ನೂತನ ವಿಜಯನಗರ ಜಿಲ್ಲೆಯಲ್ಲಿ ಕಮಲ ಅರಳಿಸುವುದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಅವರಿಗೆ ಪ್ರತಿಷ್ಠೆಯ ಸಂಗತಿಯಾಗಿದೆ. ಕಾಂಗ್ರೆಸ್‌ ಗೆಲುವಿಗಾಗಿ ಅಹಿಂದ ಮತಗಳ ಮೇಲೆ ಕಣ್ಣಿಟ್ಟಿದೆ. 

ಕೃಷ್ಣ ಎನ್‌. ಲಮಾಣಿ

ವಿಜಯನಗರ (ಮೇ.04): ನೂತನ ವಿಜಯನಗರ ಜಿಲ್ಲೆಯಲ್ಲಿ ಕಮಲ ಅರಳಿಸುವುದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಅವರಿಗೆ ಪ್ರತಿಷ್ಠೆಯ ಸಂಗತಿಯಾಗಿದೆ. ಕಾಂಗ್ರೆಸ್‌ ಗೆಲುವಿಗಾಗಿ ಅಹಿಂದ ಮತಗಳ ಮೇಲೆ ಕಣ್ಣಿಟ್ಟಿದೆ. ಹರಪನಹಳ್ಳಿ ಬಿಟ್ಟು ಉಳಿದ ಕಡೆ ಬಿಜೆಪಿ, ಹೊಸಮುಖಗಳಿಗೆ ಮಣೆ ಹಾಕಿದೆ. 2018ರಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಾಗೂ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಈ ಬಾರಿಯೂ ಕಾಂಗ್ರೆಸ್‌-ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಹಠಕ್ಕೆ ಬಿದ್ದು ವಿಜಯನಗರ ನೂತನ ಜಿಲ್ಲೆಯನ್ನು ಅಸ್ವಿತ್ವಕ್ಕೆ ತಂದ ಆನಂದ್‌ ಸಿಂಗ್‌ಗೆ ಜಿಲ್ಲೆಯಲ್ಲಿ ಕಮಲ ಅರಳಿಸುವ ಜವಾಬ್ದಾರಿಯಿದೆ.

ವಿಜಯನಗರ
ಗವಿಯಪ್ಪಗೆ ಆನಂದ ಸಿಂಗ್‌ ಪುತ್ರನ ಸವಾಲ್‌:
ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಅವರು ಚುನಾವಣಾ ರಾಜಕಾರಣದಿಂದ ಸದ್ದಿಲ್ಲದೆ ಹಿಂದಕ್ಕೆ ಸರಿದಿದ್ದು, ತಮ್ಮ ಪುತ್ರ 27 ವರ್ಷದ ಸಿದ್ಧಾರ್ಥ ಸಿಂಗ್‌ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಎಚ್‌.ಆರ್‌.ಗವಿಯಪ್ಪ ಅಭ್ಯರ್ಥಿಯಾಗಿದ್ದಾರೆ. ಆನಂದ ಸಿಂಗ್‌ ಅವರು ಇಲ್ಲಿ ಸತತ ನಾಲ್ಕು ಬಾರಿ ಗೆದ್ದು ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದರು. ತಮ್ಮ ಮಗನನ್ನು ಗೆಲ್ಲಿಸುವ ಹೊಣೆ ಈಗ ಅವರ ಮೇಲಿದ್ದು, ಕ್ಷೇತ್ರವನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ್ದಾರೆ. ಕಳೆದ ಬಾರಿ ಆನಂದ ಸಿಂಗ್‌ ವಿರುದ್ಧ ಸೋತಿರುವ ಗವಿಯಪ್ಪ ಅವರು ಸಿದ್ಧಾರ್ಥ ಸಿಂಗ್‌ ವಿರುದ್ಧ ಗೆದ್ದು ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ವಿಜಯನಗರ ಕ್ಷೇತ್ರದ ಮತದಾರರು ಮೊದಲ ಬಾರಿಗೆ ಆನಂದ ಸಿಂಗ್‌ ಕಣದಲ್ಲಿಲ್ಲದ ಚುನಾವಣೆ ನೋಡುತ್ತಿದ್ದಾರೆ.

ಶಾಸಕ ಎಸ್‌.ಆರ್‌.ವಿಶ್ವನಾಥ್‌ ಒಬ್ಬ ರೌಡಿ: ಎಚ್‌.ಡಿ.ಕುಮಾರಸ್ವಾಮಿ

ಹೂವಿನಹಡಗಲಿ (ಎಸ್ಸಿ ಮೀಸಲು)
ಪಿಟಿಪಿ, ಕೃಷ್ಣ ನಾಯ್ಕ ನಡುವೆ ಪೈಪೋಟಿ:
ಮಲ್ಲಿಗೆ ನಾಡು ಹೂವಿನಹಡಗಲಿ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ, ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಹಾಗೂ ಬಿಜೆಪಿ ಅಭ್ಯರ್ಥಿ ಕೃಷ್ಣ ನಾಯ್ಕ ನಡುವೆ ನೇರ ಫೈಟ್‌ ಏರ್ಪಟ್ಟಿದೆ. ಪಿ.ಟಿ. ಪರಮೇಶ್ವರ ನಾಯ್ಕ ಅವರು ಹ್ಯಾಟ್ರಿಕ್‌ ಗೆಲುವಿನ ಗುರಿಯಲ್ಲಿದ್ದರೆ, ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ ತೊರೆದು, ಬಿಜೆಪಿ ಸೇರಿದ ಕೃಷ್ಣ ನಾಯ್ಕ ಅವರು ಪರಮೇಶ್ವರ ನಾಯ್ಕರ ಗೆಲುವಿಗೆ ಅಡ್ಡಗಾಲಾಗಿ ನಿಂತಿದ್ದಾರೆ. ಈ ಮಧ್ಯೆ, ಪಿ.ಟಿ.ಪರಮೇಶ್ವರ ನಾಯ್ಕ ಅವರ ಚುನಾವಣಾ ಪಟ್ಟುಗಳನ್ನು ಬಲ್ಲ ಕೆಲವರು ಬಿಜೆಪಿ ಸೇರಿದರೆ, ಬಿಜೆಪಿಯಲ್ಲಿ ಟಿಕೆಟ್‌ ಸಿಗದಿದ್ದವರು ಅಸಮಾಧಾನಗೊಂಡು ‘ಕೈ’ ಪಡೆ ಸೇರಿದ್ದಾರೆ. ಹೀಗಾಗಿ, ಈ ಕ್ಷೇತ್ರ ತಿರುವು ಪಡೆದುಕೊಳ್ಳುತ್ತಿದೆ. ಜೆಡಿಎಸ್‌ನಿಂದ ಕೆ.ಪುತ್ರೇಶ್‌ ಕಣದಲ್ಲಿದ್ದು, ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.

ಹಗರಿಬೊಮ್ಮನಹಳ್ಳಿ (ಎಸ್ಸಿ ಮೀಸಲು) ಕ್ಷೇತ್ರ
ಭೀಮಾ ನಾಯ್ಕ, ನೇಮರಾಜ್‌ ನಾಯ್ಕ ಮಧ್ಯೆ ಬಂದ ರಾಮಣ್ಣ:
ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಭೀಮಾನಾಯ್ಕ ಹ್ಯಾಟ್ರಿಕ್‌ ಗುರಿಯಲ್ಲಿದ್ದರೆ, ಜೆಡಿಎಸ್‌ ಅಭ್ಯರ್ಥಿ ಕೆ.ನೇಮರಾಜ್‌ ನಾಯ್ಕ ಹಾಗೂ ಬಿಜೆಪಿಯ ಬಲ್ಲಾಹುಣ್ಸಿ ರಾಮಣ್ಣ ಇವರ ಗೆಲುವಿಗೆ ಅಡ್ಡಗಾಲಾಗಿ ನಿಂತಿದ್ದಾರೆ. ಬಿಜೆಪಿ, ಈ ಬಾರಿ ಹೊಸಮುಖ ಬಲ್ಲಾಹುಣ್ಸಿ ರಾಮಣ್ಣ ಅವರಿಗೆ ಟಿಕೆಟ್‌ ನೀಡಿದೆ. ಸಾಮಾಜಿಕ ನ್ಯಾಯದ ಆಧಾರದ ಮೇಲೆ ಟಿಕೆಟ್‌ ನೀಡಲಾಗಿದೆ ಎನ್ನುತ್ತಾ ಬಿಜೆಪಿಯಿಂದ ಮುನಿಸಿಕೊಂಡಿರುವ ಕೆಲವು ಮುಖಂಡರು ಹಾಗೂ ಕಾರ್ಯಕರ್ತರ ಮನವೊಲಿಸುವ ಕಾರ್ಯದಲ್ಲಿ ಬಿಜೆಪಿ ಹಾಗೂ ಸಂಘ-ಪರಿವಾರದ ಪ್ರಮುಖರು ನಿರತರಾಗಿದ್ದಾರೆ. ಈ ಕಾರ್ಯ ಕೈಗೂಡಿದರೆ, ರಾಮಣ್ಣನವರು ಭೀಮಾನಾಯ್ಕಗೆ ಭಾರಿ ಪೈಪೋಟಿ ಒಡ್ಡಬಲ್ಲರು. ಏತನ್ಮಧ್ಯೆ, ಬಿಜೆಪಿಯಿಂದ ಮುನಿಸಿಕೊಂಡು ಮಾಜಿ ಶಾಸಕ ಕೆ.ನೇಮರಾಜ್‌ ನಾಯ್ಕ ಜೆಡಿಎಸ್‌ ಸೇರಿದ್ದು, ಜೆಡಿಎಸ್‌ ಅಭ್ಯರ್ಥಿಯಾಗಿದ್ದಾರೆ. ಸ್ವಾಭಿಮಾನದ ಹೋರಾಟ ಎಂದು ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ.

ಕೂಡ್ಲಿಗಿ (ಎಸ್ಟಿಮೀಸಲು)
ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ನಡುವೆ ತ್ರಿಕೋನ ಸ್ಪರ್ಧೆ:
ಕೂಡ್ಲಿಗಿ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್‌ನ ಡಾ.ಎನ್‌.ಟಿ.ಶ್ರೀನಿವಾಸ್‌, ಬಿಜೆಪಿಯ ಲೋಕೇಶ್‌ ವಿ.ನಾಯಕ, ಜೆಡಿಎಸ್‌ನ ಕೋಡಿಹಳ್ಳಿ ಭೀಮಣ್ಣ ನಡುವೆ ಪೈಪೋಟಿಯಿದೆ. ಕಾಂಗ್ರೆಸ್‌ನಲ್ಲಿದ್ದ ಲೋಕೇಶ್‌ ವಿ.ನಾಯಕ ಅವರನ್ನು ಕರೆ ತಂದು ಬಿಜೆಪಿ ಅವರಿಗೆ ಟಿಕೆಟ್‌ ನೀಡಿದೆ. ಟಿಕೆಟ್‌ ಕೈತಪ್ಪಿದ್ದರಿಂದ ಮುನಿಸಿಕೊಂಡು ಕೋಡಿಹಳ್ಳಿ ಭೀಮಣ್ಣ ಅವರು ಜೆಡಿಎಸ್‌ ಸೇರಿ, ಜೆಡಿಎಸ್‌ ಅಭ್ಯರ್ಥಿಯಾಗಿದ್ದಾರೆ. ಮಾಜಿ ಸಚಿವ ಎನ್‌.ಟಿ.ಬೋಮಣ್ಣರ ಪುತ್ರ ಡಾ.ಎನ್‌.ಟಿ.ಶ್ರೀನಿವಾಸ್‌ ಅವರನ್ನು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಕರೆ ತಂದು, ‘ಕೈ’ ಪಡೆ ಟಿಕೆಟ್‌ ನೀಡಿದೆ. ಹೀಗಾಗಿ, ಕದನ ಕುತೂಹಲ ಮೂಡಿಸಿದೆ.

ರಾಜ್ಯ ರಕ್ಷಿಸಲು ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ: ಡಿ.ಕೆ.ಶಿವಕುಮಾರ್‌

ಹರಪನಹಳ್ಳಿ
ಕರುಣಾಕರ ರೆಡ್ಡಿ, ಕೊಟ್ರೇಶ್‌ಗೆ ಎಂ.ಪಿ.ಲತಾ ಟಕ್ಕರ್‌:
ಬಿಜೆಪಿಯಿಂದ ಸ್ಪರ್ಧಿಸಿರುವ ಶಾಸಕ ಕರುಣಾಕರ ರೆಡ್ಡಿ ಅವರಿಗೆ ಕಾಂಗ್ರೆಸ್‌ನ ಅರಸಿಕೆರೆ ಎನ್‌.ಕೊಟ್ರೇಶ್‌ ಹಾಗೂ ಕಾಂಗ್ರೆಸ್‌ನಿಂದ ಬಂಡಾಯವೆದ್ದು, ಪಕ್ಷೇತರರಾಗಿ ಸ್ಪರ್ಧಿಸಿರುವ ಎಂ.ಪಿ.ಲತಾ ತೀವ್ರ ಪೈಪೋಟಿ ಒಡ್ಡಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶರ ಪುತ್ರಿ ಎಂ.ಪಿ.ಲತಾ ಅವರು ಹರಪನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗಾಗಿ ದುಡಿದರೂ ಟಿಕೆಟ್‌ ನೀಡದ್ದರಿಂದ ಮುನಿಸಿಕೊಂಡಿದ್ದಾರೆ. ಈಗ ಪಕ್ಷೇತರರಾಗಿ ಕಣದಲ್ಲಿದ್ದು, ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಭಾರಿ ಪೈಪೋಟಿ ಒಡ್ಡಿದ್ದಾರೆ. ಬಿಜೆಪಿಯ ಕರುಣಾಕರ ರೆಡ್ಡಿ ಹಾಗೂ ಕಾಂಗ್ರೆಸ್‌ನ ಅರಸಿಕೆರೆ ಎನ್‌.ಕೊಟ್ರೇಶ್‌ ಅವರಿಗೆ ಸಮಾನವಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್‌ನಿಂದ ಮಾಜಿ ಸಚಿವ ಎನ್‌.ಎಂ.ನಬಿ ಪುತ್ರ ನೂರ್‌ಅಹ್ಮದ್‌ ಕಣದಲ್ಲಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.