಿನಿಂದ ಶಾಸಕ ರಾಘವೇಂದ್ರ ಹಿಟ್ನಾಳ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಹಿಟ್ನಾಳ ವಿರುದ್ಧ ಸಂಸದ ಸಂಗಣ್ಣ ಕರಡಿ ಸೊಸೆ, ಹೊಸಮುಖ, ಮಂಜುಳಾ ಕರಡಿ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್‌ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ಜೆಡಿಎಸ್‌ ಸೇರಿರುವ ಸಿ.ವಿ.ಚಂದ್ರಶೇಖರ, ಜೆಡಿಎಸ್‌ನಿಂದ ಅಖಾಡಕ್ಕೆ ಇಳಿದಿದ್ದಾರೆ. ಹೀಗಾಗಿ, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಲಿಂಗಾಯತ ಮತ್ತು ಹಿಂದುಳಿದ ವರ್ಗದ ಮತಗಳೇ ಪ್ರಧಾನವಾಗಿರುವ ಈ ಕ್ಷೇತ್ರದಲ್ಲಿ ಈಗ ಪ್ರಮುಖ ಜಾತಿಯ ಅಭ್ಯರ್ಥಿಗಳಿಂದ ಮತಗಳು ಹಂಚಿ ಹೋಗಿವೆ. ಹೀಗಾಗಿ, ಅಲ್ಪಸಂಖ್ಯಾತ ಮತಗಳೇ ನಿರ್ಣಾಯಕ ಪಾತ್ರ ವಹಿಸುವಂತಾಗಿದೆ.

ಆನಂದ್‌ ಸಿಂಗ್‌ಗೆ ಪ್ರತಿಷ್ಠೆಯಾಗಿರುವ ವಿಜಯನಗರದ ವಿಜಯ: ಹಳಬರ ಮೇಲೆ ಕಾಂಗ್ರೆಸ್‌ಗೆ ನಂಬಿಕೆ

ಯಲಬುರ್ಗಾ
ಹಾಲಪ್ಪ ಆಚಾರ್‌, ರಾಯರಡ್ಡಿ ನೇರ ಹಣಾಹಣಿ:
ಇಲ್ಲಿ ವ್ಯಕ್ತಿ ಆಧಾರಿತವಾಗಿಯೇ ಚುನಾವಣೆ ನಡೆಯುತ್ತಾ ಬಂದಿದೆ. ಈ ಬಾರಿಯೂ ಬಿಜೆಪಿ ಅಭ್ಯರ್ಥಿ ಸಚಿವ ಹಾಲಪ್ಪ ಆಚಾರ್‌ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಮಾಜಿ ಸಚಿವ ಬಸವರಾಜ ರಾಯರಡ್ಡಿ ನಡುವೆಯೇ ನೇರ ಹಣಾಹಣಿ ಇದೆ. ಕಣದಲ್ಲಿರುವ ಇತರ ಅಭ್ಯರ್ಥಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಕ್ಷೇತ್ರದಲ್ಲಿ ಜಾತಿಯಾಧಾರಿತ ಚುನಾವಣೆ ಸಾಧ್ಯತೆ ತೀರಾ ಕಡಿಮೆ ಇದೆ. ಸ್ಪರ್ಧೆ ಮಾಡಿರುವ ಪ್ರಮುಖರಿಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರು. ಹಾಲಪ್ಪ ಆಚಾರ್‌ಗೆ ಅವರು ಸಚಿವರಾಗಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳು, ಒಳಮೀಸಲಾತಿ ಜಾರಿ, ಲಿಂಗಾಯತರು ಮತ್ತು ಒಕ್ಕಲಿಗರಿಗೆ ಮೀಸಲಾತಿ ಹಂಚಿಕೆ ಮಾಡಿರುವುದು ಪ್ಲಸ್‌ ಪಾಯಿಂಟ್‌ ಆಗುವ ಸಾಧ್ಯತೆ ಇದೆ. ಇನ್ನು, ಜಗದೀಶ ಶೆಟ್ಟರ್‌ ಹಾಗೂ ಲಕ್ಷ್ಮಣ ಸವದಿಯವರು ಕಾಂಗ್ರೆಸ್‌ ಸೇರಿರುವುದು, ಕಾಂಗ್ರೆಸ್‌ಗೆ ಪ್ಲಸ್‌ ಪಾಯಿಂಟ್‌. ಜೆಡಿಎಸ್‌ನಿಂದ ಮಲ್ಲನಗೌಡ ಸಿದ್ದಪ್ಪ ಕೋಣನಗೌಡ ಕಣದಲ್ಲಿದ್ದರೂ, ಹಾಲಪ್ಪ ಮತ್ತು ರಾಯರಡ್ಡಿ ನಡುವೆಯೇ ನೇರಾನೇರ ಸ್ಪರ್ಧೆ ಇದ್ದು, ಯಾರೇ ಗೆದ್ದರೂ ಕೂದಲೆಳೆಯ ಅಂತರದಲ್ಲಿಯೇ ಗೆಲುವು ಎನ್ನಲಾಗುತ್ತಿದೆ.

ಗಂಗಾವತಿ
ಅನ್ಸಾರಿ, ಮುನವಳ್ಳಿ ಮತ್ತು ರೆಡ್ಡಿ ಗುದ್ದಾಟ:
ಆಂಜನೇಯನ ಜನ್ಮಸ್ಥಳ ಆಂಜನಾದ್ರಿಯ ಮೂಲಕ ಈಗಾಗಲೇ ವಿಶ್ವಪ್ರಸಿದ್ಧಿಯಾಗುತ್ತಿರುವ ಗಂಗಾವತಿ ಕ್ಷೇತ್ರದಲ್ಲಿ, ಹಿಂದುತ್ವದ ಆಧಾರದಲ್ಲಿಯೇ ಚುನಾವಣೆ ನಡೆಯುತ್ತಿದೆ. ಬಿಜೆಪಿ ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಇಲ್ಲಿ ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತ ಸಮುದಾಯದ ಇಕ್ಬಾಲ್‌ ಅನ್ಸಾರಿ ಹಾಗೂ ಬಿಜೆಪಿಯಿಂದ ಶಾಸಕ ಪರಣ್ಣ ಮುನವಳ್ಳಿ ಕಣದಲ್ಲಿದ್ದಾರೆ. ಈ ಮಧ್ಯೆ, ಕೆಆರ್‌ಪಿಪಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿಯವರು ಎಂಟ್ರಿ ಕೊಟ್ಟಿರುವುದು ಭಾರಿ ಸದ್ದು ಮಾಡುತ್ತಿದೆ. ರೆಡ್ಡಿ ಸ್ಪರ್ಧೆಯಿಂದ ಕುರುಡು ಕಾಂಚಾಣ ಕುಣಿಯುತ್ತಿದೆ, ಎಲ್ಲದಕ್ಕೂ ದರ ನಿಗದಿಯಾಗಿದೆ ಎಂದೇ ಹೇಳಲಾಗುತ್ತಿದೆ. ಈಗಾಗಲೇ ಅನೇಕ ಚುನಾಯಿತ ಪ್ರತಿನಿಧಿಗಳು ಕೆಆರ್‌ಪಿಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ಜಾತ್ಯಾತೀತವಾಗಿ ಕಾಂಗ್ರೆಸ್‌ ಮತಯಾಚನೆ ಮಾಡುತ್ತಿದ್ದರೆ, ಆಂಜನೇಯನ ಜನ್ಮಸ್ಥಳದ ಅಭಿವೃದ್ಧಿ ಮುಂದಿಟ್ಟುಕೊಂಡು ಬಿಜೆಪಿ ಮತಯಾಚನೆ ಮಾಡುತ್ತಿದೆ. ಫೋಟೋ:

ಕುಷ್ಟಗಿ
ಅಮರೇಗೌಡ, ದೊಡ್ಡನಗೌಡ ನಡುವೆ ಫೈಟ್‌ ಪಕ್ಕಾ:
ಕುಷ್ಟಗಿ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಮತ್ತೊಮ್ಮೆ ಗೆಲ್ಲುವುದಿಲ್ಲ. ಈ ಸಂಪ್ರದಾಯ ಎಷ್ಟುಬೇರೂರಿದೆಯೆಂದರೆ 1952ರಿಂದ ಇಲ್ಲಿಯವರೆಗೂ ಇದು ಮುಂದುವರಿದಿದೆ. ಈ ಬಾರಿಯಾದರೂ ಈ ಸಂಪ್ರದಾಯಕ್ಕೆ ಬ್ರೇಕ್‌ ಬೀಳುತ್ತಾ ಅಥವಾ ಅದೇ ಸಂಪ್ರದಾಯ ಮುಂದುವರಿಯುತ್ತಾ ಎನ್ನುವುದೇ ದೊಡ್ಡ ಚರ್ಚೆಯಾಗುತ್ತಿದೆ. ಇಲ್ಲಿ ಲಿಂಗಾಯತರು ಮತ್ತು ಹಿಂದುಳಿದ ವರ್ಗಗಳ ನಡುವೆಯೇ ಫೈಟ್‌ ಇದೆ. ಕಾಂಗ್ರೆಸ್‌ ಲಿಂಗಾಯತ ಸಮುದಾಯದ ಹಾಲಿ ಶಾಸಕ ಅಮರೇಗೌಡ ಭಯ್ಯಾಪುರ ಅವರನ್ನು ಅಭ್ಯರ್ಥಿಯನ್ನಾಗಿ ಅಖಾಡಕ್ಕೆ ಇಳಿಸಿದೆ. ಬಿಜೆಪಿ ಹಿಂದುಳಿದ ಸಮುದಾಯದ ಕುರುಬ ಸಮಾಜಕ್ಕೆ ಸೇರಿದ ದೊಡ್ಡನಗೌಡ ಪಾಟೀಲ್‌ ಅವರನ್ನು ಅಖಾಡಕ್ಕೆ ಇಳಿಸಿದೆ. ಫೈಟ್‌ ಇವರಿಬ್ಬರ ನಡುವೆಯೇ ಪಕ್ಕಾ ಆಗಿದೆ. ಆದರೆ, ಈ ಬಾರಿ ಕೆಲ ಲಿಂಗಾಯತ ಮುಖಂಡರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವುದು ಬಿಜೆಪಿಗೆ ಪ್ಲಸ್‌ ಆಗಿದೆ. ಪ್ರತಿ ಬಾರಿ ಲಿಂಗಾಯತ ಸಮುದಾಯದ 2-3 ಅಭ್ಯರ್ಥಿಗಳು ಅಖಾಡದಲ್ಲಿ ಇರುತ್ತಿದ್ದರು. ಈ ಬಾರಿ ಅಂತಹ ಪ್ರಭಾವಿ ಮಖಂಡರು ಯಾರೂ ಅಖಾಡದಲ್ಲಿ ಇಲ್ಲದಿರುವುದು ಕಾಂಗ್ರೆಸ್ಸಿಗೆ ಪ್ಲಸ್‌ ಎನಿಸಿದೆ. ಜೆಡಿಎಸ್‌ ಕೊನೆ ಕ್ಷಣದಲ್ಲಿ ಅಭ್ಯರ್ಥಿಯನ್ನು ಬದಲಾಯಿಸಿ, ಶರಣಪ್ಪ ಕುಂಬಾರ ಅವರನ್ನು ಕಣಕ್ಕಿಳಿಸಿದೆ.

ಚಿಕ್ಕಬಳ್ಳಾಪುರದಲ್ಲಿ ಕಮಲ ಅರಳಿಸಲು ಸುಧಾಕರ್‌ ಪಣ: ಕಾಂಗ್ರೆಸ್‌, ಜೆಡಿಎಸ್‌ ಕ್ಷೇತ್ರಗಳಲ್ಲಿ ಗೆಲ್ಲಲು ಬಿಜೆಪಿ ತಂತ್ರ

ಕನಕಗಿರಿ
ಶಿವರಾಜ-ದಢೇಸ್ಗೂರು ನಡುವೆ ನೇರ ಹಣಾಹಣಿ:
ಜಿಲ್ಲೆಯಲ್ಲಿರುವ ಏಕೈಕ ಮೀಸಲು ಕ್ಷೇತ್ರ ಕನಕಗಿರಿ. ಆದರೂ ಇಲ್ಲಿ ಜಿಲ್ಲೆಯ ಇತರ ಕ್ಷೇತ್ರಗಳಿಗಿಂತಲೂ ತುರುಸಾಗಿಯೇ ಚುನಾವಣೆ ನಡೆಯತ್ತಾ ಬಂದಿದೆ. ಈ ಕ್ಷೇತ್ರದ ವಿಶೇಷ ಎಂದರೆ, ಗೆದ್ದವರು ಬಹುತೇಕರು ಸಚಿವರಾಗಿರುವುದು. ಈ ಬಾರಿ ಇಲ್ಲಿ ಹಾಲಿ ಶಾಸಕ ಬಸವರಾಜ ದಢೇಸ್ಗೂರು ಬಿಜೆಪಿಯಿಂದ ಅಖಾಡಕ್ಕೆ ಇಳಿದು ಪುನರಾಯ್ಕೆ ಬಯಸಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಶಿವರಾಜ ತಂಗಡಗಿ ಸ್ಪರ್ಧಿಸಿದ್ದು, ಕಳೆದ ಬಾರಿಯ ಸೋಲಿನ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಗಂಗಾವತಿ ಕ್ಷೇತ್ರಕ್ಕೆ ಹೊಂದಿಕೊಂಡೆ ಇರುವ ಕನಕಗಿರಿ ಕ್ಷೇತ್ರದಲ್ಲಿಯೂ ಅಂಜನೇಯನ ಭಕ್ತರ ಪ್ರಭಾವ ಅಧಿಕವಾಗಿದೆ. ಹೀಗಾಗಿಯೇ ಇಬ್ಬರೂ ಅಭ್ಯರ್ಥಿಗಳು ಹನುಮಮಾಲಾ ಧರಿಸುವ ಪದ್ಧತಿ ರೂಢಿಸಿಕೊಂಡಿದ್ದಾರೆ. ಹನುಮಮಾಲಾಧಾರಿಗಳ ಕೃಪೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಹಾಲಿ ಶಾಸಕ ಬಸವರಾಜ ದಢೇಸ್ಗೂರು ಅವರು ಅನೇಕ ಆರೋಪಗಳನ್ನು ಎದುರಿಸುತ್ತಿದ್ದಾರೆ. ಪ್ರಚಾರಕ್ಕೆ ಹೋದಲ್ಲೆಲ್ಲ ಈಗಾಗಲೇ ವಿರೋಧ ಎದುರಿಸುತ್ತಿದ್ದಾರೆ. ಇದನ್ನೇ ಕಾಂಗ್ರೆಸ್‌ ಪ್ಲಸ್‌ ಮಾಡಿಕೊಳ್ಳುವುದಕ್ಕೆ ಯತ್ನ ನಡೆಸಿದೆ. ಸದ್ಯಕ್ಕಂತೂ ಇಲ್ಲಿ ನೇರಾನೇರ ಫೈಟ್‌ ಇದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Follow Us:
Download App:
  • android
  • ios