ದಲಿತರಿಗೆ, ಸೋನಿಯಾ ಗಾಂಧಿಗೆ, ರಾಹುಲ್‌ ಗಾಂಧಿಗೆ, ಗಾಂಧಿ ಕುಟುಂಬಕ್ಕೆ, ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಅವರಿಗೆ ಎಷ್ಟುಬಾರಿ ಬೈದಿದ್ದೀರಿ ಎನ್ನುವುದನ್ನು ಬರೆದುಕೊಂಡು, ಲೆಕ್ಕ ಹಾಕಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.

ಅರಕಲಗೂಡು (ಏ.30): ದಲಿತರಿಗೆ, ಸೋನಿಯಾ ಗಾಂಧಿಗೆ, ರಾಹುಲ್‌ ಗಾಂಧಿಗೆ, ಗಾಂಧಿ ಕುಟುಂಬಕ್ಕೆ, ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಅವರಿಗೆ ಎಷ್ಟುಬಾರಿ ಬೈದಿದ್ದೀರಿ ಎನ್ನುವುದನ್ನು ಬರೆದುಕೊಂಡು, ಲೆಕ್ಕ ಹಾಕಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ. ಅಲ್ಲದೆ, ಅಂಬೇಡ್ಕರ್‌ ಅವರ ಹೆಸರು ಹೇಳಿ ಜನರಿಗೆ ಮೋಸ ಮಾಡಬೇಡಿ ಎಂದು ಹರಿಹಾಯ್ದಿದ್ದಾರೆ. ಹಾಸನ ಜಿಲ್ಲೆ ಅರಕಲಗೂಡಿನಲ್ಲಿ ಶನಿವಾರ ಅರಕಲಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೀಧರ್‌ಗೌಡ ಪರ ಅವರು ಮತಯಾಚಿಸಿದರು. 

‘ಕಾಂಗ್ರೆಸ್‌ನವರು ಈವರೆಗೆ ನನ್ನ ವಿರುದ್ಧ ಬರೋಬ್ಬರಿ 91 ಬಾರಿ ಬಗೆ​ಬ​ಗೆಯ ಬೈಗುಳ ಶಬ್ದಗಳನ್ನು ಬಳಸಿ, ನನ್ನನ್ನು ತೆಗ​ಳಿ​ದ್ದಾರೆ’ ಎಂಬ ಮೋದಿ ಹೇಳಿಕೆಗೆ ತಿರುಗೇಟು ನೀಡಿ, ‘ಗಾಂಧಿ ಕುಟುಂಬಕ್ಕೆ ನೀವು ಬೈದಿದ್ದನ್ನು ಲೆಕ್ಕ ಹಾಕಿ, ಹೇಳಿ’ ಎಂದು ಹರಿಹಾಯ್ದರು. ಕಾಂಗ್ರೆಸ್‌ನವರು ಅಂಬೇಡ್ಕರ್‌ಗೆ ಅವಮಾನ ಮಾಡಿ ಅವರ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ ಎಂಬ ಹೇಳಿಕೆಗೆ ತಿರುಗೇಟು ನೀಡಿ, ಅಂಬೇಡ್ಕರ್‌ ಅವರ ಹೆಸರು ಹೇಳಿ ಜನರಿಗೆ ಮೋಸ ಮಾಡಬೇಡಿ. ಮೊದಲು ಅವರ ಬಗ್ಗೆ ಓದಿ ತಿಳಿದುಕೊಳ್ಳಿ. ಅಂಬೇಡ್ಕರ್‌ರನ್ನು ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದು ಕಾಂಗ್ರೆಸ್‌. ಕಾನೂನು ಸಚಿವರಾಗಿ, ಕಾರ್ಮಿಕ ಸಚಿವರಾಗಿ ಮಾಡಿ, ಕಾನೂನುಗಳನ್ನು ರಚಿಸಲು ಅವರಿಗೆ ಅವಕಾಶ ಮಾಡಿಕೊಟ್ಟಿದ್ದು ಕಾಂಗ್ರೆಸ್‌. 

ಇನ್ನಷ್ಟು ಪ್ರಗತಿ ಸಾಧಿಸಲು ಬಿಜೆಪಿ ಬೆಂಬಲಿಸಿ: ನಳಿನ್‌ ಕುಮಾರ್‌ ಕಟೀಲ್‌ ಮನವಿ

ಅವರ ವಿಚಾರಧಾರೆಯ ಮೇಲೆಯೇ ಕಾಂಗ್ರೆಸ್‌ ಆಡಳಿತ ನಡೆಸಿಕೊಂಡು ಬಂದಿದೆ. ಇಂದಿಗೂ ಕೂಡ ಅವರಿಂದ ರಚಿತವಾದ ಸಂವಿಧಾನದ ರಕ್ಷಣೆಗೆ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು. ನೀವು ಸಂವಿಧಾನ ವಿರೋಧಿಗಳು, ಪ್ರಜಾಪ್ರಭುತ್ವ ವಿರೋಧಿಗಳು. ನೀವು ನಮಗೆ ಪಾಠ ಹೇಳುತ್ತೀರಾ? ಎಂದು ಮೋದಿ ವಿರುದ್ಧ ಹರಿಹಾಯ್ದರು. ಅಷ್ಟಕ್ಕೂ ಆರ್‌ಎಸ್‌ಎಸ್‌, ಬಿಜೆಪಿ ಕಚೇರಿಯಲ್ಲಿ ನೀವು ಅಂಬೇಡ್ಕರ್‌ ಫೋಟೊ ಇಡುತ್ತೀರಾ?. ಚುನಾವಣೆ ಸಂದರ್ಭದಲ್ಲಿ ಓಟಿಗಾಗಿ ಅವರ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದೀರಿ. ಜನರನ್ನು ದಾರಿ ತಪ್ಪಿಸುತ್ತೀದ್ದೀರಿ ಎಂದರು.

ಕಾಂಗ್ರೆಸ್‌ ಅಧಿಕಾರಕ್ಕೇರಿದರೆ ಬದಲಾವಣೆ: ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ರಾಜಕೀಯ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿ ಹಲವು ಬದಲಾವಣೆಗಳಾಗುತ್ತವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ಪಟ್ಟಣದ ಟಿಎಪಿಸಿಎಂಎಸ್‌ ಆವರಣದಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಬಿ ಎಲ… ದೇವರಾಜು ಪರ ಮತಯಾಚನೆ ಮಾಡಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲೇಬೇಕೆಂದು ಸಾರ್ವಜನಿಕರು ಹಾತೊರೆಯುತ್ತಿದ್ದಾರೆ. 40% ಸರ್ಕಾರವನ್ನು ತೆಗೆದು ಹಾಕಲು ಯುವಕರು ಮಹಿಳೆಯರು ಎಲ್ಲಾ ವರ್ಗದ ಜನ ಸಿದ್ಧರಿದ್ದಾರೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ತೊಲಗಿದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ನಾನು 50 ವರ್ಷದಿಂದ ರಾಜಕಾರಣ ಮಾಡುತ್ತಿದ್ದೇನೆ. ರಾಜ್ಯದಲ್ಲಿ 40% ಕೆಟ್ಟಸರ್ಕಾರವನ್ನು ಎಂದೂ ನೋಡಿಲ್ಲ. ನಾಳೆ ಕಟ್ಟಡಗಳು ರಸ್ತೆ ಸೇರಿದಂತೆ ಎಲ್ಲಾ ಕೆಲಸಗಳಲ್ಲಿಯೂ 40 ಪರ್ಸೆಂಟ್‌ ಕಮಿಷನ್‌ ತೆಗೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು. ಈ ಬಗ್ಗೆ ಲೋಕಾಯುಕ್ತಕ್ಕೆ ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ರಾಷ್ಟ್ರಪತಿಗಳಿಗೆ ರಾಜ್ಯಪಾಲರಿಗೆ ಎಲ್ಲರಿಗೂ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಪ್ರಧಾನಮಂತ್ರಿ ಎಲ್ಲಿಗೆ ಹೋದರು ನಾನು ಸಾರ್ವಜನಿಕರ ಹಣವನ್ನು ತಿನ್ನುವುದಿಲ್ಲ ತಿನ್ನಲು ಬಿಡುವುದಿಲ್ಲ ಎನ್ನುತ್ತಾರೆ ಆದರೆ ಡಬ್ಬಲ್‌ ಎಂಜಿನ್‌ ಸರ್ಕಾರ ಎನ್ನುತ್ತಿರುವ ನೀವು ನಿಮ್ಮ ರಾಜ್ಯದ ಸರ್ಕಾರದ ಬಗ್ಗೆ ಇಲ್ಲಿನ ಭ್ರಷ್ಟಾಚಾರದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. 

ಕೊನೆ ಚುನಾವಣೆ ಎನ್ನುವ ಗಿರಾಕಿಗಳನ್ನು ಎಂದಿಗೂ ನಂಬದಿರಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್

ಯಾರಾದರೂ ಏನಾದರೂ ಪ್ರಶ್ನೆ ಪ್ರಶ್ನಿಸಿದರೆ ಅವರಿಗೆ ಇಡಿ ಸಿಬಿಐ ಲೋಕಾಯುಕ್ತ ಮುಂತಾದವುಗಳನ್ನು ಆಕ್ರಮಣ ಮಾಡಿಸುತ್ತಾರೆ ಎಂದು ಆರೋಪಿಸಿದರು. ಬಿಜೆಪಿಗರು ನಮ್ಮ ಪಕ್ಷದವರನ್ನು ಹೆದರಿಸಿ ಬೆದರಿಸುವ ಕೆಲಸ ಮಾಡಿ ತಮ್ಮ ಪಕ್ಷದ ಕಡೆಗೆ ಸೆಡೆಯುವಂತೆ ಮಾಡಿದ್ದಾರೆ. ಬಿಜೆಪಿಯವರು ಹೇಳುವುದು ಒಂದು ಮಾಡುವುದು ಇನ್ನೊಂದು ಎಂದು ಬೇಸರ ವ್ಯಕ್ತಪಡಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.